ಗೂಗಲ್‌ನ ಅತ್ಯಾಧುನಿಕ AI ಚಿಪ್ ತಂತ್ರಜ್ಞಾನದ ವ್ಯಾಪಾರ ರಹಸ್ಯಗಳನ್ನು ಕದ್ದ ಆರೋಪದ ಮೇಲೆ ಮಾಜಿ ಎಂಜಿನಿಯರ್ ಲಿನ್ವೇ ಡಿಂಗ್‌ಗೆ ಅಮೆರಿಕದ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಗೂಗಲ್‌ನಲ್ಲಿ ಕೆಲಸ ಮಾಡುತ್ತಲೇ, 500ಕ್ಕೂ ಹೆಚ್ಚು ಗೌಪ್ಯ ಫೈಲ್‌ಗಳನ್ನು ಚೀನಾದ ಕಂಪನಿಗಳಿಗೆ ರವಾನಿಸಿದ ಆರೋಪ.

ಗೂಗಲ್‌ನ ಅತ್ಯಾಧುನಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಿಪ್ ತಂತ್ರಜ್ಞಾನದ ವ್ಯಾಪಾರ ರಹಸ್ಯಗಳನ್ನು ಕದ್ದ ಆರೋಪದ ಮೇಲೆ ಮಾಜಿ ಎಂಜಿನಿಯರ್ ಲಿನ್ವೇ ಡಿಂಗ್ ಅಲಿಯಾಸ್ ಲಿಯಾನ್‌ವೆ ಡಿಂಗ್‌ಗೆ ಅಮೆರಿಕದ ನ್ಯಾಯಾಲಯವು 364 ದಿನಗಳ ಜೈಲು ಶಿಕ್ಷೆ ವಿಧಿಸಿದೆ. ಈತ ಗೂಗಲ್‌ನಲ್ಲೇ ಕೆಲಸ ಮಾಡುತ್ತಾ, ಚೀನಾದ ಎರಡು ಕಂಪನಿಗಳಿಗೆ ಈ ರಹಸ್ಯ ಮಾಹಿತಿಗಳನ್ನು ರವಾನಿಸಲು ಯತ್ನಿಸಿದ್ದ ಆರೋಪವಿದೆ. ಈ ಪ್ರಕರಣವು ಅಮೆರಿಕ-ಚೀನಾ ನಡುವಿನ ತಂತ್ರಜ್ಞಾನ ಸಂಘರ್ಷದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ.

ಏನಿದು ಗೂಗಲ್‌ನ ವ್ಯಾಪಾರ ರಹಸ್ಯ ಕಳ್ಳತನ

ಡಿಂಗ್, ವ್ಯಾಪಾರ ರಹಸ್ಯ ಕಳ್ಳತನದ ನಾಲ್ಕು ಪ್ರಕರಣಗಳಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಜೈಲು ಶಿಕ್ಷೆಯ ಜೊತೆಗೆ, ಗೂಗಲ್‌ಗೆ 500,000 ಡಾಲರ್ (ಸುಮಾರು 4.16 ಕೋಟಿ ರೂ.) ಪರಿಹಾರವನ್ನು ಪಾವತಿಸಲು ಮತ್ತು ಜೈಲಿನಿಂದ ಬಿಡುಗಡೆಯಾದ ನಂತರ ಮೂರು ವರ್ಷಗಳ ಕಾಲ ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿರಲು ಆದೇಶಿಸಲಾಗಿದೆ.

2022ರ ಮೇ ತಿಂಗಳಿನಿಂದ 2023ರ ಮೇ ತಿಂಗಳ ನಡುವೆ, ಲಿನ್ವೇ ಡಿಂಗ್ ಗೂಗಲ್‌ನ ನೆಟ್‌ವರ್ಕ್‌ನಿಂದ 500ಕ್ಕೂ ಹೆಚ್ಚು ಗೌಪ್ಯ ಫೈಲ್‌ಗಳನ್ನು ತನ್ನ ವೈಯಕ್ತಿಕ ಗೂಗಲ್ ಕ್ಲೌಡ್ ಖಾತೆಗೆ ಅಪ್‌ಲೋಡ್ ಮಾಡಿದ್ದ. ಈ ಫೈಲ್‌ಗಳಲ್ಲಿ ಗೂಗಲ್‌ನ ಮಹತ್ವಾಕಾಂಕ್ಷೆಯ ಟೆನ್ಸರ್ ಪ್ರೊಸೆಸಿಂಗ್ ಯುನಿಟ್‌ಗಳ (TPU) ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ವಿನ್ಯಾಸದ ವಿವರಗಳಿದ್ದವು. ಇವು ಗೂಗಲ್‌ನ ಎಐ ತಂತ್ರಜ್ಞಾನದ ಹೃದಯವಿದ್ದಂತೆ. ಇಷ್ಟೇ ಅಲ್ಲ, ಗೂಗಲ್‌ನ ಸೂಪರ್ ಕಂಪ್ಯೂಟಿಂಗ್ ಡೇಟಾ ಸೆಂಟರ್‌ಗಳ ಬಗ್ಗೆಯೂ ಮಾಹಿತಿ ಕದ್ದಿದ್ದ. ತಾನು ಸಿಕ್ಕಿಬೀಳಬಾರದು, ಗೂಗಲ್‌ನ ಡೇಟಾವನ್ನು ಪಿಡಿಎಫ್ ಫಾರ್ಮ್ಯಾಟ್‌ಗೆ ಪರಿವರ್ತಿಸಿ ಪತ್ತೆಹಚ್ಚುವ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ, ಆತನ ಈ ಚಾಣಾಕ್ಷತನ ಹೆಚ್ಚು ದಿನ ನಡೆಯಲಿಲ್ಲ.

ಗೂಗಲ್‌ನಲ್ಲಿ ಕೆಲಸ, ಚೀನಾ ಕಂಪನಿಗೆ ನಿಷ್ಠೆ!

ಅಚ್ಚರಿಯ ಸಂಗತಿಯೆಂದರೆ, ಗೂಗಲ್‌ನಲ್ಲಿ ಕೆಲಸ ಮಾಡುತ್ತಿರುವಾಗಲೇ ಡಿಂಗ್ ಚೀನಾದ ಟೆಕ್ ಸ್ಟಾರ್ಟ್‌ಅಪ್‌ ಒಂದರ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ (CTO) ರಹಸ್ಯವಾಗಿ ಕೆಲಸ ಮಾಡುತ್ತಿದ್ದ. ಅಷ್ಟೇ ಅಲ್ಲ, ಚೀನಾದಲ್ಲೇ ತನ್ನದೇ ಆದ ಮತ್ತೊಂದು ಎಐ ಕಂಪನಿಯನ್ನು ಸ್ಥಾಪಿಸಿ, ಅದಕ್ಕಾಗಿ ಹೂಡಿಕೆದಾರರನ್ನು ಹುಡುಕುತ್ತಿದ್ದ. ಈತನನ್ನು ಈ ವರ್ಷದ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು.

ಡಿಂಗ್ ಗೂಗಲ್‌ನ ಅತ್ಯಂತ ಸೂಕ್ಷ್ಮ ಎಐ ತಂತ್ರಜ್ಞಾನವನ್ನು ಕದ್ದು, ಅದನ್ನು ಚೀನಾದ ಕಂಪನಿಗಳಿಗೆ ನೀಡಲು ಯತ್ನಿಸಿದ್ದ. ಈ ಶಿಕ್ಷೆಯು ಇಂತಹ ಕೃತ್ಯಗಳಿಗೆ ತಕ್ಕ ಪಾಠವಾಗಿದೆ, ಎಂದು ಯುಎಸ್ ಅಟಾರ್ನಿ ಇಸ್ಮಾಯಿಲ್ ರಾಮ್ಸೆ ಹೇಳಿದ್ದಾರೆ. ಅಮೆರಿಕದ ತಂತ್ರಜ್ಞಾನವನ್ನು ವಿದೇಶಿ ಶಕ್ತಿಗಳಿಂದ ರಕ್ಷಿಸಲು ಎಫ್‌ಬಿಐ ಬದ್ಧವಾಗಿದೆ ಎಂದು ತನಿಖಾ ಸಂಸ್ಥೆ ಸ್ಪಷ್ಟಪಡಿಸಿದೆ.