ಸಮಾಜ ಸೇವಕಿ ಅಕ್ಕ ಅನು ಸೋಷಿಯಲ್ ಮೀಡಿಯಾದಲ್ಲೂ ಸಖತ್ ಫೇಮಸ್. ನೂರಾರು ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡುವ ಈ ಯುವತಿ ಇದೀಗ ಆಸ್ಪತ್ರೆ ಸೇರಿದ್ದಾರೆ.

ಅಕ್ಕ ಅನು!

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರೋರಿಗೆ ಈಕೆಯ ಹೆಸರು ಕೇಳಿದ ಕೂಡಲೇ ಮನಸ್ಸಿಗೆ ಬರೋ ಚಿತ್ರ ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಬಳೀತಿರೋ ಯುವತಿಯ ಚಿತ್ರ. ಈ ಯುವತಿ ಉತ್ತರ ಕರ್ನಾಟಕ ಮೂಲದವರು. ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಚಿಕ್ಕ ಬೇರಗಿ ಅನ್ನುವ ಗ್ರಾಮದವರು. ಒಂದು ಕಾಲದಲ್ಲಿ ಈ ಊರಲ್ಲಿ ಬಾಲ್ಯ ವಿವಾಹ ಸರ್ವೇ ಸಾಮಾನ್ಯವಾಗಿತ್ತು. ಹೆಚ್ಚಿನ ಹಳ್ಳಿಗಳಂತೆ ಇಲ್ಲಿಯೂ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿ ಬಿಡುತ್ತಿದ್ದರು. ಇದರಿಂದ ಲಕ್ಷಾಂತರ ಯುವತಿಯರ ಕನಸುಗಳು ಕಮರಿ ಅವರು ಚಿಕ್ಕ ವಯಸ್ಸಿಗೇ ಜೀವನೋತ್ಸಾಹ ಕಳೆದುಕೊಳ್ಳುತ್ತಿದ್ದರು. ಇಂಥಾ ವಾತಾವರಣದಲ್ಲಿ ಬೆಳೆದ ಅನುವಿಗೆ ದೊಡ್ಡ ದೊಡ್ಡ ಕನಸು. ಸಮಾಜವನ್ನು ಉದ್ಧಾರ ಮಾಡುವ ಕನಸು. ನೊಂದವರ ಪರ ನಿಲ್ಲುವ ಕನಸು.

ಎಲ್ಲ ವಿರೋಧದ ನಡುವೆಯೂ ಒಂದು ದಿನ ಮನೆಯಿಂದ ಹೊರಬಿದ್ದ ಈ ಯುವತಿ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಮುಂದಾಗ್ತಾರೆ. ಮನೆಯವರ ಬೆಂಬಲವಿಲ್ಲದೇ ಕಾಲೇಜು ಶಿಕ್ಷಣ ಪಡೆಯುತ್ತ ಸಮಾಜ ಸೇವೆಯನ್ನೂ ಮಾಡುತ್ತಾರೆ.

ಇದೀಗ ಕಾಲೇಜು ಶಿಕ್ಷಣ ಮುಗಿದ ಬಳಿಕ ತಮ್ಮಿಡೀ ಬದುಕನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ತಮ್ಮದೇ ಆದ ಯಂಗ್‌ ತಂಡವೊಂದನ್ನು ಕಟ್ಟಿಕೊಂಡು, ರಾಜ್ಯದಾದ್ಯಂತ ಸಂಚರಿಸಿ ಸರ್ಕಾರಿ ಶಾಲೆಗಳನ್ನು ಅಂದಗಾಣಿಸುವ ಮತ್ತು ಕನ್ನಡ ಶಾಲೆ ಉಳಿಸಿ ಅಭಿಯಾನಕ್ಕೆ ಮುಂದಾಗಿದ್ದಾರೆ. ಸಮಾಜ ಸೇವೆ ವಿಚಾರದಲ್ಲಿ ತಮ್ಮ ಕೈಲಾದ ಕೆಲಸವನ್ನು ಈ ತಂಡದೊಟ್ಟಿಗೆ ಮಾಡುತ್ತಿದ್ದಾರೆ.

ಬರೀ 20 ಸಾವಿರ ಬಂಡವಾಳದೊಂದಿಗೆ ಮನೆಯಿಂದಲೇ ಉದ್ಯಮ ಪ್ರಾರಂಭಿಸಿದ ಈಕೆ, ಇಂದು 6000 ಕೋಟಿ ರೂ. ಕಂಪನಿ ಒಡತಿ

ಈವರೆಗೂ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನೂರಾರು ಶಾಲೆಗಳಿಗೆ ಸುಣ್ಣ ಬಣ್ಣ ಬಳಿದಿದ್ದಾರೆ ಅಕ್ಕ ಅನು ಮತ್ತವರ ತಂಡ. ಬೀದರ್‌ನಿಂದ ದಕ್ಷಿಣ ಕರ್ನಾಟಕದ ಹಲವು ಸರ್ಕಾರಿ ಶಾಲೆಗಳಿಗೆ (Government school) ಬಣ್ಣ ಬಳಿದಿದ್ದಾರೆ. ಆದರೆ, ಇದೀಗ ಇದೇ ಯುವತಿ ಅನಾರೋಗ್ಯದಿಂದ ಆಸ್ಪತ್ರೆ ಪಾಲಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಜನಮನ್ನಣೆ ಗಳಿಸಿರುವ ಅಕ್ಕ ಅನು, ಫೇಸ್ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲ! ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್‌ (followers) ಹೊಂದಿದ್ದಾರೆ. ಆದರೆ, ಇದೀಗ ಇದೇ ಅಕ್ಕ ಅನು, ತಮ್ಮ ಸಮಾಜ ಸೇವೆಯ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅಂದರೆ, ಶಾಲೆಗೆ ಬಣ್ಣ ಬಳಿಯುವ ಕೆಲಸವನ್ನು ಈ ತಂಡ ತಾತ್ಕಾಲಿಕವಾಗಿ ನಿಲ್ಲಿಸಿದೆ. ಅದಕ್ಕೆ ಕಾರಣ ಅಕ್ಕ ಅನು ಅನಾರೋಗ್ಯ!

ಕಳೆದ ಕೆಲ ದಿನಗಳಿಂದ ಅಕ್ಕ ಅನು ಅವರ ಆರೋಗ್ಯ ಕೈಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ‌ ಸಂಚಾರಕ್ಕೆ ಬ್ರೇಕ್‌ ಹಾಕಿದ್ದಾರೆ. ಈ ನಡುವೆ ಸಾಕಷ್ಟು ಫೋನ್‌ ಕಾಲ್‌ಗಳು (Phone calls) ಇವರಿಗೆ ಬಂದಿವೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿರುವುದಾಗಿ ಎಲ್ಲರಿಗೂ ಫೋನ್‌ ಮೂಲಕ ಹೇಳಿಯೂ ಸುಸ್ತಾಗಿದ್ದಾರೆ. ಜತೆಗೆ ನಿಮ್ಮ ಶಾಲೆಗಳ ಕೆಲಸವನ್ನು ನೀವೇ ಗ್ರಾಮಸ್ಥರು ಸೇರಿ ಮಾಡಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾ (social media) ದಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ.

2023ರಲ್ಲಿ ಮಹಿಳೆಯರು ಮಾಡಿರೋ ಸಾಧನೆ ಒಂದೆರಡಲ್ಲ, ಇಲ್ಲಿದೆ ಹಿನ್ನೋಟ

'ಆರೋಗ್ಯ ಸಮಸ್ಯೆಯಿಂದ ನಾವು ಕನ್ನಡ ಶಾಲೆ ಉಳಿಸಿ ಅಭಿಯಾನ ಹಾಗೂ ಸಾಮಾಜಿಕ ಕಾರ್ಯಗಳಿಂದ ದೂರ ಉಳಿಯಬೇಕಾಯಿತು. ಸುಮಾರು ಜನ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ವಿದ್ಯಾರ್ಥಿಗಳ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವವರು ನನಗೆ ಕರೆ ಮಾಡ್ತಾನೆ ಇದ್ದೀರಿ. ನಾನು ಎಲ್ಲರಿಗೂ ಕೆಲಸ ಬಿಟ್ಟಿದೀವಿ ಅನಾರೋಗ್ಯ ಅಂತ ಪ್ರತಿಯೊಬ್ಬರಿಗೂ ಹೇಳಲು ಕಷ್ಟವಾಗುತ್ತಿದೆ. ಆದ್ದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ವಿಷಯವನ್ನು ಹೇಳಲೇ ಬೇಕಾಯಿತು.

ಮುಂದೊಂದು ದಿನ ನಮ್ಮ ಆರೋಗ್ಯ ಹಾಗೂ ನಮ್ಮ ಜೀವನ ಉತ್ತಮ ಮಟ್ಟದಲ್ಲಿ ಸಾಗಿದ್ರೆ ಖಂಡಿತ ನಾವೂ ಹಾಗೂ ನಮ್ಮ ತಂಡ ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲವೂ ಸರಿಹೊಂದಿದರೆ ನೋಡೋಣ. ಆಗಂತ ನಿಮ್ಮ ಊರಿನ ಶಾಲೆಗಳಿಗೆ ನಾವೇ ಬರ್ತೀವಿ ಅಂತ ಭಾವಿಸಬೇಡಿ. ಯಾಕೆಂದ್ರೆ ಈಗಾಗಲೇ ನಮ್ಮ ಲಿಸ್ಟ್ ನಲ್ಲಿ 75ಕ್ಕೂ ಹೆಚ್ಚು ಶಾಲೆಗಳು ಪೆಂಡಿಂಗ್ ನಲ್ಲಿ ಇವೆ. ದಯವಿಟ್ಟು ನಿಮ್ಮ ಊರಿನ ಸಮಸ್ಯೆಗಳಿಗೆ ಕೆಲಸಗಳಿಗೆ ನಾವೇ ಬಂದು ಕೆಲಸ ಮಾಡಬೇಕು ಅಂತ ಏನಿಲ್ಲ. ನಿಮ್ಮ ಊರಿನ ಶಾಲೆಗಳ ಕೆಲ್ಸಗಳನ್ನ ನೀವೇ ಮುಗಿಸಿಕೊಂಡ್ರೆ ತುಂಬಾನೇ ಒಳ್ಳೇದು' ಎಂದು ಪೋಸ್ಟ್ ಮಾಡಿದ್ದಾರೆ.

View post on Instagram

ಅನು ಶೀಘ್ರ ಗುಣಮುಖರಾಗಲಿ ಎಂದು ನೂರಾರು ಮಂದಿ ಹಾರೈಸಿದ್ದಾರೆ.