ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ ಬಳಿಕ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಸ್ಪೇಸ್‌ಎಕ್ಸ್ ಡ್ರ್ಯಾಗನ್ ಗಗನನೌಕೆಯು ಫ್ಲೋರಿಡಾದ ಗಲ್ಫ್ ಆಫ್ ಮೆಕ್ಸಿಕೋ ಸಮುದ್ರದಲ್ಲಿ ಬಂದಿಳಿಯಿತು.
ಕೇಪ್ ಕೆನವೆರಲ್ (ಮಾ.20): 8 ದಿನದ ಕೆಲಸಕ್ಕೆಂದು ತೆರಳಿ ಬಳಿಕ ಅನಿವಾರ್ಯವಾಗಿ ಅಲ್ಲೇ ಸಿಕ್ಕ 9 ತಿಂಗಳಿನಿಂದ ಆತಂಕದ ದಿನಗಳನ್ನು ಎದುರಿಸಿದ್ದ ನಾಸಾದ ಗಗನಯಾತ್ರಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬುಧವಾರ ಸುರಕ್ಷಿತವಾಗಿ ಭೂಮಿಗೆ ವಾಪಸಾಗಿದ್ದಾರೆ.
ಈ ಮೂಲಕ ಸುನಿತಾ ವಿಲಿಯಮ್ಸ್ ಮತ್ತು ವಿಲ್‌ಮೋರ್ ಸುರಕ್ಷಿತವಾಗಿ ವಾಪಸಾಗಲಿ ಎಂಬ ಭಾರತೀಯರೂ ಸೇರಿ ಕೋಟ್ಯಂತರ ಬಾಹ್ಯಾಕಾಶ ಪ್ರೇಮಿಗಳ ಪ್ರಾರ್ಥನೆ, ವಿಜ್ಞಾನಿಗಳ ಪರಿಶ್ರಮ ಫಲಿಸಿದೆ. ಸುನಿತಾ ವಿಲಿಯಮ್ಸ್, ವಿಲ್‌ಮೋರ್ ಅವರ ಜತೆಗೆ ಅಮೆರಿಕದ ನಿಕ್ ಹೇಗ್ ಮತ್ತು ರಷ್ಯಾದ ಅಲೆಕ್ಸಾಂಡರ್ ಗೊರ್ಬುನೋವ್ ಅವರಿದ್ದ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಹೊರಟ 17 ಗಂಟೆಗಳ ಬಳಿಕ ಭೂ ವಾತಾವರಣ ಪ್ರವೇಶಿಸಿತು. ಬಳಿಕ ಫ್ಲೋರಿಡಾದ ಗಲ್ಫ್ ಆಫ್ ಮೆಕ್ಸಿಕೋ ಸಮುದ್ರದಲ್ಲಿ ಸುರಕ್ಷಿತವಾಗಿ ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3.27ಕ್ಕೆ ಬಂದಿಳಿಯಿತು.
ಸುದೀರ್ಘ ಅವಧಿಗೆ ಗುರುತ್ವಾಕರ್ಷಣೆ ರಹಿತ ಬಾಹ್ಯಾಕಾಶದಲ್ಲಿದ್ದ ಕಾರಣ ಸಹಜವಾಗಿ ನಡೆಯಲೂ ಆಗದ ಸ್ಥಿತಿಯಲ್ಲಿದ್ದರೂ ಸುನಿತಾ ವಿಲಿಯಮ್ಸ್ ಮತ್ತು ವಿಲ್‌ಮೋರೆ ಅವರು ಗಗನನೌಕೆಯಿಂದ ಹೊರಬರುತ್ತಿದ್ದಂತೆ ಸುತ್ತಮುತ್ತ ನೆರೆದಿದ್ದವರಿಗೆ ನಗೆಸೂಸಿ, ಕೈ ಬೀಸಿದರು. ಗಗನನೌಕೆಯಿಂದ ಹೊರಬಂದ ಗಗನಯಾತ್ರಿಗಳನ್ನು ಸ್ಟ್ರೆಚರ್ ಸಹಾಯದಿಂದ ನೇರವಾಗಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ:Sunita Williams Return to Earth: ಸುನೀತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾಯ್ತು? ಮುಂದೇನು?
5476 ಬಾರಿ ಭೂಮಿಗೆ ಸುತ್ತು
ಸುನಿತಾ ಮತ್ತು ವಿಲ್‌ಮೋರ್ ಅವರು 286 ದಿನಗಳನ್ನು ಬಾಹ್ಯಾಕಾಶ ಕೇಂದ್ರದಲ್ಲೇ ಕಳೆದರು. ಅವರು ಭೂಮಿಗೆ 5476 ಬಾರಿ ಸುತ್ತು ಬಂದಿದ್ದಲ್ಲದೆ, 121 ದಶಲಕ್ಷ ಮೈಲಿ(195 ದಶಲಕ್ಷ ಕಿ.ಮೀ.) ಪ್ರಯಾಣ ಮಾಡಿದ್ದಾರೆ. ಸುನಿತಾ ಮತ್ತು ವಿಲ್‌ಮೋರ್ ಅವರು 62 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ.
ಸುನಿತಾ ದಾಖಲೆ: ಅತಿ ಹೆಚ್ಚು ಕಾಲ ಬಾಹ್ಯಾಕಾಶ ನಡಿಗೆ ಮಾಡಿದ ಮಹಿಳಾ ಗಗನಯಾತ್ರಿ ಎಂಬ ದಾಖಲೆಯನ್ನು ಸುನಿತಾ ವಿಲಿಯಮ್ಸ್ ಬರೆದಿದ್ದಾರೆ. ಅಲ್ಲದೆ ಮೂರು ತಿಂಗಳ ಕಾಲ ಬಾಹ್ಯಾಕಾಶ ಕೇಂದ್ರದ ಕಮಾಂಡರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ಭರವಸೆ ನೀಡಿದ್ದೆವು, ಈಡೇರಿಸಿದ್ದೇವೆ: ಶ್ವೇತಭವನ
ವಾಷಿಂಗ್ಟನ್: ಭರವಸೆ ನೀಡಿದ್ದೆವು, ಭರವಸೆ ಈಡೇರಿಸಿದ್ದೇವೆ. ಇದು ಸುನಿತಾ ಮತ್ತು ಬುಚ್ ವಿಲ್ಮೋರ್ ಬುಧವಾರ ಸುರಕ್ಷಿತವಾಗಿ ಭೂಮಿಗೆ ಬಂದಿಳಿಯುತ್ತಲೇ, ಅಮೆರಿಕದ ಅಧ್ಯಕ್ಷೀಯ ಕಚೇರಿಯಾದ ಶ್ವೇತಭವನ ನೀಡಿದ ಪ್ರತಿಕ್ರಿಯೆ.
‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದಿದ್ದ ಗಗನಯಾತ್ರಿಗಳಾದ ಸುನಿತಾ ಮತ್ತು ಬುಚ್‌ರನ್ನು ರಕ್ಷಿಸುವ ಭರವಸೆ ನೀಡಿದ್ದರು. ಇದೀಗ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದಿದ್ದ ಯಾನಿಗಳು ಇಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಇದಕ್ಕಾಗಿ ಎಲಾನ್ ಮಸ್ಕ್, ಸ್ಪೇಸ್ ಎಕ್ಸ್ ಮತ್ತು ನಾಸಾಕ್ಕೆ ಅಭಿನಂದನೆಗಳು’ ಎಂದು ಶ್ವೇತಭವನ ಪ್ರತಿಕ್ರಿಯೆ ನೀಡಿದೆ.
ಇದನ್ನೂ ಓದಿ: ಕೇವಲ 8 ದಿನದ ಯಾನಕ್ಕೆ ಹೋಗಿ, ತಾಂತ್ರಿಕ ಸಮಸ್ಯೆಯಿಂದ 9 ತಿಂಗಳ ಬಾಹ್ಯಾಕಾಶ ವಾಸ ಬಳಿಕ ಸುನಿತಾ, ಸಹ ಗಗನಯಾತ್ರಿ ಭುವಿಗೆ!
ಸುನಿತಾ ಮರಳುವಲ್ಲಿ ಅಧ್ಯಕ್ಷ ಟ್ರಂಪ್, ಮಸ್ಕ್ ಮಹತ್ವದ ಪಾತ್ರ
ವಾಷಿಂಗ್ಟನ್: ಸುನಿತಾ ಮತ್ತು ಬುಚ್ ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಮರಳುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ಪೇಸ್ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹಿಂದಿನ ಅಧ್ಯಕ್ಷ ಬೈಡೆನ್ ಮತ್ತು ಮಸ್ಕ್ ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದ ಕಾರಣ ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದ ಯಾತ್ರಿಗಳನ್ನು ಕರೆತರಲು ಬೈಡೆನ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಾರಣ, ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲು ಹಾಲಿ ನಾಸಾದ ಬಳಿ ಯಾವುದೇ ನೌಕೆ ಇಲ್ಲದ ಕಾರಣ ಅದು ಪೂರ್ಣವಾಗಿ ಸ್ಪೇಸ್‌ಎಕ್ಸ್ ಅನ್ನು ಅವಲಂಬಿಸಿತ್ತು.ಈ ಹಿನ್ನೆಲೆಯಲ್ಲಿ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಂದರೆ 2025ರ ಜ.28ರಂದು ಸುನಿತಾ ಮತ್ತು ಬುಚ್‌ರನ್ನು ತ್ವರಿತವಾಗಿ ಭೂಮಿಗೆ ಕರೆತರಲು ಮಸ್ಕ್‌ಗೆ ಟ್ರಂಪ್ ಮನವಿ ಮಾಡಿದ್ದರು. ಅದರಂತೆ ನಡೆದುಕೊಂಡ ಮಸ್ಕ್, ಏಪ್ರಿಲ್ ವೇಳೆಗೆ ನಡೆಸಲು ಉದ್ದೇಶಿಸಿದ್ದ ಡ್ರ್ಯಾಗನ್ ನೌಕೆಯ ಉಡ್ಡಯನವನ್ನು ಒಂದು ತಿಂಗಳು ಹಿಂದೂಡಿದ್ದೂ ಅಲ್ಲದೆ ನಾಲ್ವರು ಗಗನಯಾತ್ರಿಗಳನ್ನು ಮಾ.19ರಂದೇ ಭೂಮಿಗೆ ಸುರಕ್ಷಿತವಾಗಿ ಕರೆತಂದಿದ್ದಾರೆ.
