ಬೆಂಗಳೂರಿನಲ್ಲಿ ಜನದಟ್ಟಣೆಯಿದ್ದ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬಳು ಕಂಡಕ್ಟರ್ ಬ್ಯಾಗ್‌ ಅನ್ನೇ ಕದ್ದಿದ್ದಾಳೆ. ಆದರೆ, ಕಂಡಕ್ಟರ್ ಸಮಯಪ್ರಜ್ಞೆಯಿಂದ ಬಸ್‌ನ ಬಾಗಿಲು ಮುಚ್ಚಿಸಿ, ಕಳ್ಳಿಯನ್ನು ಹಿಡಿದಿದ್ದಾರೆ. ತಮಿಳುನಾಡು ಮೂಲದ ಈ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ಬೆಂಗಳೂರು: ಬಸ್​ಗಳಲ್ಲಿ, ಟ್ರೈನ್​ಗಳಲ್ಲಿ ಕಳ್ಳರಿಗಿಂತಲೂ ಕಳ್ಳಿಯರ ಹಾವಳಿ ಸಿಕ್ಕಾಪಟ್ಟೆ ಆಗುತ್ತಿದೆ. ಅದರಲ್ಲಿಯೂ ಬಸ್​​ ರಶ್​ ಇದ್ದರಂತೂ ಮುಗಿದೇ ಹೋಯ್ತು. ಮಹಿಳೆಯರು ಎನ್ನುವ ಕಾರಣಕ್ಕೆ ಯಾರಿಗೂ ಹೆಚ್ಚು ಡೌಟ್​ ಬರಲ್ಲ ಎನ್ನುವ ಕಾರಣಕ್ಕೆ ಕಳ್ಳಿಯರ ಕೈಚಳಕ ಹೆಚ್ಚಾಗುತ್ತಲೇ ಇದೆ. ಇದೀಗ ಜನರು ಡಿಜಿಟಲ್​ ವ್ಯವಹಾರ ಮಾಡುವ ಕಾರಣದಿಂದ ಪರ್ಸ್​ ಎಗರಿಸಿದ್ರೂ ಪ್ರಯೋಜನ ಇಲ್ಲ ಎಂದುಕೊಂಡ ಕಳ್ಳಿಯೊಬ್ಬಳು ಬಿಎಂಟಿಸಿ ಬಸ್​ ಕಂಡಕ್ಟರ್​ ಪರ್ಸ್​ ಅನ್ನೇ ಎಗರಿಸಿ ಸಿಕ್ಕಿಬಿದ್ದಿರುವ ಶಾಕಿಂಗ್​ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಿಎಂಟಿಸಿ ಬಸ್‍ ನಂಬರ್ KA-57 F 6331 ನಲ್ಲಿ ಈ ಘಟನೆ ನಡೆದಿದೆ. ಬಸ್​ ರಶ್​ ಇದ್ದ ಕಾರಣ, ಈ ಕಳ್ಳಿ, ಆ ಬಸ್​ ಹತ್ತಿದ್ದಾಳೆ. ಆ ಬಳಿಕ, ಬೇರೆಯವರ ಪರ್ಸ್​ ಕದ್ದರೆ ಪ್ರಯೋಜನ ಇಲ್ಲ ಎಂದುಕೊಂಡು, ಚಾಣಾಕ್ಷತನದಿಂದ ಬಸ್​ ಕಂಡಕ್ಟರ್ ಬ್ಯಾಗ್‌ ಎಗರಿಸಿದ್ದಾಳೆ. ಅದು ಯಾರಿಗೂ ಗೊತ್ತಾಗಬಾರದು ಎಂದು ಅದರಲ್ಲಿ ಇದ್ದ ಟಿಕೆಟ್​ ಮತ್ತು ಬ್ಯಾಗ್​ ಅನ್ನು ಮೆಲ್ಲನೇ ತಾನು ತಂದಿದ್ದ ಬ್ಯಾಗ್​ನಲ್ಲಿ ಅಡಗಿಸಿಟ್ಟುಕೊಂಡಿದ್ದಾಳೆ. ಆದರೆ ಪಾಪ ಅವಳಿಗೆ ಅಲ್ಲಿದ್ದ ಸಿಸಿಟಿವಿಯಲ್ಲಿ ಎಲ್ಲವೂ ರೆಕಾರ್ಡ್​ ಆಗಿರುತ್ತದೆ ಎನ್ನುವುದು ತಿಳಿದೇ ಇರಲಿಲ್ಲ.

ಸಿಕ್ಕಿಬಿದ್ದ ಕಳ್ಳಿ

ಕೊನೆಗೆ ಲಗುಬಗೆಯಿಂದ ಮುಂದಿನ ಸ್ಟಾಪ್​ನಲ್ಲಿಯೇ ಇಳಿಯುವ ನಿರ್ಧಾರ ಮಾಡಿದ್ದಾಳೆ. ಆದರೆ ಅಷ್ಟರಲ್ಲಿಯೇ ಕಂಡಕ್ಟರ್​ ಅವರಿಗೆ ಬ್ಯಾಗ್​ ಕಳುವು ಆಗಿರುವುದು ತಿಳಿದಿದೆ. ಕೂಡಲೇ ಬಸ್‍‌ನ ಡೋರ್ ಕ್ಲೋಸ್ ಮಾಡಿಸಿದ್ದಾರೆ. ಮಹಿಳೆಗೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಆದರೂ ಅಮಾಯಕಿಯಂತೆ ಏನೂ ಗೊತ್ತಿಲ್ಲದಂತೆ ನಟಿಸಿರುವ ಕಳ್ಳಿ, ಡೋರ್​ ಓಪನ್​ ಮಾಡುವಂತೆ ಡ್ರೈವರ್​ಗೆ ಅಂಗಲಾಚಿದ್ದಾಳೆ. ನಾನು ಏನೂ ಕದ್ದಿಲ್ಲ ಎಂದಿದ್ದಾಳೆ. ಕೂಡಲೇ ಡೋರ್​ ಓಪನ್ ಮಾಡಬೇಡಿ, ಪೊಲೀಸರನ್ನು ಕರೆಯಿಸಿ ಎಂದು ಕಂಡಕ್ಟರ್​ ಹೇಳಿದಾಗ, ಅಲ್ಲಿ ಲೇಡಿ ಆಫೀಸರ್​ ಅನ್ನು ಕರೆಸಲಾಗಿದೆ.

ತಮಿಳುನಾಡಿನ ಮಹಿಳೆ

ಕೊನೆಗೆ ಬ್ಯಾಗ್​ ಚೆಕ್​ ಮಾಡಿದಾಗ, ಆಕೆಯ ಬ್ಯಾಗ್​ ಒಳಗೆ ಕಂಡಕ್ಟರ್​ ಬ್ಯಾಗ್​ ಸಿಕ್ಕಿದೆ. ಆದರೂ ತನ್ನನ್ನು ತಾನು ಪ್ರೂವ್​ ಮಾಡಿಕೊಳ್ಳಲು ಇದು ಹೇಗೆ ಬಂತೋ ಗೊತ್ತಿಲ್ಲ. ಈ ಬ್ಯಾಗ್​ನಲ್ಲಿ ಏನೂ ಇಲ್ಲ ನೋಡಿ ಎಂದು ಕಂಡಕ್ಟರ್​ ಬ್ಯಾಗ್​ ತೋರಿಸಿದಾಗ, ಅದರಲ್ಲಿ ಇರುವ ಎಲ್ಲಾ ದುಡ್ಡು ನಾಪತ್ತೆಯಾಗಿರುವುದು ತಿಳಿದಿದೆ. ಕೂಡಲೇ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಈಕೆ ತಮಿಳುನಾಡಿನವಳು ಎಂದು ಹೇಳಲಾಗುತ್ತಿದೆ. ಇದರ ವಿಡಿಯೋ ವೈರಲ್​ ಆಗುತ್ತಿದೆ.