ಬೊಲಿವಿಯಾದ ಕಾಡಿನಲ್ಲಿ ಪತ್ತೆಯಾದ ಸಾಮಾನ್ಯ ಬೆಕ್ಕೊಂದು, ಡಿಎನ್‌ಎ ಪರೀಕ್ಷೆಯ ಬಳಿಕ 100 ವರ್ಷಗಳಲ್ಲೇ ಮೊದಲ ಬಾರಿಗೆ ಪತ್ತೆಯಾದ ಹೊಸ ಪ್ರಭೇದ ಎಂದು ತಿಳಿದುಬಂದಿದೆ. 'ಲಿಯೋಪಾರ್ಡಸ್ ಟಿಲ್ಕಾಯೊ' ಎಂದು ಕರೆಯಲ್ಪಡುವ ಈ ಬೆಕ್ಕು ಚಿರತೆಯಂತಹ ಕಪ್ಪು ಚುಕ್ಕೆಗಳನ್ನು ಹೊಂದಿದ್ದು, 1.4 ದಶಲಕ್ಷ ವರ್ಷಗಳ ಹಿಂದೆಯೇ ವಿಕಸನಗೊಂಡಿದೆ. ಇದರ ಆಹಾರ ಮತ್ತು ಸಂತಾನೋತ್ಪತ್ತಿಯಂತಹ ಹಲವು ರಹಸ್ಯಗಳು ಇನ್ನೂ ನಿಗೂಢವಾಗಿವೆ.
ವಿಜ್ಞಾನ ಪ್ರಪಂಚದಲ್ಲಿ ಊಹೆಗೂ ನಿಲುಕದ ವಿಶೇಷ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ 100 ವರ್ಷಗಳಲ್ಲಿ ಎಂದು ಇಲ್ಲದ ರೀತಿಯಲ್ಲಿ, ಮಕ್ಕಳಿಂತ ಹಿರಿಯರವರೆಗೂ ಎಲ್ಲರ ಗಮನ ಸೆಳೆಯುವಂತಹ ಬೆಕ್ಕಿನ ಜಾತಿಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.
ಬೊಲಿವಿಯಾದ ದಟ್ಟಕಾಡಿನ ನಡುವೆ ಮನುಷ್ಯನ ಕಣ್ಣಿಗೆ ಬಿದ್ದ ವಿಶೇಷ ಜೀವಿಯನ್ನು ಮೊದಲು ಎಲ್ಲರೂ ಸಾಮಾನ್ಯ ಬೆಕ್ಕು ಎಂದು ತಿಳಿದುಕೊಂಡಿದ್ದರು. ಆದರೆ ಈ ಬಗ್ಗೆ ಸಂಶೋಧನೆ ನಡೆಸಿದ ಸಂದರ್ಭದಲ್ಲಿ ಶಾಕಿಂಗ್ ಸಂಗತಿಗಳು ಬೆಳಕಿಗೆ ಬಂದಿದೆ. ಜಗತ್ತಿನಲ್ಲಿ ಇದುವರೆಗೂ ಯಾರು ಗುರುತಿಸದ ಹೊಸ ಜಾತಿಗೆ ಸೇರಿದ ಕಾಡಿನ ಬೆಕ್ಕು ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಇದು ವಿಜ್ಞಾನ ಪ್ರಪಂಚದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಈ ಬೆಕ್ಕಿಗೆ ಸಂಶೋಧಕರು 'ಲಿಯೋಪಾರ್ಡಸ್ ಟಿಲ್ಕಾಯೊ' (Leopardus Tilcayo) ಎಂದು ನಾಮಕರಣ ಮಾಡಿದ್ದಾರೆ.

ಈ ಆಸಕ್ತಿದಾಯಕ ಪ್ರಯಾಣ 2016ರಲ್ಲಿ ಆರಂಭವಾಗಿತ್ತು. ಬೊಲಿವಿಯಾದ ವನ್ಯಜೀವಿ ಸಂಶೋಧಕಿಯಾದ ಪಾವೊಲಾ ನೊಗೇಲ್ಸ್ ಅಸ್ಕಾರುಂಜ್ ಅವರಿಗೆ ಒಂದು ವಿಶೇಷ ದೂರವಾಣಿ ಕರೆ ಬಂದಿತು. ಕಾಡಿನ ಹಾದಿಯ ನಡುವೆ ಒಂದು ಚಿಕ್ಕ ಬೆಕ್ಕು ಕಂಡು ಬಂದಿತ್ತು. ಇದನ್ನು ಅಲ್ಲಿಯ ಸ್ಥಳೀಯ ವ್ಯಕ್ತಿಯೋರ್ವ ಸಾಮಾನ್ಯ ಬೆಕ್ಕು ಎಂದು ಮನೆಗೆ ತೆಗೆದುಕೊಂಡು ಹೋಗಿ ಸಾಕಿದ್ದ. ಆದರೆ ಬೆಕ್ಕು ಬೆಳೆಯುತ್ತಿದ್ದಂತೆ ಅದರ ಲಕ್ಷಣಗಳು ಬದಲಾದ ಹಿನ್ನೆಲೆಯಲ್ಲಿ ವನ್ಯಜೀವಿ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದ.
ಈ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪಾವೊಲಾ ನೊಗೇಲ್ಸ್ ಅಸ್ಕಾರುಂಜ್ ಭೇಟಿ ನೀಡಿ ಅಚ್ಚರಿಗೆ ಒಳಗಾಗಿದ್ದರು. ಚಿಕ್ಕ ಮುಖ, ವೃತ್ತಕಾರದ ಕಿವಿಗಳು, ಉದ್ದನೆಯ ಮೀಸೆ, ವಿಶೇಷವಾಗಿ ದೇಹದ ಮೇಲೆ ಚಿರತೆಗೆ ಇರುವಂತೆ ಕಪ್ಪು ಚುಕ್ಕೆಗಳು ಕಂಡು ಬಂದಿತ್ತು.
14 ಲಕ್ಷ ವರ್ಷಗಳ ಹಿಂದಿನ ಇತಿಹಾಸ! ಜಿನೆಟಿಕ್ ಟೆಸ್ಟ್‌ನಲ್ಲಿ ರಿವೀಲ್ ಆಯ್ತು ಆಸಲಿ ಸತ್ಯ!
ಮೊದಲಿಗೆ ಈ ಬೆಕ್ಕನ್ನು ಟೈಗರ್ ಕ್ಯಾಟ್ ಜಾತಿಗೆ ಸೇರಿದ ಬೆಕ್ಕು ಎಂದು ಊಹೆ ಮಾಡಲಾಗಿತ್ತು. ಆದರೆ 2019ರಲ್ಲಿ ಬ್ರೆಜಿಲ್, ಬೆಲ್ಜಿಯಂಮ್ ಮೂಲದ ವನ್ಯಜೀವಿ ವಿಜ್ಞಾನಿಗಳು ಜೊತೆಯಾಗಿ ಡಿಎನ್‌ಎ ಪರೀಕ್ಷೆಗಳನ್ನು ನಡೆಸಿದ್ದರು. ಈ ಬೆಕ್ಕು ಸಾಮಾನ್ಯ ಜಾತಿಗೆ ಸೇರಿದ ಬೆಕ್ಕು ಅಲ್ಲ ಎಂದು ಡಿಎನ್‌ಎ ಪರೀಕ್ಷೆಗಳಲ್ಲಿ ತಿಳಿದು ಬಂದಿತ್ತು. ಈ ಬೆಕ್ಕು ಸಾಮಾನ್ಯ ಜಾತಿಯ ಬೆಕ್ಕು ಅಲ್ಲ, ಇದು ಸುಮಾರು 1.4 ದಶಲಕ್ಷ ವರ್ಷಗಳ ಹಿಂದೆ ಇತರ ಕಾಡು ಬೆಕ್ಕುಗಳ ಗುಂಪಿನಿಂದ ಬೇರ್ಪಟ್ಟು ಸ್ವತಂತ್ರವಾಗಿ ವಿಕಸನಗೊಂಡ ಒಂದು ವಿಶಿಷ್ಟ ಜೀವಿ ಎಂದು ತಿಳಿದುಬಂದಿತ್ತು. ನಮ್ಮ ಮನೆಗಳಲ್ಲಿ ಕಂಡುಬರುವ ಸಾಕು ಬೆಕ್ಕುಗಳಿಗಿಂತ ಗಾತ್ರದಲ್ಲಿ ಬಹಳ ಚಿಕ್ಕದಾಗಿರುವ (ಕೇವಲ 1.5 ಕೆಜಿ ತೂಕ ಮತ್ತು 18 ಇಂಚು ಉದ್ದವಿರುವ) ಇದು, ನೋಡಲು ಚಿರತೆಯ ಮರಿಯಂತೆಯೇ ಕಾಣುತ್ತದೆ.
100 ವರ್ಷಗಳ ದಾಖಲೆ ಬ್ರೇಕ್! ಇನ್ನು ಬೆಳಕಿಗೆ ಬರಬೇಕಿದೆ ಹಲವು ರಹಸ್ಯಗಳು!
1923ರ ಬಳಿಕ ಹೊಸ ಜಾತಿಯ ಬೆಕ್ಕನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಸ್ಥಳೀಯರು ಇದನ್ನು 'ಟಿಲ್ಕಾಯೊ' ಎಂದು ಕರೆಯುತ್ತಿರುವ ಕಾರಣ ವಿಜ್ಞಾನಿಗಳು ಕೂಡ ಇದಕ್ಕೆ ಅದೇ ಹೆಸರು ನಾಮಕರಣ ಮಾಡಿದ್ದಾರೆ. ಆದರೆ ಈ ಜಾತಿಯ ಬೆಕ್ಕುಗಳು ಇನ್ನು ಕಾಡಿನಲ್ಲಿದೆ ಎಷ್ಟಿದೆ? ಇವು ಏನು ಸೇವಿಸುತ್ತವೆ? ಇವುಗಳ ಸಂತಾನೋತ್ಪತ್ತಿ ಹೇಗೆ ನಡೆಯುತ್ತದೆ? ಎಂಬ ಪ್ರಾಥಮಿಕ ಸಂಗತಿಗಳು ಇನ್ನು ರಹಸ್ಯವಾಗಿಯೇ ಉಳಿದಿದೆ. ನಮ್ಮ ಸುತ್ತಮುತ್ತಲು ಇರುವ ಪ್ರಕೃತಿಯಲ್ಲಿ ಮನುಷ್ಯನ ಕಣ್ಣಿಗೆ ಸಿಗದ ಎಷ್ಟೋ ಜೀವಿಗಳು ಇಂದಿಗೂ ಉಳಿದುಕೊಂಡಿದೆ ಎಂದು ಈ 'ಲಿಯೋಪಾರ್ಡಸ್ ಟಿಲ್ಕಾಯೊ' ನಿರೂಪಿಸಿದೆ.


