೨೦ರ ಹರೆಯದಲ್ಲಿ ವೈಧವ್ಯ, ಗರ್ಭಿಣಿಯಾಗಿದ್ದಾಗ ಮನೆಯಿಂದ ಹೊರಹಾಕಲ್ಪಟ್ಟ ನಿಧಿ ದುಬೆ, ಛಲದಿಂದ ೩೨ನೇ ವಯಸ್ಸಿನಲ್ಲಿ ಸೇನೆಯಲ್ಲಿ ಲೆಫ್ಟಿನೆಂಟ್ ಆದರು. ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ಪತಿಯ ಮರಣಾನಂತರ, ಮಗುವಿನೊಂದಿಗೆ ಕಠಿಣ ಪರಿಸ್ಥಿತಿ ಎದುರಿಸಿದರು. ಎಂಬಿಎ ಪದವಿ ಪಡೆದು, ಸೇನಾ ತರಬೇತಿ ಪೂರ್ಣಗೊಳಿಸಿ, ದೇಶಸೇವೆಗೆ ಮುಂದಾದರು. ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

20 ವರ್ಷಕ್ಕೆ ಮದುವೆ, 21ನೇ ವರ್ಷಕ್ಕೆ ವೈಧವ್ಯ. ನಾಲ್ಕು ತಿಂಗಳ ಗರ್ಭಿಣಿಯನ್ನು ಮನೆಯಿಂದ ಹೊರಕ್ಕೆ ಹಾಕಿದ ಕ್ರೂರಿ ಅತ್ತೆ-ಮಾವ... ಇದರ ನಡುವೆಯೇ ಸಾಮಾನ್ಯ ಮಹಿಳೆಯೊಬ್ಬಳು ಲೆಫ್ಟಿನೆಂಟ್​ ಹುದ್ದೇಗೇರಿ ದೇಶಸೇವೆಯಲ್ಲಿ ತೊಡಗಿರುವ ಸ್ಟೋರಿ ಇದು. ಅವರೇ ನಿಧಿ ದುಬೆ. ಭಾರತೀಯ ಸೇನೆಯ ರೋಲ್​ ಮಾಡೆಲ್​ ಇವರು. ಏನೂ ಸಾಧನೆ ಮಾಡಿದೆಯೂ ಗಂಡಿನ ಸಮಾನವಾದ ಅವಕಾಶ ಬೇಕು ಎಂದು ಬೀದಿಗಿಳಿದು ಹೋರಾಟ ಮಾಡುವ ಕೆಲವು ಮಹಿಳೆಯರ ಮಧ್ಯೆ, ಮಹಿಳಾ ವಾದದ ಹೆಸರಿನಲ್ಲಿ ಗಂಡಸರನ್ನೇ ದೂಷಿಸುತ್ತಾ ಕಾಲ ಕಳೆಯುವವರ ನಡುವೆ, ಹೆಣ್ಣೊಬ್ಬಳು ಮನಸ್ಸು ಮಾಡಿದರೆ, ಛಲದಿಂದ ಏನು ಬೇಕಾದರೂ ಸಾಧಿಸಬಹುದು, ಪುರುಷರಿಗಷ್ಟೇ ಮೀಸಲು ಎಂದುಕೊಂಡಿರುವ ಕ್ಷೇತ್ರದಲ್ಲಿಯೂ ತಮ್ಮ ಸ್ವಂತ ಬಲದಿಂದ ಮುನ್ನುಗ್ಗಬಹುದು ಎಂದು ತೋರಿಸಿಕೊಟ್ಟಿದ್ದಾರೆ ನಿಧಿ ದುಬೆ. ಇವರು ಸೇನೆಯ ಮಾತ್ರವಲ್ಲದೇ ಇಡೀ ಮಹಿಳಾ ಲೋಕಕ್ಕೂ ರೋಲ್​ ಮಾಡೆಲ್​ ಎಂದರೆ ಅತಿಶಯೋಕ್ತಿಯೂ ಆಗಲಿಕ್ಕಿಲ್ಲ.

ಇನ್ನು ಇವರ ನೋವಿನ ಆ ದಿನಗಳ ಬಗ್ಗೆ ಹೇಳುವುದಾದರೆ, ಮಧ್ಯಪ್ರದೇಶ ಮೂಲದ 20 ವರ್ಷದ ನಿಧಿ ಮಿಶ್ರಾ ದುಬೆ, ಎಲ್ಲಾ ಯುವತಿಯರಂತೆ, ಪತಿಯೊಂದಿಗೆ ಸುಂದರ ಜೀವನದ ಕನಸುಗಳಿಂದ ತುಂಬಿಕೊಂಡಿದ್ದರು. ಇವರ ಮದುವೆ, ಭಾರತೀಯ ಸೇನೆಯಲ್ಲಿದ್ದ ಯೋಧ, ಮುಖೇಶ್ ಕುಮಾರ್ ದುಬೆ ಅವರೊಂದಿಗೆ ನೆಡೆದಿತ್ತು. ಇವರ ವಿಧಿ ಬರಹವೇ ಬೇರೆಯದ್ದಾಗಿತ್ತು. ಮದುವೆಯಾಗಿ ಒಂದು ವರ್ಷದೊಳಗೆ, ಅಂದರೆ ಅವರಿಗೆ 21 ವರ್ಷ ಇರುವಾಗಲೇ ಅವರ ಪ್ರಪಂಚವು ಕುಸಿದು ಹೋಯಿತು. ಅವರ ಪತಿ ಕಾರ್ಗಿಲ್ ಯುದ್ಧದ ಸಮಯದಲ್ಲಿಯೂ ಸೇವೆ ಸಲ್ಲಿಸಿದ್ದರು. ಆದರೆ ಅದಾದ ಬಳಿಕ ಹೃದಯಾಘಾತದಿಂದ ಅವರು ಹಠಾತ್ತನೆ ನಿಧನರಾದರು. ಆ ಸಮಯದಲ್ಲಿ ನಿಧಿ 4 ತಿಂಗಳ ಗರ್ಭಿಣಿಯಾಗಿದ್ದರು. ಒಂದೆಡೆ ಗರ್ಭದಲ್ಲಿ ಮಗು, ಮತ್ತೊಂದೆಡೆ 21ರ ಹರೆಯದಲ್ಲಿಯೇ ವೈಧವ್ಯ... ಇದೂ ಸಾಲು ಎನ್ನುವುದಕ್ಕೆ ಅವರು ಕ್ರೂರ ವಾಸ್ತವವನ್ನು ಎದುರಿಸಬೇಕಾಯಿತು. ಪತಿಯ ಮರಣದ ನಂತರ, ನಿಧಿಯ ಅತ್ತೆ ಮಾವಂದಿರು ಅವರನ್ನು ತಿರಸ್ಕರಿಸಿ ಮನೆಯಿಂದ ಹೊರಗೆ ಹಾಕಿಬಿಟ್ಟರು!

Operation Sindoor: ರಾಣಿ ಲಕ್ಷ್ಮಿ ಬಾಯಿ ಜತೆ ಸೋಫಿಯಾ ಖುರೇಷಿ ಸಂಬಂಧ! ರೋಚಕ ಇತಿಹಾಸ ತೆರೆದಿಟ್ಟ ಕರ್ನಲ್​

ಗರ್ಭಿಣಿಯಾಗಿದ್ದ ನಿಧಿ ಅವರು ಅಕ್ಷರಶಃ ನಲುಗಿ ಹೋಗಿದ್ದರು. ಭಾವನಾತ್ಮಕವಾಗಿ ಜರ್ಜರಿತರಾದ ನಿಧಿ ತಾಯಿಯ ಮನೆಗೆ ಮರಳಿದರು. ಅವರು ಖಿನ್ನತೆಗೆ ಒಳಗಾಗಿದ್ದರು. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಅವರು ಎದುರಿಸಿದ ಆ ನೋವು ಅಂತಿಂಥದಲ್ಲ. ಜೀವನ ಸಂಗಾತಿಯನ್ನು ಕಳೆದುಕೊಂಡ ಕ್ರೂರ ವಾಸ್ತವವನ್ನು ಎದುರಿಸಿದ ನಿಧಿ ಆಂತರಿಕ ಹೋರಾಟಗಳನ್ನು ಸ್ವತಃ ಹೋರಾಡಬೇಕಾಯಿತು. ಆದರೆ ಸಮಯಕ್ಕೇನು, ಅದು ಅದರ ಪಾಡಿಗೆ ಉರುಳುತ್ತಲೇ ಇರುತ್ತದೆ. ನಿಧಿ ಮಡಿಲಿಗೆ ಪುಟ್ಟ ಕಂದ ಸುಯಾಶ್‌ ಬಂದ. ಮಗನ ಜನನದ ಬಳಿಕ ನಿಧಿಯ ಲೈಫ್​ ಬದಲಾಯಿತು. ಆ ಕಂದಮ್ಮನನ್ನು ನೋಡಿ ಅವರಿಗೆ ಬದುಕುವ ಹಂಬ ಉಂಟಾಯಿತು. ತನಗಾಗಿ ಅಲ್ಲದಿದ್ದರೂ, ಮಗನಿಗಾಗಿ ಬಲವಾಗಿ ನಿಲ್ಲುವ ಪ್ರತಿಜ್ಞೆ ಮಾಡಿದರು ನಿಧಿ.

ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಎದುರಿಸಬೇಕಾದ ಎಲ್ಲಾ ಭಾವನಾತ್ಮಕ ಮತ್ತು ದೈಹಿಕ ತೊಂದರೆಗಳ ಹೊರತಾಗಿಯೂ, ನಿಧಿ ತಮ್ಮ ಜೀವನವನ್ನು ಬದಲಾಯಿಸಲು ಎಂದಿಗಿಂತಲೂ ಹೆಚ್ಚು ದೃಢನಿಶ್ಚಯ ಮಾಡಿದರು. ಜೀವನವನ್ನು ಪುನರ್ನಿರ್ಮಿಸಲು ಬದ್ಧಳಾಗಿ, ಉನ್ನತ ಶಿಕ್ಷಣವನ್ನು ಪಡೆಯಲು ನಿರ್ಧರಿಸಿದರು. ಊರನ್ನು ಬಿಟ್ಟು ಇಂದೋರ್‌ಗೆ ತೆರಳಿದರು. ಎಂಬಿಎ ಮಾಡಿದರು. ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಸುಮಾರು ಒಂದು ವರ್ಷ ಕೆಲಸ ಮಾಡಿದ ನಂತರ, ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಅವರ ಪತಿಯ ಹಿರಿಯ ಅಧಿಕಾರಿಗಳ ಗಮನ ಸೆಳೆಯಿತು. ಆಗ ಅವರು ಪತಿಯಂತೆಯೇ ದೇಶಸೇವೆ ಸಲ್ಲಿಸಲು ಮನಸ್ಸು ಇದೆಯೇ ಎಂದು ನಿಧಿಗೆ ಕೇಳಿದಾಗ, ನಿಧಿಯ ದಿಕ್ಕೇ ಬದಲಾಗಿ ಹೋಯಿತು. 

ಅರ್ಧ ಸೌದಿ ಈ ಅಮ್ಮಂದಿರ ಕೈಯಲ್ಲಿ! ದೇಶದ ಆರ್ಥಿಕತೆಗೆ ಇವರೇ ನಾಯಕಿಯರು...

ಸೇನೆಯ ಹಿರಿಯ ಅಧಿಕಾರಿಗಳು ಸೇನಾ ಸೇವಾ ಆಯ್ಕೆ ಮಂಡಳಿಗೆ (SSB) ತಯಾರಿ ನಡೆಸಲು ನಿಧಿ ಅವರಿಗೆ ಸಲಹೆ ನೀಡಿದರು. ವಿಧವೆಯರಿಗಾಗಿ ಮಾಡಲಾದ ವಿಶೇಷ ನಿಬಂಧನೆಗಳಿಂದಾಗಿ, ನಿಧಿಗೆ ಸೈನ್ಯದಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಸಿಕ್ಕಿತು. ಅವರು ಅರ್ಜಿ ಸಲ್ಲಿಸಿದ್ದಲ್ಲದೆ, ಕಠಿಣ ದೈಹಿಕ ತರಬೇತಿಯನ್ನೂ ಪಡೆದರು. ಬೆಳಿಗ್ಗೆ 4 ಗಂಟೆಗೆ ಏಳುವುದು, 5 ಕಿಲೋಮೀಟರ್ ಓಡುವುದು ಮತ್ತು ದಿನವಿಡೀ ದೈಹಿಕ ಪರಿಶ್ರಮದ ನಂತರ ರಾತ್ರಿ ಅಧ್ಯಯನ ಮಾಡುವುದು ಅವನ ದಿನಚರಿಯಾಯಿತು. ಎಸ್‌ಎಸ್‌ಬಿಗೆ ತಯಾರಿ ನಡೆಸುತ್ತಿರುವಾಗ, ನಿಧಿ ಅವರಿಗೆ ತಮ್ಮ ಮಗ ಓದುತ್ತಿದ್ದ ಸೇನಾ ಶಾಲೆಯಲ್ಲಿ ಬೋಧನಾ ಕೆಲಸ ಸಿಕ್ಕಿತು. ಅಲ್ಲಿ ಪಾಠ ಮಾಡುತ್ತಲೇ, ಅವರು ಪರೀಕ್ಷೆಗಳಿಗೆ ತಯಾರಿ ಮುಂದುವರಿಸಿದರು. ತರಬೇತಿಯ ಸಮಯದಲ್ಲಿ ನಿಧಿ ತಮ್ಮ ಮಗನನ್ನು ಎರಡು ಬಾರಿ ಮಾತ್ರ ಭೇಟಿಯಾಗಲು ಸಾಧ್ಯವಾಯಿತು, ಕೊನೆಗೂ ನಿಧಿಯ ಕಠಿಣ ಪರಿಶ್ರಮ ಫಲ ​​ನೀಡಿತು ಮತ್ತು 32 ನೇ ವಯಸ್ಸಿನಲ್ಲಿ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆ ಏರಿದರು. ಇಂದು ಅವರು ತಮ್ಮ ಮಗನಿಗೆ, ಇಡೀ ಮಹಿಳಾ ಸಮುದಾಯಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ, ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆಯಾಗಿ ನಿಂತಿದ್ದಾರೆ.