ಕೊಚ್ಚಿನ್‌ಗೆ ಬಂದಿದ್ದ ಸುನೀತಾ ವಿಲಿಯಮ್ಸ್‌ ನೋಡಲು ಜನಸಾಗರವೇ ಹರಿದುಬಂದಿತ್ತು. ಈ ಗಗನಯಾತ್ರಿಯ ಲವ್‌ಸ್ಟೋರಿ ಸಖತ್‌ ಇಂಟರೆಸ್ಟಿಂಗ್‌. ಸುನೀತಾ ಕೋಝಿಕೋಡ್‌ ಪ್ರವಾಸದಲ್ಲಿ ಹೊರಬಂದ ಸತ್ಯವೇನು ಗೊತ್ತಾ!

ಸುನೀತಾ ವಿಲಿಯಮ್ಸ್‌ ಇತ್ತೀಚೆಗೆ ಕೇರಳ ಲಿಟರರಿ ಫೆಸ್ಟ್‌ನಲ್ಲಿ ಪಾಲ್ಗೊಂಡಿದ್ದರು. ಕೋಝಿಕೋಡ್‌ನ ಸಮುದ್ರ ದಂಡೆಯಲ್ಲಿ ನಡೆದ ಸುನೀತಾ ಕಾರ್ಯಕ್ರಮದ ಇಂಟರೆನೆಟ್‌ ಸೆನ್ಸೇಶನ್ನೇ ಆಯ್ತು. ಸಾಮಾನ್ಯವಾಗಿ ಸಿನಿಮಾ ತಾರೆಯರನ್ನೋ, ಕ್ರಿಕೆಟ್‌ ಆಟಗಾರರನ್ನೋ ನೋಡಲು ಈ ಲೆವೆಲ್‌ನ ಜನ ಮುಗಿಬಿದ್ದು ಸೇರುತ್ತಾರೆ. ಆದರೆ ವಿಶ್ವ ಕಂಡ ಮಹತ್ವದ ಅಂತರಿಕ್ಷ ವಿಜ್ಞಾನಿ, ಗಗನಯಾತ್ರಿ ಸುನೀತಾ ವಿಲಿಯಮ್ಸ್‌ಬಂದಾಗ ಅದಕ್ಕಿಂತ ಹೆಚ್ಚು ಕುತೂಹಲ, ಆಸಕ್ತಿಯಿಂದ ಜನ ಸೇರಿದರು. ಅವರ ಪ್ರತೀ ಮಾತನ್ನೂ, ಅವರ ಗಗನಯಾನದ ಬಗೆಗಿನ ಅನುಭವಗಳನ್ನು ಕಣ್ಣು ಮಿಟುಕಿಸದಂತೆ ನೋಡಿ ಖುಷಿ ಪಟ್ಟರು. ಅಂದ ಹಾಗೆ ಈ ವೇಳೆ ಸುನೀತಾ ವಿಲಿಯಮ್ಸ್‌ ಬಗ್ಗೆ ಅಷ್ಟೇನೂ ತಿಳಿದಿರದ ಒಂದು ವಿಷಯವೂ ಈ ವೇಳೆ ರಿವೀಲ್‌ ಆಗಿದೆ.

ಸುನೀತಾ ವಿಲಿಯಮ್ಸ್ ಅವರ ತಂದೆ ದೀಪಕ್ ಪಾಂಡೆ ವಿಲಿಯಮ್ಸ್ ಅವರು ಭಾರತೀಯ ಮೂಲದವರು. ಅವರು ವೈದ್ಯರಾಗಿದ್ದರು. ತಾಯಿ ಬೋನಿ ಪಾಂಡೆ ಅವರು ಸ್ಲೋವೇನಿಯನ್ ಮೂಲದವರು. ವಿಭಿನ್ನ ಸಂಸ್ಕೃತಿಗಳ ಸಂಗಮವಿರುವ ಕುಟುಂಬದಲ್ಲಿ ಬೆಳೆದ ಸುನೀತಾ, ಭಾರತೀಯ ಸಂಸ್ಕೃತಿಯ ಮೇಲೂ ಅಪಾರ ಗೌರವವನ್ನು ಹೊಂದಿದ್ದಾರೆ. ಅವರು ತಮ್ಮ ಬೇರುಗಳನ್ನು ಎಂದಿಗೂ ಮರೆಯದೆ, ಭಾರತವನ್ನು ತಮ್ಮ ಎರಡನೇ ತಾಯ್ನಾಡು ಎಂದು ಹೇಳಿಕೊಳ್ಳುತ್ತಾರೆ.

ನೌಕಾದಳದಲ್ಲಿ ಉಂಟಾದ ಪ್ರೇಮ

ಸುನೀತಾ ವಿಲಿಯಮ್ಸ್ ಅವರು ಮೈಕಲ್ ವಿಲಿಯಮ್ಸ್ ಅವರನ್ನು ವಿವಾಹವಾಗಿದ್ದಾರೆ. ಮೈಕಲ್ ವಿಲಿಯಮ್ಸ್ ಅವರು ಕೂಡ ಅಮೇರಿಕನ್ ನೌಕಾದಳದಲ್ಲಿ ಸೇವೆ ಸಲ್ಲಿಸಿದವರು. ಇವರಿಬ್ಬರ ಪ್ರೇಮಕಥೆ ಅಲ್ಲಿಂದಲೇ ಶುರುವಾಗುತ್ತೆ. ಗಗನಯಾತ್ರಿ ಆಗುವ ಮೊದಲು ಸುನೀತಾ ನೌಕಾದಳದಲ್ಲಿ ಪೈಲೆಟ್‌ ಆಗಿದ್ದರು. ಅಲ್ಲೇ ಆಫೀಸರ್‌ ಆಗಿದ್ದ ವಿಲಿಯಮ್ಸ್‌ ಪರಿಚಯವಾಗಿದೆ. ಅವರಿಬ್ಬರ ಸಮಾನ ಮನಸ್ಥಿತಿ ಇಬ್ಬರನ್ನೂ ಹತ್ತಿರ ತಂದಿದೆ. 1987ರಲ್ಲಿ ಈ ಇಬ್ಬರೂ ಪ್ರೇಮಕ್ಕೆ ಬೀಳುತ್ತಾರೆ. ಮುಂದೆ ಬಹಳ ಸಿಂಪಲ್‌ ಆಗಿ ಆಪ್ತರ ಮುಂದೆ ವಿವಾಹ ಜೀವನಕ್ಕೆ ಕಾಲಿಡುತ್ತಾರೆ. ಅಂತರಿಕ್ಷ ಮಿಷನ್‌ಗಳ ಸಮಯದಲ್ಲಿ ಪತಿಯ ಬೆಂಬಲ ಸುನೀತಾ ಅವರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ದಂಪತಿಗೆ ಮಕ್ಕಳಿಲ್ಲ, ಆದರೆ ಅವರು ಪ್ರಾಣಿಗಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದು, ವಿಶೇಷವಾಗಿ ತಮ್ಮ ನಾಯಿಗಳನ್ನು ಕುಟುಂಬದ ಸದಸ್ಯರಂತೆ ಕಾಣುತ್ತಾರೆ. ಅವರು ಗಗನಯಾತ್ರೆ ಮುಗಿಸಿ ವಾಪಾಸ್‌ ಬಂದಾಗ ನಾಯಿಗಳು ಅವರನ್ನು ಸ್ವಾಗತಿಸಿದ ರೀತಿ ಎಲ್ಲೆಡೆ ವೈರಲ್‌ ಆಗಿತ್ತು. ಸುನೀತಾ ಮೈಮೇಲೆ ಬಿದ್ದು, ಅಕ್ಕರೆಯಿಂದ ನೆಕ್ಕಿ ಒಡತಿಯನ್ನು ಸ್ವಾಗತಿಸಿದ್ದವು.

ಸುನೀತಾ ದಂಪತಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಯೋಚನೆ ಇತ್ತಾದರೂ, ತಮ್ಮ ಪ್ರೊಫೆಶನ್‌ಗೆ ಅದು ಅಷ್ಟಾಗಿ ಸರಿಬರದ ಕಾರಣ ಅವರು ಈ ನಿರ್ಧಾರದಿಂದ ಹಿಂದೆ ಸರಿದರು. ಹೀಗಾಗಿ ಸದ್ಯ ಅವರಿಗೆ ನಿಷ್ಕಲ್ಮಶ ಮನಸ್ಸಿನ ಶ್ವಾನಗಳೇ ಮಕ್ಕಳಾಗಿವೆ. ಅವರ ಕುಟುಂಬ ವಿಚಾರ ಇತ್ತೀಚಿನ ಭಾರತ ಭೇಟಿಯಲ್ಲಿ ಹೆಚ್ಚು ಜನರಿಗೆ ತಿಳಿಯಿತು.

ಅಂತರಿಕ್ಷಯಾತ್ರಿ ಸುನೀತಾ ವಿಲಿಯಮ್ಸ್ ಅವರು ಈಗಷ್ಟೇ ಕೇರಳದ ಕೋಝಿಕೋಡ್‌ಗೆ ಭೇಟಿ ನೀಡಿದುದು ವಿಜ್ಞಾನ ಪ್ರೇಮಿಗಳಿಗೆ ವಿಶೇಷ ಕ್ಷಣವಾಗಿತ್ತು. ಈ ಭೇಟಿಯ ವೇಳೆ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅಂತರಿಕ್ಷಯಾನ, ವಿಜ್ಞಾನ ಅಧ್ಯಯನ ಮತ್ತು ಕನಸುಗಳ ಮಹತ್ವದ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು. ಭಾರತೀಯ ಸಂಸ್ಕೃತಿ ಹಾಗೂ ಕೇರಳದ ಆತಿಥ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಹೆಣ್ಣುಮಕ್ಕಳು ವಿಜ್ಞಾನ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು. ಕೋಝಿಕೋಡ್‌ನ ನೈಸರ್ಗಿಕ ಸೌಂದರ್ಯ ಮತ್ತು ಜನರ ಸರಳತೆ ಅವರಿಗೆ ತುಂಬಾ ಇಷ್ಟವಾಯಿತು. ಈ ಭೇಟಿ ಯುವ ಪೀಳಿಗೆಗೆ ಹೊಸ ಉತ್ಸಾಹ ನೀಡಿತು.