ಇತ್ತೀಚೆಗೆ ಮಹಿಳೆಯರ ಮಾಂಗಲ್ಯಸರವನ್ನೇ ಗುರಿಯಾಗಿಸಿ ಸರಗಳ್ಳತನ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಮಾಗಡಿ ಬಳಿ ಗ್ರಾಹಕರಂತೆ ನಟಿಸಿದ ಕಳ್ಳರು ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ ಪೊಲೀಸರು ಸರವನ್ನು ಪ್ರದರ್ಶಿಸದೆ, ದುಪ್ಪಟ್ಟಾ ಅಥವಾ ಸೀರೆಯ ಸೆರಗಿನಿಂದ ಮುಚ್ಚಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಚಿನ್ನದ ಬೆಲೆಯಲ್ಲಿ ಏರಿಳಿತ ಏನೇ ಆಗುತ್ತಿದ್ದರೂ, ಅದರ ಕಳ್ಳತನವಂತೂ ಮಾಮೂಲಾಗಿಬಿಟ್ಟಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮಾಂಗಲ್ಯಸರವನ್ನೇ ಟಾರ್ಗೆಟ್ ಮಾಡುವುದು ಹೆಚ್ಚಾಗಿಬಿಟ್ಟಿದೆ. ಕಳ್ಳರು ಮಾತ್ರವಲ್ಲದೇ ಕಳ್ಳಿಯರು ಕೂಡ ಮಂಗಳಸೂತ್ರದ ಮೇಲೆಯೇ ಕಣ್ಣು ಹಾಕುತ್ತಿದ್ದಾರೆ. ನೀವು ಚಿನ್ನ ಬಿಟ್ಟು ಚಿನ್ನದ ಬಣ್ಣದ ರೋಲ್ಡ್ಗೋಲ್ಡ್ ಧರಿಸಿದರೂ ಕಳ್ಳರಿಗೆ ಇದು ಗೊತ್ತಾಗದೇ ಚಿನ್ನ ಎಂದು ತಿಳಿದು ಕುತ್ತಿಗೆಗೆ ಕೈಹಾಕುವುದು ಇದೆ. ಚಿನ್ನ ಅಲ್ಲವಲ್ಲ, ಮತ್ಯಾಕೆ ಸಮಸ್ಯೆ ಎಂದುಕೊಳ್ಳಲೇಬೇಡಿ. ಇದು ಚಿನ್ನವೇ ಎಂದು ತಿಳಿದು ಕುತ್ತಿಗೆಗೆ ಕೈಹಾಕುವ ಭರದಲ್ಲಿ ಮಹಿಳೆಯರನ್ನು ಬೀಳಿಸಿ, ಅವರ ಪ್ರಾಣಕ್ಕೆ ಕುತ್ತು ತರುವ ಇಲ್ಲವೇ ಅವರಿಗೆ ಗಂಭೀರ ಸ್ವರೂಪದಲ್ಲಿ ಗಾಯ ಮಾಡುವ ಸಾಕಷ್ಟು ಘಟನೆಗಳು ನಡೆಯುತ್ತಲೇ ಇವೆ.
ಸಿಸಿಟಿವಿ ಇರುವ ಪ್ರದೇಶಗಳಲ್ಲಿ ಇದು ಕಂಡುಬರುತ್ತಿದ್ದರೆ, ಇನ್ನು ಅದೆಷ್ಟೋ ಕಡೆಗಳ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಬೆಂಗಳೂರಿನ ಮಾಗಡಿ ತಾಲ್ಲೂಕಿನಲ್ಲಿ ಗ್ರಾಹಕರಂತೆ ನಟಿಸಿದ ಇಬ್ಬರು ಕಳ್ಳರು ಸರಗಳ್ಳತನ ನಡೆಸಿದ್ದು ಅದರ ಭಯಾನಕ ದೃಶ್ಯ ಅಂಗಡಿ ಬಳಿ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುದೂರು ಹೋಬಳಿಯ ಗುಡ್ಡೇಮಾರನಹಳ್ಳಿಯಲ್ಲಿ ಮಧ್ಯಾಹ್ನವೇ ಈ ಘಟನೆ ನಡೆದಿದೆ. ಬೇಕರಿಯ ಮುಂದೆ ಈ ಕೃತ್ಯ ನಡೆದಿದೆ. ಆರೋಪಿಗಳು ಬೇಕರಿಯಲ್ಲಿ ಪಾನೀಯವನ್ನು ತೆಗೆದುಕೊಂಡಿದ್ದಾರೆ. ಆಗ ಅವರಿಗೆ ಅಲ್ಲಿ ಬಂದು ನಿಂತ ಮಹಿಳೆಯ ಮಂಗಳಸೂತ್ರದ ಮೇಲೆ ಕಣ್ಣು ಹೋಗಿದೆ.
ಗ್ರಾಹಕರಂತೆ ನಟನೆ
ಸಾಮಾನ್ಯ ಗ್ರಾಹಕರಂತೆ ನಟಿಸಿ ಅನುಮಾನಾಸ್ಪದವಾಗಿ ಅತ್ತ ಇತ್ತ ಹೋಗಿ, ಮಹಿಳೆಯ ಬಳಿಗೆ ಬಂದು ಇದ್ದಕ್ಕಿದ್ದಂತೆ ಆಕೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ ಒಬ್ಬಾತ. ಈ ಭರದಲ್ಲಿ ಮಹಿಳೆ ಅಲ್ಲಿಯೇ ಬಿದ್ದಿದ್ದಾರೆ. ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿರಬಹುದು, ಅದೃಷ್ಟವಶಾತ್ ಆ ಬಿದ್ದ ಧಾವಂತದಲ್ಲಿ ಪ್ರಾಣಕ್ಕೆ ಹಾನಿಯಾಗಿಲ್ಲ ಎನ್ನುವುದೇ ಪುಣ್ಯ. ಇಂತಹ ಘಟನೆಗಳು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಮೂಡಿಸುತ್ತವೆ, ವಿಶೇಷವಾಗಿ ಹಗಲು ಹೊತ್ತಿನಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ. ಅಪರಾಧಿಗಳು ಹೆಚ್ಚು ಹೆಚ್ಚು ಧೈರ್ಯಶಾಲಿಗಳಾಗುತ್ತಿದ್ದಾರೆ, ಮುಗ್ಧ ಜನರನ್ನು ಗುರಿಯಾಗಿಸಲು ವಂಚನೆಯನ್ನು ಬಳಸುತ್ತಿದ್ದಾರೆ.
ಪತ್ತೆಗೆ ಕ್ರಮ
ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆದರೆ ಇಂತಹ ಘಟನೆಗಳು ಕಠಿಣ ಕಾನೂನು ಜಾರಿ, ಹೆಚ್ಚಿದ ಗಸ್ತು ಮತ್ತು ನಾಗರಿಕರಲ್ಲಿ ಉತ್ತಮ ಜಾಗೃತಿಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ. ಅಪರಾಧಿಗಳನ್ನು ಗುರುತಿಸಲು ಮತ್ತು ಬಂಧಿಸಲು ಅಧಿಕಾರಿಗಳು ತ್ವರಿತ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಹೆಂಗಸರು ಏನು ಮಾಡಬಹುದು?
ಇದು ಮುಂದಿನ ಮಾತಾಯ್ತು ಬಿಡಿ. ಹೆಂಗಸರು ತಮ್ಮ ಬಗ್ಗೆ ಕಾಳಜಿಯಿಂದ ಇದ್ದಷ್ಟೂ ಒಳ್ಳೆಯದು ಎಂದು ಇದು ತೋರಿಸುತ್ತದೆ. ಹಾಗೆಂದು ಮಹಿಳೆಯರು ಮಾಂಗಲ್ಯಸರವನ್ನು ಹಾಕದೇ ಇರುವಂತೆಯೂ ಇಲ್ಲವಲ್ಲ. ಇದೇ ಕಾರಣಕ್ಕೆ ನೀವು ಅಸಲಿಯದ್ದೇ ಹಾಕಿರಲಿ, ನಕಲಿಯದ್ದೇ ಹಾಕಿರಲಿ ಅದನ್ನು ಮೇಲಿನಿಂದ ಪ್ರದರ್ಶನ ಮಾಡಬೇಡಿ ಎನ್ನುತ್ತಿದ್ದಾರೆ ಪೊಲೀಸರು. ಹಿಂಬದಿಯಿಂದ ಸರವನ್ನು ಕಳ್ಳತನ ಮಾಡುವುದು ಹೆಚ್ಚಾಗಿರುವ ಕಾರಣ, ಸರವು ಕಾಣದಂತೆ ಧರಿಸುವುದು ಕಷ್ಟವೇ ಆಗಿದ್ದರೂ, ಹೇಗೆ ಸಾಧ್ಯವೋ ಆ ರೀತಿಯಲ್ಲಿ ಅದನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ. ದುಪ್ಪಟ್ಟಾ ಇದ್ದರೆ ಕುತ್ತಿಗೆಯ ಸುತ್ತಲೂ ಹಾಕಿಕೊಂಡು ಹೋಗುವ ಅನಿವಾರ್ಯತೆ ಸದ್ಯಕ್ಕಿದೆ. ಸೀರೆಯುಟ್ಟಿದ್ದರೆ ಕೆಲವು ಪ್ರದೇಶಗಳಲ್ಲಾದರೂ ಸೆರಗಿನಿಂದ ಮುಚ್ಚಿಕೊಳ್ಳಲೇಬೇಕಿದೆ. ಇವೆಲ್ಲಾ ತೀರಾ ಓವರ್ ಎನ್ನಿಸಿದರೂ, ಪ್ರಾಣದ ರಕ್ಷಣೆಗಾದರೂ ಇವೆಲ್ಲವೂ ಸದ್ಯದ ಅಗತ್ಯತೆಯಾಗಿದೆ ಎನ್ನುತ್ತಾರೆ ಪೊಲೀಸರು.


