ಆಯುರ್ವೇದ ತಜ್ಞರಾದ ಡಾ.ಗೌರಿಯಮ್ಮ ಅವರು ವಯಸ್ಸಾದಂತೆ ಮುಖದಲ್ಲಿ ಕಾಣಿಸಿಕೊಳ್ಳುವ ಸುಕ್ಕುಗಳನ್ನು ತಡೆಯಲು ಒಂದು ಸರಳ ಮನೆಮದ್ದನ್ನು ತಿಳಿಸಿದ್ದಾರೆ. ಚಿಯಾ ಸೀಡ್ಸ್, ಅಲೋವೆರಾ ಜೆಲ್, ಹಸಿ ಹಾಲು ಮತ್ತು ಜೇನುತುಪ್ಪ ಬಳಸಿ ತಯಾರಿಸಬಹುದಾದ ಈ ಫೇಸ್ ಪ್ಯಾಕ್, ಚರ್ಮವನ್ನು ನಳನಳಿಸುವಂತೆ ಮಾಡುತ್ತದೆ.

ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮೇಲು ಎಂದು ಹೇಳುವುದು ಸಹಜ. ಆದರೆ ಎಷ್ಟೋ ಬಾರಿ ಇದು ಕೇವಲ ಬಾಯಿ ಮಾತಿಗಷ್ಟೇ ಸೀಮಿತ ಆಗಿಬಿಡುತ್ತದೆ. ಯಾರು ಏನು ಅಂದುಕೊಳ್ಳುತ್ತಾರೋ ಎಂದುಕೊಂಡೇ ಬದುಕುವವರೇ ಬಹುತೇಕ ಎಲ್ಲರೂ. ಒಂದರ್ಥದಲ್ಲಿ ನಾವು ಬೇರೆಯವರಿಗಾಗಿಯೇ ಬದುಕುತ್ತಿದ್ದೇವೆ. ಅವರು ಏನಂದುಕೊಳ್ತಾರೋ, ಇವರು ಏನೆಂದುಕೊಳ್ತಾರೋ, ನಾವು ಚೆನ್ನಾಗಿಲ್ಲ ಎಂದುಕೊಳ್ತಾರೋ, ಓವರ್​ ಆಯ್ತು ಅಂದುಕೊಳ್ತಾರೋ... ಹೀಗೆ ಏನೇನೋ ಕಲ್ಪನೆಗಳನ್ನು ಮಾಡಿಕೊಂಡು ಬದುಕುವವರೇ ಬಹುತೇಕ ಎಲ್ಲರೂ. ಅದರಲ್ಲಿಯೂ ಸೌಂದರ್ಯದ ವಿಷಯ ಬಂದಾಗ ಮಹಿಳೆ- ಪುರುಷರು ಎಂದು ಬೇಧಭಾವ ಇಲ್ಲದೇ ಎಲ್ಲರೂ ಸುಂದರರಾಗಿ ಕಾಣಬೇಕು ಎಂದು ಹಂಬಲಿಸುವವರೇ.

ಮೇಕಪ್​ ಸೌಂದರ್ಯ

ಕೆಲವರು ನೈಸರ್ಗಿಕವಾಗಿ ಸಹಜ ಸೌಂದರ್ಯದಿಂದ ಕಂಗೊಳಿಸಿದರೆ, ಮತ್ತೆ ಕೆಲವರು ಕೃತಕ ಬಣ್ಣ ಬಳಿಕ ಸೌಂದರ್ಯ ಹೆಚ್ಚು ಮಾಡಿಕೊಳ್ಳುತ್ತಾರೆ. ಅದರಲ್ಲಿಯೂ ವಯಸ್ಸು ಒಂದು ಹಂತವನ್ನು ಮೀರಿತು ಎಂದರೆ, ಹೆಚ್ಚಾಗಿ ಹೆಣ್ಣುಮಕ್ಕಳಲ್ಲಿ ಸೌಂದರ್ಯದ ಬಗ್ಗೆ ಸಹಜವಾಗಿ ಕಾಳಜಿ ಹೆಚ್ಚಾಗುತ್ತಲೇ ಹೋಗುತ್ತದೆ. ಇದಕ್ಕಾಗಿ ಏನೇನೋ ರಾಸಾಯನಿಕಯುಕ್ತ ಮೇಕಪ್​ ಮಾಡಿಕೊಂಡು ಇರುವ ಸೌಂದರ್ಯವನ್ನೂ ಹಾಳು ಮಾಡಿಕೊಳ್ಳುವವರು ಇದ್ದಾರೆ. ಇನ್ನು ಕೆಲವರು ಸೋಷಿಯಲ್​ ಮೀಡಿಯಾಗಳಲ್ಲಿ ದುಡ್ಡು ಪಡೆದು ಜಾಹೀರಾತು ನೀಡುವ ಸೆಲೆಬ್ರಿಟಿಗಳಿಗೆ ಮರುಳಾಗಿ ಅದನ್ನು ಪಡೆದುಕೊಳ್ಳುವವರು ಇದ್ದಾರೆ.

ಜಾಹೀರಾತಿಗೆ ಮರುಳಾಗದಿರಿ

ಈಗಂತೂ ಟಿವಿ, ಪತ್ರಿಕೆಯನ್ನು ಮೀರಿ, ಇನ್​ಸ್ಟಾಗ್ರಾಮ್​, ಫೇಸ್​ಬುಕ್​ಗಳಲ್ಲಿ ಸೆಲೆಬ್ರಿಟಿಗಳಿಂದ ಜಾಹೀರಾತು ಕೊಡಿಸುವ ಪರಿ ಹೆಚ್ಚಾಗಿ ಬಿಟ್ಟಿದೆ. ಅದು ಜಾಹೀರಾತು ಎನ್ನಿಸುವುದೇ ಇಲ್ಲ. ತಾವೇ ಆ ಪ್ರಾಡಕ್ಟ್​ ಬಳಸಿದಂತೆ ಪೋಸ್​ ಕೊಡುವ ನಟ, ನಟಿಯರನ್ನು ನೋಡಿ ಮರುಳಾಗುವವರಿಗೇನೂ ಕಮ್ಮಿ ಇಲ್ಲ.

ಹೋಮ್​ ರೆಮಿಡಿ

ಆದರೆ ಅಂಥವುಗಳಿಗೆ ಮೋಸ ಹೋಗದೇ ಸುಲಭದಲ್ಲಿ ಮನೆಯಲ್ಲಿ ಮಾಡಿಕೊಳ್ಳುವ ಮನೆಮದ್ದನ್ನು ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಹೇಳಿದ್ದಾರೆ ಆಯುರ್ವೇದ ತಜ್ಞರಾಗಿರುವ ಡಾ.ಗೌರಿಯಮ್ಮ. ಅದರಲ್ಲಿಯೂ ವಯಸ್ಸಾದವರ ಮುಖ ನಳನಳಿಸುವಂತೆ ಹಾಗೂ ಚರ್ಮ ಸುಕ್ಕಾಗದ ರೀತಿಯಲ್ಲಿ ಇದನ್ನು ಹೇಗೆ ಮಾಡಿಕೊಳ್ಳಬೇಕು ಎನ್ನುವುದನ್ನು ಅವರು ತಿಳಿಸಿದ್ದಾರೆ. ಇದಕ್ಕೆ ಬೇಕಿರುವುದು: ಎರಡು ಚಮಚ ಚಿಯಾ ಸೀಡ್ಸ್​ (ಕಾಮ ಕಸ್ತೂರಿ, ಎಣಿಕೆ ಬೀಜ), ಇದನ್ನು ಐದಾರು ಗಂಟೆ ನೆನೆಸಿ ಇಟ್ಟುಕೊಳ್ಳಬೇಕು. ಸ್ವಲ್ಪ ಆಲೋವಿರಾ ಜೆಲ್​ ಒಂದೆರಡು ಚಮಚ, ಹಸಿ ಹಾಲು ಒಂದೆರಡು ಚಮಚ, ಒಂದು ಚಮಚ ಜೇನುತುಪ್ಪ ಎಲ್ಲವನ್ನೂ ಮಿಕ್ಸ್​ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡು ಅದು ಒಣಗಿದ ಬಳಿಕ ತೊಳೆದುಕೊಳ್ಳಬೇಕು. ಇಷ್ಟು ಮಾಡಿದರೆ ಸಾಕು, ಸುಕ್ಕು ಎಲ್ಲವೂ ದೂರವಾಗುತ್ತದೆ ಎಂದು ಡಾ.ಗೌರಿಯಮ್ಮ ಹೇಳಿದ್ದಾರೆ.

View post on Instagram