ಶಿವಮೊಗ್ಗದ ಖಾಸಗಿ ಲಾಡ್ಜ್ ಒಂದರಲ್ಲಿ ತಂಗಿದ್ದ, ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಜೋಡಿಯ ನಡುವೆ ಮಧ್ಯರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಮಹಿಳೆ ಬೆಂಕಿ ಹಚ್ಚಿಕೊಂಡಿದ್ದು, ಆಕೆಯೊಂದಿಗೆ ಪ್ರಿಯಕರನಿಗೂ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ(ನ.19): ಅನೈತಿಕ ಸಂಬಂಧದ ಕಿರಿಕಿರಿ ಭಯಾನಕ ರೂಪ ತಿರುವು ಪಡೆದು ಬೆಂಕಿಯಿಂದ ಮೈಕೈ ಸುಟ್ಟುಕೊಂಡು ಆಸ್ಪತ್ರೆಗೆ ಸೇರಿದ ಘಟನೆ ನಗರದ ಖಾಸಗಿ ಲಾಡ್ಜ್ ಒಂದರಲ್ಲಿ ನಡೆದಿದೆ.
ಪ್ರಿಯತಮೆ ಗೀತಾ (45), ಪ್ರಿಯಕರ ಗಿರೀಶ್ ಬೆಂಕಿಯಿಂದ ಮೈಕೈ ಸುಟ್ಟು ಆಸ್ಪತ್ರೆಗೆ ದಾಖಲಾದವರು.
ಮೂಲತಃ ದಾವಣಗೆರೆಯವರಾದ ವಿವಾಹಿತ ಮಹಿಳೆ ಗೀತಾ (45) ಹಾಗೂ ವಿವಾಹಿತ ಪುರುಷ ಗಿರೀಶ್ ಇಬ್ಬರು ಅನೈತಿಕ ಸಂಬಂಧದಲ್ಲಿದ್ದರು. ಮಹಿಳೆ ಗೀತಾ ಮದುವೆಯಾಗಿ ಇಬ್ಬರು ಮಕ್ಕಳಿದ್ದರೆ, ಗಿರೀಶ್‌ಗೂ ಪತ್ನಿ ಇಬ್ಬರು ಮಕ್ಕಳಿದ್ದಾರೆ. ಆದರೂ ಇಬ್ಬರು ಅನೈತಿಕ ಸಂಬಂಧ ಹಿನ್ನೆಲೆ ನಿನ್ನೆ (ನವೆಂಬರ್ 18) ಮಧ್ಯಾಹ್ನ ಸುಮಾರು 12 ಗಂಟೆಗೆ ಶಿವಮೊಗ್ಗ ನಗರದ ಖಾಸಗಿ ಲಾಡ್ಜ್‌ಒಂದರಲ್ಲಿ ಕೊಠಡಿ ಪಡೆದು ತಂಗಿದ್ದರು.
ಮಧ್ಯರಾತ್ರಿ ಮಾತಿನ ಚಕಮಕಿ!
ಮಧ್ಯರಾತ್ರಿ ಇಬ್ಬರ ನಡುವೆ ಏನೋ ವಿಷಯಕ್ಕೆ ಮಾತಿನ ಚಕಮಕಿ ಉಂಟಾಗಿದೆ. ವಾಗ್ವಾದ ತಾರಕಕ್ಕೇರಿ ಆಕ್ರೋಶಕ್ಕೊಳಗಾದ ಮಹಿಳೆ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ಮಹಿಳೆಯ ಮೈಗೆ ಹೊತ್ತಿಕೊಂಡಿದೆ. ಇದೇ ವೇಳೆ ಬೆಂಕಿ ನಂದಿಸಲು ಮುಂದಾದ ಪ್ರಿಯಕರ ಗಿರೀಶ್ ಕೂಡ ಬೆಂಕಿ ತಗುಲಿ ಸಣ್ಣಪುಟ್ಟ ಸುಟ್ಟ ಗಾಯಗಳನ್ನುಂಟು ಮಾಡಿಕೊಂಡಿದ್ದಾನೆ.
ಲಾಡ್ಜ್ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿ ಇಬ್ಬರನ್ನೂ ತಕ್ಷಣ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಹೆಚ್ಚು ಸುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಿರೀಶ್‌ಗೆ ಸಣ್ಣಪುಟ್ಟ ಗಾಯಗಳಿದ್ದು, ಚಿಕಿತ್ಸೆ ನೀಡಲಾಗಿದೆ.
ಈ ಘಟನೆ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅನೈತಿಕ ಸಂಬಂಧದ ಕಿರಿಕಿರಿ ಇಬ್ಬರ ಜೀವವನ್ನೇ ಅಪಾಯಕ್ಕೆ ತಳ್ಳಿದ್ದಲ್ಲದೆ ಲಾಡ್ಜ್‌ಗೂ ಹಾನಿಯಾಗಿದೆ.


