ಧರ್ಮೇಂದ್ರ ಕುಮಾರ್‌ ಅವರ ವಿಡಿಯೋದಲ್ಲಿ ಆನೆಗೊಂದಿ ಸಂಸ್ಥಾನದ ಅರಸರ ಬಳಿಯಿರುವ ಚಿನ್ನದ ಸೀರೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಸುಮಾರು ನೂರು ವರ್ಷಗಳಷ್ಟು ಹಳೆಯದಾದ ಈ ಸೀರೆ ವಾರಾಣಸಿಯಲ್ಲಿ ತಯಾರಿಸಲ್ಪಟ್ಟಿದ್ದು, ಭಾರತದಲ್ಲೇ ಇದು ಅಪರೂಪವಂತೆ.

ಧರ್ಮೇಂದ್ರ ಕುಮಾರ್‌ ಅವರ ವಿಡಿಯೋಗಳನ್ನು ನೀವು ನೋಡಿಯೇ ಇರುತ್ತೀರಿ. ಸಾಮಾನ್ಯವಾಗಿ ಮೈಸೂರು ಸುತ್ತಮುತ್ತಲಿನ ವಿಶಿಷ್ಟ ಸಂಗತಿಗಳನ್ನು ಸ್ವಾರಸ್ಯಕರವಾಗಿ ನೋಡುಗರಿಗೆ ತಿಳಿಸಿಕೊಡುವ ಇವರು ಈ ಬಾರಿ ಒಂದು ಸೀರೆಯ ಜೊತೆಗೆ ಬಂದಿದ್ದಾರೆ. ಅದೂ ಅಂತಿಂಥ ಸೀರೆಯಲ್ಲ. ಅದು ಗೋಲ್ಡನ್‌ ಸ್ಯಾರಿ ಅರ್ಥಾತ್‌ ಚಿನ್ನದ ಸೀರೆ. ಸೀರೆ ಅಂದ್ರೆ ಕುತೂಹಲ ತೋರಿಸೋ ಹೆಣ್ಮಕ್ಕಳು ನೋಡಲೇಬೇಕಾದ ಸಂಗತಿ ಇದು. ಅದೆಲ್ಲಿದೆ, ಹೇಗಿದೆ ಅಂತೀರಾ? ಇಲ್ಲಿದೆ ನೋಡಿ. 

ಇದು ಆನೆಗೊಂದಿ ಸಂಸ್ಥಾನದ ಅರಸ ಬಳಿ ಇದ್ದ ಸೀರೆ. ಈಗ ಆನೆಗೊಂದಿ ಅರಸರ ಉತ್ತರಾಧಿಕಾರಿಗಳಲ್ಲಿದೆ. ಆನೆಗೊಂದಿಯ ಅರಸು ಮನೆತನದ ಕೃಷ್ಣದೇವರಾಯರ ಧರ್ಮಪತ್ನಿ ರತ್ನಶ್ರೀ ಕೃಷ್ಣದೇವರಾಯ ಅವರ ಬಳಿ ಈ ಸೀರೆ ಇದ್ದು, ಅದರ ವೈಶಿಷ್ಟ್ಯವನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. 

ಮುಖ್ಯವಾಗಿ ಈ ಸೀರೆಯ ಬಹುಭಾಗ ಚಿನ್ನದ ಕುಸುರಿ ಕೆಲಸದಿಂದ ಕೂಡಿದೆ. ಇದಕ್ಕೆ ಸುಮಾರು ನೂರು ವರ್ಷ ಆಗಬಹುದಂತೆ. ವಾರಾಣಸಿಯಲ್ಲಿ ತಯಾರಿಸಿದ್ದು, ಬನಾರಸಿ ರೇಶ್ಮೆಯಿಂದಲೇ ತಯಾರಾದದ್ದು. ಇದು ಭಾರತದಲ್ಲೇ ಇಂಥ ಏಕೈಕ ಚಿನ್ನದ ಸೀರೆಯಂತೆ. ಇಂಥ ಸೀರೆ ಇನ್ನೆಲ್ಲೂ ಇರಲಾರದು ಅಂತ ಅವರು ವಿವರಿಸುವಾಗ ನಮಗೂ ಹಾಗನ್ನಿಸೋದು ನಿಜ. ಇದರ ಬಾಡಿಯಲ್ಲಿ ಚಿನ್ನದ ದಾರಗಳಿಂದ ಸ್ವಸ್ತಿಕಗಳನ್ನು ಬರೆಯಲಾಗಿದೆ. ಸೆರಗಿನ ಬಳಿ ʼಸದಾ ಸೌಭಾಗ್ಯವತಿ ರಹೋʼ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಅದೂ ಚಿನ್ನದ ದಾರದಲ್ಲಿ. ಸೆರಗು ಸಂಪೂರ್ಣ ಚಿನ್ನದ ಕಸೂತಿಯಿಂದ ತುಂಬಿದೆ. 

ಇನ್ನು ಅದರ ಜೊತೆಗಿರುವ ಬ್ಲೌಸ್‌ ವಿಕ್ಟೋರಿಯನ್‌ ಶೈಲಿಯಲ್ಲಿದೆ. ಇದರ ಬೌ ನೋಡಿದರೆ ಗೊತ್ತಾಗುವುದೇನೆಂದರೆ, ಇದು ಸುಮಾರು ನೂರು ವರ್ಷದ ಹಿಂದಿನ ಶೈಲಿ ಅಂತ. ಇದಕ್ಕೆ ಲೈನಿಂಗ್‌ ನೆಟ್‌ ಇದೆ. ಈಗ ಬನಾರಸಿ ಸೀರೆಗಳಿಗೆ ಲೈನಿಂಗ್‌ ನೆಟ್‌ ಕೊಡುವುದಿಲ್ಲ. ಅಂದರೆ ಆ ಕಾಲದಲ್ಲಿ, ಈಗ ಮರೆತೇಹೋಗಿರುವ ಕೆಲವು ಸ್ಟೈಲು ಇದ್ದವು.

ಯಾರು ಮೊದಲಿಗೆ ಇದನ್ನು ಹೊಲಿಸಿದವರು? ರಾಣಿ ಲಾಲ್‌ಕುಮಾರಿ ಬಾಯಿ ಎಂಬವರದಂತೆ. ಅವರು ಈ ಸೀರೆಯ ವೈಶಿಷ್ಟ್ಯ ವಿವರಿಸಿರುವ ರತ್ನಶ್ರೀ ಅವರ ಅತ್ತೆಯವರ ಅತ್ತೆ. ಅವರು ಮಧ್ಯಪ್ರದೇಶದ ನರಸಿಂಹಗಢದ ರಾಜ ಮನೆತನದ ರಾಜಕುಮಾರಿ. ಅವರು ಮದುವೆಯಾಗಿ ಆನೆಗೊಂದಿಗೆ ಬಂದಾಗ ಈ ಸೀರೆಯನ್ನು ತಮ್ಮ ಜೊತೆಗೆ ತಂದಿದ್ದರಂತೆ. ಹಾಗೆ ಇದು ಕರ್ನಾಟಕಕ್ಕೆ ಬಂತು. ಇದರ ಬೆಲೆ ಎಷ್ಟಿರಬಹುದು? ಆಗ ಎಷ್ಟಿದ್ದಿತೋ ಅವರು ಹೇಳಿಲ್ಲ. ಈಗ ಎಷ್ಟಿರಬಹುದೋ ಇವರೂ ಹೇಳಿಲ್ಲ. ಲಕ್ಷಗಳ ಮೇಲಿರಬಹುದು ಎಂಬ ಅಂದಾಜು.

ಇದರಿಂದ ಗೊತ್ತಾಗುವ ಸಂಗತಿಗಳೆಂದರೆ ಉತ್ತರ ಭಾರತದ ರಾಜಮನೆತನಗಳಿಗೂ ಕರ್ನಾಟಕದ ರಾಜಮನೆತನಗಳಿಗೂ ನಿಕಟ ಸಂಬಂಧವಿದೆ ಅಂತ ಅನ್ನೋದು. ನಮ್ಮ ಈಗಿನ ಮೈಸೂರಿನ ಒಡೆಯ ಯದುವೀರ ಕೃಷ್ಣದತ್ತ ನರಸಿಂಹರಾಜ ಒಡೆಯರ್‌ ಅವರ ಪತ್ನಿ ತ್ರಿಶಿಕಾ ಕುಮಾರಿ ಒಡೆಯರ್‌ ಕೂಡ ರಾಜಸ್ಥಾನದ ಡುಂಗರ್‌ಪುರ್‌ನ ರಾಜಮನೆತನದವರು. 

ಪುರುಷರಿಗೆ ಇಷ್ಟವಾಗುವ ಮಹಿಳೆಯರಲ್ಲಿನ ಗುಣಗಳು; ಇದಕ್ಕೆ ಆಗೋದು ಹುಡುಗರ ಮನಸ್ಸು ಚಂಚಲ!

ಇನ್ನು ಆನೆಗೊಂದಿ ಸಂಸ್ಥಾನಕ್ಕೆ ಶ್ರೀಮಂತವಾದ ಇತಿಹಾಸವೇ ಇದೆ. ವಿಜಯನಗರ ಸಾಮ್ರಾಜ್ಯಕ್ಕೇ ಒಂದು ಕಾಲದಲ್ಲಿ ಇದು ರಾಜಧಾನಿಯಾಗಿತ್ತು ಎಂದು ತಿಳಿದುಬರುತ್ತದೆ. ವಿಜಯನಗರ ಸಾಮ್ರಾಜ್ಯದ ಪೂರ್ವದಲ್ಲಿ ಆನೆಗೊಂದಿಯು ಕಂಪಿಲರಾಯನ ರಾಜ್ಯದ ಒಂದು ಆಯಕಟ್ಟಿನ ಸ್ಥಾನವಾಗಿದ್ದಿತು. ಕಂಪಿಲರಾಯನು ಆನೆಯಾಕಾರದ ಮೂರು ಬೆಟ್ಟಗಳು ಸಂಧಿಸುವ ಆನೆಗೊಂದಿ ಎಂಬ ಸ್ಥಳದಲ್ಲಿ ಶತ್ರುಜನ ದುರ್ಗಮವಾದ ಕೋಟೆಯೊಂದನ್ನು ಕಟ್ಟಿಸಿದ್ದನು. ತುಂಗಭದ್ರಾ ನದಿಯ ಎಡದಂಡೆಯ ಮೇಲೆ ಹಂಪಿಯ ಉತ್ತರಕ್ಕೆ ಕೇವಲ ಎರಡೇ ಕಿ.ಮೀ. ಅಂತರದಲ್ಲಿದೆ ಆನೆಗೊಂದಿ. ಆನೆಗೊಂದಿಯು ತನ್ನ ನೈಸರ್ಗಿಕ ವೈಶಿಷ್ಟ್ಯತೆಯಿಂದ ಒಂದು ಸಹಜ ಸ್ವಾಭಾವಿಕ ಸುರಕ್ಷಿತ ಸ್ಥಳವಾಗಿ ಪರಿಣಮಿಸಿತ್ತು. ನಂತರ ವಿಜಯನಗರ ಸಾಮ್ರಾಜ್ಯವು ಆನೆಗೊಂದಿಯನ್ನೂ ಒಳಗೊಂಡು ವಿಸ್ತರಿಸಿತು. ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ, ಇಲ್ಲಿನ ಮಹಾರಾಜರ ಮನೆತನದ ಒಂದು ಕವಲು ಆನೆಗೊಂದಿಯಲ್ಲಿ ಅರಸರಾಗಿ ಮುಂದುವರಿಯಿತು. ಈಗಲೂ ಅಲ್ಲಿನ ಅರಸು ಮನೆತನ ಇದೆ.

ಕೋಟಿ ಕೋಟಿ ಒಡತಿಯಾದರೂ 30 ವರ್ಷದಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ!... ಕಾರಣ..!?

View post on Instagram