ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ, ವಿದ್ಯುತ್ ಆಘಾತದಿಂದ ಪ್ರಜ್ಞೆ ಕಳೆದುಕೊಂಡಿದ್ದ ಹಾವಿಗೆ ವನ್ಯಜೀವಿ ರಕ್ಷಕರೊಬ್ಬರು ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಮುಖೇಶ್ ವಯಾದ್ ಎಂಬ ರಕ್ಷಕರು, ಹಾವಿಗೆ ಬಾಯಿಯಿಂದ ಬಾಯಿಗೆ ಉಸಿರು ನೀಡಿ ಬದುಕಿಸಿದ್ದಾರೆ.
ಮನುಷ್ಯರಿಗೆ, ಕೋತಿ, ನಾಯಿ, ಆನೆ ಮುಂತಾದ ಪ್ರಾಣಿಗಳಿಗೆ ಸಿಪಿಆರ್ ಮಾಡಿ ಜೀವ ಉಳಿಸಿದಂತಹ ಹಲವು ಘಟನೆಗಳು ನಡೆದಿವೆ. ಆದರೆ ಅಪಾಯಕಾರಿಯಾದ ಹಾವಿಗೆ ಸಿಪಿಆರ್ ಮಾಡಿರೋದನ್ನು ಎಲ್ಲಾದರೂ ಕೇಳಿದ್ದೀರಾ? ಇಂತಹ ಘಟನೆಯೊಂದು ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ನಡೆದಿದೆ. ಕರೆಂಟ್ ಶಾಕ್‌ನಿಂದ ಪ್ರಜ್ಞೆ ಕಳೆದುಕೊಂಡ ಹಾವಿಗೆ ವನ್ಯಜೀವಿ ರಕ್ಷಕರೊಬ್ಬರು ಸಿಪಿಆರ್( (ಕಾರ್ಡಿಯೋಪಲ್ಮನರಿ ರಿಸಸಿಟೇಶನ್) ಮಾಡಿ ಜೀವ ಉಳಿಸಿ ಅಚ್ಚರಿ ಮೂಡಿಸಿದ್ದಾರೆ. ಹೌದು ಅಚ್ಚರಿ ಎನಿಸಿದರು ನಿಜ. ಹಾವಿಗೆ ಬಾಯಿಯಿಂದ ಬಾಯಿಗೆ ಸಿಪಿಆರ್ ನೀಡುವ ಮೂಲಕ ಅವರು ಹಾವಿನ ಜೀವ ಉಳಿಸಿದ್ದಾರೆ ಎಂದು ವರದಿಯಾಗಿದೆ.
ವಲ್ಸಾದ್ ಜಿಲ್ಲೆಯ ಕಪ್ರಡಾ ತಾಲೂಕಿನ ಅಮ್ಧಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಮಂಗಳವಾರ ಕೃಷಿ ಕಾರ್ಮಿಕರ ಗುಂಪೊಂದು ತಮ್ಮ ಕೆಲಸದಲ್ಲಿ ತೊಡಗಿದ್ದಾಗ ಹಾವೊಂದು ವಿದ್ಯುತ್ ಕಂಬ ಹತ್ತುತ್ತಿರುವುದನ್ನು ನೋಡಿದ್ದಾರೆ. ವಿದ್ಯುತ್ ಶಾಕ್‌ನ ಅರಿವಿಲ್ಲದ ಹಾವು ಕಂಬದ ತುದಿಯನ್ನು ತಲುಪಿ, ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಸುಮಾರು 15 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದೆ. ಕೆಳಗೆ ಬಿದ್ದ ಹಾವನ್ನು ಅಲ್ಲೇ ಇದ್ದ ಕೃಷಿ ಕಾರ್ಮಿಕರು ಗಮನಿಸಿದಾಗ ಅದು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದು ಕಂಡುಬಂತು. ಕೂಡಲೇ ಅವರು ಅದೇ ಗ್ರಾಮದಲ್ಲಿ ವಾಸಿಸುವ ವನ್ಯಜೀವಿ ರಕ್ಷಕ ಮುಖೇಶ್ ವಯಾದ್ ಅವರನ್ನು ಸಂಪರ್ಕಿಸಿದ್ದಾರೆ.
ಮುಖೇಶ್ ಸ್ಥಳಕ್ಕೆ ತಲುಪಿ ಹಾವಿನ ಸ್ಥಿತಿಯನ್ನು ಪರೀಕ್ಷಿಸಿದ್ದಾರೆ. ನಂತರ ಅವರು ಅದರಬಾಯಿ ತೆರೆದು ಅದರ ಬಾಯಿಗೆ ತಮ್ಮ ಬಾಯನ್ನು ಇಟ್ಟು ಬಾಯಿಯಿಂದ ಬಾಯಿಗೆ ಸಿಪಿಆರ್ ಮಾಡಿದ್ದಾರೆ. ಇದಾಗಿ ಸುಮಾರು ಅರ್ಧಗಂಟೆಗಳ ನಿರಂತರ ಪ್ರಯತ್ನದ ನಂತರ, ಹಾವಿನ ದೇಹದಲ್ಲಿ ಚಲನೆ ಕಂಡಿದೆ. ಅಲ್ಲದೇ ಮುಂದಿನ ಒಂದೆರಡು ನಿಮಿಷಗಳಲ್ಲಿ ಅದು ಪೊದೆಯೊಳಗೆ ಹೊರಟು ಹೋಗಿದೆ. ಸ್ಥಳೀಯ ಕೃಷಿ ಕಾರ್ಮಿಕರು ಮುಖೇಶ್ ಹಾವಿಗೆ ಸಿಪಿಆರ್ ನೀಡುತ್ತಿರುವ ಚಿತ್ರವನ್ನು ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿಂದತೆ ಆಂಗ್ಲ ಮಾಧ್ಯಮ ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಉರಗ ರಕ್ಷಕ ಮುಖೇಶ್ ವಾಯದ್, ಕಳೆದ 10 ವರ್ಷಗಳಿಂದ ನಾನು ಹಾವು ರಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ, ನಾನು ವಲ್ಸಾದ್‌ನ ಧರಂಪುರದಲ್ಲಿರುವ ಹಾವು ಸಂಶೋಧನಾ ಸಂಸ್ಥೆಯಿಂದ ತರಬೇತಿ ಪಡೆದಿದ್ದೇನೆ ಎಂದು ಹೇಳಿದರು.
ರಕ್ಷಣಾ ಕಾರ್ಯದ ಬಗ್ಗೆ ಮಾತನಾಡಿದ ಅವರು, ಘಟನೆಯ ಬಗ್ಗೆ ತಿಳಿದ ನಂತರ ನಾನು ಸ್ಥಳಕ್ಕೆ ತಲುಪಿದಾಗ ಅದು ಇಲಿ ಹಿಡಿಯುವ ವಿಷಕಾರಿಯಲ್ಲದ ಹಾವು ಎಂದು ಕಂಡುಬಂದಿತು. ನಾನು ದೇಹವನ್ನು ಮುಟ್ಟಿದೆ ಆದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಹೀಗಾಗಿ ನಾನು ಹಾವಿನ ಬಾಯಿ ತೆರೆದು ಸುಮಾರು 20 ಬಾರಿ ಸಿಪಿಆರ್ ನೀಡಿದೆ. ಇದರ ನಡುವೆ ಅದರ ಹೃದಯ ಬಡಿತ ಮತ್ತೆ ಶುರುವಾಯ್ತು.ಅರ್ಧ ಗಂಟೆ ಹೀಗೆಯೇ ಮಾಡಿದ ನಂತೆ ಹಾವು ಮತ್ತೆ ಉಸಿರಾಡಲು ಆರಂಭಿಸಿತು. ನಂತರದ ಕೆಲ ಕ್ಷಣಗಳಲ್ಲಿ ಚಲಿಸಲು ಆರಂಭಿಸಿ ಹತ್ತಿರದ ಪೊದೆಗಳಿಗೆ ಹರಿದು ಹೋಯಿತು ಎಂದು ಅವರು ಹೇಳಿದರು.
ಇದನ್ನೂ ಓದಿ: ಅನೈತಿಕ ಸಂಬಂಧ ಮಾದಕ ವ್ಯಸನ, ಕಿರುಕುಳ : ಕರ್ನಾಟಕ ರಾಜ್ಯಪಾಲರ ಮೊಮ್ಮಗನ ವಿರುದ್ಧ ಪತ್ನಿಯಿಂದ ಗಂಭೀರ ಆರೋಪ
ಆದರೆ ಸೂರತ್ ಮೂಲದ ವನ್ಯಜೀವಿ ಜೀವಶಾಸ್ತ್ರಜ್ಞ ಕೃಣಾಲ್ ತ್ರಿವೇದಿ, ಇದರ ಬಗ್ಗೆ ತಿಳಿಯದಸಾರ್ವಜನಿಕರು ಇಂತಹ ರಕ್ಷಣಾ ಕಾರ್ಯವನ್ನು ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಸರಿಯಾಗಿ ತರಬೇತಿ ಪಡೆದ ವ್ಯಕ್ತಿ ಮಾತ್ರ, ಅದು ಕೂಡ ತಜ್ಞರು ಮತ್ತು ಪಶುವೈದ್ಯರ ಸಮ್ಮುಖದಲ್ಲಿ, ಇಂತಹ ಕಾರ್ಯವನ್ನು ಮಾಡಬೇಕು. ವಿದ್ಯುತ್ ಆಘಾತದಿಂದಾಗಿ ಅಥವಾ ಎತ್ತರದಿಂದ ಬಿದ್ದ ಕಾರಣ, ಇಲಿ ಹಾವು ಪ್ರಜ್ಞಾಹೀನವಾಗಿರಬಹುದು. ಆದರೆ ಮುಖೇಶ್ ಅಳವಡಿಸಿಕೊಂಡ ವಿಧಾನವನ್ನು ಎಲ್ಲರೂ ಮಾಡುವಂತೆ ಶಿಫಾರಸು ಮಾಡುಲಾಗದು. ಇಂತಹ ಸಂದರ್ಭಗಳಲ್ಲಿ, ತರಬೇತಿ ಪಡೆದ ಪಶುವೈದ್ಯರು ಹಾವುಗಳಿಗೆ ಕೃತಕ ಉಸಿರಾಟವನ್ನು ನೀಡಲು ಸೂಕ್ತ ಗಾತ್ರದ ಎಂಡೋಟ್ರಾಶಿಯಲ್ ಟ್ಯೂಬ್ ಅನ್ನು ಬಳಸುತ್ತಾರೆ ಏಕೆಂದರೆ ಅದರ ಉಸಿರಾಟದ ಪೈಪ್ ಸಾಕಷ್ಟು ಕಿರಿದಾಗಿರುತ್ತದೆ ಎಂದು ತ್ರಿವೇದಿ ವಿವರಿಸಿದ್ದಾರೆ.
ಎದೆಭಾಗದಲ್ಲಿ ಒತ್ತುವ ಮೂಲಕ ಅಥವಾ ಬಾಯಿಯ ಮೂಲಕ ಉಸಿರು ನೀಡುವ ಮೂಲಕ ಸಿಪಿಆರ್ ಮಾಡಲಾಗುತ್ತದೆ. ಆದರೆ ಕೋತಿಗಳಿಗೆ ನಾಯಿಗಳಿಗೆ ಮನುಷ್ಯರಿಗೆ ಇದನ್ನು ಮಾಡಬಹುದು. ಆದರೆ ಬಾಯ ಸಮೀಪದಲ್ಲೇ ವಿಷವಿಟ್ಟುಕೊಂಡಿರುವ ಹಾವಿಗೆ ಸಿಪಿಆರ್ ಮಾಡಿದ್ದು, ಧೈರ್ಯ ಹಾಗೂ ಸಾಹಸದ ಕೆಲಸವೇ ಸರಿ. ಈ ಬಗ್ಗೆ ನೀವೇನಂತಿರಿ ಕಾಮೆಂಟ್ ಮಾಡಿ.
ಇದನ್ನೂ ಓದಿ: ಹಾಲು ಮಾರಿ ಜೀವನ ಸಾಗಿಸ್ತಿದ್ದ ಅಮ್ಮ: ಕೆಟಿಎಂ ಬೈಕ್ ಹುಚ್ಚಿಗೆ ಬಲಿಯಾದ 18ರ ಮಗ


