ಮಹಿಳೆಯರು ಮತ್ತು ಸಣ್ಣ ಉದ್ಯಮಿಗಳು ತಾವು ತಯಾರಿಸಿದ ಉತ್ಪನ್ನಗಳನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಕೇಂದ್ರ ಸರ್ಕಾರಕ್ಕೆ ಮಾರಾಟ ಮಾಡಲು ಜೆಮ್ (GeM) ಪೋರ್ಟಲ್ ಸಹಕಾರಿಯಾಗಿದೆ. 2016ರಲ್ಲಿ ಆರಂಭವಾದ ಈ ಕಾಗದರಹಿತ ಆನ್‌ಲೈನ್ ಮಾರುಕಟ್ಟೆಯ ಮೂಲಕ ಸುಲಭವಾಗಿ ನೋಂದಾಯಿಸಿಕೊಂಡು ವ್ಯಾಪಾರ ಮಾಡಬಹುದು.

ದೆಹಲಿ: ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕವೋ ಅಥವಾ ಮನೆಯಲ್ಲಿ ಕುಳಿತೋ ವಿವಿಧ ಉತ್ಪನ್ನಗಳನ್ನು ತಯಾರಿಸುವುದು ಇದೆ. ಆದರೆ ಅವುಗಳನ್ನು ಎಲ್ಲಿ ಮಾರಾಟ ಮಾಡಬೇಕು ಎಂದು ತಿಳಿಯುವುದೇ ಇಲ್ಲ. ಗ್ರಾಮೀಣ ಪ್ರದೇಶಗಳ ಮಹಿಳೆಯರು, ದೂರದ ಪಟ್ಟಣಗಳಿಗೆ ಹೋಗಿ ಮಾರಾಟ ಮಾಡುವುದು ಕಷ್ಟ. ಮಾರಾಟಕ್ಕೆ ಹೋದರೂ ಅದನ್ನು ಖರೀದಿ ಮಾಡುತ್ತಾರೆಯೋ ಹೇಳಲು ಆಗುವುದಿಲ್ಲ. ಅಮೆಜಾನ್​, ಫ್ಲಿಪ್​ಕಾರ್ಟ್​ನಂಥ ವೆಬ್​ಸೈಟ್​ಗಳಲ್ಲಿ ಮಾರಾಟ ಮಾಡುವ ಶಕ್ತಿ ಅಂತೂ ಮಧ್ಯಮ ವರ್ಗದ ಜನಕ್ಕೆ ಅಸಾಧ್ಯವಾಗಿರುವ ಮಾತು. ಇದೇ ಕಾರಣಕ್ಕೆ ಕೇಂದ್ರ ಸರ್ಕಾರವೇ ಜೆಮ್​ ಪೋರ್ಟಲ್​ ಆರಂಭಿಸಿದ್ದು, ಇದರ ಮೂಲಕ ಮಹಿಳೆಯರು ಮಾರಾಟ ಮಾಡಬಹುದಾಗಿದ್ದು, ಅದನ್ನು ಕೇಂದ್ರ ಸರ್ಕಾರವೇ ಖರೀದಿ ಮಾಡಿ, ಮಾರಾಟ ಮಾಡುತ್ತದೆ.

ಅಷ್ಟಕ್ಕೂ ಇದೇನು ಹೊಸ ವೆಬ್​ಸೈಟ್​ ಅಲ್ಲ. 2016ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಆರಂಭಿಸಿದ್ದು, ಇದಾಗಲೇ ಸಹಸ್ರಾರು ಮಹಿಳೆಯರು ಇದರ ಮೂಲಕ ಕೋಟ್ಯಂತರ ರೂಪಾಯಿಗಳ ಸರಕುಗಳನ್ನು ಮಾರಾಟ ಮಾಡಿದ್ದಾರೆ. ಆದರೆ, ಇಷ್ಟಾದರೂ ಕೆಲವರಿಗೆ ಜೇಮ್​ ಪೋರ್ಟಲ್ ಬಗ್ಗೆ ಅರಿವಿಲ್ಲ. ಇದೇ ಕಾರಣಕ್ಕೆ ಮಾಜಿ ಸಚಿವೆ ಸ್ಮೃತಿ ಇರಾನಿ ಅವರು ಈ ಕುರಿತು ಮತ್ತೊಮ್ಮೆ ಮಾಹಿತಿ ನೀಡಿದ್ದಾರೆ. ತಮಿಳುನಾಡಿನ ಅತ್ಯಂತ ಚಿಕ್ಕ ಹಳ್ಳಿಯ ಮಹಿಳೆಯೊಬ್ಬರು ತಯಾರಿಸಿರುವ ಫ್ಲಾಸ್ಕ್​ ಪ್ರಧಾನಿಯವರ ಕಾರ್ಯಾಲಯವನ್ನು ತಲುಪಿದೆ ಎಂದಿರುವ ಅವರು, ಮಹಿಳಾ ಉದ್ಯಮಿಗಳ ಉತ್ತೇಜನಕ್ಕೆ ಇದನ್ನು ಆರಂಭಿಸಿರುವ ಬಗ್ಗೆ ತಿಳಿಸಿದ್ದಾರೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ, ಈ ಪೋರ್ಟಲ್ ಬಳಕೆಯಿಂದ ಸರ್ಕಾರಿ ಖರೀದಿದಾರರಿಗೆ ಸರಾಸರಿ ಶೇಕಡಾ 9.75 ರಷ್ಟು ಹಣ ಉಳಿತಾಯವಾಗುತ್ತಿದೆ.

ಜೆಮ್ ಪೋರ್ಟಲ್ ಕುರಿತು ಮಾಹಿತಿ

ಜೆಮ್ ಪೋರ್ಟಲ್ (GeM - Government e-Marketplace) ಎಂಬುದು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು (PSUs) ತಮಗೆ ಅಗತ್ಯವಿರುವ ಸರಕು ಮತ್ತು ಸೇವೆಗಳನ್ನು ಖರೀದಿಸಲು ಬಳಸುವ ಅಧಿಕೃತ ಆನ್‌ಲೈನ್ ಸಂಗ್ರಹಣೆ (Procurement) ಪ್ಲಾಟ್‌ಫಾರ್ಮ್ ಆಗಿದೆ. ಇದನ್ನು 2016 ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಪ್ರಾರಂಭಿಸಲಾಯಿತು.ಇದರ ಮುಖ್ಯ ಉದ್ದೇಶ ಹಳೆಯ, ಕಾಗದದ ಕೆಲಸಗಳಿಂದ ಕೂಡಿದ ಸಾಂಪ್ರದಾಯಿಕ ಟೆಂಡರ್ ವ್ಯವಸ್ಥೆಯನ್ನು ಬದಲಾಯಿಸಿ, ಸರ್ಕಾರಿ ಖರೀದಿಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ವೇಗವನ್ನು ತರುವುದಾಗಿದೆ. ಇದು ಸಂಪೂರ್ಣವಾಗಿ ಕಾಗದರಹಿತ ಮತ್ತು ನಗದುರಹಿತ, ಆನ್‌ಲೈನ್ ಮಾರುಕಟ್ಟೆಯಾಗಿದ್ದು, ಮಧ್ಯವರ್ತಿಗಳ ಹಾವಳಿ ಹಾಗೂ ಭ್ರಷ್ಟಾಚಾರವನ್ನು ತಡೆಯುತ್ತದೆ.

ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಯಾರು ಖರೀದಿಸಬಹುದು? (Buyers): ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕ ವಲಯದ ಉದ್ಯಮಗಳು (PSUs), ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಈ ಪೋರ್ಟಲ್ ಮೂಲಕ ಅಗತ್ಯ ವಸ್ತುಗಳನ್ನು ಖರೀದಿಸುತ್ತವೆ.

ಯಾರು ಮಾರಾಟ ಮಾಡಬಹುದು? (Sellers): ಭಾರತದ ಯಾವುದೇ ಅಧಿಕೃತ ತಯಾರಕರು, ಸೇವಾ ಪೂರೈಕೆದಾರರು, ವ್ಯಾಪಾರಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ವಿಶೇಷವಾಗಿ MSME (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ತಮ್ಮ ಉತ್ಪನ್ನಗಳನ್ನು ಇಲ್ಲಿ ನೋಂದಾಯಿಸಿಕೊಂಡು ಸರ್ಕಾರಕ್ಕೆ ನೇರವಾಗಿ ಮಾರಾಟ ಮಾಡಬಹುದು.

ನೋಂದಣಿಗೆ ಬೇಕಾಗುವ ಪ್ರಮುಖ ದಾಖಲೆಗಳು:

ಒಬ್ಬ ವ್ಯಾಪಾರಿ ಅಥವಾ ಕಂಪನಿಯು ಜಿಇಎಂ ಪೋರ್ಟಲ್‌ನಲ್ಲಿ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಲು ಈ ಕೆಳಗಿನ ಪ್ರಮುಖ ವಿವರಗಳು ಬೇಕಾಗುತ್ತವೆ:

1. ಪ್ಯಾನ್ ಕಾರ್ಡ್ (PAN Card)

2. ಉದ್ಯಮ್ ನೋಂದಣಿ (Udyam Registration - MSME ಆಗಿದ್ದರೆ)

3. ಜಿಎಸ್‌ಟಿಐಎನ್ ಸಂಖ್ಯೆ (GSTIN - ಅನ್ವಯಿಸುವಲ್ಲಿ)

4. ಬ್ಯಾಂಕ್ ಖಾತೆ ವಿವರಗಳು

5. ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು Government e Marketplace (GeM) ಲಿಂಕ್ ಬಳಸಿ

ಮಾರಾಟ ಮಾಡುವ ವಿಧಾನಗಳು (How to Sell)

ಜೆಮ್ ಪೋರ್ಟಲ್‌ನಲ್ಲಿ ಸರ್ಕಾರಿ ಇಲಾಖೆಗಳು ಪ್ರಮುಖವಾಗಿ 3 ವಿಧಾನಗಳಲ್ಲಿ ಖರೀದಿಸುತ್ತವೆ:

• ನೇರ ಖರೀದಿ (Direct Purchase): ₹25,000 ವರೆಗಿನ ಮೌಲ್ಯದ ಆರ್ಡರ್‌ಗಳನ್ನು ಯಾವುದೇ ಟೆಂಡರ್ ಇಲ್ಲದೆ ನೇರವಾಗಿ ಅತ್ಯಂತ ಕಡಿಮೆ ಬೆಲೆ ಇರುವ ಮಾರಾಟಗಾರರಿಂದ ಖರೀದಿಸಬಹುದು.

• ಎಲ್‌-1 ಖರೀದಿ (L1 Purchase/Comparison): ₹25,000 ರಿಂದ ₹5,00,000 ವರೆಗಿನ ಖರೀದಿಗೆ ಕನಿಷ್ಠ 3 ಮಾರಾಟಗಾರರ ಉತ್ಪನ್ನಗಳನ್ನು ಹೋಲಿಕೆ ಮಾಡಿ, ಅದರಲ್ಲಿ ಯಾರು ಕಡಿಮೆ ಬೆಲೆ (L1) ನೀಡಿರುತ್ತಾರೋ ಅವರಿಂದ ಖರೀದಿಸಲಾಗುತ್ತದೆ.

• ಇ-ಬಿಡ್ಡಿಂಗ್ / ಟೆಂಡರ್ (Bidding/RA): ₹5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಇಲಾಖೆಗಳು ಟೆಂಡರ್ (Bid) ಕರೆಯುತ್ತವೆ. ನೀವು ಆ ಬಿಡ್‌ಗಳಲ್ಲಿ ಭಾಗವಹಿಸಿ, ನಿಮ್ಮ ಬೆಲೆಯನ್ನು ಸಲ್ಲಿಸಬೇಕು. ನಿಮಗೆ ಆರ್ಡರ್ ಸಿಕ್ಕರೆ ಸರಕುಗಳನ್ನು ಪೂರೈಸಬಹುದು.

https://gem.gov.in/ ಲಿಂಕ್​ ಓಪನ್​ ಮಾಡಿದರೆ ನಿಮಗೆ ಎಲ್ಲಾ ಮಾಹಿತಿ ಸಿಗುತ್ತದೆ.