ಕೇರಳದ ಕಕ್ಕನಾಡ್‌ನಲ್ಲಿ ಬಶೀರ್ ಎಂಬುವವರ ತೋಟದಲ್ಲಿ ಸುವರ್ಣ ಗೆಡ್ಡೆ ಗಿಡದಿಂದ ಬಾಳೆಗೊನೆಯಂತಹ ವಿಚಿತ್ರ ಆಕಾರ ಮೂಡಿಬಂದಿದೆ. ಇದನ್ನು ನೋಡಲು ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಿದ್ದಾರೆ. ಇದು ಸಸ್ಯದಲ್ಲಿ ಉಂಟಾದ ಜನಿತಕ ರೂಪಾಂತರದಿಂದಾಗಿ ಬೆಳೆದಿದೆ ಎಂದು ಕೃಷಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭೂಮಿಯಲ್ಲಿ ಕೆಲವೊಮ್ಮೆ ವಿಜ್ಞಾನಕ್ಕೂ ನಿಲುಕದ ಅಚ್ಚರಿಗಳು ನಡೆಯುತ್ತವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಕೇರಳದ ಕಕ್ಕನಾಡ್‌ನಲ್ಲಿ ಸುವರ್ಣ ಗೆಡ್ಡೆ ಗಿಡದಿಂದ ಬಾಳೆಗೊನೆಯಂತಹ ಆಕಾರ ಮೂಡಿಬಂದಿದ್ದು, ಸ್ಥಳೀಯರನ್ನು ಹಾಗೂ ಕೃಷಿ ಪ್ರಿಯರನ್ನು ಬೆರಗುಗೊಳಿಸಿದೆ.

ಕಕ್ಕನಾಡು ಎಡಚಿಳ ಅಕಂಪುರತು ನಿವಾಸಿ, ಸಮಾಜ ಸೇವಕ ಬಶೀರ್ ಎಂಬುವವರ ಮನೆಯ ತೋಟದಲ್ಲಿ ಈ ಅಚ್ಚರಿ ಘಟನೆ ನಡೆದಿದೆ. ಬಶೀರ್ ತಮ್ಮ ತೋಟದಲ್ಲಿ ಎಂದಿನಂತೆ ಸುವರ್ಣ ಗೆಡ್ಡೆಯನ್ನು ನೆಟ್ಟು ನೀರೆರೆದು ಪೋಷಿಸಿದ್ದರು. ಆದರೆ, ಆ ಗೆಡ್ಡೆಯಿಂದ ಗಿಡ ಬೆಳೆದು ಬಂದಾಗ ಅದರ ತುದಿಯಲ್ಲಿ ಬಾಳೆಗೊನೆಯಂತೆ ಕಾಯಿಗಳ ರೀತಿಯಲ್ಲಿ ಆಕಾರ ಮೂಡಿತ್ತು.

ಜನರ ದಂಡು ಹಾಗೂ ಕುತೂಹಲ:

ಸುವರ್ಣ ಗೆಡ್ಡೆಯಿಂದ ಅಕ್ಷರಶಃ ಬಾಳೆಗೊನೆಯೇ ರೂಪುಗೊಂಡಂತೆ ಕಾಣುತ್ತಿದ್ದ ಈ ವಿಚಿತ್ರ ಹಾಗೂ ಅಪರೂಪದ ದೃಶ್ಯವನ್ನು ನೋಡಲು ಬಶೀರ್ ಅವರ ಮನೆಯ ಬಳಿ ಜನರು ಹರಿದುಬಂದರು. ಇದನ್ನು ಕಣ್ಣಾರೆ ಕಂಡ ಎಲ್ಲರೂ ಒಂದು ಕ್ಷಣ ದಂಗಾಗಿ ಹೋದರು. ನಂತರ ಈ ಕುತೂಹಲಕಾರಿ ಗೆಡ್ಡೆಯನ್ನು ತೋಟದಿಂದ ಕಿತ್ತು ಬಶೀರ್ ತಮ್ಮ ಮನೆಯ ಮುಂಭಾಗದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಾಗಿ ಇಟ್ಟರು. ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಆಗಿಮಿಸಿದ್ದಾರೆ.

ಕೃಷಿ ಇಲಾಖೆ ಸ್ಪಷ್ಟನೆ:

ಈ ವಿಸ್ಮಯದ ಸುದ್ದಿ ಹಬ್ಬುತ್ತಿದ್ದಂತೆ, ಕಕ್ಕನಾಡು ಕೃಷಿ ಇಲಾಖೆಯ ಅಧಿಕಾರಿಗಳು ಬಶೀರ್ ಅವರ ಮನೆಗೆ ಭೇಟಿ ನೀಡಿ ಸುವರ್ಣ ಗೆಡ್ಡೆಯಲ್ಲಿ ಬೆಳೆದ ಬಾಳೆಗೊನೆಯನ್ನು ಪರಿಶೀಲನೆ ನಡೆಸಿದರು. ಇದು ನಿಜವಾದ ಬಾಳೆಗೊನೆಯಲ್ಲ ಬದಲಿಗೆ ಸುವರ್ಣ ಗೆಡ್ಡೆ ಗಿಡವೇ ಆಗಿದ್ದು, ಸಸ್ಯದಲ್ಲಿ ಉಂಟಾದ ಜುವೆನೆಟಿಕ್ ಮ್ಯೂಟೇಶನ್ (ಜನಿತಕ ರೂಪಾಂತರ - Genetic Mutation) ಕಾರಣದಿಂದ ಈ ರೀತಿಯ ವಿಚಿತ್ರ ಆಕಾರ ಪಡೆದುಕೊಂಡಿರಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಾರಣ ಏನೇ ಇರಲಿ, ಈ ಅಪರೂಪದ 'ಸುವರ್ಣಗೆಡ್ಡೆ ಬಾಳೆಗೊನೆ'ಯನ್ನು ಕಣ್ಣಾರೆತುಂಬಿಕೊಳ್ಳಲು ಇಂದಿಗೂ ಬಶೀರ್ ಅವರ ಮನೆಗೆ ನಿತ್ಯ ನೂರಾರು ಪ್ರವಾಸಿಗರು ಮತ್ತು ಸಾರ್ವಜನಿಕರು ಭೇಟಿ ನೀಡುತ್ತಿದ್ದಾರೆ.