Asianet Suvarna News Asianet Suvarna News

ಗಂಡಸರಿಗೆ ಸಮನಾಗಿ ಎಂಬಂತೆ ನಾರಿಯೂರೂ ಕುಡಿತಕ್ಕೆ ಬಲಿಯಾಗುತ್ತಿರುವುದೇಕೆ?

ದುಷ್ಚಟಕ್ಕೆ ದಾಸರಾದ್ರೆ ದುರಂತ ಅಂತ್ಯ ಗ್ಯಾರಂಟಿ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಈ ಚಟಕ್ಕೆ ಅಂಟಿಕೊಳ್ತಿದ್ದಾರೆ. ಒತ್ತಡ ಸೇರಿದಂತೆ ಒಂದಲ್ಲ ಒಂದು ಕಾರಣಕ್ಕೆ ಪ್ರತಿ ದಿನ ಮದ್ಯಪಾನ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. 
 

Women Are Drinking More Alcohol After The Pandemic In Delhi
Author
First Published Nov 9, 2022, 2:57 PM IST

ಆರಂಭದಲ್ಲಿ ಎಲ್ಲವೂ ತಮಾಷೆಗಾಗಿಯೇ ಇರುತ್ತೆ. ಬರ್ತಾ ಬರ್ತಾ ಅದೇ ಚಟವಾಗುತ್ತೆ. ಮದ್ಯಪಾನ ಕೂಡ ಇದ್ರಲ್ಲಿ ಒಂದು. ಬಹುತೇಕ ಜನರು ವಿಶೇಷ ಸಂದರ್ಭದಲ್ಲಿ ಆಲ್ಕೋಹಾಲ್ ಸೇವನೆ ಶುರು ಮಾಡ್ತಾರೆ. ಆರಂಭದಲ್ಲಿ ಅದು ವರ್ಷಕ್ಕೊಮ್ಮೆಯೇ ಇರುತ್ತೆ. ನಂತ್ರ ಅದು ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ನಂತ್ರ ವಾರದ ಎಲ್ಲ ದಿನಕ್ಕೆ ಬಂದು ನಿಲ್ಲುತ್ತದೆ. ಆಲ್ಕೋಹಾಲ್ ಇಲ್ಲದೆ ಇರೋದು ಕಷ್ಟ ಎನ್ನುವ ಪರಿಸ್ಥಿತಿಗೆ ಅನೇಕರು ಬಂದು ನಿಲ್ತಾರೆ. ಇದನ್ನು ನಾವು ಲಾಕ್ ಡೌನ್ ಸಂದರ್ಭದಲ್ಲಿ ನೋಡಿದ್ದೇವೆ ಕೂಡ. 

ಮದ್ಯಪಾನ (Alcohol) ಅಂದ್ರೆ ಬರೀ ಪುರುಷರು ಸೇವನೆ ಮಾಡುವಂತಹದ್ದು ಎಂಬ ಒಂದು ಅಲಿಖಿತ ನಿಯಮ ಹಿಂದೆ ಇತ್ತು. ಆದ್ರೀಗ ಮದ್ಯಪಾನ ಎಲ್ಲರಿಗೂ ಎಂಬ ನಿಯಮ ಜಾರಿಗೆ ಬಂದಿದೆ. ಪುರುಷರಿಗೆ ಸಮಾನವಾಗಿ ಮಹಿಳೆ (Woman) ಯರು ಮದ್ಯಪಾನ ಮಾಡ್ತಾರೆ.  ಈ ಹಿಂದೆ ಬರೀ ಅಭ್ಯಾಸವಾಗಿದ್ದ ಮದ್ಯಪಾನ ಅನೇಕ ಮಹಿಳೆಯರಿಗೆ ಈಗ ಚಟ (Addiction) ವಾಗಿದೆಯಂತೆ. ಆಲ್ಕೋಹಾಲ್ ಸೇವನೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಮಹಿಳೆಯರೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನಡೆದ ಸಮೀಕ್ಷೆ (Survey) ಯೊಂದರಲ್ಲಿ ಆಘಾತಕಾರಿ ಸಂಗತಿ ಹೊರ ಬಿದ್ದಿದೆ.

ಸಮೀಕ್ಷೆಯಲ್ಲಿ ಹೊರ ಬಂದ ಸತ್ಯವೇನು? : ಈ ಸಮೀಕ್ಷೆಯನ್ನು ಆಗಸ್ಟ್ ಮತ್ತು ಅಕ್ಟೋಬರ್ 2022 ರ ನಡುವೆ ಮಾಡಲಾಗಿದೆ. ಸರ್ಕಾರೇತರ ಸಂಸ್ಥೆ ಕಮ್ಯುನಿಟಿ ಅಗೇನ್ಸ್ಟ್ ಡ್ರಂಕನ್ ಡ್ರೈವಿಂಗ್ (ಸಿಎಡಿಡಿ) ಸಮೀಕ್ಷೆ ನಡೆಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಸಮೀಕ್ಷೆ ನಡೆದಿದೆ. ದೆಹಲಿಯ ಶೇಕಡಾ 37 ರಷ್ಟು ಮಹಿಳೆಯರು ಕಳೆದ ಮೂರು ವರ್ಷಗಳಲ್ಲಿ ತಮ್ಮ ಆಲ್ಕೋಹಾಲ್ ಸೇವನೆಯಲ್ಲಿ ಹೆಚ್ಚಳವಾಗಿದೆ ಎಂದಿದ್ದಾರೆ.  ಆಲ್ಕೋಹಾಲ್ ಸೇವನೆ ಹೆಚ್ಚಾಗಲು ಅವರು ಸಾಂಕ್ರಾಮಿಕ ರೋಗ ಕೊರೊನಾ ಮುಖ್ಯ ಕಾರಣ ಎಂದಿದ್ದಾರೆ. ಶೇಕಡಾ 45 ಕ್ಕಿಂತ ಹೆಚ್ಚು ಮಹಿಳೆಯರು ತಮ್ಮ ಕುಡಿತ ಹೆಚ್ಚಾಗಲು ಒತ್ತಡ ಕಾರಣ ಎಂದಿದ್ದಾರೆ. ಸಾಂಕ್ರಾಮಿಕ ರೋಗ, ಲಾಕ್‌ಡೌನ್, ಹೆಚ್ಚಿದ ಆಲ್ಕೋಹಾಲ್ ಲಭ್ಯತೆ ಮಹಿಳೆಯರಲ್ಲಿ ಮದ್ಯ ಸೇವನೆಯ ಹೆಚ್ಚಳಕ್ಕೆ ಕಾರಣವೆಂದು ಉಲ್ಲೇಖಿಸಲಾಗಿದೆ. 

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 5,000 ಮಹಿಳೆಯರಲ್ಲಿ ಶೇಕಡಾ 37.6 ರಷ್ಟು ಮಹಿಳೆಯರು, ಆಲ್ಕೋಹಾಲ್ ಸೇವನೆಯಲ್ಲಿ ಹೆಚ್ಚವಾಗಿರೋದನ್ನು ಒಪ್ಪಿಕೊಂಡಿದ್ದಾರೆ . ಇನ್ನು ಶೇಕಡಾ 42.3 ರಷ್ಟು ಮಹಿಳೆಯರು, ಆಲ್ಕೋಹಾಲ್ ಸೇವನೆ ಏರಿಳಿತ ಅನಿಯಮಿತವಾಗಿದ್ದು, ಅವಕಾಶ ಸಿಕ್ಕಾಗ ಸೇವನೆ ಮಾಡ್ತೇವೆ ಎಂದಿದ್ದಾರೆ. 

Business Idea : ಹತ್ತು ಸಾವಿರಕ್ಕಿಂತ ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 34.4 ರಷ್ಟು ಮಹಿಳೆಯರು ತಮ್ಮ ಆಲ್ಕೋಹಾಲ್ ಸೇವನೆ ಹೆಚ್ಚಾಗಲು, ಹೆಚ್ಚಿದ ಆಲ್ಕೋಹಾಲ್ ಲಭ್ಯತೆ ಕಾರಣ ಎಂದಿದ್ದಾರೆ. ಶೇಕಡಾ 30.1 ರಷ್ಟು ಮಹಿಳೆಯರು ತಮ್ಮ ಚಟದಲ್ಲಿ ಏರಿಕೆಯಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 
ಸಮೀಕ್ಷೆಯಲ್ಲಿ ಭಾಗಿಯಾಗಿದ್ದ  5 ಸಾವಿರ ಮಹಿಳೆಯರಲ್ಲಿ ಶೇಕಡಾ 89ರಷ್ಟು ಅಂದರೆ 4480 ಮಹಿಳೆಯರು ಸ್ವಂತ ಸಂಪಾದನೆ ಹೊಂದಿದ್ದಾರೆ. ಶೇಕಡಾ 38ರಷ್ಟು ಮಹಿಳೆಯರು ವಾರಕ್ಕೆ ಎರಡು ಬಾರಿ ಆಲ್ಕೋಹಾಲ್ ಸೇವನೆ ಮಾಡ್ತಾರೆ. ಶೇಕಡಾ 27 ರಷ್ಟು ಮಹಿಳೆಯರು ಎರಡು ವಾರಗಳಲ್ಲಿ ಒಮ್ಮೆ ಆಲ್ಕೋಹಾಲ್ ಸೇವಿಸುತ್ತಾರೆ. ಶೇಕಡಾ 19ರಷ್ಟು ಮಹಿಳೆಯರು ವಾರದಲ್ಲಿ ನಾಲ್ಕು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಮದ್ಯಪಾನ ಮಾಡುವ ವ್ಯಸನಿಯಾಗಿದ್ದಾರೆ. ಶೇಕಡಾ 34ರಷ್ಟು ಮಹಿಳೆಯರು ಮನೆಯಲ್ಲಿ ಮದ್ಯ ಸೇವಿಸುತ್ತಾರೆ. ಶೇಕಡಾ  33ರಷ್ಟು ಮಹಿಳೆಯರು ಮನೆ ಮತ್ತು ಪಾರ್ಟಿ ಎರಡರಲ್ಲೂ ಮದ್ಯ ಸೇವನೆ ಮಾಡಿದ್ರೆ ಶೇಕಡಾ 32ರಷ್ಟು ಮಹಿಳೆಯರು ಪಬ್ ಗೆ ಹೋಗೋದಾಗಿ ಹೇಳಿದ್ದಾರೆ.

ಗರ್ಭಾವಸ್ಥೆಯಲ್ಲಿ ಪಬ್ಲಿಕ್‌ ಟಾಯ್ಲೆಟ್ ಬಳಕೆ ತುಂಬಾನೆ ಡೇಂಜರ್ !

ಮಹಿಳೆಯರಿಗೆ ಅಪಾಯಕಾರಿ ಆಲ್ಕೋಹಾಲ್ : ಆಲ್ಕೋಹಾಲ್ ಸೇವನೆ ಪ್ರತಿಯೊಬ್ಬರಿಗೂ ಅಪಾಯಕಾರಿ. ಅದ್ರಲ್ಲೂ ಮಹಿಳೆಯರ ಆರೋಗ್ಯದ ಮೇಲೆ ಬೇಗ ಪರಿಣಾಮ ಬೀರುತ್ತದೆ. ಮಹಿಳೆಯರ ಯಕೃತ್ತು ಹಾಳಾಗುವುದಲ್ಲದೆ, ಅವರ ಹೃದಯ ಮತ್ತು ನರಗಳು ಕೂಡ ಬೇಗನೆ ನಿಷ್ಕ್ರಿಯವಾಗುತ್ತವೆ ಎಂದು ಸಂಶೋಧನೆಗಳು ಹೇಳಿವೆ. 
 

Follow Us:
Download App:
  • android
  • ios