ರಾಜಸ್ಥಾನದ ಜೈಪುರದಲ್ಲಿ, ಗಂಡನ ಸಾವಿನ ನಂತರ ಅನೈತಿಕ ಸಂಬಂಧ ಹೊಂದಿದ್ದ ವಿಧವೆ ಮತ್ತು ಆಕೆಯ ಪ್ರಿಯಕರನನ್ನು ಮಹಿಳೆಯ ಕುಟುಂಬದವರೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.
ಜೈಪುರ: ಗಂಡನ ಸಾವಿನ ನಂತರ ಅನೈತಿಕ ಸಂಬಂಧದ ಹಾದಿ ಹಿಡಿದ 35ರ ವಿಧವೆ ಮಹಿಳೆ ಹಾಗೂ ಆಕೆಯ ಗೆಳೆಯನಿಗೆ ಮಹಿಳೆಯ ಗಂಡನ ಮನೆಯವರೇ ಬೆಂಕಿ ಹಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಬೆಂಕಿ ಹಚ್ಚಿದ್ದರಿಂದ ಗಂಭೀರ ಗಾಯಗೊಂಡ ಮಹಿಳೆಯ ಹಾಗೂ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬೆಂಕಿಯಿಂದಾಗಿ ಶೇಕಡಾ 70ರಷ್ಟು ಸುಟ್ಟ ಗಾಯಗಳನ್ನು ಹೊಂದಿದ್ದರಿಂದ ಇಬ್ಬರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಜೈಪುರದ ದುದು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಜೈಪುರದ ಸವಾಯ್ ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಮಹಿಳೆಯ ಗೆಳೆಯ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ. ಮಹಿಳೆ ಬುಧವಾರ ನಸುಕಿನ ಜಾವ ಸಾವನ್ನಪ್ಪಿದ್ದಾಳೆ. ಸಂತ್ರಸ್ತರನ್ನು 25 ವರ್ಷದ ಕೈಲಾಶ್ ಗುರ್ಜರ್ ಹಾಗೂ 30 ವರ್ಷದ ಸೋನಿ ಎಂದು ಗುರುತಿಸಲಾಗಿದೆ. ಸಾವಿಗೂ ಮೊದಲು ಸೋನಿ ನೀಡಿದ ಹೇಳಿಕೆಯಲ್ಲಿ ಸೋನಿ ಕೈಲಾಶ್‌ನನ್ನು ಭೇಟಿ ಮಾಡುವುದಕ್ಕೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹೋಗಿದ್ದಾಳೆ. ಈ ವೇಳೆ ಆರೋಪಿಗಳು ಅವರನ್ನು ಹಿಂಬಾಲಿಸಿದ್ದಾರೆ. ನಂತರ ಕಂಬಕ್ಕೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕುಟುಂಬದ ವಿರೋಧದ ನಡುವೆಯೂ ಇವರಿಬ್ಬರು ಸಂಬಂಧದಲ್ಲಿದ್ದರು. ಇತ್ತ ಕೈಲಾಶ್‌ಗೂ ಮದುವೆಯಾಗಿದೆ. ಸೋನಿಗೆ ಮದುವೆಯಾಗಿದ್ದು, 10 ವರ್ಷದ ಮಗ ಹಾಗೂ 7 ವರ್ಷದ ಮಗಳಿದ್ದಾಳೆ. ಈಕೆಯ ಗಂಡ ಆರು ವರ್ಷಗಳ ಹಿಂದೆ ಆಕೆ 24ರ ಹರೆಯದಲ್ಲಿದ್ದಾಗ ತೀರಿಕೊಂಡಿದ್ದರು. ಇನ್ನೊಂದು ಆಘಾತಕಾರಿ ವಿಚಾರ ಎಂದರೆ ಈಕೆಯ 10 ವರ್ಷದ ಮಗನಿಗೂ ಮದುವೆ ಮಾಡಲಾಗಿದೆ.
ಮೊಖಂಪುರ ಪ್ರದೇಶದಲ್ಲಿ ಬರೊಲ್ವಾ ಗ್ರಾಮದಲ್ಲಿ ನವಂಬರ್ 28ರಂದು ರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಫಾರ್ಮೊಂದರಲ್ಲಿ ಇಬ್ಬರು ಜೊತೆಗಿರುವುದನ್ನು ನೋಡಿದ ಸೋನಿ ಅವರ ಗಂಡನ ಮನೆಯವರು ಇಬ್ಬರನ್ನು ಅಲ್ಲೇ ಇದ್ದ ಕಂಬಕ್ಕೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಪೊಲೀಸರ ಪ್ರಕಾರ, ಸೋನಿಯ ಮಾವ ಬಿರ್ದಿ ಚಂದ್ ಹಾಗೂ ಬಾವ ಗಣೇಶ್ ಗುರ್ಜರ್ ಅವರಿಗೆ ಈ ಜೋಡಿ ಜೊತೆಯಾಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಇಬ್ಬರನ್ನೂ ಕಂಬಕ್ಕೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಸುಟ್ಟಗಾಯಗಳಾಗಿದ್ದವು, ಕೈಲಾಶ್‌ಗೆ ಶೇ.90ರಷ್ಟು ಸುಟ್ಟಗಾಯಗಳಾಗಿದ್ದರೆ, ಸೋನಿ ಅವರಿಗೆ ಶೇ.70ರಷ್ಟು ಸುಟ್ಟಗಾಯಗಳಾಗಿದ್ದವು. ಅವರನ್ನು ಸವಾಯ್ ಮಾನ್‌ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಕೈಲಾಶ್ ಅವರು ಸೋಮವಾರ ರಾತ್ರಿ ಸಾವನ್ನಪ್ಪಿದ್ದರೆ, ಸೋನಿ ಅವರು ಬುಧವಾರ ನಸುಕಿನ ಜಾವ ಮೂರು ಗಂಟೆಗೆ ಸಾವನ್ನಪ್ಪಿದ್ದಾರೆ. ಮೊಖಂಪುರ ಪೊಲೀಸ್ ಸ್ಟೇಷನ್ ಇನ್‌ಚಾರ್ಜ್ ಸುರೇಶ್ ಕುಮಾರ್ ಗುರ್ಜರ್ ಈ ಬಗ್ಗೆ ಮಾತನಾಡಿ ಘಟನೆಗೆ ಸಂಬಂಧಿಸಿದಂತೆ ಕೊಲೆಯತ್ನ ಪ್ರಕರಣ ದಾಖಲಿಸಲಾಗಿತ್ತು. ಇಬ್ಬರ ಸಾವಿನ ನಂತರ ಈಗ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ದಾಳಿ ನಡೆದ 12 ಗಂಟೆಯಲ್ಲಿ ದುದು ಎಎಸ್‌ಪಿ ಶಿವಲಾಲ್ ಬಿರ್ವ ಹಾಗೂ ಡಿಎಸ್‌ಪಿ ದೀಪಕ್ ಖಂಡೆಲ್‌ವಾಲ್ ಅವರ ಅವರ ನೇತೃತ್ವದ ತಂಡ ಆರೋಪಿಗಳಾದ ಬಿರ್ಡಿ ಚಂದ್ ಹಾಗೂ ಗಣೇಶ್ ಗುರ್ಜರ್ ಅವರನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಈ ಆರೋಪಿಗಳಲ್ಲದೇ ಇನ್ನೂ ಅನೇಕರು ಭಾಗಿಯಾಗಿದ್ದಾರೆ ಎಂದು ಸಂತ್ರಸ್ತರ ಕುಟುಂಬದವರು ಹೇಳಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಕಳೆದ ವರ್ಷ ಸೋನಿಯ ಭಾವನ ಮಗ ಮತ್ತು ಕೈಲಾಶ್‌ನ ಸಹೋದರನ ಮಗಳ ನಡುವೆ ಪ್ರೇಮ ವಿವಾಹದ ನಂತರ ಕುಟುಂಬಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಇದು ಎರಡು ಕುಟುಂಬಗಳ ಮಧ್ಯೆ ಸಂಬಂಧ ಬಿರುಕುಗೊಂಡು ಮಾತುಕತೆ ಸಂಪೂರ್ಣವಾಗಿ ನಿಲ್ಲಲು ಕಾರಣವಾಗಿತ್ತು. ಕೈಲಾಶ್ ಹತ್ಯೆ ಖಂಡಿಸಿ ಗ್ರಾಮಸ್ಥರು ಮೊಖಾಂಪುರ-ಬಿಚೊನ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ನಂತರ ಅಧಿಕಾರಿಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.


