ಯಾವುದೇ ರೀತಿಯ ಸಂಬಂಧದಲ್ಲೂ ಪರಸ್ಪರ ಒಂದು ಮಟ್ಟಿನ ಅವಲಂಬನೆ ಇರುತ್ತದೆ. ಅದರಲ್ಲೂ ಜೀವನಸಂಗಾತಿ ಎಂದ ಮೇಲೆ ಎಲ್ಲಿಯೋ ಹೋದರೂ ಒಟ್ಟಿಗೇ, ತಿಂದರೂ ಒಟ್ಟಿಗೇ, ವ್ಯವಹರಿಸುವುದೂ ಒಟ್ಟಿಗೇ ಎಂದು ಬಹಳ ಅವಲಂಬನೆ ಬೆಳೆದುಬಿಡುತ್ತದೆ. ಅವರು ನಮ್ಮ ಬೆಟರ್ ಹಾಫ್ ಆದ್ದರಿಂದ ಎಲ್ಲದರಲ್ಲೂ ಫಿಫ್ಟಿ ಫಿಫ್ಟಿ ಇರಬೇಕು ಎಂದುಕೊಂಡೇ ಕೆಲವೊಮ್ಮೆ ನಾವು ಅವರ ಮೇಲೆ ಜೀರೋ- ಹಂಡ್ರೆಡ್‌ನಷ್ಟು ಅವಲಂಬಿತರಾಗಿ ಬಿಡುತ್ತೇವೆ. ಶಾಪಿಂಗ್‌ಗೆ ಒಬ್ಬರೇ ಹೋಗಲು ಸಾಧ್ಯವಿಲ್ಲ, ಮದುವೆ ಮತ್ತಿತರೆ ಸಮಾರಂಭಗಳಿಗೆ ಒಬ್ಬರೇ ಹೋಗಿ ನಿಭಾಯಿಸುವುದು ದುಸ್ಸಾಧ್ಯ, ಹಣಕಾಸಿನ ವ್ಯವಹಾರದಲ್ಲಿ ಒಬ್ಬರೇ ನಿರ್ಧಾರ ತೆಗೆದುಕೊಳ್ಳಲು ಭಯ ಎಂದು ಒಂದೊಂದಾಗಿ ಎಲ್ಲಕ್ಕೂ ಅವರು ಬೇಕೇ ಬೇಕು ಎನಿಸತೊಡಗುತ್ತದೆ. ಆದರೆ, ಸಂಬಂಧ ತಜ್ಞರ ಪ್ರಕಾರ, ಪ್ರತಿಯೊಬ್ಬರಿಗೂ ವೈಯಕ್ತಿಕ ಸ್ಪೇಸ್ ಬೇಕೇ ಬೇಕು. ಯಾರದೇ ಮೇಲೆ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ನಿಮ್ಮ ಉಳಿವಿಗಾಗಿ ಮತ್ತೊಬ್ಬರ ಮೇಲೆ ಪೂರ್ತಿ ಭಾರ ಹಾಕಿದ ಪರಾವಲಂಬಿ  ಜೀವಿಗಳು ನೀವಾಗಿದ್ದೀರಾ ಎಂಬುದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.

ಪ್ರೀತಿಸುತ್ತಾನೋ ಇಲ್ಲವೋ? ಗೊಂದಲ ದೂರ ಮಾಡ್ಕೊಳ್ಳಿ

ನೀವು ಏನನ್ನೂ ಒಬ್ಬರೇ ಮಾಡಲಾರಿರಿ
ಕಡೆಯ ಬಾರಿ ಬ್ಯಾಂಕಿಗೆ ಒಬ್ಬರೇ ಹೋಗಿದ್ದು ನಿಮಗೆ ನೆನಪಿದೆಯೇ? ಅಥವಾ ನಿಮ್ಮ ಸಂಗಾತಿ ಬರದೆ ನೀವೊಬ್ಬರೇ ಗೆಳೆಯರ ಜೊತೆ ಸೇರಿ ಪಾರ್ಟಿ ಮಾಡಿದ್ದು ಇದೆಯೇ? ಇಲ್ಲವೆಂದಾದಲ್ಲಿ, ಈ ವರ್ತನೆಗೆ ಏನೆನ್ನುತ್ತೇವೆ ಎಂಬುದು ನಿಮಗೆ ಗೊತ್ತೇ ಇದೆ. ಸದಾ ಎಲ್ಲವನ್ನೂ ಸಂಗಾತಿಯೊಡನೆಯೇ ಮಾಡುವ ವ್ಯಕ್ತಿಗೆ ತಾನೊಬ್ಬನೇ ಏನಾದರೂ ಮಾಡಬೇಕೆಂದಾದಾಗ ಹೃದಯ ಬಡಿತ ಜೋರಾಗುತ್ತದೆ. ಆತಂಕ ಆವರಿಸಿಕೊಳ್ಳುತ್ತದೆ. ಸಾಮಾನ್ಯ ವಿಷಯಗಳೆಂದು ಇತರರಿಗೆ ಅನಿಸುವ ವಿಷಯಗಳೂ ಅವರಿಗೆ ದೊಡ್ಡ ಸವಾಲಿನಂತೆ ಭಾಸವಾಗುತ್ತದೆ. ಇದು ಖಂಡಿತಾ ಉತ್ತಮ ಅಭ್ಯಾಸವಲ್ಲ. ಎಷ್ಟು ಬೇಗ ಈ ಅಭ್ಯಾಸ ಬದಲಿಸಿಕೊಳ್ಳುತ್ತೀರೋ ಅಷ್ಟು ಒಳ್ಳೆಯದು. 

ನಿಮ್ಮ ಸಂತೋಷ ನಿಮ್ಮ ಸಂಗಾತಿಯನ್ನವಲಂಬಿಸಿದೆ
ನಿಮಗೇ ಗೊತ್ತಿಲ್ಲದೆ ನೀವೆಷ್ಟು ಅವಲಂಬಿತರಾಗಿ  ಬಿಟ್ಟಿದ್ದೀರಿ ಎಂದರೆ ನಿಮ್ಮ ಸಂತೋಷವನ್ನು ಕೂಡಾ ನಿಮ್ಮ ಸಂಗಾತಿಯೇ ನಿಯಂತ್ರಿಸುವ ಮಟ್ಟಿಗೆ ! ಇದು ನಿಮ್ಮ ಸಂಬಂಧಕ್ಕೆ ಒಳ್ಳೆಯದಲ್ಲ. ಜೊತೆಗೆ, ಇದರಿಂದ ನೀವು ಸದಾ ಅತೃಪ್ತಿ ಹಾಗೂ ನೆಮ್ಮದಿ ಇಲ್ಲದಂತಿರುವಿರಿ. ನಿಮಗೆ ಸಂತೋಷ ನೀಡುವ ಸಂಗತಿಗಳ ಮೇಲೆ ನಿಮ್ಮದೇ ನಿಯಂತ್ರಣ ಇರುವುದು ಮುಖ್ಯ. ಸದಾ ನಿಮ್ಮನ್ನು ಸಂಗಾತಿಯೇ ಸಂತೋಷ ಪಡಿಸಲಿ ಎಂದು ಕಾಯುತ್ತಿದ್ದರೆ ಅವರ ಹೆಗಲಿಗೆ ಇದು ಹೊರಲಾರದ ಭಾರವೆನಿಸುತ್ತದೆ. ಜೊತೆಗೆ, ಸಂಬಂಧದಲ್ಲಿ ಸ್ವಲ್ಪವೇ ಬಿರುಕು ಬಿಟ್ಟರೂ ನಿಮ್ಮನ್ನು ನುಜ್ಜುಗುಜ್ಜಾಗಿಸುವಷ್ಟು ನಿಯಂತ್ರಣ ಸಂಗಾತಿಯ ಕೈಗೆ ಕೊಟ್ಟಿರುತ್ತೀರಲ್ಲ... 

ನನ್ನ ಇನ್ನೊಂದು ಕೆನ್ನೆ ಏನು ಪಾಪ ಮಾಡಿತ್ತು ಹುಡುಗಿ..?...

ಪ್ರತಿ ನಿರ್ಧಾರವನ್ನೂ ಪಾರ್ಟ್ನರ್ ತೆಗೆದುಕೊಳ್ಳಲು ಬಿಡುತ್ತೀರಿ
ಬಾಲ್ಯದ ನೆನಪಿದೆಯೇ? ನೀವೇನು ಬಟ್ಟೆ ಧರಿಸಬೇಕು, ಯಾವ ಸ್ಕೂಲಿಗೆ ಹೋಗಬೇಕು, ಏನು ತಿನ್ನಬೇಕು ಎಲ್ಲ ನಿರ್ಧಾರಗಳನ್ನೂ ನಿಮ್ಮ ಪೋಷಕರೇ ತೆಗೆದುಕೊಳ್ಳುತ್ತಿದ್ದರು. ಈಗ ಕೂಡಾ ಹಾಗೆಯೇ ಎಲ್ಲ ನಿರ್ಧಾರಗಳನ್ನು ಸಂಗಾತಿ ತೆಗೆದುಕೊಳ್ಳಲಿ ಎಂದು ಭಾವಿಸಿದರೆ ನೀವು ದೇಹ ಬೆಳೆಸಿಕೊಂಡ ಮಗುವಾಗಿಯೇ ಇದ್ದೀರಾ ಎಂದರ್ಥ. ನಿಮ್ಮ ಪಾರ್ಟ್ನರನ್ನು ಪೋಷಕರಂತೆ ನಡೆಸಿಕೊಳ್ಳಬೇಡಿ. ಅದರಿಂದ ಅವರು ನಿಮ್ಮಿಂದ ದೂರವಾಗಲು ಬಯಸುತ್ತಾರೆ. 

ನಿಮ್ಮ ಸಂಗಾತಿಯ ಗೆಳೆಯರೇ ನಿಮ್ಮ ಗೆಳೆಯರು
ಇಬ್ಬರೂ ರಿಲೇಶನ್‌ಶಿಪ್‌ನಲ್ಲಿದ್ದೀರ ಎಂದ ಮಾತ್ರಕಕ್ಕೆ ನಿಮ್ಮ ಪ್ರೇಮಿಯ ಗೆಳೆಯರೇ ನಿಮ್ಮ ಗೆಳೆಯರ ಬಳಗವಾಗಿರಬೇಕೆಂದೇನೂ ಇಲ್ಲ. ನಿಮ್ಮದೇ ಆದ ಗೆಳೆಯರಿಲ್ಲದೆ, ಸ್ನೇಹಕ್ಕೆ ಕೂಡಾ ಪ್ರೇಮಿಯ ಗೆಳೆಯರನ್ನು ಎದುರು ನೋಡುತ್ತೀರಿ ಎಂದರೆ ಖಂಡಿತಾ ಅತಿಯಾದ ಅವಲಂಬನೆ ನಿಮ್ಮ ಅಭ್ಯಾಸವಾಗಿದೆ. ಇದರಿಂದ ನಿಮ್ಮ ಪಾರ್ಟ್ನರ್‌ಗೆ ಉಸಿರುಗಟ್ಟಿದಂತಾಗುತ್ತದೆ. ಆತ ನಿಮ್ಮಿಂದ ಒಂದಿಷ್ಟು ದೂರ ಹೋಗಲು ಅವಕಾಶ ಸಿಕ್ಕರೆ ಸಾಕಪ್ಪಾ ಎಂದು ಕನವರಿಸುವಂತೆ ಮಾಡಬೇಡಿ. ಸಂಬಂಧ ಆರೋಗ್ಯಕರವಾಗಿರಲು, ನಿಮ್ಮ ಬದುಕಿನಲ್ಲಿ ಪಾರ್ಟ್ನರ್ ಅಲ್ಲದೆ, ಬೇರೊಂದಿಷ್ಟು ಜನರಿರಬೇಕು. 

ಎಲ್ಲಕ್ಕೂ ಸಂಗಾತಿ ಸೈ ಎನ್ನಬೇಕು
 ಪ್ರತಿದಿನ ಅಡುಗೆ ಏನು ಮಾಡುವುದು ಎಂಬುದರಿಂದ ಹಿಡಿದು ಏನು ಬಟ್ಟೆ ಧರಿಸಬೇಕೆಂಬಲ್ಲಿವರೆಗೆ ಎಲ್ಲಕ್ಕೂ ಸಂಗಾತಿಯ ಆಯ್ಕೆ ನಿಮಗೆ ಮುಖ್ಯ. ಅವರ ಒಪ್ಪಿಗೆ ಅಗತ್ಯ. ಮಾಡಿದ್ದೆಲ್ಲಕ್ಕೂ ಸಂಗಾತಿ ಹೊಗಳಲೆಂದು ಕಾದು ಕುಳಿತುಕೊಳ್ಳುತ್ತೀರಿ. ಇಂಥ ವರ್ತನೆ ನಿಮಗೂ, ನಿಮ್ಮ ಸಂಗಾತಿಗೂ ಒಳ್ಳೆಯದಲ್ಲ.