Asianet Suvarna News Asianet Suvarna News

ಕೈತುತ್ತು ತಿನಿಸುವವನಿಗಿಂತ ಕೈ ತುಂಬಾ ಎಣಿಸುವವನೇ ಪ್ರಿಯ, ಏನಿವಾಗ?

ಕಷ್ಟದಲ್ಲಿ ಸಂತೋಷ ಕಾಣುವ ಅನಿವಾರ್ಯತೆ ಒಪ್ಪಿಕೊಳ್ಳಲು ಆಕೆ ಸಿದ್ಧಳಿಲ್ಲ. ಸುಖವಾಗಿದ್ದರೆ ಸಾಕು, ಸಂತೋಷ ತನ್ನಿಂತಾನೇ ಸಿಗುತ್ತದೆ ಎನ್ನುವವಳು ಅವಳು. ಜೀವನವಿಡೀ ಕಾಸು ಕೂಡುವ ಹೋರಾಟದಲ್ಲೇ ಕಳೆದು ಹೋಗುವುದು ಆಕೆಗೆ ಬೇಕಿಲ್ಲ. ಪಟ್ಟದರಸಿ ಮಾಡದಿದ್ದರೂ ಸರಿ, ಪಟ್ಟಣದಲ್ಲೊಂದು ಮನೆಯಿದ್ದರೆ ಚೆನ್ನ ಎನ್ನುವುದು ಆಕೆಯ ಆಸೆ.

Women now prefer to select men with money instread love
Author
Bangalore, First Published Feb 12, 2020, 3:24 PM IST

ಹೌದು, ಆಕೆಗೆ ಕೈತುತ್ತು ತಿನಿಸುವವನಿಗಿಂತ ಕೈ ತುಂಬಾ ಎಣಿಸುವವನೇ ಪ್ರಿಯ, ಏನಿವಾಗ?

'ಬಡವನಾದರೆ ಏನು ಪ್ರಿಯೆ, ಕೈತುತ್ತು ತಿನಿಸುವೆ
ಎದೆಯ ತುಂಬಾ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ...'
'ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ
ರಟ್ಟೆ ಮೇಲೆ ಹೊತ್ತು ನಿನ್ನ ಜಗವ ಸುತ್ತಿ ತಣಿಸುವೆ'


ಹಣವಿಲ್ಲದವರ ಜನಗಣಮನ... ಕವಿ ಸತ್ಯಾನಂದ ಪಾತ್ರೋಟ ಅವರು ಬರೆದ ಹಾಡು. ರಾಜು ಅನಂತಸ್ವಾಮಿಯ ಧ್ವನಿಯಲ್ಲಿ ಈ ಹಾಡು ಕೇಳಿದ ಹಲವು ಯುವಕರೆಲ್ಲ ಗುನುಗಿಕೊಂಡು, ಇದನ್ನೇ ತಮ್ಮ ಪ್ರೇಯಸಿಗೆ ಹೇಳಿ ಮೆಚ್ಚಿಸಿದ್ದಿದೆ.

ಆಗೇನೋ ಮಾನಿನಿಯರು ಮನಸೂರೆಗೊಂಡು ಮನಸ್ಸು ಕೊಡುತ್ತಿದ್ದರೇನೋ, ಆದರೆ, ಇದೇ ಹಾಡನ್ನು ಈಗಿನ ಯಾವ ಹುಡುಗಿಗೆ ಹೇಳಿ ಕೂಡಾ ಮೆಚ್ಚಿಸಲಾಗದು. ಏಕೆಂದರೆ, ಇಂದಿನ ಪ್ರತಿ ಹುಡುಗಿಯೂ ಹಣವಂತನ ಕನಸು ಕಾಣುತ್ತಾಳೆ. ಕೈತುತ್ತು ತಿನ್ನಿಸುವಂಥ ಪ್ರೀತಿಯ ಬಯಕೆ ಆಕೆಗಿಲ್ಲ. ಅವಳದ್ದೇನಿದ್ದರೂ ವೀಕೆಂಡ್‌ಗೊಮ್ಮೆ ಡಿನ್ನರ್ ಡೇಟ್ ಕರೆದುಕೊಂಡು ಹೋಗುವಂಥ ಹುಡುಗನ ಬಯಕೆ. ಕಷ್ಟದಲ್ಲಿ ಸಂತೋಷ ಕಾಣುವ ಅನಿವಾರ್ಯತೆ ಒಪ್ಪಿಕೊಳ್ಳಲು ಆಕೆ ಸಿದ್ಧಳಿಲ್ಲ. ಸುಖವಾಗಿದ್ದರೆ ಸಾಕು, ಸಂತೋಷ ತನ್ನಿಂತಾನೇ ಸಿಗುತ್ತದೆ ಎನ್ನುವವಳು ಅವಳು. ಜೀವನವಿಡೀ ಕಾಸು ಕೂಡುವ ಹೋರಾಟದಲ್ಲೇ ಕಳೆದು ಹೋಗುವುದು ಆಕೆಗೆ ಬೇಕಿಲ್ಲ. ಪಟ್ಟದರಸಿ ಮಾಡದಿದ್ದರೂ ಸರಿ, ಪಟ್ಟಣದಲ್ಲೊಂದು ಮನೆಯಿದ್ದರೆ ಚೆನ್ನ ಎನ್ನುವುದು ಆಕೆಯ ಆಸೆ. ಹಣ, ಗುಣ- ಎರಡಿದ್ದವನೇ ಜಾಣರ ಜಾಣ ಎಂದು ಆರಿಸುವವಳು ಅವಳು. 

ಆಕೆ ಪಕ್ಕಾ ಪ್ರಾಕ್ಟಿಕಲ್
ಆಕೆಗೆ ಪ್ರೀತಿಯ ಅಮಲಲ್ಲಿ ತೇಲಿಸುವ ಭಾವನಾಜೀವಿಗಿಂತ ಬುದ್ಧಿವಂತಿಕೆಯ ಆಸರೆಯಿಂದ ದುಡಿವವನೇ ಇಷ್ಟ. ಆತ ಬೆವರು ಹರಿಸಿ ಹೂವ ಬೆಳೆಸಿ ಮುಡಿಯಲಿಟ್ಟು ನಗಿಸುವವರೆಗೆ ಕಾಯುವ ಸಂಕಟ ಆಕೆಗೆ ಬೇಡ. ಮಾರ್ಕೆಟ್‌ನಲ್ಲಿ ಸಿಗುವ ಗುಲಾಬಿಯನ್ನು ಕೊಡಬೇಕೆನಿಸಿದ ಕೂಡಲೇ ಕೊಂಡು ಕೊಟ್ಟೋ ಅಥವಾ ಹೂವಿನ ಬೊಕೆಯನ್ನು ಆನ್‌ಲೈನ್ ಡೆಲಿವರಿ ಮಾಡಿಸಿ ಸರ್ಪ್ರೈಸ್ ನೀಡುವವನಿಗಾಗಿ ಆಕೆಯ ಕಾಯುವಿಕೆ.
 
ಇವರಿಗೆಲ್ಲ ಪ್ರೀತಿಯ ಬೆಲೆ ಗೊತ್ತಿಲ್ಲ ಎಂದು ಆಡಿಕೊಳ್ಳುವವರಿಗೆ ನಿಮಗೆ ಜೀವನದ ಬೆಲೆ ಗೊತ್ತಿಲ್ಲ ಎಂಬ ತಿರುಗುಬಾಣ ಅವಳದು. ಏಕೆಂದರೆ ಪ್ರೀತಿಗೆ ಸೋತ ಆಕೆಯ ಅಮ್ಮ ಕಷ್ಟ ಪಟ್ಟಿದ್ದನ್ನು ಆಕೆ ನೋಡಿದ್ದಾಳೆ. ಅಮ್ಮನ ಭುಜಕೆ ಭುಜವ ಹಚ್ಚಿ ನಿಂತು ಅದನೇ ತೋಳುಬಂಧಿ ಎಂದು ಹೇಳಿ ಮೆಚ್ಚಿಸುತ್ತಿದ್ದ ಅಪ್ಪನದು ಕೇವಲ ಮಾತಿನರಮನೆ, ಅದರಿಂದ ಅಮ್ಮ ಮದುವೆಯಾದ ಒಂದೆರಡು ವರ್ಷ ಸಂತಸ ಪಟ್ಟಿರಬಹುದು. ಆದರೆ, ಜೀವನಪೂರ್ತಿ ಬರಿಯ ಮರುಳು ಮಾತುಗಳಿಗೆ ಕಿವಿಯಾಗುತ್ತಾ, ದಿನದಿನವೂ ಒಂದೊಂದು ರುಪಾಯಿಯನ್ನೂ ಕೂಡಿಡಲು ಅಮ್ಮ ಅದೆಷ್ಟು ಒದ್ದಾಡಿದ್ದಾಳೆಂಬುದು ಮಗಳ ಅರಿವಿಗೆ ಮಾತ್ರ ನಿಲುಕಿದ ನಿಟ್ಟುಸಿರು. 

ಅಷ್ಟಕ್ಕೂ ಈ ಲವ್, ಲವ್ ಅಂತಾರಲ್ಲ, ಹಂಗಂದ್ರೆ ಏನು?...

ಪಕ್ಕದೂರಿನ ಪ್ರೇಕ್ಷಣೀಯ ಸ್ಥಳ ನೋಡಲು ಕೂಡಾ ಹತ್ತಾರು ವರ್ಷ ಕನಸು ಕಾಣಬೇಕಾದ ಅಮ್ಮನ ಸ್ಥಿತಿಯ ಅರಿವು ಮಗಳಿಗಿದೆ. ಹಾಗಾಗೇ ಅವಳ ಕನಸುಗಳಲ್ಲಿ ವಿದೇಶದಲ್ಲಿರುವ ವಿದ್ಯಾವಂತನಿದ್ದಾನೆ. ಮಗಳನ್ನು ರಾಣಿಯಂತೆ ಬೆಳಸುವ ಬಯಕೆಗಾಗಿ ತಾನು ದಾಸಿಯಾದ ಅಮ್ಮನ ಪಡಿಪಾಟಲ ಅರಿವು ಆಕೆಗಿದೆ. ಅದಕ್ಕೇ ರಾಜನಂಥವನನ್ನು ಮದುವೆಯಾಗಿ ಮಕ್ಕಳನ್ನು ರಾಜಕುವರರಂತೆ ಬೆಳೆಸುವ ಆಸೆ ಆಕೆಯದು. ಪ್ರೀತಿಯಲ್ಲಿ ಬೀಳುವ ಮಾತೇ ಇಲ್ಲ, ಬದುಕಿನಲ್ಲಿ ಏಳಬೇಕು, ಏಳ್ಗೆ ಬೇಕು ಅಷ್ಟೇ, ಅದೇ ಅವಳ ಕನಸು, ಛಲ.

ಡೋಂಟ್ ಕೇರ್ ಆ್ಯಟಿಟ್ಯೂಡ್
ಕೆಲವರು ಆಕೆಯನ್ನು ಎಷ್ಟೇ ದೂರಬಹುದು. ಹಾಗೆ ದೂರುವವರು ದುಡಿಯಲಾಗದ, ಹೆಣ್ಣಿನ ಕನಸನ್ನು ನನಸು ಮಾಡಲಾಗದ ಅಸಾಮರ್ಥ್ಯರು ಎಂದುಕೊಂಡು ಮುಂದೆ ಸಾಗುತ್ತಾಳೆ ಅವಳು. ನಿಮ್ಮ ಮಾತುಗಳು ಕಟ್ಟುಪಾಡುಗಳಿಂದ ಕಟ್ಟಿಹಾಕಲಾರದವರ ಅಸಹಾಯಕತೆಯಂತೆ ಕೇಳುತ್ತದೆ, ಮೂಢನಂಬಿಕೆಯ, ಮಡಿವಂತಿಕೆಯ ಮಂತ್ರಕ್ಕೆ ಮಾವಿನಕಾಯಿ ಉದುರಿಸಲಾರದೆ ಮಣಮಣ ಎಂದು ಗುನುಗುವ ನಿಮ್ಮ ಪಾಡು ಆರ್ತನಾದವಾಗುತ್ತದೆ. 

ಪ್ರೇಮಿಯ ಮೇಲೆ ಅತಿಯಾದ ಅವಲಂಬನೆ ಒಳ್ಳೇದಲ್ಲ...

ಇರುವುದೊಂದೇ ಬದುಕು, ಅದನ್ನು ಇಚ್ಚಿಸಿದಂತೇ ಬದುಕು ಎನ್ನುವುದು ಆಕೆಯ ಮನಸ್ಥಿತಿ.

ಹಾಗಾಗಿ ಇದನ್ನೆಲ್ಲ ಆಕೆಯ ದುರಾಸೆ ಎನ್ನುವುದು ಸರಿಯಲ್ಲ. ತಾನು ಹಣವಂತನನ್ನು ಮದುವೆಯಾಗಿ ಸುಮ್ಮನೆ ಕೂರುವವಳೂ ಅವಳಲ್ಲ. ಅವನ ಸಮಕ್ಕೆ ಓದಿ, ಉದ್ಯೋಗ ಪಡೆದು ದುಡಿವ ಸ್ವಾಭಿಮಾನವೂ, ಛಲವೂ ಆಕೆಯಲ್ಲಿದೆ. ಬಡವನ ಬಾಯಿಮಾತಿಗೆ ಮರುಳಾದರೆ ಬದುಕಿಡೀ ಬವಣೆಯಲ್ಲೇ ಕಳೆಯಬೇಕಾಗುತ್ತದೆ. ಶ್ರೀಮಂತನ ಹಣವನ್ನೇ ನೆಚ್ಚಿದರೆ ಆತನ ಮನಸ್ಸಿನಲ್ಲಿ ಕಡೆಗಣನೆಯಾಗಬೇಕಾಗುತ್ತದೆ ಎಂಬುದನ್ನು ಆಕೆ ಬಲ್ಲಳು. ಹಾಗಾಗಿಯೇ ಅವಳು ಬದುಕಿನ ಪ್ರತಿ ಸವಾಲಿಗೂ ತನ್ನನ್ನು ತಾನು ಸಿದ್ಧಪಡಿಸಿಕೊಂಡು, ತನ್ನ ಕನಸುಗಳಂತೆ ಬದುಕು ನಡೆಸಲು ಏನೇನು ಅಗತ್ಯವೋ ಅಂಥದ್ದಕ್ಕಾಗಿಯೇ ಹುಡುಕುತ್ತಾಳೆ. ಮದುವೆಗೆ ಮುನ್ನವೇ, ಮಧ್ಯೆ ಒಂಟಿಯಾದರೆ ದಿಟ್ಟೆಯಾಗಿ ಬದುಕುವುದು ಹೇಗೆ ಎಂಬುದನ್ನೂ ಮುಂದಾಲೋಚಿಸುವಷ್ಟು ಜಾಣೆ, ಪ್ರಬುದ್ಧೆ ಆಕೆ. ತಾನು ಆತನಿಂದ ಬಯಸುವಂಥದ್ದನ್ನೆಲ್ಲ ಆತನಿಗೂ ನೀಡುವ ಬಯಕೆ ಅವಳದು. 

ಹಣವೇ ಎಲ್ಲ ಅಲ್ಲ, ಹಾಗಂಥ ಹಣವಿಲ್ಲದೆ ಒಣಮಾತುಗಳಲ್ಲಿ ಸುಖವಿಲ್ಲ ಎಂಬುದು ಅವಳ ಯೋಚನೆ. 

ಹಾಗಾಗಿಯೇ, ಕವಿಸಾಲುಗಳಿಗೆ ಸೋಲದವಳನ್ನು ದೂರುತ್ತಾ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ. ಆಕೆಗೆ ಬದುಕಲ್ಲಿ ಏನೋ ಬೇಕೋ ಅವಳದನ್ನು ಅರ್ಥ ಮಾಡಿಕೊಂಡಿದ್ದಾಳೆ. ದೂರುವವರು ಅರ್ಥ ಮಾಡಿಕೊಂಡು ತಮ್ಮ ಕನಸುಗಳನ್ನು ವಿಸ್ತರಿಸಿಕೊಳ್ಳಬೇಕಷ್ಟೇ. 

Follow Us:
Download App:
  • android
  • ios