Asianet Suvarna News Asianet Suvarna News

ಅಫ್ಘಾನಿಸ್ತಾನ ಮಹಿಳೆಯರಿಗೆ ಶಾಲೆ, ಕಾಲೇಜು ಶಿಕ್ಷಣ ನಿಷೇಧಿಸಿದ ತಾಲಿಬಾನ್

ಅಫ್ಘಾನಿಸ್ತಾನ ಯುವತಿಯರು ಶಾಲೆ- ಕಾಲೇಜಿಗೆ ಹೋಗುವಂತಿಲ್ಲ ಎಂದು ತಾಲಿಬಾನ್‌ ಘೋಷಿಸಿದೆ. ಈಗಾಗಲೇ ಉದ್ಯಾನಗಳಲ್ಲೂ ಮಹಿಳೆಯರಿಗೆ ನಿರ್ಬಂಧ ಹೇರಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Taliban says women banned from universities in Afghanistan Vin
Author
First Published Dec 21, 2022, 7:54 AM IST

ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮಹಿಳೆಯರ ಹಕ್ಕುಗಳನ್ನು (Womens Rights) ಹತ್ತಿಕ್ಕಲು ಪ್ರಯತ್ನಿಸುತ್ತಿರುವ ತಾಲಿಬಾನ್‌, ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಮಹಿಳೆಯರಿಗೆ ನಿಷೇಧ (Ban) ವಿಧಿಸಿದೆ. ಈಗಾಗಲೇ ಉದ್ಯಾನಗಳಲ್ಲೂ ಮಹಿಳೆಯರಿಗೆ ನಿರ್ಬಂಧ ಹೇರಲಾಗಿದೆ. ಅಷ್ಘಾನಿಸ್ತಾನ ವಶಪಡಿಸಿಕೊಂಡ ಬಳಿಕ ನೀಡಿದ್ದ ಸೌಮ್ಯ ಆಡಳಿತ ಹಾಗೂ ಅಲ್ಪಸಂಖ್ಯಾತ ಹಕ್ಕುಗಳ ಭರವಸೆಯ ಹೊರತಾಗಿಯೂ ತಾಲೀಬಾನ್‌ ಷರಿಯಾ ಕಾನೂನನ್ನು ದೇಶದಲ್ಲಿ ವ್ಯಾಪಕವಾಗಿ ಜಾರಿಗೊಳಿಸಿದೆ. 

ಅಫ್ಘಾನಿಸ್ತಾನದ ತಾಲಿಬಾನ್ ನಡೆಸುತ್ತಿರುವ ಉನ್ನತ ಶಿಕ್ಷಣ ಸಚಿವಾಲಯವು (Education Ministry) ಮುಂದಿನ ಸೂಚನೆ ಬರುವವರೆಗೂ ದೇಶದ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ. ಉನ್ನತ ಶಿಕ್ಷಣ ಸಚಿವಾಲಯದ ವಕ್ತಾರರು ದೃಢಪಡಿಸಿದ ಪತ್ರವು, ಕ್ಯಾಬಿನೆಟ್ ನಿರ್ಧಾರಕ್ಕೆ ಅನುಗುಣವಾಗಿ ತಕ್ಷಣವೇ ಮಹಿಳಾ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಅಮಾನತುಗೊಳಿಸುವಂತೆ ಅಪಘಾನ್ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ.

ಮಹಿಳೆಯರಿಗೆ ಜಿಮ್, ಪಾರ್ಕ್‌ ಪ್ರವೇಶಕ್ಕೂ ನಿಷೇಧ ಹೇರಿದ ತಾಲಿಬಾನ್

ಸಾರ್ವಜನಿಕವಾಗಿ ತಲೆಯಿಂದ ಪಾದದವರೆಗೆ ಬಟ್ಟೆ ಧರಿಸುವುದು ಕಡ್ಡಾಯ
ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳು ಸೇರಿದಂತೆ ಉನ್ನತ ಶಿಕ್ಷಣವನ್ನು ಮಹಿಳೆಯರಿಗೆ ನಿಷೇಧಿಸಲಾಗಿದೆ. ಉದ್ಯೋಗ (Job)ದಿಂದಲೂ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕವಾಗಿ ತಲೆಯಿಂದ ಪಾದದವರೆಗೆ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜಿಮ್‌ ಮತ್ತು ಉದ್ಯಾನವನಗಳಿಗೂ ಮಹಿಳೆಯನ್ನು ನಿರ್ಬಂಧಿಸಲಾಗಿದೆ. ಈ ಕುರಿತಾಗಿ ಎಲ್ಲಾ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿರುವ ಉನ್ನತ ಶಿಕ್ಷಣ ಸಚಿವಾಲಯದ ವಕ್ತಾರ ಜಿಯಾವುಲ್ಲಾ ಹಶ್ಮಿ, ಆದಷ್ಟು ಬೇಗ ಈ ನಿಯಮವನ್ನು ಜಾರಿಗೊಳಿಸಲು ಹಾಗೂ ಜಾರಿಯಾದ ಬಳಿಕ ಸಚಿವಾಲಯಕ್ಕೆ ತಿಳಿಸಲು ಸೂಚಿಸಿದ್ದಾರೆ.

ತಾಲಿಬಾನ್ ಆಗಸ್ಟ್ 2021ರಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ಮೂಲಭೂತ ಹಕ್ಕುಗಳ ಮೇಲೆ ನಿಷೇಧ ಹೇರಿತ್ತು. ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳನ್ನು ತೀವ್ರವಾಗಿ ನಿರ್ಬಂಧಿಸುವ ನೀತಿಗಳನ್ನು ಜಾರಿಗೆ ತಂದಿತ್ತು. ನಾಗರಿಕ ಸೇವೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರನ್ನು ತಾಲಿಬಾನ್ ವಜಾಗೊಳಿಸಿತು ಮತ್ತು ಹೆಚ್ಚಿನ ಪ್ರಾಂತ್ಯಗಳಲ್ಲಿ ಹುಡುಗಿಯರು ಮಾಧ್ಯಮಿಕ ಶಾಲೆಗೆ ಹೋಗುವುದನ್ನು ನಿಷೇಧಿಸಿತು.

ತಾಲಿಬಾನ್‌ ಆರ್ಡರ್‌, ಹೆಣ್ಣುಮಕ್ಕಳು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವಂತಿಲ್ಲ!

ಕಠಿಣ ನಿರ್ಧಾರವನ್ನು ಟೀಕಿಸಿದ ಜಾಗತಿಕ ನಾಯಕರು
ಸ್ತ್ರೀ ಶಿಕ್ಷಣದ ಮೇಲಿನ ತಾಲಿಬಾನ್ ನಿರ್ಬಂಧವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಕಳವಳವನ್ನು ಉಂಟುಮಾಡುವ ಸಾಧ್ಯತೆಯಿದೆ. ಯುಎನ್ ವಕ್ತಾರ ಸ್ಟೀಫನ್ ಡುಜಾರಿಕ್ ಈ ಕ್ರಮವನ್ನು ಕಠಿಣ ನಿರ್ಧಾರ ಎಂದು ಟೀಕಿಸಿದ್ದಾರೆ. 'ಇದು ಸ್ಪಷ್ಟವಾಗಿ ತಾಲಿಬಾನ್‌ ಭರವಸೆಯನ್ನು ಮುರಿಯುವ ರೀತಿಯಾಗಿದೆ' ಎಂದು ತಿಳಿಸಲಾಗಿದೆ. 'ತಾಲಿಬಾನ್‌ ಸ್ವಾಧೀನಪಡಿಸಿಕೊಂಡಾಗಿನಿಂದ ನಾವು ನೋಡಿದ್ದೇವೆ. ಮಹಿಳೆಯರಿಗೆ ಅವಕಾಶಗಳು ಕಡಿಮೆಯಾಗಿದೆ, ಶಿಕ್ಷಣದಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶ ನಿಷೇಧಿಸಲಾಗಿದೆ' ಎಂದು ಅವರು ಹೇಳಿದರು. 'ಇದು ಮತ್ತೊಂದು ಅತ್ಯಂತ ತ್ರಾಸದಾಯಕ ಕ್ರಮವಾಗಿದೆ.ಮಹಿಳೆಯರು ಶಿಕ್ಷಣದ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ದೇಶವು ಹೇಗೆ ಅಭಿವೃದ್ಧಿ ಹೊಂದುತ್ತದೆ, ಅದು ಹೊಂದಿರುವ ಎಲ್ಲಾ ಸವಾಲುಗಳನ್ನು ನಿಭಾಯಿಸುತ್ತದೆ ಎಂಬುದನ್ನು ಊಹಿಸುವುದು ಕಷ್ಟ' ಎಂದು ಹಲವು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನದ ಕುರಿತು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ನಡೆಸುತ್ತಿದ್ದಂತೆ ಈ ಘೋಷಣೆ ಹೊರಬಿದ್ದಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟಿಷ್ ಯುಎನ್ ರಾಯಭಾರಿಗಳು ಕೌನ್ಸಿಲ್ ಸಭೆಯಲ್ಲಿ ಈ ಕ್ರಮವನ್ನು ಖಂಡಿಸಿದರು. 'ಎಲ್ಲಾ ಆಫ್ಘನ್ನರ ಹಕ್ಕುಗಳನ್ನು, ವಿಶೇಷವಾಗಿ ಮಾನವ ಹಕ್ಕುಗಳು ಮತ್ತು ಮಹಿಳೆಯರು ಮತ್ತು ಹುಡುಗಿಯರ ಮೂಲಭೂತ ಸ್ವಾತಂತ್ರ್ಯವನ್ನು ಗೌರವಿಸುವವರೆಗೆ ತಾಲಿಬಾನ್ ಅಂತಾರಾಷ್ಟ್ರೀಯ ಸಮುದಾಯದ ಕಾನೂನುಬದ್ಧ ಸದಸ್ಯರಾಗಿರಲು ನಿರೀಕ್ಷಿಸುವುದಿಲ್ಲ' ಎಂದು ಯುಎಸ್ ಉಪ UN ರಾಯಭಾರಿ ರಾಬರ್ಟ್ ವುಡ್ ಹೇಳಿದರು.

Follow Us:
Download App:
  • android
  • ios