Asianet Suvarna News Asianet Suvarna News

ಹೆಣ್ಣಿನ ಮದ್ವೆಗೆ ವಯಸ್ಸಲ್ಲ ಮನಸ್ಸು ಮುಖ್ಯ; ಪೆಪ್ಸಿ ಜಾಹೀರಾತಿನಲ್ಲಿ ಸಮಂತಾ

ಹೆಣ್ಣು ಮಕ್ಕಳು ಹೀಗೆಯೇ ಇರಬೇಕು, ಹೀಗೆಯೇ ವರ್ತಿಸಬೇಕು, ಇಂತಿಷ್ಟೇ ವಯಸ್ಸಲ್ಲಿ ಮದುವೆಯಾಗಬೇಕು ಅನ್ನೋ ಕಟ್ಟುಪಾಡು ಸಮಾಜದಲ್ಲಿ ಹಲವಾರು ವರ್ಷಗಳಿಂದಲೂ ಇದೆ. ಇತ್ತೀಚಿನ ಪೆಪ್ಸಿ ಜಾಹೀರಾತಿನಲ್ಲಿ ನಟಿ ಸಮಂತಾ ರುತು ಪ್ರಭು ಇದೆಲ್ಲದರ ವಿರುದ್ಧ ಮಾತನಾಡಿದ್ದಾರೆ. ರೈಸ್ ಅಪ್‌ ಬೇಬಿ ಎಂದು ಕರೆ ನೀಡಿದ್ದಾರೆ.

Rise Up Baby, Samantha Ruth Prabhu Cheers Up Women In A New Ad, Watch Video Vin
Author
First Published Apr 28, 2023, 3:18 PM IST | Last Updated Apr 28, 2023, 3:40 PM IST

ಸಮಾಜ ಹೆಣ್ಣುಮಕ್ಕಳಿಗೆ ಕಟ್ಟುಪಾಡು ವಿಧಿಸುವುದು ಹೊಸತೇನಲ್ಲ. ಆಕೆಯ ನಡೆ, ನುಡಿ ಎಲ್ಲವನ್ನೂ ಪ್ರಶ್ನೆ ಮಾಡಲಾಗುತ್ತದೆ. ಹಾಗೆಲ್ಲಾ ಇರಬಾರದು, ಹೀಗೆಯೇ ಇರಬೇಕು ಎಂಬ ಕಟ್ಟಳೆಯನ್ನು ಸಹ ವಿಧಿಸಲಾಗುತ್ತದೆ. ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿಯೇ ಹಿರಿಯರು ಹೀಗೆ ಬುದ್ಧಿ ಮಾತುಗಳನ್ನು ಹೇಳಿಕೊಂಡು ಬರುತ್ತಾರೆ. ನೀನು ಹುಡುಗಿ, ಕತ್ತಲಾಗೋ ಮುಂಚೆ ಮನೆ ಸೇರಬೇಕು, ದೊಡ್ಡ ದನಿಯಲ್ಲಿ ಮಾತನಾಡಬಾರದು, ನಗಬಾರದು, ಕೆಲಸಕ್ಕೆ ಹೋಗೋ ಅಗತ್ಯವಿಲ್ಲ, ಬೇಗ ಮದುವೆಯಾಗಬೇಕು, ಗಂಡನ ಮನೆಯೇ ನಿನಗೆ ಸರ್ವಸ್ವ ಎಂದೆಲ್ಲಾ ಹೇಳುತ್ತಾರೆ. ಬಹುತೇಕ ಹೆಣ್ಣುಮಕ್ಕಳು ತಮಗೆ ಇಷ್ಟವಿಲ್ಲದಿದ್ದರೂ ಹೀಗೆಯೇ ಬೆಳೆಯುತ್ತಾರೆ. 

ಜಾಹೀರಾತಿನಲ್ಲಿ ಹೆಣ್ಣುಮಕ್ಕಳ ಸಬಲೀಕರಣದ ಬಗ್ಗೆ ಮಾತನಾಡಿದ ಸ್ಯಾಮ್
ಹೆಣ್ಣುಮಕ್ಕಳು ಬೇಗ ಮದುವೆ (Marriage)ಯಾಗಬೇಕು ಅನ್ನೋ ಹಿರಿಯರ ಜಿದ್ದಿಗೆ ಅದೆಷ್ಟೋ ಹೆಣ್ಣುಮಕ್ಕಳ ಉನ್ನತ ವಿದ್ಯಾಭ್ಯಾಸ, ಮೆಚ್ಚಿನ ಉದ್ಯೋಗದ (Job) ಕನಸು ನುಚ್ಚು ನೂರಾಗುತ್ತದೆ. ಅಕಸ್ಮಾತ್‌ ಹೆಣ್ಣು ಮಕ್ಕಳು ಬೇಗ ಮದುವೆಯಾಗದೆ ಉದ್ಯೋಗಕ್ಕೆ ಹೋದರೆ ಅವರನ್ನು ವಿಚಿತ್ರವಾಗಿ ನೋಡುತ್ತಾರೆ. ಅದರಲ್ಲೂ ರಾತ್ರಿ ಪಾಳಿ, ತಡರಾತ್ರಿಯಲ್ಲಿ ಕೆಲಸ ಮಾಡುವವರನ್ನು ಕೆಟ್ಟ ದೃಷ್ಟಿಯಲ್ಲಿಯೇ ನೋಡುತ್ತಾರೆ. ಸಮಾಜದ ಚಿಂತನೆಗಳು ಅಷ್ಟರಮಟ್ಟಿಗೆ ಕೆಟ್ಟದಾಗಿ ಹೋಗಿವೆ. ಹೆಣ್ಣನ್ನು (Woman) ಒಂದು ಚೌಕಟ್ಟಿಗಷ್ಟೇ ಸೀಮಿತವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಿರುವಾಗ ಬಹುಭಾಷಾ ನಟಿ ಸಮಂತಾ ರುತುಪ್ರಭು ತಮ್ಮ ಹೊಸ ಜಾಹೀರಾತಿನಲ್ಲಿ ಹೆಣ್ಣುಮಕ್ಕಳ ಸಬಲೀಕರಣದ ಬಗ್ಗೆ ಮಾತನಾಡಿದ್ದಾರೆ.

Late Marriage Benefits: ವಯಸ್ಸು 30 ಆದರೂ ಮದುವೆ ಆಗಿಲ್ವಾ? ಚಿಂತೆ ಬಿಟ್ಹಾಕಿ!

ಶಾಕುಂತಲಂ ಸೋತಿದ್ದರೂ ಸಮಂತಾ ತಮ್ಮ ಉಳಿದ ಪ್ರಾಜೆಕ್ಟ್‌ಗಳಲ್ಲಿ ಸಾಕಷ್ಟು ಬಿಝಿಯಾಗಿದ್ದಾರೆ. ಹಲವು ಚಿತ್ರಗಳು, ಜಾಹೀರಾತಿನಲ್ಲಿ (Advertisement) ಭಾಗಿಯಾಗುತ್ತಿದ್ದಾರೆ. ಹಾಗೆಯೇ ಇತ್ತೀಚಿಗೆ ಸಮಂತಾ ರುತು ಪ್ರಭು ಮಾಡಿರುವ ಪೆಪ್ಸಿ ಜಾಹೀರಾತು ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.

ಮದುವೆ ಮನೆಯಲ್ಲಿ ವಧು ಸಿದ್ಧವಾಗಿರುವುದರ ಶೂಟಿಂಗ್‌ನಿಂದ ಜಾಹೀರಾತು ಆರಂಭವಾಗುತ್ತದೆ. 'ಜಗತ್ತಿಗೆ ಈ ಹೆಣ್ಣುಮಕ್ಕಳೆಂದರೆ ಅದೇನೋ ಸಮಸ್ಯೆ' ಎಂದು ಸಮಂತಾ ಹೇಳುವುದನ್ನು ಕೇಳಬಹುದು. ಇನ್ನೊಬ್ಬ ಮಹಿಳೆ 'ಇಷ್ಟು ಹೊತ್ತಿಗೆ ಹೆಣ್ಣುಮಕ್ಕಳ ಆಗಿರಬೇಕು' ಎಂದು ವ್ಯಂಗ್ಯವಾಗಿ ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಸಮಂತಾ 'ಸಮಯಕ್ಕೆ ಸರಿಯಾಗಿ ಅಲ್ಲ, ಇಷ್ಟಪಟ್ಟು ಮದುವೆಯಾಗಬೇಕು' ಎನ್ನುತ್ತಾರೆ. ವರ್ಕ್ ಮುಗಿಸಿ ಮರಳುವ ಸಂದರ್ಭ ಸೆಕ್ಯುರಿಟಿ ಗಾರ್ಡ್‌ 'ಯಾವ ಕೆಲಸ ರಾತ್ರಿ ಹತ್ತಕ್ಕೆ ಮುಗಿಯುತ್ತದೆ' ಎಂದು ಟೀಕಿಸುತ್ತಾರೆ. ಬದಲಿಗೆ ಸಮಂತಾ 'ರಾತ್ರಿ ಹತ್ತು ಗಂಟೆಯಾದರೂ ಕೆಲಸ ಮುಗಿಯುವುದಿಲ್ಲ' ಎನ್ನುತ್ತಾರೆ. 

ನಂತರ ಆಕ್ಷನ್ ಸೀನ್‌, ಇಲ್ಲಿ ವ್ಯಕ್ತಿ 'ಏನೇ ಇರ್ಲಿ ಆಕ್ಷನ್ ಮಾತ್ರ ಹೀರೋನೆ ಮಾಡ್ತಾನೆ ಅಲ್ವಾ' ಎನ್ನುತ್ತಾನೆ. ಇದಕ್ಕೆ ಪ್ರತಿಯಾಗಿ ಸಮಂತಾ 'ಈ ಸಿನಿಮಾದ ಹೀರೋ ನಾನೇ' ಎನ್ನುತ್ತಾರೆ. 'ಎಲ್ಲರ ಮಾತು ಕೇಳಿದ್ರೆ, ನಿಮಗಾಗಿ ಯಾವಾಗ ಬದುಕುತ್ತೀರಿ. ನೀನು, ನಿನ್ನಿಷ್ಟ. ಯಾಕೆಂದರೆ ಜಗತ್ತು ನಿಮ್ಮನ್ನು ಕೆಳಕ್ಕೆ ಜಗ್ಗುತ್ತಲೇ ಇರುತ್ತದೆ. ನೀವೇ ಮೇಲೆದ್ದು ಬರಬೇಕು. ರೈಸ್ ಅಪ್ ಬೇಬ್‌' ಎಂದು ಸಮಂತಾ ಹೇಳುವ ಮೂಲಕ ಜಾಹೀರಾತು ಕೊನೆಹೊಳ್ಳುತ್ತದೆ.

ವಯಸ್ಸಾಯಿತು ಮೂವತ್ತು, ತರುತ್ತಾ ಸೆಕ್ಸ್ ಲೈಫಿಗೆ ಆಪತ್ತು?

ಮಹಿಳೆಯರು ಮನಸ್ಸಿನ ಮಾತು ಕೇಳಬೇಕು ಎಂದ ಸಮಂತಾ
ಅಭಿಯಾನದ ಕುರಿತು ಮಾತನಾಡಿದ ಪೆಪ್ಸಿಕೋ ಇಂಡಿಯಾದ ಪೆಪ್ಸಿ ಕೋಲಾ ವಿಭಾಗದ ಮುಖ್ಯಸ್ಥ ಸೌಮ್ಯಾ ರಾಥೋರ್ , 'ಪೆಪ್ಸಿ ಯಾವಾಗಲೂ ಯುವ ಪೀಳಿಗೆಯ ಎನರ್ಜಿಯನ್ನು ಪ್ರತಿಬಿಂಬಿಸಲು ಶ್ರಮಿಸುತ್ತಿದೆ. ನಮ್ಮ ಕೊನೆಯ ಎರಡು ಅಭಿಯಾನಗಳ ಮೂಲಕ, ನಾವು ಯುವಕರ ಅದಮ್ಯ ಚೈತನ್ಯವನ್ನು ಅವರು ಸಾಮಾಜಿಕ ಮಾನದಂಡಗಳಿಗಿಂತ ಮೇಲೇರುತ್ತಿರುವುದನ್ನು ಚಿತ್ರಿಸುವ ಗುರಿಯನ್ನು ಹೊಂದಿದ್ದೇವೆ. ಈ ಅಭಿಯಾನಕ್ಕಾಗಿ, ನಮ್ಮ ಗಮನವು ಭಾರತದ ಮಹಿಳೆಗೆ ಸಬಲೀಕರಣ ಅಭಿಯಾನವನ್ನು ನೀಡುವುದು ಮತ್ತು ಅವರ ಅಚಲವಾದ ಆತ್ಮ ವಿಶ್ವಾಸವನ್ನು ಹುರಿದುಂಬಿಸುವುದಾಗಿದೆ' ಎಂದು ತಿಳಿಸಿದ್ದಾರೆ.

ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ನಟಿ ಸಮಂತಾ ರುತ್ ಪ್ರಭು, 'ಮಹಿಳೆಯರು ಯಾವಾಗಲೂ ತಮ್ಮ ಹೃದಯದ ಮಾತನ್ನು ಕೇಳಬೇಕು. ಸಮಾಜವು ನಮಗೆ ಹೊಂದಿಸಿರುವ ಸ್ಟೀರಿಯೊಟೈಪ್‌ಗಳನ್ನು ಛಿದ್ರಗೊಳಿಸಬೇಕು ಎಂದು ನಾನು ಬಲವಾಗಿ ನಂಬುತ್ತೇನೆ. ಆದ್ದರಿಂದ, ಅಭಿಯಾನವು ನನಗೆ ಇನ್ನಷ್ಟು ವಿಶೇಷವಾಗಿದೆ' ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios