ಐವಿಎಫ್ ಮೂಲಕ ಗರ್ಭಧರಿಸಿರುವ ಮುನ್ನ ಮಹಿಳೆಯನ್ನು ಹೇಗೆ ಸಿದ್ಧಪಡಿಸಲಾಗುತ್ತೆ? ಇದರ ವಿಧಾನ ಹೇಗೆ? ಚಿಕಿತ್ಸೆಸ ಹೇಗೆ? ಖರ್ಚೆಷ್ಟು? ನಟಿ ಭಾವನಾ ಹೇಳಿದ್ದೇನು ಕೇಳಿ...
ಇದಾಗಲೇ ಕೃತಕ ಗರ್ಭಧಾರಣೆ- In Vitro Fertilization (IVF) ಮೂಲಕ ಕೆಲವರು ಮಗುವನ್ನು ಪಡೆದಿದ್ದರೂ, ನಟಿ ಭಾವನಾ ಅವರು ಅವಿವಾಹಿತೆಯಾಗಿ ದಾನಿಯಿಂದ ವೀರ್ಯಾಣು ಪಡೆದು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ, ಸದ್ಯ ನಟಿಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇವರು ಗರ್ಭಿಣಿ ಎನ್ನುವ ಸುದ್ದಿ ತಿಳಿದಾಗಿನಿಂದಲೂ ಇದರ ಬಗ್ಗೆ ಪರ-ವಿರೋಧಗಳ ದೊಡ್ಡ ಚರ್ಚೆಯೇ ಶುರುವಾಗಿದೆ. ಹಾಗೆಂದು ಐವಿಎಫ್ ಮೂಲಕ ಮಗುವನ್ನು ಪಡೆಯುವ ಪ್ರಕ್ರಿಯೆ ಅಷ್ಟು ಸುಲಭವೂ ಅಲ್ಲ, ಸಲೀಸೂ ಅಲ್ಲ. ಇದಕ್ಕೆ ಬಹುದೊಡ್ಡ ಕಠಿಣಾತಿಕಠಿಣ ಪ್ರಕ್ರಿಯೆಯೇ ಇದೆ. ಎಷ್ಟೊಂದು ವೈದ್ಯಕೀಯ ಪ್ರಕ್ರಿಯೆಗಳಿಗೆ ಒಳಪಟ್ಟು, ಮೊದಲಿಗೆ ಮಹಿಳೆಯನ್ನು ಇದಕ್ಕೆ ರೆಡಿ ಮಾಡಿ ನಂತರ ಆಕೆಯ ದೇಹವನ್ನು ಇದಕ್ಕೆ ಸಿದ್ಧಪಡಿಸಿ ಆ ಬಳಿಕ, ವೀರ್ಯಾಣುವಿನ ಜೊತೆ ಅಂಡಾಣು ಸಂಯೋಜನೆ ಮಾಡುವ ಚಿಕಿತ್ಸೆಯ ಹಂತ ಶುರುವಾಗುತ್ತದೆ.
ಈ ಬಗ್ಗೆ FDFS ಯುಟ್ಯೂಬ್ ಚಾನೆಲ್ಗೆ ನಟಿ ಭಾವನಾ ಹಂತ ಹಂತದ ಮಾಹಿತಿ ನೀಡಿದ್ದು, ಈ ಮಾತನ್ನು ಕೇಳುತ್ತಿದ್ದರೆ ಧೈರ್ಯವಂತ ಮಹಿಳೆಯರಿಗೆ ಮಾತ್ರ ಈ ರೀತಿಯಲ್ಲಿ ಮಗು ಪಡೆಯಲು ಸಾಧ್ಯ ಎನ್ನಿಸದೇ ಇರಲಾರದು. ಮೊದಲು ಒಂದಿಷ್ಟು ತಿಂಗಳು ಎಲ್ಲಾ ಪ್ರಕ್ರಿಯೆ ಮುಗಿದ ಮೇಲೂ ಮಗು ಗರ್ಭದಲ್ಲಿ ನಿಲ್ಲುತ್ತದೆ ಎಂದು ಹೇಳುವುದು ಕಷ್ಟ. ಅಲ್ಲಿಯವರೆಗೆ ಆ ಮಹಿಳೆ ಹೇಗೆಲ್ಲಾ ಮಾನಸಿಕವಾಗಿ ಸಿದ್ಧತೆಯಲ್ಲಿ ಇರಬೇಕು ಎನ್ನುವ ಬಗ್ಗೆ ನಟಿ ಮಾತನಾಡಿದ್ದಾರೆ. ಮೊಟ್ಟೆ ಮತ್ತು ವೀರ್ಯವನ್ನು ದೇಹದ ಹೊರಗೆ ಫಲವತ್ತಾಗಿಸಿ, ನಂತರ ಗರ್ಭಧಾರಣೆಗಾಗಿ ಭ್ರೂಣವನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಷ್ಟ ಅಂತೂ ಇದ್ದೇ ಇದೆ. ಮಾನಸಿಕವಾಗಿ ಸಿದ್ಧರಾಗಿರಬೇಕು ಎಂದಿದ್ದಾರೆ ನಟಿ. ಆದರೆ ಚಿಕಿತ್ಸೆಗೆ ಎಷ್ಟು ಖರ್ಚಾಗುತ್ತದೆ ಎನ್ನುವ ಬಗ್ಗೆ ನಟಿ ಸ್ಪಷ್ಟವಾಗಿ ಯಾವುದೇ ಮಾಹಿತಿ ಇಲ್ಲಿ ನೀಡಲಿಲ್ಲ. ತುಂಬಾ ಎಕ್ಸ್ಪೆನ್ಸಿವ್ ಇಲ್ಲ, ಹಾಗೆಂದು ತುಂಬಾ ಕಡಿಮೆಯೂ ಇಲ್ಲ ಎಂದಿದ್ದಾರೆ. ಆದರೆ ಇದಾಗಲೇ ತಿಳಿದು ಬಂದಿರುವಂತೆ IVF ಚಿಕಿತ್ಸೆಗೆ 1 ರಿಂದ 3 ಲಕ್ಷಕ್ಕೂ ಅಧಿಕ ಖರ್ಚಾಗುತ್ತದೆ ಎನ್ನಲಾಗಿದೆ.
ಐವಿಎಫ್ ಪ್ರಕ್ರಿಯೆಯು ಸಾಮಾನ್ಯವಾಗಿ ಅಂಡಾಶಯದ ಪ್ರಚೋದನೆಯಿಂದ ಭ್ರೂಣ ವರ್ಗಾವಣೆಯವರೆಗೆ ಸುಮಾರು 4-6 ವಾರಗಳನ್ನು ತೆಗೆದುಕೊಳ್ಳುತ್ತದೆ. IVF ಪ್ರಕ್ರಿಯೆಯಲ್ಲಿ, ಮೊಟ್ಟೆಗಳನ್ನು ಉತ್ಪಾದಿಸಲು ಅಂಡಾಶಯಗಳನ್ನು ಉತ್ತೇಜಿಸಲು ಮಹಿಳೆಗೆ ಆರಂಭದಲ್ಲಿ ಕೆಲವಷ್ಟು ಔಷಧಿಗಳನ್ನು ನೀಡಲಾಗುತ್ತದೆ. ಮೊಟ್ಟೆಗಳು ಪಕ್ವವಾದ ನಂತರ, ಅವುಗಳನ್ನು ಅಂಡಾಶಯಗಳಿಂದ ಹೊರತೆಗೆಯಲಾಗುತ್ತದೆ. ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಮೊಟ್ಟೆಗಳನ್ನು ಫಲವತ್ತಾಗಿಸಲಾಗುತ್ತದೆ. ಫಲವತ್ತಾದ ಮೊಟ್ಟೆಗಳು ಭ್ರೂಣಗಳಾಗಿ ಬೆಳೆಯಲು ಅವಕಾಶ ನೀಡಲಾಗುತ್ತದೆ. ಉತ್ತಮ ಗುಣಮಟ್ಟದ ಭ್ರೂಣಗಳನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಸುಮಾರು 10-14 ದಿನಗಳ ನಂತರ ಗರ್ಭಧಾರಣೆಯ ಪರೀಕ್ಷೆ ಮಾಡಲಾಗುತ್ತದೆ.
ಒಂದು IVF ಚಕ್ರವು ಸಾಮಾನ್ಯವಾಗಿ 2-3 ವಾರಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಇಷ್ಟೆಲ್ಲಾ ಪ್ರಕ್ರಿಯೆ ಇರುವ ಹಿನ್ನೆಲೆಯಲ್ಲಿ ಈ ಚಿಕಿತ್ಸೆ ಪಡೆಯುವ ಮಹಿಳೆಗೆ ಸಾಮಾನ್ಯವಾಗಿ ಕೌನ್ಸಿಲಿಂಗ್ ನೀಡಲಾಗುತ್ತದೆ. ಆಕೆಯನ್ನು ಮಾನಸಿಕವಾಗಿ ತುಂಬಾ ಸಿದ್ಧಪಡಿಸಿದ ಬಳಿಕ, ದೇಹದ ಮೇಲೆ ಪ್ರಯೋಗ ನಡೆಯುತ್ತದೆ. ಈ ಬಗ್ಗೆ ನಟಿ ಭಾವನಾ ಸ್ಪಷ್ಟವಾಗಿ ಇದರಲ್ಲಿ ಮಾತನಾಡಿದ್ದಾರೆ.

