ಚಾಣಕ್ಯ ನೀತಿ (Chanakya Niti) ಪ್ರಕಾರ, ಪತ್ನಿ ಮತ್ತು ಗೆಳತಿಯ ನಡುವೆ ಅಜಗಜಾಂತರವಿದೆ. ಮಹಿಳೆಯ ಕೆಲವು ಗುಣಗಳು ಸುಖೀ ದಾಂಪತ್ಯದ ಅಡಿಪಾಯವಾಗಿರುತ್ತವೆ, ಇನ್ನು ಕೆಲವು ಗುಣಗಳು ಗೆಳೆತನಕ್ಕಷ್ಟೇ ಸಾಕಾಗುತ್ತವೆ. ಹಾಗಾದರೆ ಯಾವುದು ಆ ಗುಣಗಳು?

ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ (Chanakya Niti) ಹೇಳಿರುವ ಹಲವು ಅಂಶಗಳು ಇಂದಿಗೂ ನಮ್ಮ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುವಂತಿವೆ. ಚಾಣಕ್ಯ ತನ್ನ ನೀತಿಯಲ್ಲಿ ದಾಂಪತ್ಯದ ಬಗ್ಗೆ, ಗಂಡು- ಹೆಣ್ಣಿನ ಸ್ನೇಹದ ಬಗ್ಗೆ, ಪತಿ - ಪತ್ನಿಯ ಸಂಬಂಧಧ ಬಗ್ಗೆ ಹೇಳಿದ್ದಾನೆ. ಚಾಣಕ್ಯನ ಪ್ರಕಾರ, ಗೆಳತಿಗೂ ಪತ್ನಿಗೂ ತುಂಬಾ ವ್ಯತ್ಯಾಸವಿದೆ. ಯಾರು ಬೇಕಿದ್ದರೂ ಗೆಳತಿ- ಗರ್ಲ್‌ಫ್ರೆಂಡ್ ಆಗಬಹುದು. ಆದರೆ ಯಾರು ಬೇಕಿದ್ದರೂ ಪತ್ನಿ ಆಗಲಾರರು. ಅದು ಹೇಗೆ? ಇಲ್ಲಿ ನೋಡಿ.

1. ಸಹ​ಧರ್ಮಿಣಿ

ಪತ್ನಿಯನ್ನು ಸಹಧರ್ಮಿಣಿ ಎನ್ನುತ್ತಾರೆ. ಎಂದರೆ, ಆಚಾರ್ಯ ಚಾಣಕ್ಯನ ಪ್ರಕಾರ, ಪತ್ನಿಯೆನಿಸುವವಳು ಧರ್ಮದ ಹಾದಿಯಲ್ಲಿ ಪತಿಯ ಜೊತೆಯಲ್ಲಿ ನಡೆದು ಬರುತ್ತಾಳೆ. ಧರ್ಮದ ಆಚೆಗೆ ಯಾರೊಂದಿಗೂ ಯಾವುದೇ ಸಂಬಂಧ ಇಟ್ಟುಕೊಳ್ಳಲು ಬಯಸುವುದಿಲ್ಲ. ಪತಿಯ ಜೊತೆಗೂ ಧರ್ಮ ಮೀರಿ ವ್ಯವಹರಿಸುವುದಿಲ್ಲ. ಧಾರ್ಮಿಕ ವಿಚಾರಗಳಿಗೆ ಪೂರಕವಾಗಿ ಮಾತ್ರ ದೈಹಿಕ ಆತ್ಮೀಯತೆಯನ್ನೂ ತೋರುತ್ತಾಳೆ. ಮನೆಯಲ್ಲಿ ಯಾವಾಗಲೂ ಸಂತೋಷ ತುಂಬಿರಲಿ ಎಂದು ಬಯಸುತ್ತಾಳೆ. ಈ ಗುಣವುಳ್ಳ ಮಹಿಳೆಯರಿರುವ ಮನೆಯಲ್ಲಿ ಎಂದಿಗೂ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಗೆಳತಿ ಗೆಳೆಯನ ಎಲ್ಲ ವಿಚಾರಗಳಿಗೆ ಸ್ಪಂದಿಸುವುದಿಲ್ಲ.

2. ಸಂ​ತೃಪ್ತ ಮನೋಲ್ಲಾಸಿನಿ

ಚಾಣಕ್ಯ ಸೂಕ್ತ ಪತ್ನಿಯ ಎರಡನೇ ಗುಣವನ್ನು ಸಂತೃಪ್ತಿ- ನೆಮ್ಮದಿ ಎಂದು ವಿವರಿಸಿದ್ದಾನೆ. ಹೆಂಡತಿಯಾಗಬಲ್ಲವಳು ಗಂಡನಿಂದ ತೃಪ್ತಿಯ ಭಾವನೆಯನ್ನು ಹೊಂದಿರುತ್ತಾಳೆ. ಆಕೆಯ ಆಸೆಗಳು ಸೀಮಿತವಾಗಿರುತ್ತದೆ. ಆಕೆಯ ವೈವಾಹಿಕ ಜೀವನವು ಯಾವಾಗಲೂ ಸಂತೋಷದಿಂದ ತುಂಬಿರುತ್ತದೆ. ಅಂತಹ ಮಹಿಳೆಯ ಪತಿಯನ್ನು ಅದೃಷ್ಟಶಾಲಿ ಎಂದು ಪರಿಗಣಿಸಬಹುದು. ಗೆಳತಿಯು ಗೆಳೆಯನ ದೈಹಿಕ ಆಸೆಗಳನ್ನು ಪೂರೈಸಬಹುದು, ಆದರೆ ಪಾರಮಾರ್ಥಿಕ ಸಂತೃಪ್ತಿಯನ್ನಲ್ಲ.

3. ಸಂಯಮೀ

ಸಂಯಮೀ ಎಂದರೆ ತಾಳ್ಮೆಯಿಂದಿರುವವಳು. ಚಾಣಕ್ಯ ನೀತಿ ಪ್ರಕಾರ ಸೂಕ್ತ ಹೆಂಡತಿ ಆಗಬಲ್ಲವಳ ಮೂರನೆಯ ಮುಖ್ಯ ಗುಣ ತಾಳ್ಮೆ. ತಾಳ್ಮೆಯಿಂದ ಪ್ರತಿ ಸನ್ನಿವೇಶವನ್ನೂ ಎದುರಿಸುವ ಮಹಿಳೆಯನ್ನು ಹೊಂದಿರುವ ಪತಿ ಅದೃಷ್ಟವಂತನಾಗಿರುತ್ತಾನೆ. ಸಂತೋಷದ ಜೀವನದಲ್ಲಿ ತಾಳ್ಮೆ ದೊಡ್ಡ ಅಂಶ. ತಾಳ್ಮೆ ಇದ್ದರೆ, ಒಬ್ಬ ವ್ಯಕ್ತಿಯು ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಬಹುದು. ಆಕೆ ಗಂಡನಲ್ಲೂ ತಾಳ್ಮೆಯನ್ನು ರೂಢಿಸುತ್ತಾಳೆ. ಗೆಳತಿ ತನಗೆ ಬೇಕಾದ್ದನ್ನಷ್ಟೆ ಅವಸರದಿಂದ ಪಡೆದು ಹೊರಟುಹೋಗಬಹುದು.

4. ​ಶಾಂತ ಸ್ನಿಗ್ಧ ಸುಂದರಿ

ತನ್ನ ಪುರುಷನಿವನು ಎಂದು ಅರ್ಥ ಮಾಡಿಕೊಂಡ ಮಹಿಳೆ ಆತನ ಬಗ್ಗೆ ಶಾಂತವಾಗಿರುತ್ತಾಳೆ ಹಾಗೂ ಕೋಪಗೊಳ್ಳುವುದಿಲ್ಲ. ಕೋಪಗೊಂಡಂತೆ ತೋರಿಸಿದರೂ ಆದು ಆತನನ್ನು ತಿದ್ದುವುದಕ್ಕಾಗಿ ಹೊರತು ದ್ವೇಷದಿಂದಲ್ಲ. ಆಕೆಯ ಪತಿ ಕೂಡ ಅದೃಷ್ಟಶಾಲಿ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾನೆ. ಏಕೆಂದರೆ ಕೋಪವು ಆ ವ್ಯಕ್ತಿಯನ್ನು ನಂತರ ವಿಷಾದಿಸುವಂತೆ ಮಾಡುತ್ತದೆ. ಪತ್ನಿ ತನ್ನ ಪತಿ ವಿಷಾದಿಸುವುದನ್ನು ಬಯಸುವುದಿಲ್ಲ. ಕೋಪ ಬರುವಂತೆ ಮಾಡುವವರು ಮನುಷ್ಯನ ದೊಡ್ಡ ಶತ್ರು. ಅದರಿಂದ ತಾತ್ಕಾಲಿಕ ಲಾಭ ಮಾತ್ರ ಸಾಧ್ಯ. ದೀರ್ಘಾವಧಿಯಲ್ಲಿ ಹಾನಿ.

5. ಹಿತ ಮಿತ ಮೃದುಭಾಷಿಣಿ

ಚಾಣಕ್ಯ ನೀತಿ ಪ್ರಕಾರ, ಮಾತಿನಲ್ಲಿ ಮಾಧುರ್ಯವುಳ್ಳ ಮಹಿಳೆಯನ್ನು ಪತ್ನಿಯನ್ನಾಗಿ ಪಡೆದ ಪತಿಯೇ ಅದೃಷ್ಟವಂತ. ಅಂತಹ ಮಹಿಳೆ ತನ್ನ ಗಂಡನ ಜೀವನವನ್ನು ಸ್ವರ್ಗದಂತೆ ಮಾಡುತ್ತಾಳೆ. ಅಂತಹ ಮಹಿಳೆಯನ್ನು ಹೊಂದಿರುವುದು ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಆದರೆ ಗೆಳತಿ ತನ್ನ ತಾತ್ಕಾಲಿಕ ಪ್ರಯೋಜನಕ್ಕಾಗಿ ಗಂಡುಸನ್ನು ಕೆರಳಿಸುವಂತೆ ಪ್ರಚೋದನಕಾರಿಯಾಗಿ ಮಾತನಾಡಬಲ್ಲಳು. ಅವಳಿಗೆ ಪುರುಷನ ನೆಮ್ಮದಿ ಮುಖ್ಯವಾಗಿರುವುದಿಲ್ಲ.

6. ಸತ್ಯವಾಕ್ಯಾ

ಯಾರು ತನ್ನ ಪುರುಷನ ಜೊತೆ ಎಂದೂ ಸುಳ್ಳಾಡುವುದಿಲ್ಲವೋ, ಯಾರು ಸದಾ ಸತ್ಯವನ್ನೇ ಆಡುತ್ತಾಳೋ- ಅಂತಹವಳನ್ನು ಗಂಡು ಕಣ್ಣು ಮುಚ್ಚಿ ಮದುವೆಯಾಗಬಹುದಂತೆ. ಆಕೆ ಸತ್ಯ- ಸಾತ್ವಿಕತೆಯಿಂದ ಬರುವ ಪ್ರಯೋಜನಗಳು ಮಾತ್ರ ತಮಗೆ ಇರಲಿ, ಸುಳ್ಳಿನಿಂದ ಬರುವುದು ಮುಂದೊಂದು ದಿನ ಅಪಾಯ ತರಬಲ್ಲದು ಎಂದು ಅರಿತವಳು. ಆದರೆ ಇಂದು ಇದ್ದು ನಾಳೆ ಹೋಗುವ ಮನಸ್ಸುಳ್ಳವಳು ಸತ್ಯಕ್ಕೆ ಬೆಲೆ ಕೊಡುವುದಿಲ್ಲ.