ಗುಂಟೂರು(ಸೆ.05): 74 ವರ್ಷದ ವೃದ್ಧೆಯೋರ್ವರು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಪ್ರಕರಣ ಆಂಧ್ರದ ಗುಂಟೂರಿನಲ್ಲಿ ನಡೆದಿದೆ. 

ಮಂಗಯಮ್ಮ ಎಂಬ ವೃದ್ಧೆ ತಮ್ಮ 74ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಗರ್ಭಿಣಿಯಾಗಿದ್ದು, ಗುಂಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಪೂರ್ವ ಗೋದಾವರಿ ಜಿಲ್ಲೆಯ ನೆಲಮರ್ತಿ ಗ್ರಾಮದ ಎರಮಟ್ಟಿ ರಾಜರಾವ್ ಮತ್ತು ಮಂಗಯಮ್ಮ ಜೋಡಿ ಮಾರ್ಚ್ 22, 1962ರಲ್ಲಿ ವಿವಾಹವಾಗಿದ್ದರು. ಆದರೆ ಮಕ್ಕಳಿಗಾಗಿ ಈ ಜೋಡಿ 50 ವರ್ಷಗಳಿಂದ ಕಾಯುತ್ತಿತ್ತು.

ಕೃತಕ ಗರ್ಭಧಾರಣೆ ಕುರಿತು ತಿಳಿದುಕೊಂಡ ಮಂಗಯಮ್ಮ, ಅದರಂತೆ ತಾವೂ ಕೂಡ ಕೃತಕ ಗರ್ಭಧಾರಣೆ ಮೊರೆ ಹೋಗುವ ನಿರ್ಧಾರ ಕೈಗೊಮಡು ಅದರಂತೆ ಇದೀಗ ಆರೋಗ್ಯಕರ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ.

ಗುಂಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಐವಿಎಫ್ ತಜ್ಞ ಡಾ.ಶಾನಕ್ಕಯಲಾ ಅವರು ಅರುಣಾ ಉಮಾಶಂಕರ್ ನೆರವಿನಿಂದ ಈ ವೃದ್ಧ ದಂಪತಿಗೆ ಇದೀಗ ಪೋಷಕರಾಗುವ ಭಾಗ್ಯ ದೊರೆತಿದೆ.

ಈ ಹಿಂದೆ ದಲ್ಜಿಂದರ್ ಕೌರ್ ಎಂಬ ವೃದ್ಧೆ ತಮ್ಮ 70ನೇ ಇಳಿವಯಸ್ಸಿನಲ್ಲಿ ತಾಯಿಯಾಗಿದ್ದು ದಾಖಲೆಯಾಗಿತ್ತು. ಆದರೆ ಮಂಗಯಮ್ಮ ಇದೀಗ 74ರ ವಯಸ್ಸಿನಲ್ಲಿ ತಾಯಿಯಾಗಿದ್ದು ಹೊಸ ವಿಶ್ವ ದಾಖಲೆ ಬರೆದಿದ್ದಾರೆ ಎಂದು ಡಾ. ಉಮಶಂಕರ್ ಹೇಳಿದ್ದಾರೆ.