ಚೀನಾದ ಕೆಲವು ನಗರಗಳಲ್ಲಿ, ಬ್ರೇಕ್‌ಅಪ್‌ ನಂತರ ಮಾಜಿ ಪ್ರೇಯಸಿಯರು (girlfriend) 'ಪಾರ್ಟಿಂಗ್ ಫೀ' ಅಥವಾ 'ಭಾವನಾತ್ಮಕ ಪರಿಹಾರ' ಕೇಳುವ ಹೊಸ ಟ್ರೆಂಡ್ ಶುರುವಾಗಿದೆ. ಇದಕ್ಕೆ ವಿರೋಧವೂ ಪುರುಷರಿಂದ ವ್ಯಕ್ತವಾಗಿದೆ. ಹಾಗಾದ್ರೆ ಏನೀ ಪಾರ್ಟಿಂಗ್‌ ಫೀ? ತಿಳಿಯೋಣ ಬನ್ನಿ.   

ಅಮೇರಿಕಾದಲ್ಲೋ ಭಾರತದಲ್ಲೋ ಲವ್‌ ಬ್ರೇಕ್‌ಅಪ್ ಆದವರು ಐಸ್‌ಕ್ರೀಂ ತಿಂದೋ ಅಥವಾ ಸ್ಕಾಚ್‌ ಕುಡಿದೋ ಮನಸ್ಸಿಗೆ ಸಮಾಧಾನ ಹುಡುಕಬಹುದು. ಆದರೆ ಚೀನಾದ ಕೆಲವು ನಗರಗಳಲ್ಲಿ ಪ್ರೇಮ ಮುರಿದರೆ ಅದು ದುಬಾರಿ ಆದೀತು. ಮಾಜಿ ಗರ್ಲ್‌ಫ್ರೆಂಡ್‌ಗಳು ಹಣ ದುಬಾರಿ ಪರಿಹಾರ ಧನ ಕೇಳುವುದು ಈಗ ಕಾಮನ್ನು. ಇದನ್ನು “ಪಾರ್ಟಿಂಗ್ ಫೀ” (Fenshou Fee) ಅಥವಾ “ಎಮೋಷನಲ್ ಕಂಪೆನ್ಸೇಶನ್” ಎಂದು ಕರೆಯುತ್ತಾರೆ.

ಏನು ಈ ‘ಪಾರ್ಟಿಂಗ್ ಫೀ’?

ದೀರ್ಘಕಾಲ ಪ್ರೇಮ ಸಂಬಂಧದ ನಂತರ ಬ್ರೇಕ್‌ಅಪ್ ಆದರೆ, ಒಬ್ಬರು ಮತ್ತೊಬ್ಬರಿಂದ ಹಣ ಕೇಳುವುದು. ಇದೇನೂ ಅಲ್ಲಿನ ಕಾನೂನುಬದ್ಧ ನಿಯಮವಲ್ಲ. ದಾಂಪತ್ಯ ಮುರಿದರೆ ಪತ್ನಿ ಪತಿಯ ಬಳಿ ಪರಿಹಾರ ಕೇಳಿದಂತಲ್ಲ ಇದು. ಆದರೂ ಇಲ್ಲಿ ಹಲವರು ʼತಮಗಾದ ಭಾವನಾತ್ಮಕ ನಷ್ಟಕ್ಕೆ ಪರಿಹಾರʼ ಎಂದು ಹಣ ಕೇಳುತ್ತಾರೆ. ಕೆಲವರು ಕೋರ್ಟಿಗೆ ಹೋದದ್ದೂ ಇದೆ.

ಈ ಹಣ ಯಾರು ಯಾರಿಗೆ ಕೊಡಬೇಕು? ಸಾಂಪ್ರದಾಯಿಕವಾಗಿ, ಪುರುಷನೇ ಹಣ ಕೊಡಬೇಕು ಎನ್ನುವ ಮನೋಭಾವ ಇದೆ. ಕಾರಣ ಏನು? “ಹುಡುಗಿಯ ಯೌವನದ ಅಮೂಲ್ಯ ವರ್ಷಗಳು ವ್ಯರ್ಥವಾದವು” ಎಂಬ ಹಳೆಯ ಲಾಜಿಕ್. ಆಕೆ ಈಗ ಮದುವೆಗಾಗಿ ಮತ್ತೆ ಹೊಸದಾಗಿ ಹುಡುಕಬೇಕು ಎಂಬ ಅಭಿಪ್ರಾಯ.

ಆದರೆ ಇತ್ತೀಚೆಗೆ ಚಿತ್ರ ಬದಲಾಗುತ್ತಿದೆ. ಕೆಲ ಪುರುಷರು ʼನಾನೇಕೆ ಎಲ್ಲ ಹಣ ಕೊಡಲಿ? ನಾವು ಒಟ್ಟಿಗಿದ್ದಾಗ ಖರ್ಚು ಮಾಡಿದ ಹಣದ ಲೆಕ್ಕಾಚಾರವನ್ನೂ ಹಾಕೋಣ. ಅದನ್ನೂ ಹಂಚಿಕೊಳ್ಳೋಣʼ ಎಂದು ಕೇಳುತ್ತಾರೆ. ಕೆಲವರು ಪರಸ್ಪರ ಒಪ್ಪಂದ ಮಾಡಿಕೊಂಡು ಹಣ ಕೊಟ್ಟು “ಶಾಂತವಾಗಿ ಬೇರ್ಪಡೋಣ” ಎನ್ನುತ್ತಾರೆ. ಕೆಲ ಪ್ರಕರಣಗಳಲ್ಲಿ ಕುಟುಂಬಗಳೇ ಕೂತು ಮಾತುಕತೆ ನಡೆಸುತ್ತವೆ!

ಈ “ಪಾರ್ಟಿಂಗ್ ಫೀ” ಕೆಲವು ಸಾವಿರ ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂಪಾಯಿವರೆಗೂ ಹೋಗಬಹುದು. ಪರಿಸ್ಥಿತಿ, ಸಂಬಂಧದ ಅವಧಿ, ಖರ್ಚು ಎಲ್ಲ ಸೇರಿ ಮೊತ್ತ ನಿರ್ಧಾರವಾಗುತ್ತದೆ.

ಇಂಥ ಕೆಲವು ಪ್ರಕರಣಗಳು ಕೋರ್ಟ್‌ವರೆಗೂ ತಲುಪಿವೆ. ಬೀಜಿಂಗ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಮಾಜಿ ಗೆಳತಿಗೆ 30,000 ಯುಆನ್ ಕೊಡಲು ಒಪ್ಪಿಕೊಂಡಿದ್ದ. ಕೋರ್ಟ್ ಅದನ್ನು ಮಾನ್ಯಗೊಳಿಸಿ ಹಣ ಕೊಡಲು ಆದೇಶಿಸಿತು. ಇನ್ನೊಂದು ಪ್ರಕರಣದಲ್ಲಿ 1 ಲಕ್ಷ ಯುಆನ್‌ಗಾಗಿ ಮಾಡಿಕೊಳ್ಳಲಾದ ಒಪ್ಪಂದದ ಬಗ್ಗೆ ವಿವಾದ ಉಂಟಾಯಿತು. ಕೊನೆಗೆ ಕಡಿಮೆ ಮೊತ್ತ ನೀಡಿ ಸಮಾಧಾನಪಡಿಸಲಾಯಿತು.

ಅಂದರೆ, ಕಾನೂನಿನಲ್ಲಿ ಈ ಬಗ್ಗೆ ಸ್ಪಷ್ಟ ನಿಯಮ ಇಲ್ಲ. ಆದರೆ ಈ ಮೊದಲೇ ಆ ಕುರಿತು ಬರವಣಿಗೆಯ ಒಪ್ಪಂದ ಇದ್ದರೆ ಕೋರ್ಟ್ ಅದನ್ನು ಪರಿಗಣಿಸಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಭಾರಿ ಚರ್ಚೆ ನಡೆಯುತ್ತದೆ. ಕೆಲವರು ಇದನ್ನು ಹೆಚ್ಚುತ್ತಿರುವ ಸ್ವಾರ್ಥದ ಪರಿಣಾಮ ಎನ್ನುತ್ತಾರೆ. ಕೆಲವರು “ಪ್ರೇಮವನ್ನು ಹಣದಲ್ಲಿ ಅಳೆಯುವುದು ತಪ್ಪು” ಎನ್ನುತ್ತಾರೆ. ಮತ್ತೊಬ್ಬರು “ಇದು ಹಳೆಯ ಲಿಂಗ ಅಸಮಾನತೆಯ ಚಿಂತನೆ” ಎನ್ನುತ್ತಾರೆ. ಆದರೆ ಪ್ರೀತಿ ಮತ್ತು ಹಣದ ಈ ಮಿಶ್ರಣ ಸರಿಯೇ ಎಂಬ ಪ್ರಶ್ನೆ ಇದ್ದೇ ಇದೆ. ಪ್ರೀತಿ ಮುರಿದುಬಿದ್ದ ಮೇಲೆ ಹಣ ಕೊಟ್ಟರೆ ಮನಸ್ಸಿನ ನೋವು ಪರಿಹಾರವಾಗುತ್ತದೆಯೇ?

ಅಥವಾ ಇದು ಹೊಸ ರೀತಿಯ ಭಾವನಾತ್ಮಕ ಒತ್ತಡವೇ? ಚೀನಾದ ನಗರಗಳಲ್ಲಿ ಹೆಚ್ಚುತ್ತಿರುವ ಈ ಟ್ರೆಂಡ್, ಪ್ರೀತಿ, ಹಣ ಮತ್ತು ಸಮಾಜದ ಮೌಲ್ಯಗಳ ನಡುವಿನ ಬದಲಾವಣೆಯನ್ನು ತೋರಿಸುತ್ತಿದೆ. ಬ್ರೇಕ್‌ಅಪ್‌ಗಳು ಸಾಮಾನ್ಯ. ಆದರೆ ಪಾರ್ಟಿಂಗ್ ಫೀ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಭಾರತದಲ್ಲಿ ಇದು ಬಂದೀತೆ? ಬರಲೂಬಹುದು. ಈಗಾಗಲೇ ಡೈವೋರ್ಸ್‌ಗಳು ಗಂಡನ ಮನೆಯವರ ಕತ್ತು ಮುರಿಯುತ್ತಿವೆ. ಕೆಲವು ಮಾಜಿ ಪತ್ನಿಯರು ಪತಿಯಿಂದ ದುಬಾರಿ ಪರಿಹಾರ ಕೇಳುತ್ತಾರೆ. ಕೋರ್ಟ್‌ ವಿವೇಚನೆ ಬಳಸಿ ನಿರ್ಧರಿಸುತ್ತದೆ ಎನ್ನಿ. ಇನ್ನು ಪಾರ್ಟಿಂಗ್‌ ಫೀ ಬಂದರೆ ಏನಾಗುತ್ತದೋ ದೇವರೇ ಬಲ್ಲ.