ಮಗುವಿನ ಪ್ರತಿಯೊಂದು ದಾಖಲೆಯಲ್ಲಿಯೂ ಅಪ್ಪನ ಹೆಸರೇ ಕಡ್ಡಾಯವಾಗಿರುವ ನಮ್ಮ ಕಾನೂನಿನಲ್ಲಿ ದಾನಿಯ ಮೂಲಕ ಹುಟ್ಟಿದ IVF ಮಗುವಿನ ಅಪ್ಪನ ಹೆಸರು ಏನಿರುತ್ತೆ? ಕೋರ್ಟ್ ಹೇಳಿದ್ದೇನು? ಇಲ್ಲಿದೆ ವಿವರ...
ಅವಿವಾಹಿತೆಯಾಗಿರೋ ನಟಿ ಭಾವನಾ In Vitro Fertilization (IVF) ಮೂಲಕ ಆರು ತಿಂಗಳ ಗರ್ಭಿಣಿಯಾಗಿದ್ದು, ಈ ವರ್ಷಾಂತ್ಯದಲ್ಲಿ ಅವಳಿ ಮಕ್ಕಳ ತಾಯಿಯಾಗಲಿದ್ದಾರೆ ಎನ್ನುವ ಸುದ್ದಿ ಬಂದಾಗಿನಿಂದಲೂ IVF ಬಗ್ಗೆ ಹಲವು ಪ್ರಶ್ನೆಗಳು ಜನರನ್ನು ಕಾಡತೊಡಗಿದೆ. ಹಾಗೆಂದು ಈ ರೀತಿ ಮಗುವನ್ನು ಪಡೆದುಕೊಳ್ಳುತ್ತಿರುವವರು ಭಾವನಾ ಮೊದಲೇನಲ್ಲ. ಇದಾಗಲೇ ಕೆಲವು ನಟಿಯರು ಸೇರಿದಂತೆ ಹಲವು ಸಾಮಾನ್ಯ ಜನರೂ ಇದೇ ರೀತಿ ಮಗುವನ್ನು ಪಡೆದುಕೊಂಡಿದ್ದಾರೆ. ಪತಿ ಮತ್ತು ಪತ್ನಿಯ ವೀರ್ಯಾಣು ಮತ್ತು ಅಂಡಾಣುಗಳನ್ನು ಒಟ್ಟಿಗೇ ಸೇರಿಸಿ ಪತ್ನಿಯ ಗರ್ಭದಲ್ಲಿ ಇರಿಸಿ ಮಗು ಮಾಡುವುದು ಒಂದಾದರೆ, ಅವಿವಾಹಿತರಾಗಿದ್ದರೆ ಅಥವಾ ಇನ್ನಾವುದೋ ಕಾರಣಕ್ಕೆ ಮಹಿಳೆಯೊಬ್ಬಳೇ ಇರುವಾಗ ಆಕೆ ಮಗುವನ್ನು ಪಡೆಯಲು ಬಯಸಿದರೆ ದಾನಿಗಳ ಮೂಲಕ ವೀರ್ಯಾಣು ಪಡೆದು ಅದನ್ನು ಮಹಿಳೆಯ ಗರ್ಭದಲ್ಲಿ ಇರಿಸಿ ಮಗು ಮಾಡಲಾಗುತ್ತದೆ. ಭಾವನಾ ಅವಿವಾಹಿತೆಯಾಗಿರುವ ಕಾರಣದಿಂದ ದಾನಿ ನೀಡಿದ ವೀರ್ಯಾಣು ಮೂಲಕ ಮಗುವನ್ನು ಪಡೆದಿದ್ದಾರೆ. ಇಂಥ ಸಂದರ್ಭದಲ್ಲಿ ದಾನಿಯ ಹೆಸರನ್ನು ಗೋಪ್ಯವಾಗಿ ಇಡಲಾಗುತ್ತದೆ.
ದಾನಿಯ ಮೂಲಕ ವೀರ್ಯಾಣ ಪಡೆದರೆ ಹುಟ್ಟುವ ಮಗುವಿಗೆ ಅಪ್ಪ ಯಾರೆಂದು ತಿಳಿದಿರುವುದಿಲ್ಲ. ನಮ್ಮ ಭಾರತೀಯ ಕಾನೂನಿನಲ್ಲಿ ಮಗುವಿನ ಪ್ರತಿಯೊಂದು ದಾಖಲೆಯಲ್ಲಿಯೂ ಅಪ್ಪನ ಹೆಸರು ಇರಲೇಬೇಕು. ಅಮ್ಮನೇ ಹುಟ್ಟಿಸಿ, ಆಕೆಯೇ ಬೆಳೆಸಿದರೂ, ಕೆಲವೊಮ್ಮೆ ಗಂಡಿನ ಸಹಾಯವಿಲ್ಲದೇ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಮಗುವನ್ನು ಬೆಳೆಸಿದರೂ ದಾಖಲೆಯ ಪ್ರಶ್ನೆ ಬಂದಾಗ ಅಲ್ಲಿ ಆಕೆಗೆ ಗಂಡನ ಹೆಸರು, ಮಗುವಿಗೆ ಅಪ್ಪನ ಹೆಸರು ಇರಲೇಬೇಕು. ಈ ಬಗ್ಗೆ ಇದಾಗಲೇ ಸಾಕಷ್ಟು ಮಹಿಳೆಯರು ಹೋರಾಟ ಮಾಡಿ ಒಂದು ಹಂತಕ್ಕೆ ಕಾನೂನು ಬದಲಾದರೂ, ಹೋದಲ್ಲಿ, ಬಂದಲ್ಲಿ ಅಪ್ಪನ ಹೆಸರು ಇರಲೇಬೇಕಾದ ಅನಿವಾರ್ಯತೆ ಇದೆ. ಹಾಗಿದ್ದರೆ ದಾನಿಗಳ ಮೂಲಕ IVFನಿಂದ ಹುಟ್ಟುವ ಮಗುವಿನ ತಂದೆಯ ಹೆಸರು ಏನಿರುತ್ತೆ ಎಂದು ಕುತೂಹಲ ಮೂಡುವುದು ಸಹಜ.
ಅದಕ್ಕೆ ಇದಾಗಲೇ ಕೆಲವು ಹೈಕೋರ್ಟ್ಗಳು ಸ್ಪಷ್ಟನೆ ಕೊಟ್ಟಿವೆ. IVF ಜನನಗಳ ಸಂದರ್ಭದಲ್ಲಿ, ದಂಪತಿಯ ಸ್ವಂತ ಅಂಡಾಣುಗಳು ಮತ್ತು ವೀರ್ಯದ ಮೂಲಕ ಮಗು ಗರ್ಭಧರಿಸಿದ್ದರೆ, ಜನನ ಪ್ರಮಾಣಪತ್ರವು ಸಾಮಾನ್ಯವಾಗಿ ತಂದೆಯ ಹೆಸರನ್ನು ಒಳಗೊಂಡಿರುತ್ತದೆ. ಆದರೆ ದಾನಿಯ ವೀರ್ಯವನ್ನು ಬಳಸಿದರೆ, ತಾಯಿಯು ತಂದೆಯ ಹೆಸರಿಲ್ಲದೆ ಜನನ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದುದ. ಆಗ ಮಹಿಳೆ, ತಾನು ದಾನಿಯ ವೀರ್ಯದೊಂದಿಗೆ IVF ಮೂಲಕ ಗರ್ಭಧಾರಣೆ ನಡೆದಿದೆ ಎಂದು ಹೇಳುವ ಅಫಿಡವಿಟ್ ನೀಡಬೇಕಾಗುತ್ತದೆ. ಮಗುವಿನ ಜನನ ಪ್ರಮಾಣ ಪತ್ರ ಮಾಡುವ ಸಮಯದಲ್ಲಿ ಇದನ್ನು ಆಕೆ ಸಲ್ಲಿಸಬೇಕು. ಒಂಟಿ ತಾಯಂದಿರು ತಂದೆಯ ಗುರುತಿನ ಬಗ್ಗೆ ಗೋಪ್ಯತೆಯ ಹಕ್ಕನ್ನು ಹೊಂದಿದ್ದಾರೆ ಎಂದು ಕೇರಳ ಹೈಕೋರ್ಟ್ ಹೇಳಿರುವ ಕಾರಣ, ಮಹಿಳೆ ಹೀಗೆ ಮಾಡಬಹುದು.
ಸುಲಬದಲ್ಲಿ ಹೇಳಬೇಕೆಂದರೆ, ಐವಿಎಫ್‌ಗಾಗಿ ದಂಪತಿಗಳು ತಮ್ಮದೇ ಆದ ಅಂಡಾಣುಗಳು ಮತ್ತು ವೀರ್ಯವನ್ನು ಬಳಸಿದರೆ, ಜನನ ಪ್ರಮಾಣಪತ್ರವು ಸಾಮಾನ್ಯವಾಗಿ ತಂದೆಯ ಹೆಸರನ್ನು ಜೈವಿಕ ತಂದೆಯಾಗಿ ಒಳಗೊಂಡಿರುತ್ತದೆ. ಒಂಟಿ ಮಹಿಳೆ ಅಥವಾ ದಂಪತಿಗಳು IVF ಗಾಗಿ ದಾನಿಯ ವೀರ್ಯವನ್ನು ಬಳಸಿದರೆ, ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರನ್ನು ಬಹಿರಂಗಪಡಿಸದಿರಲು ತಾಯಿಗೆ ಅವಕಾಶವಿದೆ. ಅಂತಹ ಸಂದರ್ಭಗಳಲ್ಲಿ, ದಾನಿಯ ವೀರ್ಯವನ್ನು ಬಳಸಿಕೊಂಡು IVF ಮೂಲಕ ಮಗುವನ್ನು ಗರ್ಭಧರಿಸಲಾಗಿದೆ ಎಂದು ಹೇಳುವ ಅಫಿಡವಿಟ್ ಅನ್ನು ತಾಯಿ ಜನನ ನೋಂದಣಿದಾರರಿಗೆ ಸಲ್ಲಿಸಬೇಕಾಗಬಹುದು. ಇದು ಪರಿಸ್ಥಿತಿಯನ್ನು ಸ್ಪಷ್ಟಪಡಿಸಲು ಮತ್ತು ನಂತರ ಸಂಭವನೀಯ ವಿವಾದಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಅಪ್ಪ-ಅಮ್ಮ ಇಬ್ಬರ ಹೆಸರನ್ನೂ ಬರೆಯಬೇಕಾಗುತ್ತದೆ. ಅಂಥ ಸಂದರ್ಭದಲ್ಲಿನ ಸಮಸ್ಯೆಗಳಿಗೆ ಸದ್ಯ ಪರಿಹಾರ ಇದ್ದಂತಿಲ್ಲ!
