ಗಲ್ವಾನ್ ಸಂಘರ್ಷದಲ್ಲಿ ಚೀನಾ ಹಲವು ಸತ್ಯಗಳನ್ನು ಮೆರೆಮಾಚಿತ್ತು. ಬರೋಬ್ಬರಿ 6 ವರ್ಷಗಳ ಬಳಿಕ ಚೀನಾ ಗಲ್ವಾನ್ ಆಪರೇಶನ್ ಕುರಿತು ಸರ್ಜರಿ ಮಾಡುತ್ತಿದೆ. ಇದೀಗ ಗಲ್ವಾನ್ ಆರ್ಡರ್ ಮಾಡಿದ ಕಮಾಂಡರ್ ವಜಾ ಮಾಡಲಾಗಿದೆ.
ಬೀಜಿಂಗ್ (ಆ.29) ಶಾಂತವಾಗಿದ್ದ ಗಲ್ವಾನ್‌ನಲ್ಲಿ ಭಾರತವನ್ನು ಚೀನಾ ಕೆಣಕಿತ್ತು. ಕಲ್ಲುಗಳ ಮೂಲಕ ಯುದ್ಧ ನಡೆದಿತ್ತು. ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಆದರೆ ಚೀನಾದ 50ಕ್ಕೂ ಹೆಚ್ಚು ಮಂದಿ ಯೋಧರು ಈ ಘರ್ಷಣೆಯಲ್ಲಿ ಹತ್ಯೆಯಾಗಿದ್ದರು. ಚೀನಾ ಈ ಮಾಹಿತಿಗಳನ್ನು ಮರೆ ಮಾಚಿತ್ತು. ಭಾರತವನ್ನು ಕೆಣಕಿದರೆ ಪರಿಣಾಮ ನೆಟ್ಟಗಿರೋದಿಲ್ಲ ಅನ್ನೋ ಸ್ಪಷ್ಟ ಸಂದೇಶವನ್ನು ಭಾರತ ರವಾನಿಸಿತ್ತು. ಆದರೆ ಚೀನಾ ನಾವು ಮಾಡಿದ್ದೇ ಸರಿ, ನಮಗೇನು ಆಗಿಲ್ಲ ಎಂದು ತೋರಿಸಿ ಸಾಗಿತ್ತು. ಇದೀಗ 6 ವರ್ಷಗಳ ಬಳಿಕ ಸೈಲೆಂಟ್ ಆಗಿ ಸರ್ಜರಿ ಮಾಡುತ್ತಿದೆ. ಗಲ್ವಾನ್ ಘರ್ಷಣೆಯಿಂದ ಚೀನಾ ಕಳೆದುಕೊಂಡಿದ್ದೇ ಹೆಚ್ಚು. ಇದೀಗ ಗಲ್ವಾನ್ ಘರ್ಷಣೆಗೆ ಆರ್ಡರ್ ನೀಡಿದ, ಚೀನಾ ಅಧ್ಯಕ್ಷ ಝೀ ಜಿನ್‌ಪಿಂಗ್ ಸರ್ಕಾರದ ಹಿರಿಯ ರಾಜಕೀಯ ಸಲಹೆಗಾರ ಜನರಲ್ ಝಾವೋ ಝೋಂಗ್‌ಕಿ ವಜಾ ಮಾಡಲಾಗಿದೆ.
2017ರ ಡೋಕ್ಲಾಮ್ ಮುಖಾಮುಖಿ ಮತ್ತು 2020ರ ಗಾಲ್ವಾನ್ ಕಣಿವೆ ಘರ್ಷಣೆ ವೇಳೆ ಝಾವೋ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಕಮಾಂಡ್ ಆಗಿದ್ದರು. ಭಾರತದ ಜೊತೆಗಿನ ಗಡಿ ಘರ್ಷಣೆಯಲ್ಲಿ ಮತ್ತಷ್ಟು ತೀವ್ರಗೊಳಿಸಿ ಯುದ್ಧದ ಪರಿಸ್ಥಿತಿಗೆ ತಂದಿಟ್ಟ ಝಾವೋ , ಚೀನಾಗೆ ಹೆಚ್ಚು ನಷ್ಟವನ್ನುಂಟು ಮಾಡಿದ್ದರು. ಇದರ ಪರಿಣಾಮ ಇದೀಗ ವಜಾಗೊಂಡಿದ್ದಾರೆ. ಝಾವೊ ಅವರನ್ನು ಚೀನೀ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್ (ಸಿಪಿಪಿಸಿಸಿ) ಸದಸ್ಯತ್ವದಿಂದ ವಜಾಗೊಳಿಸಲಾಗಿದ್ದು, ಇತರ ಎರಡು ಹುದ್ದೆಗಳಿಂದಲೂ ತೆಗೆದುಹಾಕಲಾಗಿದೆ.
ಗಾಲ್ವಾನ್ ಘರ್ಷಣೆ ಹಿನ್ನೆಲೆ: ಭಾರತ-ಚೀನಾ ಗಡಿ ಉದ್ವಿಗ್ನತೆ
2017ರಲ್ಲಿ ಭಾರತ ಮತ್ತು ಚೀನಾ ಸೇನೆಗಳು ಡೋಕ್ಲಾಮ್‌ನಲ್ಲಿ 72 ದಿನಗಳ ಕಾಲ ಮುಖಾಮುಖಿಯಾಗಿತ್ತು. ಆ ಸಮಯದಲ್ಲಿ ಝಾವೊ ಪಶ್ಚಿಮ ಥಿಯೇಟರ್ ಕಮಾಂಡ್‌ನ ನೇತೃತ್ವ ವಹಿಸಿದ್ದರು. 2020ರ ಮೇ ತಿಂಗಳಲ್ಲಿ ಪೂರ್ವ ಲಡಾಖ್‌ನಲ್ಲಿ ಉದ್ವಿಗ್ನತೆ ಏರಿಕೆಯಾದಾಗಲೂ ಚೀನಾ ಪಶ್ಚಿಮ ಆರ್ಮಿ ನೇತೃತ್ವದ ವಹಿಸಿದ್ರು. ಜೂನ್ 15, 2020ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಮಾರಕ ಘರ್ಷಣೆ ನಡೆಯಿತು. ಕಲ್ಲು, ಕಬ್ಬಿಣದ ಸಲಾಕೆ ಮತ್ತು ಸ್ಥಳೀಯ ಆಯುಧಗಳನ್ನು ಬಳಸಿ ನಡೆದ ಈ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು.
ಭಾರತಕ್ಕೆ ಪಾಠ ಕಲಿಸಲು ಗಲ್ವಾನ್ ಘರ್ಷಣೆ
2020ರಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಯ ಎಎನ್ಐ ಈ ಕುರಿತು ವರದಿಯನ್ನು ಬಹಿರಂಗಪಡಿಸಿತ್ತು. ಗಲ್ವಾನ್ ಘರ್ಷಣೆ ಚೀನಾದ ಪೂರ್ವನಿಯೋಜಿತ ಪ್ಲಾನ್ ಆಗಿತ್ತು. ಭಾರತವನ್ನು ಕೆಣಿಕಿ ಘರ್ಷಣೆ ಮಾಡಿ ಪಾಠ ಕಲಿಸುವ ಪ್ಲಾನ್ ಹಾಕಲಾಗಿತ್ತು. ಚೀನಾದ ಪ್ಲಾನ್ ಪ್ರಕಾರ ಭಾರತವನ್ನು ಲಡಾಖ್ ಹಾಗೂ ಅರುಣಾಚಲ ಭಾಗದಲ್ಲಿ ಹದ್ದುಬಸ್ತಿನಲ್ಲಿಡಲು ಪ್ಲಾನ್ ಮಾಡಲಾಗಿತ್ತು. ಆದರೆ ಚೀನಾದ ಪ್ಲಾನ್ ಭಾರತೀಯ ಸೇನೆ ಮುಂದೆ ನಡೆಯಲಿಲ್ಲ. ಗಡಿನಿಯಂತ್ರಣ ರೇಖೆಯಲ್ಲಿ ಚೀನಾ ಸೈನಿಕರ ನಿಯೋಜನೆ ಮಾಡಿ ಈ ಘರ್ಷಣೆ ನಡೆಸಿತ್ತು ಎಂದು ಅಮೆರಿಕ ಗುಪ್ತಚರ ಸಂಸ್ಥೆ ವರದಿ ಮಾಡಿತ್ತು. ಭಾರತಕ್ಕೆ ಪಾಠ ಕಲಿಸಲು ಹೋಗಿ, ಚೀನಾ ಅಪಾರ ನಷ್ಟ ಅನುಭವಿಸಿತು.
ಝಿ ಜಿನ್‌ಪಿಂಗ್‌ರ ಭ್ರಷ್ಟಾಚಾರ ವಿರೋಧಿ ಅಭಿಯಾನ
ಚೀನಾದ ಅಧ್ಯಕ್ಷ ಝಿ ಜಿನ್‌ಪಿಂಗ್ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಅಭಿಯಾನದ ಭಾಗವಾಗಿ, ಈ ಹಿಂದೆಯೇ ಇಬ್ಬರು ಹಿರಿಯ ಜನರಲ್‌ಗಳಾದ ಝಾಂಗ್ ಯೂಕ್ಸಿಯಾ ಮತ್ತು ಲಿಯು ಝೆನ್ಲಿ ಅವರನ್ನು ಕೇಂದ್ರೀಯ ಸೇನಾ ಆಯೋಗದಿಂದ ವಜಾಗೊಳಿಸಲಾಗಿತ್ತು. ಗಂಭೀರ ಶಿಸ್ತು ಮತ್ತು ಕಾನೂನು ಉಲ್ಲಂಘನೆ ಆರೋಪಗಳು ಇದಕ್ಕೆ ಕಾರಣವಾಗಿತ್ತು. ಈಗ ಝಾವೊ ಝೋಂಗ್‌ಕಿ ಅವರನ್ನು ಸಿಪಿಪಿಸಿಸಿ ಸದಸ್ಯತ್ವದಿಂದ ವಜಾಗೊಳಿಸಿರುವುದು, ಚೀನಾದ ಸೇನಾ ನಾಯಕತ್ವದಲ್ಲಿ ಮತ್ತೊಂದು ದೊಡ್ಡ ಬದಲಾವಣೆಯಾಗಿ ಪರಿಗಣಿಸಲ್ಪಟ್ಟಿದೆ.


