ಗಂಡು ಮಕ್ಕಳು ನಮ್ಮ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ, ಕ್ಯಾರೇ ಮಾಡಲ್ಲ ಅಂತ ಮನೆಯ ಹೆಣ್ಣು ಮಕ್ಕಳು ಗೋಳಾಡೋದು ಇದೆ. ಆದರೆ ಇದು ಕೇವಲ ಹೆಂಗೆಳೆಯರ ಸಮಸ್ಯೆ ಅಲ್ಲ, ಆ ಮನೆಯ ಪ್ರಾಣಿಗಳ ಸಮಸ್ಯೆಯೂ ಅದೇ, ಸಂಶೋಧನೆಯಲ್ಲಿ ಸಾಬೀತಾದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಗಂಡು ಮಕ್ಕಳು ನಮ್ಮ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ, ಕ್ಯಾರೇ ಮಾಡಲ್ಲ ಅಂತ ಮನೆಯ ಹೆಣ್ಣು ಮಕ್ಕಳು ಗೋಳಾಡೋದು ಇದೆ. ಎಷ್ಟು ಮಾತಾಡಿದ್ರು ಬರೀ ಮೊಬೈಲ್ ನೋಡ್ತಿರ್ತಾರೆ ಹಾ ನೂ ಅನ್ನಲ್ಲ ಹು ನೂ ಅನ್ನಲ್ಲ, ಇಡೀ ಮನೆಯ ಜವಾಬ್ದಾರಿ ನಾನೇ ವಹಿಸ್ಕೋಬೇಕು ಹೇಳಿದ ಮಾತು ಕಿವಿಗೇ ಹಾಕೊಳ್ಳಲ್ಲ ಅಂತ ಮನೆಯ ಹೆಂಗೆಳೆಯರು ಗೋಳಾಡೋನ್ನ ನೀವು ನೋಡಿರಬಹುದು. ಇದು ಕೇವಲ ಒಂದು ಮನೆಯ ಸಮಸ್ಯೆ ಅಲ್ಲ ಹಾಗೂ ಕೇವಲ ಹೆಂಗೆಳೆಯರ ಸಮಸ್ಯೆ ಅಲ್ಲ, ಆ ಮನೆಯ ಪ್ರಾಣಿಗಳ ಅದರಲ್ಲು ಬೆಕ್ಕುಗಳ ಸಮಸ್ಯೆಯೂ ಹೌದು, ಈ ಗಂಡು ಮಕ್ಕಳು ಕೇರ್ ಮಾಡಲ್ಲ ಅಂತ ಮನೆಯ ಬೆಕ್ಕುಗಳಿಗೂ ಗೊತ್ತು. ಇದೇ ಕಾರಣಕ್ಕೆ ಹೆಣ್ಣು ಮಕ್ಕಳಂತೆ ಈ ಬೆಕ್ಕುಗಳು ಕೂಡ ಮನೆಯ ಪುರುಷರೆದುರು ಜಾಸ್ತಿ ಕೂಗಾಡ್ತಾವೆ ಅಂತೆ. ಅಲ್ಲದೇ ಮಹಿಳೆಯರು ಸಾಕುವ ಬೆಕ್ಕುಗಳಿಗಿಂತ ಪುರುಷರು ಸಾಕುವ ಬೆಕ್ಕುಗಳು ಕೂಗೋದು ಜಾಸ್ತಿ ಅಂತೆ. ಇದನ್ನು ನಾವು ಹೇಳ್ತಿಲ್ಲ. ಇತ್ತೀಚೆಗೆ ನಡೆದ ಸಂಶೋಧನೆಯಲ್ಲೇ ಇದು ಸಾಬೀತಾಗಿದೆ.

ಹೌದು ಎಥಾಲಜಿ ಜರ್ನಲ್‌ನಲ್ಲಿ ಈ ಸಂಶೋಧನಾ ವರದಿಯೊಂದು ಪ್ರಕಟವಾಗಿದೆ. ಈ ಸಂಶೋಧನೆಗಾಗಿ ಟರ್ಕಿಯ ಅಂಕಾರಾ ವಿಶ್ವವಿದ್ಯಾಲಯದ ಯಾಸೆಮಿನ್ ಸಲ್ಗಿರ್ಲಿ ಡೆಮಿರ್ಬಾಸ್ ನೇತೃತ್ವದಲ್ಲಿ ಸಂಶೋಧಕರು 31 ಬೆಕ್ಕುಗಳು ಮತ್ತು ಅವುಗಳ ಆರೈಕೆದಾರರನ್ನು ಅವರ ಸ್ವಂತ ಮನೆಗಳಲ್ಲಿ ಮೇಲ್ವಿಚಾರಣೆ ಮಾಡಿದ್ದಾರೆ. ಅದರ ಪ್ರಕಾರ ಬೆಕ್ಕುಗಳು ಪುರುಷರನ್ನು ಕಂಡಾಗ ಜಾಸ್ತಿ ಕೂಗೋದು ಅವರ ಮೇಲಿನ ಪ್ರೀತಿಯಿಂದ ಅಲ್ಲ, ಬದಲಾಗಿ ಪುರುಷರು ಅವುಗಳತ್ತ ಸ್ವಲ್ಪವಾದರೂ ಗಮನ ಕೊಡಲಿ ಎಂಬ ಉದ್ದೇಶದಿಂದ ಮಾತ್ರ. ಪುರುಷರು ಅವುಗಳತ್ತ ಜಾಸ್ತಿ ಗಮನ ಕೊಡುವುದಿಲ್ಲ, ಇದೇ ಕಾರಣಕ್ಕೆ ಪುರುಷರ ಗಮನ ಸೆಳೆಯುವುದಕ್ಕಾಗಿಯೇ ಈ ಬೆಕ್ಕುಗಳು ಪುರುಷರ ಕಂಡಾಗ ಜಾಸ್ತಿ ಕೂಗುತ್ತವೆಯಂತೆ. ಆದರೆ ಹೆಣ್ಣು ಮಕ್ಕಳು ಸಾಕುವ ಬೆಕ್ಕುಗಳು ಹೀಗೆ ಜಾಸ್ತಿ ಕೂಗುವುದಿಲ್ಲವಂತೆ.

ಈ ಸಮೀಕ್ಷೆಗಾಗಿ ಪ್ರತಿಯೊಂದು ಬೆಕ್ಕಿನ ಎದೆಯ ಮೇಲೆ ಸಣ್ಣ ಕ್ಯಾಮೆರಾವನ್ನು ಅಳವಡಿಸಲಾಗಿತ್ತು. ಅದರ ಮೂಲಕ ಸಂಶೋಧಕರು, ಈ ಬೆಕ್ಕುಗಳು ತಮ್ಮ ಯಜಮಾನರು ಮನೆಗೆ ಬಂದಾಗ ಮೊದಲ ಬಾರಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ವಿಶ್ಲೇಷಿಸಿದ್ದಾರೆ. ಬೆಕ್ಕಿನ ವಯಸ್ಸು, ತಳಿ, ಲಿಂಗ ಅಥವಾ ಮನೆಯವರ ಗಾತ್ರವನ್ನು ಲೆಕ್ಕಿಸದೆ, ಬೆಕ್ಕುಗಳು, ಹೆಣ್ಣು ಆರೈಕೆದಾರರಿಗೆ ಹೋಲಿಸಿದರೆ ಗಂಡು ಆರೈಕೆದಾರರನ್ನು ಮಿಯಾಂವ್ ಎಂದು ಹೆಚ್ಚು ಕೂಗುವ ಮೂಲಕ ತಮ್ಮ ಬಾಲವನ್ನು ಅವರ ಕಾಲುಗಳಿಗೆ ತಾಗಿಸುವ ಮೂಲಕ ಹೆಚ್ಚು ಅವರನ್ನು ಹೆಚ್ಚು ಸ್ವಾಗತಿಸುತ್ತಿದ್ದವು.

ಒಬ್ಬ ಪುರುಷ ಮನೆಗೆ ಬಂದ ನಂತರ ಮೊದಲ 100 ಸಕೆಂಡ್‌ನಲ್ಲಿ ಬೆಕ್ಕುಗಳು 4.3 ಬಾರಿ ಮಿಯಾಂವ್ ಎಂದು ಕೂಗುತ್ತಿದ್ದವು. ಅದೇ ರೀತಿ ಮಹಿಳೆಯೊಬ್ಬರು ಮನೆಗೆ ಬಂದಾಗ 100 ಸೆಕೆಂಡ್‌ನಲ್ಲಿ 1.8 ಬಾರಿ ಮಿಯಾಂವ್ ಎಂದು ಕೂಗಾಡುತ್ತಿದ್ದವು. ಅಧ್ಯಯನದ ಲೇಖಕರ ಪ್ರಕಾರ, ಮಹಿಳಾ ಆರೈಕೆದಾರರಿಗೆ ಹೋಲಿಸಿದರೆ ಪುರುಷ ಆರೈಕೆದಾರರು ಮೌಖಿಕ ನಡವಳಿಕೆಗಳಲ್ಲಿ ಬಹಳ ಕಡಿಮೆ ತೊಡಗಿಸಿಕೊಳ್ಳುತ್ತಾರೆ. ಈ ವ್ಯತ್ಯಾಸದಿಂದಾಗಿಯೇ ಬೆಕ್ಕುಗಳು ಪುರುಷ ಆರೈಕೆದಾರರ ಗಮನ ಸೆಳೆಯುವುದಕ್ಕೆ ಅವರ ಎದುರು ಹೆಚ್ಚು ಬಾರಿ ಕೂಗುತ್ತವೆ.

ಬೆಕ್ಕುಗಳು ತಮ್ಮ ಒಡೆಯ ಹಾಗೂ ಒಡತಿಯನ್ನು ಸ್ವಾಗತಿಸುವಾಗ ಸ್ನೇಹಪರ ಸಾಮಾಜಿಕ ಸೂಚನೆಗಳನ್ನು, ಒತ್ತಡ ನಿವಾರಣಾ ನಡವಳಿಕೆಗಳೊಂದಿಗೆ ಸಂಯೋಜಿಸುತ್ತವೆ, ತಮ್ಮ ಪಾಲಿನ ವ್ಯಕ್ತಿ ಮನೆಗೆ ಬಂದಾಗ ಉತ್ಸಾಹ ಮತ್ತು ಪರಿಹಾರ ಎರಡನ್ನೂ ತೋರಿಸುತ್ತವೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ. ಆದರೆ ಈ ಅಧ್ಯಯನವನ್ನು ಕೇವಲ ಟರ್ಕಿಯಲ್ಲಿ ಮಾತ್ರ ನಡೆಸಲಾಗಿದ್ದು, ಇದಕ್ಕೆ ಸಣ್ಣ ಮಾದರಿಯನ್ನು ಬಳಸಲಾಗಿರುವುದರಿಂದ, ಪ್ರಪಂಚದಾದ್ಯಂತದ ಬೆಕ್ಕುಗಳು ಒಂದೇ ರೀತಿ ವರ್ತಿಸುತ್ತವೆಯೇ ಎಂದು ಕಂಡುಹಿಡಿಯಲು ವಿವಿಧ ದೇಶಗಳು ಮತ್ತು ಸಂಸ್ಕೃತಿಗಳಲ್ಲಿ ಇದನ್ನು ಪುನರಾವರ್ತಿಸಬೇಕಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.