ಉತ್ತರಾಖಂಡದ ಹರಿದ್ವಾರದಲ್ಲಿ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ತಾಯಿಯೇ ಈ ಕೃತ್ಯಕ್ಕೆ ಸಹಕರಿಸಿದ ಆರೋಪ ಕೇಳಿಬಂದಿದೆ.

ತಾಯಿ ಎಂದರೆ ಪದಗಳಿಗೆ ನಿಲುಕದ ತ್ಯಾಗದ ಸಂಕೇತ ಎಂದು ಬಣ್ಣಿಸಲಾಗಿದೆ. ಅನೇಕ ತಾಯಂದಿರು ಮಾಡಿದ ಅಮೋಘ ತ್ಯಾಗಗಳು ಇದಕ್ಕೆ ಕಾರಣ, ಪ್ರತಿ ಮನೆಯಲ್ಲೂ ಇಂತಹ ತಾಯಂದಿರು ಇರುತ್ತಾರೆ. ಇದೇ ಕಾರಣಕ್ಕೆ ತಾಯಿಯ ಋಣವನ್ನು ತೀರಿಸಲಾಗದು ಎಂಬ ಮಾತಿದೆ. ತನ್ನ ಕರುಳಕುಡಿಯ ರಕ್ಷಣೆಯ ವಿಚಾರ ಬಂದಾಗ ಎಂಥಾ ತಾಯಿಯೂ ಕೂಡ ತ್ಯಾಗಮಯಿ ಆಗುತ್ತಾಳೆ. ಜೀವದ ಹಂಗು ತೊರೆದು ಮಗುವಿನ ರಕ್ಷಣೆಗೆ ಮುಂದಾಗುತ್ತಾಳೆ. ಆದರೆ ತಲೆತಗ್ಗಿಸುವ ವಿಚಾರ ಏನೆಂದರೆ ಇತ್ತೀಚಿನ ಕೆಲವು ಘಟನೆಗಳು ಈಗಿನ ತಾಯಂದಿರಿಗೆ ಏನಾಗಿದೆ? ಇವರು ನಿಜವಾಗಿಯೂ ತಾಯಂದಿರೇ ಎಂದು ಜನ ಪ್ರಶ್ನೆ ಮಾಡುವಂತೆ ಮಾಡಿದೆ. ಜೊತೆಗೆ ಇವರು ಕ್ಷಮಯಾಧರಿತ್ರಿ ಎಂಬ ಸ್ತ್ರೀ ಕುಲದ ಹಿರಿಮೆಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಮತ್ತೊಂದು ಉದಾಹರಣೆ ಈಗ ನಾವು ಹೇಳ ಹೊರಟಿರುವ ಘಟನೆ..

ಹರೆಯದ ಹೆಣ್ಣು ಮಕ್ಕಳು, ಪುಟ್ಟ ಮಕ್ಕಳ ಮೇಲಿನ ಬಲತ್ಕಾರ ಪ್ರಕರಣಗಳು ಕೇಳಿ ಬಂದಾಗ ಸ್ವತಃ ತಾಯಿಯಾದವಳು ಭದ್ರಕಾಳಿಸ್ವರೂಪಿಯಾದಂತಹ ಹಲವು ಘಟನೆಗಳು ನಡೆದಿವೆ. ಆದರೆ ಇಲ್ಲಿ ತಾಯಿಯೊಬ್ಬಳು ತನ್ನ ಅಪ್ರಾಪ್ತ 14 ವರ್ಷ ಪ್ರಾಯದ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ತನ್ನ ಗೆಳೆಯ ಹಾಗೂ ಇತರರಿಗೆ ಸಹಕರಿಸಿದ ಆರೋಪ ಕೇಳಿ ಬಂದಿದೆ. ಉತ್ತರಾಖಂಡ್‌ನ ಹರಿದ್ವಾರದಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಈಗ ಮಹಿಳೆಯ ಬಾಯ್‌ಫ್ರೆಂಡ್ ಸುಮಿತ್ ಪಟ್ವಾಲ್ ಎಂಬಾತನನ್ನು ಬಂಧಿಸಲಾಗಿದೆ. ಹಾಗೆಯೇ ಪೊಲೀಸರು ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪರಮೇಂದ್ರ ದೋವಲ್ ಮಾತನಾಡಿ, ಅಪ್ರಾಪ್ತ ಬಾಲಕಿ ತನ್ನ ತಾಯಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಆರೋಪಿಸಿದ್ದಾಳೆ. ಬಳಿಕ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದು ತಪಾಸಣೆ ಮಾಡಿದಾಗ ಆಕೆ ತಾಯಿಯ ಮೇಲೆ ಮಾಡಿದ ಆರೋಪಗಳು ದೃಢಪಟ್ಟವು. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸಂತ್ರಸ್ತೆಯ ತಾಯಿಯಾಗಿರುವ ಆರೋಪಿ ಮಹಿಳೆ ತನ್ನ ಪತಿಯಿಂದ ಬೇರ್ಪಟ್ಟಿದ್ದಳು ಮತ್ತು ಆಕೆಯ 13 ವರ್ಷದ ಮಗಳು ತನ್ನ ತಂದೆಯೊಂದಿಗೆ ವಾಸ ಮಾಡುತ್ತಿದ್ದಳು. ತಾಯಿ ತನ್ನ ಗೆಳೆಯನ ಜೊತೆ ಸೇರಿ ನಡೆಸಿದ ಈ ಹೇಯ ಕೃತ್ಯವನ್ನು ಆಕೆ ತನ್ನ ತಂದೆಯ ಬಳಿ ಹೇಳಿಕೊಂಡ ನಂತರ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ.

ತನ್ನ ತಾಯಿ ಆಕೆಯ ಬಾಯ್‌ಫ್ರೆಂಡ್‌ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಅವಕಾಶ ಮಾಡಿಕೊಟ್ಟಿದ್ದಾಳೆ ಎಂದು ಬಾಲಕಿ ಆರೋಪಿಸಿದ್ದಾರೆ. ಬಾಲಕಿಯ ಆರೋಪ ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾದ ಹಿನ್ನೆಲೆ ಪೊಲೀಸರು ಈ ಕೆಟ್ಟ ಮಹಿಳೆ ಹಾಗೂ ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ.

ಈ ಆರೋಪಿ ಮಹಿಳೆ ಈ ಹಿಂದೆ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವರದಿಯಾಗಿದೆ. ಆದರೆ ಹರಿದ್ವಾರದ ಬಿಜೆಪಿ ಘಟಕವು ಆಕೆಯಿಂದ ಪ್ರತ್ಯೇಕತೆ ಕಾಯ್ದುಕೊಂಡಿದೆ. ಕಳೆದ ಆಗಸ್ಟ್‌ನಲ್ಲಿ ಆಕೆಯನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಆಕೆಗೆ ಯಾವುದೇ ಬಿಜೆಪಿ ಹುದ್ದೆಯನ್ನು ನೀಡಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಶುತೋಷ್ ಶರ್ಮಾ ಹೇಳಿದ್ದಾರೆ.