Blood Tests After 30: 30 ವರ್ಷ ವಯಸ್ಸಿನ ನಂತರ, ಹಾರ್ಮೋನ್ ಬದಲಾವಣೆಗಳು, ನಿಧಾನವಾಗುವ ಚಯಾಪಚಯ ಕ್ರಿಯೆ ಮತ್ತು ಜೀವನಶೈಲಿಯಿಂದಾಗಿ ಮಹಿಳೆಯರು ವಿವಿಧ ಕಾಯಿಲೆಗಳ ಅಪಾಯವನ್ನು ಎದುರಿಸುತ್ತಾರೆ. ನಿಯಮಿತ ರಕ್ತ ಪರೀಕ್ಷೆಗಳು ಕಾಯಿಲೆಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆಯಲು ಸಹಕಾರಿಯಾಗುತ್ತವೆ.
30+ ಮಹಿಳೆಯರು ವರ್ಷಕ್ಕೊಮ್ಮೆ ಮಾಡಿಸಿಕೊಳ್ಳಬೇಕಾದ ರಕ್ತ ಪರೀಕ್ಷೆ
ವಯಸ್ಸು ಹೆಚ್ಚಾಗುತ್ತಿದ್ದಂತೆ ಮಹಿಳೆಯರ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ 30 ವರ್ಷ ದಾಟಿದ ನಂತರ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳು ಯಾವಾಗಲೂ ಸ್ಪಷ್ಟವಾದ ಲಕ್ಷಣಗಳ ರೂಪದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಬ್ಲಡ್ ಶುಗರ್, ಕೊಲೆಸ್ಟ್ರಾಲ್, ಥೈರಾಯ್ಡ್ ಅಥವಾ ಹಿಮೊಗ್ಲೋಬಿನ್ ಮಟ್ಟದಲ್ಲಿ ಬದಲಾವಣೆಗಳಿದ್ದರೂ ದೀರ್ಘಕಾಲ ಯಾವುದೇ ಸ್ಪಷ್ಟ ಲಕ್ಷಣಗಳು ಕಂಡುಬರದೇ ಇರಬಹುದು. ಹೀಗಾಗಿ ವಯಸ್ಸು ಹೆಚ್ಚಾದಂತೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸುವುದು ಮುಖ್ಯ. 30 ವರ್ಷ ದಾಟಿದ ಮಹಿಳೆಯರಿಗೆ ಯಾವ ಪರೀಕ್ಷೆಗಳು ಅಗತ್ಯವಾಗಿ ಮಾಡಬೇಕು ನೋಡೋಣ.
HbA1c ಮತ್ತು ಫಾಸ್ಟಿಂಗ್ ಬ್ಲಡ್ ಶುಗರ್
ಮಧುಮೇಹ ಆರಂಭಿಕ ಹಂತದಲ್ಲಿ ಹಲವು ಬಾರಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದೇ ಇರಬಹುದು. HbA1c Test ಕಳೆದ ಸುಮಾರು 2ರಿಂದ 3 ತಿಂಗಳ ಸರಾಸರಿ ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ಮಾಹಿತಿ ನೀಡುತ್ತದೆ. ಮತ್ತೊಂದೆಡೆ, ಫಾಸ್ಟಿಂಗ್ ಬ್ಲಡ್ ಶುಗರ್ ಪರೀಕ್ಷೆಯು ನಿರ್ದಿಷ್ಟ ಸಮಯದಲ್ಲಿ ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ತಿಳಿಸುತ್ತದೆ.
ಲಿಪಿಡ್ ಪ್ರೊಫೈಲ್
ಈ ಪರೀಕ್ಷೆಯಲ್ಲಿ LDL, HDL, Triglycerides ಮತ್ತು ಒಟ್ಟು ಕೊಲೆಸ್ಟ್ರಾಲ್l ಮಟ್ಟಗಳನ್ನು ಪರಿಶೀಲಿಸಲಾಗುತ್ತದೆ. ಹೆಚ್ಚಿದ LDL ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಆದರೆ ದೀರ್ಘಕಾಲದವರೆಗೆ ಹೆಚ್ಚಾಗಿದ್ದರೆ ರಕ್ತನಾಳಗಳಲ್ಲಿ ಫ್ಲೇಕ್ ಉಂಟಾಗಬಹುದು. ಇದರಿಂದ ಹೃದಯಾಘಾತ ಅಥವಾ ಸ್ಟ್ರೋಕ್ ಅಪಾಯ ಹೆಚ್ಚಾಗಬಹುದು.
CBC ಮತ್ತು ಹಿಮೋಗ್ಲೋಬಿನ್
ಮಹಿಳೆಯರಲ್ಲಿ ಕಬ್ಬಿಣಾಂಶ ಕೊರತೆ ಮತ್ತು ಅನಿಮಿಯಾ ಸಾಮಾನ್ಯ ಸಮಸ್ಯೆಯಾಗಿರಬಹುದು. ವಿಶೇಷವಾಗಿ ಪೀರಿಯಡ್ಸ್ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವ ಮಹಿಳೆಯರಲ್ಲಿ ಇದರ ಅಪಾಯ ಹೆಚ್ಚಿರಬಹುದು. CBC (Complete Blood Count) ಪರೀಕ್ಷೆಯ ಮೂಲಕ ಹಿಮೋಗ್ಲೋಬಿನ್ ಜೊತೆಗೆ ಕೆಂಪು ರಕ್ತ ಕಣ, ಬಿಳಿ ರಕ್ತ ಕಣ, ಮತ್ತು ಪ್ಲೇಟ್ಲೇಟ್ಸ್ ಸ್ಥಿತಿಯನ್ನೂ ತಿಳಿದುಕೊಳ್ಳಬಹುದು. ನಿರಂತರ ದಣಿವು, ದುರ್ಬಲತೆ, ತಲೆಸುತ್ತುವಿಕೆ ಅಥವಾ ಉಸಿರಾಟದ ತೊಂದರೆ ಇದ್ದರೆ ಈ ಪರೀಕ್ಷೆ ಉಪಯುಕ್ತವಾಗಬಹುದು. ಎನಿಮಿಯಾ ಸಮಸ್ಯೆ ಇರುವ ಮಹಿಳೆಯರಿಗೆ ವೈದ್ಯರು ಫೆರಿಟಿನ್ ಮತ್ತು ಐರನ್ ಪ್ರೊಫೈಲ್ ಪರೀಕ್ಷೆಗಳನ್ನೂ ಸೂಚಿಸಬಹುದು.
TSH ಪರೀಕ್ಷೆ
ಥೈರಾಯ್ಡ್ ಹಾರ್ಮೋನ್’ಗಳಲ್ಲಿ ಆಗುವ ಬದಲಾವಣೆಗಳು ಮಹಿಳೆಯರ ತೂಕ, ಮಾಸಿಕ ಋತುಚಕ್ರ, ಶಕ್ತಿ, ನಿದ್ರೆ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ ಕೇವಲ ವಯಸ್ಸಿನ ಆಧಾರದ ಮೇಲೆ ಪ್ರತಿಯೊಬ್ಬ ಮಹಿಳೆಯೂ ಪ್ರತಿವರ್ಷ TSH ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಿಲ್ಲ. ಕುಟುಂಬದಲ್ಲಿ ಥೈರಾಯ್ಡ್ ಸಮಸ್ಯೆಯ ಇತಿಹಾಸ, ಮಾಸಿಕ ಋತುಚಕ್ರದಲ್ಲಿ ಬದಲಾವಣೆ, ಏಕಾಏಕಿ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ಹೆಚ್ಚು ದಣಿವು ಅಥವಾ ಗರ್ಭಧಾರಣೆಯ ಸಂದರ್ಭದಲ್ಲಿ ವೈದ್ಯರು TSH ಪರೀಕ್ಷೆಯನ್ನು ಸಲಹೆ ಮಾಡಬಹುದು.
ಕಿಡ್ನಿ ಫಂಕ್ಷನ್ ಟೆಸ್ಟ್
ಕ್ರಿಯೇಟಿನ್ ಮತ್ತು eGFR ಮುಂತಾದ ಪರೀಕ್ಷೆಗಳು ಮೂತ್ರಪಿಂಡಗಳ ಕಾರ್ಯಕ್ಷಮತೆಯನ್ನು ಅಂದಾಜಿಸಲು ಸಹಾಯ ಮಾಡುತ್ತವೆ. ವಿಶೇಷವಾಗಿ ಡಯಾಬಿಟೀಸ್, ಅಧಿಕ ರಕ್ತದ ಒತ್ತಡ,ಕಿಡ್ನಿ ಸಮಸ್ಯೆ ಅಥವಾ ದೀರ್ಘಕಾಲ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ಮಹಿಳೆಯರಿಗೆ ಈ ಪರೀಕ್ಷೆಗಳ ಅಗತ್ಯ ಇದೆ.
ಲಿವರ್ ಫಂಕ್ಷನ್ ಟೆಸ್ಟ್
ALT, AST, ಬಿಲ್ಲಿರುಬಿನ್ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸುವ ಮೂಲಕ ಲಿವರ್ ನ ಸ್ಥಿತಿಯನ್ನು ಪ್ರಾಥಮಿಕವಾಗಿ ಅಂದಾಜಿಸಬಹುದು. ಸ್ಥೂಲಕಾಯತೆ, ಡಯಾಬಿಟೀಸ್, ಹೆಚ್ಚಿದ Triglycerides, ಆಲ್ಕೋಹಾಲ್ ಸೇವನೆ ಅಥವಾ ಕೆಲವು ಔಷಧಿಗಳನ್ನು ದೀರ್ಘಕಾಲ ಬಳಸುವುದರಿಂದ ಲಿವರ್ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಇಂತಹ ಸಂದರ್ಭಗಳಲ್ಲಿ ವೈದ್ಯರು ಲಿವರ್ ಫಂಕ್ಷನ್ ಟೆಸ್ಟ್ ಜೊತೆಗೆ ಅಗತ್ಯವಿದ್ದರೆ ಇತರ ಪರೀಕ್ಷೆಗಳನ್ನೂ ಸೂಚಿಸಬಹುದು.


