ಆಪರೇಷನ್ ಸಿಂದೂರ್‌ನ ಮಾಹಿತಿ ನೀಡಿ ಖ್ಯಾತರಾದ ಕರ್ನಲ್ ಸೋಫಿಯಾ ಖುರೇಷಿ, ಸೇನಾ ಕುಟುಂಬದಿಂದ ಬಂದವರು. ರಾಣಿ ಲಕ್ಷ್ಮೀಬಾಯಿಯೊಂದಿಗೆ ತಮ್ಮ ಮುತ್ತಜ್ಜಿ ಕೆಲಸ ಮಾಡಿದ್ದನ್ನು ವಿವರಿಸಿದ್ದಾರೆ. ಸೋಫಿಯಾ ಪತಿ ಕೂಡ ಸೇನಾಧಿಕಾರಿ. 2018ರಲ್ಲಿ ಆಸಿಯಾನ್ ಸೇನಾ ತುಕಡಿಯ ನೇತೃತ್ವ ವಹಿಸಿದ್ದರು. ಬೆಳಗಾವಿಯ ಸೊಸೆಯಾಗಿರುವ ಇವರ ಕುಟುಂಬ ದೇಶಸೇವೆಯಲ್ಲಿ ಹೆಮ್ಮೆ ಪಡುತ್ತಿದೆ.

ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂದೂರ್‌ನ ಎಲ್ಲಾ ವಿವರಗಳನ್ನು ಜಗತ್ತಿಗೆ ನೀಡಿದ ಕರ್ನಲ್ ಸೋಫಿಯಾ ಖುರೇಷಿ, ಸದ್ಯ ಟ್ರೆಂಡಿಂಗ್​ನಲ್ಲಿರುವ ಹೆಸರು. ಹಲವಾರು ದಶಕಗಳಿಂದ ಭಾರತೀಯ ಸೇನೆಗೆ ಅಪಾರ ಕೊಡುಗೆ ನೀಡಿರುವ ಕರ್ನಲ್​ ಸೋಫಿಯಾ ಖುರೇಷಿ ಈಗ ಹೈಲೈಟ್​ ಆಗುತ್ತಿದ್ದಾರಷ್ಟೇ. ದೇಶಕ್ಕಾಗಿ ದುಡಿಯುತ್ತಿರುವ ಇಂಥ ಅದೆಷ್ಟೋ ಮಹನೀಯರು ಇದ್ದಾರೆ ಎಂದು ತಿಳಿಯುವುದು ಇಂಥ ಕಠಿಣ ಪರಿಸ್ಥಿತಿ ಬಂದಾಗಲೇ, ಏಕೆಂದರೆ ಅವರು ಸಿನಿಮಾ ತಾರೆಯರು ಅಲ್ಲವಲ್ಲ! ಅದಕ್ಕಾಗಿಯೇ ಸೌಮ್ಯವಾಗಿ, ಸದ್ದಿಲ್ಲದೇ ತಮ್ಮ ಕರ್ತವ್ಯ ನಿರ್ವಹಿಸುತ್ತಲೇ ಇರುತ್ತಾರೆ. ಇದೀಗ ಆಪರೇಷನ್​ ಸಿಂದೂರ್​ನಿಂದಾಗಿ ಸೋಫಿಯಾ ಹಾಗೂ ವಿಂಗ್​ ಕಮಾಂಡರ್​ ವ್ಯೋಮಿಕಾ ಸಿಂಗ್​ ಸಕತ್​ ಫೇಮಸ್​ ಆಗುತ್ತಿದ್ದಾರೆ.

ಅಂದಹಾಗೆ, ಇದಾಗಲೇ ಸೋಫಿಯಾ ಖುರೇಷಿ ಅವರ ಇಡೀ ಕುಟುಂಬ ಸೇನೆಯಲ್ಲಿದ್ದು, ದೇಶಕ್ಕಾಗಿ ಸೇವೆ ಸಲ್ಲಿಸಿದವರೇ ಎನ್ನುವ ಬಗ್ಗೆ ಹಲವಾರು ವರದಿಗಳು ಬಂದಾಗಿದೆ. ಆದರೆ ಇದೇ ಮೊದಲ ಬಾರಿಗೆ ಖುದ್ದು ಸೋಫಿಯಾ ಅವರೇ ತಮ್ಮ ಮುತ್ತಜ್ಜಿಯ ಸ್ಟೋರಿಯನ್ನು ಹೇಳಿರುವ ವಿಡಿಯೋ ವೈರಲ್​ ಆಗುತ್ತಿದ್ದು, ಇದನ್ನು ಕೇಳಿದವರು ರೋಚಕಗೊಂಡಿದ್ದಾರೆ. ಸೋಫಿಯಾ ಖುರೇಷಿ ಅವರ ಹಳೆಯ ವಿಡಿಯೋ ಇದಾಗಿದ್ದು, ಇದೀಗ ವೈರಲ್​ ಆಗಿದೆ. ಇದರಲ್ಲಿ ಸೋಫಿಯಾ ಅವರು, ತಮ್ಮ ಮುತ್ತಜ್ಜಿ ರಾಣಿ ಲಕ್ಷ್ಮೀ ಬಾಯಿಯ ಜೊತೆ ಕೆಲಸ ಮಾಡಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಭಾರಿ ಕುತೂಹಲಕ್ಕೂ ಕಾರಣವಾಗುತ್ತಿದೆ. 

ಪಾಕ್​ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್​ ಸಿಂದೂರ'ದ ಹೀರೋ ಸ್ಟೋರಿ ಇದು!

ಅಷ್ಟಕ್ಕೂ ಈ ವಿಡಿಯೋದಲ್ಲಿ ಸೋಫಿಯಾ ಖುರೇಷಿ ಅವರು ಹೇಳಿದ್ದೇನೆಂದರೆ, ನಮ್ಮ ಅಜ್ಜಿಯ ಅಮ್ಮ ಅಂದರೆ ಮುತ್ತಜ್ಜಿ, ದೇಶದ ಮಹಾನ್ ಕ್ರಾಂತಿಕಾರಿ ರಾಣಿ ಲಕ್ಷ್ಮಿ ಬಾಯಿ ಜೊತೆ ಸಂಬಂಧ ಹೊಂದಿದ್ದರು ಎಂದಿದ್ದಾರೆ. ಅವರು ರಾಣಿ ಲಕ್ಷ್ಮಿಬಾಯಿ ಅವರೊಂದಿಗೆ ವಾಸಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ರಾಣಿ ಲಕ್ಷ್ಮಿಬಾಯಿಯ ಜೊತೆ ಮುತ್ತಜ್ಜಿಯ ಸಂಪರ್ಕ ಇತ್ತು ಎಂದಿದ್ದಾರೆ. ಅದೇ ವೇಳೆ ತಮ್ಮ ಸೇನಾ ಇತಿಹಾಸವನ್ನೂ ತಿಳಿಸಿದ್ದಾರೆ. ಸೇನೆಯ ಸಿಗ್ನಲ್ ಕಾರ್ಪ್ಸ್‌ಗೆ ಸೇರಿದ ಕರ್ನಲ್ ಸೋಫಿಯಾ, ಸೇನೆಯೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದಾರೆ. ಕರ್ನಲ್ ಸೋಫಿಯಾ ಅವರ ಪತಿ ಸೇನಾಧಿಕಾರಿಯಾಗಿದ್ದು, ಅವರ ಅಜ್ಜ ಕೂಡ ಸೇನೆಯಲ್ಲಿದ್ದಾರೆ. ಕರ್ನಲ್ ಸೋಫಿಯಾ ಅವರ ಪತಿ ಸೇನೆಯ ಯಾಂತ್ರಿಕೃತ ಪದಾತಿ ದಳಕ್ಕೆ ಸೇರಿದವರಾಗಿದ್ದು, ಪ್ರಸ್ತುತ ಮುಂಚೂಣಿಯಲ್ಲಿರುವ ಒಂದು ಘಟಕಕ್ಕೆ ಕಮಾಂಡಿಂಗ್ ಮಾಡುತ್ತಿದ್ದಾರೆ. ಇದನ್ನು ವಿಡಿಯೋದಲ್ಲಿ ಅವರು ತಿಳಿಸಿದ್ದಾರೆ. 

 ಗುಜರಾತ್ ಮೂಲದ ಕರ್ನಲ್ ಸೋಫಿಯಾ, 2018 ರಲ್ಲಿ ಪುಣೆಯಲ್ಲಿ ಆಸಿಯಾನ್ ದೇಶಗಳ ಸೇನೆಗಳೊಂದಿಗೆ ಭಾರತೀಯ ಸೇನೆಯ ಜೊತೆ ಇದ್ದಾಗ ಬೆಳಕಿಗೆ ಬಂದರು. ಈ ಸಮಯದಲ್ಲಿ ಇವರನ್ನು ಭಾರತೀಯ ಸೇನಾ ತುಕಡಿಯ ಕಮಾಂಡರ್ ಆಗಿ ನೇಮಿಸಲಾಗಿತ್ತು. ಅಂದಹಾಗೆ ಸೋಫಿಯಾ, ಬೆಳಗಾವಿಯ ಸೊಸೆ. ಈ ಕುರಿತು ಅವರ ಮಾವ ಮಾತನಾಡಿದ್ದರು. ನನ್ನ ಮಗ ಮತ್ತು ಸೊಸೆ ಒಂದೇ ಕಡೆಗೆ ಕೆಲಸ ಮಾಡುತ್ತಿದ್ದರು. ಅವರಿಬ್ಬರಿಗೂ ಪರಿಚಯ ಆಗಿ ಇಬ್ಬರು ಪ್ರೀತಿಸಿ ಬಳಿಕ ಮನೆಯವರ ಒಪ್ಪಿಗೆ ಪಡೆದು 2015ರಲ್ಲಿ ಗುಜರಾತ ರಾಜ್ಯದ ಬಡೋದರಾದಲ್ಲಿ ವಿವಾಹವಾದರು. ನಿನ್ನೆ ನಡೆದ ಘಟನೆ ಕುರಿತು ನಾನು ಸೊಸೆ ಜೊತೆಗೆ ಮಾತನಾಡಿಲ್ಲ. ಮಗನ ಜೊತೆಗೆ ಮಾತನಾಡಿದ್ದೇನೆ. ಆತನೇ ನಮಗೆ ಎಲ್ಲ ಮಾಹಿತಿ ಹೇಳಿದ. ನಮ್ಮ ಮನೆ ಮಂದಿಗೆ ಯಾರಿಗೂ ನಿದ್ದೆ ಹತ್ತಿಲ್ಲ.ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಭಯೋತ್ಪಾದಕರಂತಹ ಮೂರ್ಖರು ಯಾರೂ ಇಲ್ಲ. ಧರ್ಮ ನೋಡಿ ಹತ್ಯೆ ಮಾಡುವ ಕೆಲಸ ಅವರು ಮಾಡಿದರು. ನನ್ನ ಮಗ ಮರಡಿಮಠ ಗ್ರಾಮದಲ್ಲಿ ಕನ್ನಡ ಮಾಧ್ಯಮದಲ್ಲಿ ಕಷ್ಟಪಟ್ಟು ಓದಿ ಕರ್ನಲ್‌ ಆಗಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಮಕ್ಕಳ ಬಗ್ಗೆ ನಮಗೆ ಹೆಮ್ಮೆಯಿದೆ ಎಂದಿದ್ದರು.

Operation Sindoor: ಕೊಂದಿದ್ದನ್ನು ಹೋಗಿ ಮೋದಿಗೆ ತಿಳಿಸು ಅಂದಿದ್ದ... ತಿಳಿಸಿದೆ ಅಷ್ಟೇ...