ಎಂಜಿನಿಯರಿಂಗ್ ಪದವಿ ಪಡೆದಿದ್ದ ಮಯೂರಿ, 5 ಲಕ್ಷ ರೂಪಾಯಿ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನು ತನ್ನ ಮಗಳಿಗಾಗಿ ತಿರಸ್ಕರಿಸಿದರು. ನಂತರ ಸಣ್ಣದಾಗಿ ಜ್ಯೂಸ್ ವ್ಯಾಪಾರ ಆರಂಭಿಸಿದ ಅವರು, ಇಂದು ವಾರ್ಷಿಕ 50 ಲಕ್ಷ ರೂಪಾಯಿ ಆದಾಯ ಗಳಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿದ್ದಾರೆ.

ನೀವು ಎಂಜಿನಿಯರಿಂಗ್ ಪದವಿ ಪಡೆದಿದ್ದರೆ, ವರ್ಷಕ್ಕೆ 5 ಲಕ್ಷ ರೂಪಾಯಿ ಮೌಲ್ಯದ ಕಾರ್ಪೊರೇಟ್ ಉದ್ಯೋಗದ ಆಫರ್ ಮತ್ತು ಸಾಂಪ್ರದಾಯಿಕ ವೃತ್ತಿಜೀವನವನ್ನು ನಿರ್ಮಿಸುವ ಅವಕಾಶವನ್ನು ಹೊಂದಿದ್ದರೆ ನೀವು ಏನು ಮಾಡುತ್ತೀರಿ?

ಹೆಚ್ಚಿನ ಜನರಿಗೆ, ಅದರಲ್ಲಿಯೂ ಜೆನ್​ ಜೀ ಗಳಿಗೆ ಉತ್ತರ ಸರಳವಾಗಿರುತ್ತದೆ: ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವುದು. ಏಕೆಂದರೆ ಅಮ್ಮ ಮುಂದಿನ ವರ್ಷ ಆಗ್ಬೋದು. ಉದ್ಯೋಗ ಮತ್ತೆ ಸಿಗಲ್ವಲ್ಲಾ? ಇನ್ನು ಅಮ್ಮ ಆಗಿದ್ದರೆ, ಮಕ್ಕಳನ್ನು ಎಲ್ಲೋ ಬಿಟ್ಟರಾಯಿತು, ಅಮ್ಮನನ್ನೋ, ಅತ್ತೆಯನ್ನೋ, ಕೆಲಸದಾಕೆಯನ್ನೋ ಕರೆಸಿಕೊಂಡರಾಯಿತು. ಒಮ್ಮೆ ಹೇಗೋ ಕೆಲಸಕ್ಕೆ ಸೇರಿಕೊಂಡರೆ ಆಮೇಲೆ ನೋಡಿಕೊಂಡರಾಯ್ತು ಎನ್ನುವ ಮನೋಭಾವ. ಎಲ್ಲೆಲ್ಲೂ ಉದ್ಯೋಗಕ್ಕಾಗಿ ಹಾತೊರೆಯುತ್ತಿರುವಾಗ, ಸಿಕ್ಕ ಉದ್ಯೋಗ ಬಿಟ್ಟುಕೊಳ್ಳುವುದೇ, ಛೇ ಛೇ ಎಲ್ಲಾದರೂ ಉಂಟೆ ಎನ್ನುವವರೇ ಹೆಚ್ಚು. ಆದರೆ ಇದನ್ನು ಹೊರತುಪಡಿಸಿ, ಉದ್ಯೋಗಕ್ಕಿಂತ ತಾಯ್ತತನವನ್ನು ಅನುಭವಿಸುವುದೇ ಮೇಲು ಎಂದುಕೊಂಡು 5 ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು ತಾಯ್ತನವೇ ಬೇಕೆಂದ ಯುವತಿಯೊಬ್ಬರು ಈಗ 50 ಲಕ್ಷ ರೂಪಾಯಿ ದುಡಿಯುತ್ತಿದ್ದಾರೆ! ಅವರ ಸ್ಟೋರಿ ಈಗ ವೈರಲ್​ ಆಗಿದೆ.

ಮಹಾರಾಷ್ಟ್ರದ ನಿಫಡ್ ತಾಲ್ಲೂಕಿನ ಸೋಂಗಾಂವ್‌ ಮಯೂರಿ ಸ್ಟೋರಿ ಈಗ ಸಕತ್​ ವೈರಲ್​ ಆಗಿದೆ. ಇವರಿಗೆ ಪುಣೆಯಲ್ಲಿ ಟೆಕಿ ಹುದ್ದೆ ಸಿಕ್ಕಿತು. ಪುಣೆಗೆ ಶಿಫ್ಟ್​ ಆಗಬೇಕಿತ್ತು. ಅವರ ಎರಡು ವರ್ಷದ ಮಗಳನ್ನು ನೋಡಿಕೊಳ್ಳಲು ವ್ಯವಸ್ಥೆಯೂ ಆಗಿತ್ತು. ಆದರೆ, ಮಯೂರಿ ಪುಣೆಗೆ ಮಗಳೊಂದಿಗೆ ಶಿಫ್ಟ್​ ಆಗುವುದು ಬೇಡ, ತಾಯ್ತನವನ್ನು ಅನುಭವಿಸುವುದೇ ಲೇಸು ಎಂದುಕೊಂಡರು. ಎಷ್ಟೋ ದುಡಿಯುವ ಮಹಿಳೆಯರು ಉದ್ಯೋಗದ ಹಿಂದೆ ಹೋಗಿ ಮಕ್ಕಳ ಬೆಳವಣಿಗೆಯನ್ನೇ ನೋಡದ ಕಹಿ ಸತ್ಯವಿದೆ. ಇದು ನಗರ ಪ್ರದೇಶಗಳ ಬಹುತೇಕ ಮಹಿಳೆಯರ ಪಾಡು, ಗೋಳು. ಸಿಕ್ಕ ಉದ್ಯೋಗ ಬಿಟ್ಟರೆ, ಮತ್ತೆ ಸಿಗದಿದ್ದರೆ ಎನ್ನುವ ಭಯ. ಉದ್ಯೋಗ ಅನಿವಾರ್ಯ, ಇದೇ ಕಾರಣಕ್ಕೆ ಮಕ್ಕಳನ್ನು ಹೇಗೋ ಅಡ್ಜಸ್ಟ್​ ಮಾಡಿ, ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಕಾರಣ ಮಯೂರಿ ಅವರ ಸ್ಟೋರಿ ಈ ಪರಿ ವೈರಲ್​ ಆಗ್ತಿರೋದು.

ಮಯೂರಿ ಅವರು, ಉದ್ಯೋಗವನ್ನು ರಿಜೆಕ್ಟ್​ ಮಾಡಿದರು ನಿಜ. ಆದರೆ ಹಣ ಅನಿವಾರ್ಯವಾಗಿತ್ತು. ಅದಕ್ಕಾಗಿ, ಬಿಜಿನೆಸ್​ನ ಯಾವುದೇ ಅನುಭವವಿಲ್ಲದಿದ್ದರೂ ಆದದ್ದು ಆಗಲಿ ಎಂದು ಸಣ್ಣ ಜ್ಯೂಸ್ ಔಟ್‌ಲೆಟ್ ಅನ್ನು ಪ್ರಾರಂಭಿಸಿದರು. ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಆ ನಿರ್ಧಾರವು ಅವರ ಜೀವನವನ್ನು ಪರಿವರ್ತಿಸಿದೆ. ಇಂದು, ಅವರ ವ್ಯವಹಾರವು ಸುಮಾರು 80,000 ರೂ.ಗಳ ನಿವ್ವಳ ಮಾಸಿಕ ಲಾಭವನ್ನು ಗಳಿಸುತ್ತದೆ. ವಾರ್ಷಿಕ ಆದಾಯವು 50 ಲಕ್ಷ ರೂ.ಗಳ ಹತ್ತಿರದಲ್ಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಮಯೂರಿ ಸ್ಟೋರಿ

ಅವರ ಪ್ರಯಾಣವು ಕೆಲವೊಮ್ಮೆ ಯಶಸ್ಸು ಸುರಕ್ಷಿತ ಆಯ್ಕೆಯನ್ನು ಆರಿಸುವುದರಿಂದಲ್ಲ, ಆದರೆ ನಿಮ್ಮ ಆದ್ಯತೆಗಳಿಗೆ ಹೊಂದಿಕೆಯಾಗುವದನ್ನು ಆರಿಸುವುದರಿಂದ ಬರುತ್ತದೆ ಎಂದು ತೋರಿಸುತ್ತದೆ. ಮಯೂರಿ ಮಹಾರಾಷ್ಟ್ರದ ನಿಫಡ್ ತಾಲ್ಲೂಕಿನ ಸೋಂಗಾಂವ್‌ನಲ್ಲಿ ಬೆಳೆದರು ಮತ್ತು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದರು. ಅವರು ಎಲೆಕ್ಟ್ರಾನಿಕ್ಸ್‌ನಲ್ಲಿ ಬಿ.ಇ. ಪೂರ್ಣಗೊಳಿಸಿದರು ಮತ್ತು ತಮ್ಮ ವೃತ್ತಿಪರ ವೃತ್ತಿಜೀವನವನ್ನು ನಿರ್ಮಿಸಲು ಪ್ರಾರಂಭಿಸಿದರು.

ಉದ್ಯೋಗ ತೊರೆದವರಿಗೆ ಪ್ರೇರಣೆ

ಎಂಜಿನಿಯರಿಂಗ್ ಮುಗಿಸಿದ ಕೂಡಲೇ ಅವರು ವಿವಾಹವಾದರು. ನಂತರ, ಅವರು ತಾಯಿಯಾದರು, ಅವರ ಜೀವನದಲ್ಲಿ ಹೊಸ ಜವಾಬ್ದಾರಿಗಳು ಮತ್ತು ಹೊಸ ಆದ್ಯತೆಗಳನ್ನು ತಂದರು. ತನ್ನ ಕೌಶಲ್ಯಗಳನ್ನು ಸುಧಾರಿಸಲು ನಿರ್ಧರಿಸಿದ ಅವರು, ಕೋರ್ಸ್ ಅನ್ನು ಸಹ ಪೂರ್ಣಗೊಳಿಸಿದರು. ಅವರ ಅರ್ಹತೆಗೆ ತಕ್ಕಂತೆ ಉದ್ಯೋಗವೂ ಸಿಕ್ಕಿತು. ಆದರೆ ತಾಯ್ತನದ ಸಂಪೂರ್ಣ ಅನುಭವ ಬೇಕು ಎನ್ನುವ ಕಾರಣಕ್ಕೆ ಉದ್ಯೋಗ ಬಿಟ್ಟರು. ಹೀಗೆ ಮಕ್ಕಳಿಗಾಗಿ ಉದ್ಯೋಗ ಬಿಟ್ಟ ಮಹಿಳೆಯರು ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ಏನೇನೋ ಕಾರಣಗಳು ಇರುತ್ತವೆ. ಆದರೆ, ದುಡಿಮೆ ಅನಿವಾರ್ಯವಾದಾಗ ಇಂಥದ್ದೊಂದು ಸಣ್ಣ ಪ್ರಯತ್ನವೂ ದೊಡ್ಡ ಮಟ್ಟಿನ ಯಶಸ್ಸು ತಂದುಕೊಡಬಹುದು ಎನ್ನುವ ಕಾರಣಕ್ಕೆ ಮಯೂರಿ ಸ್ಟೋರಿ ಸಕತ್​ ವೈರಲ್​ ಆಗುತ್ತಿದೆ.