ಅವಿವಾಹಿತೆಯಾಗಿರೋ ನಟಿ ಭಾವನಾ ಪ್ರೆಗ್ನೆನ್ಸಿ ವಿಷ್ಯ ಕೇಳಿ ಸಿಎಂ ಸಿದ್ದರಾಮಯ್ಯ ಶಾಕ್​ ಆದರಂತೆ. ಈ ಬಗ್ಗೆ ನಟಿ ಹೇಳಿದ್ದೇನು ಕೇಳಿ.. 

ಅವಿವಾಹಿತೆಯಾಗಿರೋ ನಟಿ ಭಾವನಾ ಆರು ತಿಂಗಳ ಗರ್ಭಿಣಿ ಎನ್ನುವ ಸುದ್ದಿ ತಿಳಿದಾಗಿನಿಂದಲೂ ಇದರ ಬಗ್ಗೆ ಪರ-ವಿರೋಧಗಳ ದೊಡ್ಡ ಚರ್ಚೆಯೇ ಶುರುವಾಗಿದೆ. In Vitro Fertilization (IVF) ಮೂಲಕ ಮಗು ಪಡೆಯುತ್ತಿರುವುದಕ್ಕೆ ಹಲವರು ಅಭಿನಂದನೆ ಸಲ್ಲಿಸಿದರೆ, ಮತ್ತಷ್ಟು ಮಂದಿ ಈ ಕ್ರಮ ಸರಿಯಲ್ಲ ಎನ್ನುತ್ತಿದ್ದಾರೆ. ಹಾಗೆಂದು ಈ ರೀತಿ ಮಗುವನ್ನು ಪಡೆದುಕೊಳ್ಳುತ್ತಿರುವವರು ಭಾವನಾ ಮೊದಲೇನಲ್ಲ. ಇದಾಗಲೇ ಕೆಲವು ನಟಿಯರು ಸೇರಿದಂತೆ ಹಲವು ಸಾಮಾನ್ಯ ಜನರೂ ಇದೇ ರೀತಿ ಮಗುವನ್ನು ಪಡೆದುಕೊಂಡಿದ್ದಾರೆ. ಆದರೆ ಭಾವನಾ ಸುದ್ದಿ ಮಾತ್ರ ಸಕತ್​ ಸದ್ದು ಮಾಡುತ್ತಿದೆ. ಈ ಬಗ್ಗೆ ಇದಾಗಲೇ ನಟಿ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ನಿರ್ಧಾರವನ್ನು ಮಾಡಿದ್ಯಾಕೆ ಎನ್ನುವ ಬಗ್ಗೆಯೂ ಹೇಳಿದ್ದಾರೆ.

ಇದೀಗ ನಟಿ, ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಷ್ಯ ಕೇಳಿ ಶಾಕ್​ ಆದ ಬಗ್ಗೆ ಮಾತನಾಡಿದ್ದಾರೆ. ಸಿಎಂಗೆ ವಿಷಯ ತಿಳಿದಾಗ ಏನಮ್ಮಾ ಇದು, ಸಡನ್​ ಆಗಿ ಹೇಗೆ ಸಾಧ್ಯ ಎಂದು ತಮಾಷೆಯಾಗಿಯೇ ಕೇಳಿದರು ಎಂದು ನಟಿ ಹೇಳಿದ್ದಾರೆ. ಇದೇ ವೇಳೆ ಸರ್ಕಾರದ ವತಿಯಿಂದ IVF ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ನಟಿ ಹೇಳಿದ್ದಾರೆ. ಈಗ ಇರುವುದು ಬಹುತೇಕ ಎಲ್ಲವೂ ಖಾಸಗಿ ಕೇಂದ್ರಗಳು. ಇದು ಸ್ವಲ್ಪ ದುಬಾರಿ ಆಗಿದೆ. ಆದ್ದರಿಂದ ಸರ್ಕಾರದ ವತಿಯಿಂದಲೇ ಸಾಮಾನ್ಯ ಜನರ ಕೈಗೆ ಎಟುಕುವ ರೀತಿಯಲ್ಲಿ ಒಂದು IVF ಕೇಂದ್ರದ ಸ್ಥಾಪನೆಯಾಗಬೇಕು. ಇದರಿಂದ ಬಹಳಷ್ಟು ಮಂದಿಗೆ ಅನುಕೂಲ ಆಗಲಿದೆ ಎಂದು ನಟಿ ಹೇಳಿದ್ದಾರೆ.

ಇನ್ನು ನಟಿಯ ಕುರಿತು ಹೇಳುವುದಾದರೆ, ಈ ವರ್ಷಾಂತ್ಯದಲ್ಲಿ ಅವಳಿ ಮಕ್ಕಳ ತಾಯಿಯಾಗಲಿದ್ದಾರೆ ಭಾವನಾ. IVF ಮೂಲಕ ಮಗುವನ್ನು ಪಡೆಯುವುದು ಎಂದರೆ, ಪತಿ ಮತ್ತು ಪತ್ನಿಯ ವೀರ್ಯಾಣು ಮತ್ತು ಅಂಡಾಣುಗಳನ್ನು ಒಟ್ಟಿಗೇ ಸೇರಿಸಿ ಪತ್ನಿಯ ಗರ್ಭದಲ್ಲಿ ಇರಿಸಿ ಮಗು ಮಾಡುವುದು ಒಂದಾದರೆ, ಅವಿವಾಹಿತರಾಗಿದ್ದರೆ ಅಥವಾ ಇನ್ನಾವುದೋ ಕಾರಣಕ್ಕೆ ಮಹಿಳೆಯೊಬ್ಬಳೇ ಇರುವಾಗ ಆಕೆ ಮಗುವನ್ನು ಪಡೆಯಲು ಬಯಸಿದರೆ ದಾನಿಗಳ ಮೂಲಕ ವೀರ್ಯಾಣು ಪಡೆದು ಅದನ್ನು ಮಹಿಳೆಯ ಗರ್ಭದಲ್ಲಿ ಇರಿಸಿ ಮಗು ಮಾಡಲಾಗುತ್ತದೆ.

ಭಾವನಾ ಅವಿವಾಹಿತೆಯಾಗಿರುವ ಕಾರಣದಿಂದ ದಾನಿ ನೀಡಿದ ವೀರ್ಯಾಣು ಮೂಲಕ ಮಗುವನ್ನು ಪಡೆದಿದ್ದಾರೆ. ಇಂಥ ಸಂದರ್ಭದಲ್ಲಿ ದಾನಿಯ ಹೆಸರನ್ನು ಗೋಪ್ಯವಾಗಿ ಇಡಲಾಗುತ್ತದೆ. ಈ ಬಗ್ಗೆಯೂ ಭಾವನಾ ಹೇಳಿದ್ದಾರೆ. ನಮಗೆ ಬೇಕೆಂದರೆ ನಮಗೆ ವೀರ್ಯದಾನ ಮಾಡಿದವರು ಯಾರು ಎಂದು ಹೇಳುತ್ತಾರೆ. ಅದಕ್ಕೆ ಅವಕಾಶವಿದೆ. ಆದರೆ ನಾನು ಅದನ್ನು ಕೇಳಲು ಹೋಗಲಿಲ್ಲ ಎಂದಿದ್ದಾರೆ.