Uncontacted Amazon tribe: ಕಾಡಿನ ಮೇಲೆ ಹಾರುತ್ತಿದ್ದ ವಿಮಾನದ ಕಡೆಗೆ ಬಿಲ್ಲು ಗುರಿಯಿಟ್ಟು ನಿಂತಿರುವ ಬುಡಕಟ್ಟು ಜನರ ನೈಜ ದೃಶ್ಯಗಳು, ಕೃತಕ ಬುದ್ಧಿಮತ್ತೆ (AI) ಯುಗದಲ್ಲೂ ಇಡೀ ಜಗತ್ತನ್ನು ಬೆರಗುಗೊಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

ರಡು ದಿನದ ಹಿಂದೆಯಷ್ಟೇ ಅಮೆಜಾನ್‌ನ ದಟ್ಟ ಮಳೆಕಾಡಿನ ಆಳದಲ್ಲಿ, ಬಾಹ್ಯ ಪ್ರಪಂಚದ ಸಂಪರ್ಕವೇ ಇಲ್ಲದೆ ಬದುಕುತ್ತಿರುವ ಅಪರೂಪದ ಬುಡಕಟ್ಟು ಜನಾಂಗವೊಂದು ವಿಮಾನದ ಕ್ಯಾಮೆರಾಗೆ ಸೆರೆಯಾಗಿರುವ ಬಗ್ಗೆ ತಿಳಿಸಿದ್ದೆವು. ಇದೀಗ ಮತ್ತೊಂದು ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಇಡೀ ವಿಶ್ವದಾದ್ಯಂತ ನೆಟ್ಟಿಗರು ಮಾಡುತ್ತಿರುವ ಆಶ್ಚರ್ಯಕರ ಕಾಮೆಂಟ್‌ಗಳು ಹಾಗೂ ಚರ್ಚೆಗಳು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿವೆ!

ಬ್ರೆಜಿಲ್ ಮತ್ತು ಪೆರು ಗಡಿಭಾಗದ ಅಮೆಜಾನ್ ದಟ್ಟ ಮಳೆಕಾಡಿನಲ್ಲಿ ಬಾಹ್ಯ ಪ್ರಪಂಚದ ಸಂಪರ್ಕವೇ ಇಲ್ಲದೆ ಜೀವಿಸುತ್ತಿರುವ ಅತ್ಯಂತ ಅಪರೂಪದ ಬುಡಕಟ್ಟು ಸಮುದಾಯವೊಂದು (Uncontacted Tribe) ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಬ್ರೆಜಿಲ್‌ನ ರಾಷ್ಟ್ರೀಯ ಸ್ಥಳೀಯ ಸಂಸ್ಥೆಯಾದ ‘ಫುನೈ’ (FUNAI - National Indian Foundation) ಈ ಐತಿಹಾಸಿಕ ವಿಡಿಯೋ ಮತ್ತು ಫೋಟೋಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ವೈರಲ್ ದೃಶ್ಯದಲ್ಲೇನಿದೆ?

ಕಾಡಿನ ಮೇಲೆ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನವನ್ನು ಕಂಡ ಬುಡಕಟ್ಟು ಜನರು, ತಮ್ಮ ಪ್ರಾಂತ್ಯವನ್ನು ರಕ್ಷಿಸಿಕೊಳ್ಳಲು ರಕ್ಷಣಾತ್ಮಕ ನಿಲುವು (Defensive posture) ತಳೆದಿದ್ದಾರೆ. ಅಂದರೆ ಮೈಗೆ ಕೆಂಪು ಬಣ್ಣವನ್ನು ಬಳಿದುಕೊಂಡಿರುವ ಇಬ್ಬರು ಬುಡಕಟ್ಟು ಪುರುಷರು ಆಕಾಶದಲ್ಲಿ ಹಾರುತ್ತಿದ್ದ ವಿಮಾನದ ಕಡೆಗೇ ಬಿಲ್ಲು-ಬಾಣಗಳನ್ನು ನೇರವಾಗಿ ಗುರಿಯಿಟ್ಟು ನಿಂತಿರುವ ದೃಶ್ಯ ಈ ವಿಡಿಯೋದಲ್ಲಿದೆ. "ನಮ್ಮ ಪ್ರದೇಶಕ್ಕೆ ಯಾರೂ ಬರಬೇಡಿ, ನಮ್ಮನ್ನು ಮುಟ್ಟಬೇಡಿ" ಎಂದು ಬಾಹ್ಯ ಜಗತ್ತಿಗೆ ಎಚ್ಚರಿಕೆ ನೀಡುವಂತಿತ್ತು ಅವರ ಆ ಭಂಗಿ.

ಈ ಬುಡಕಟ್ಟು ಜನರೊಂದಿಗೆ ಯಾವುದೇ ರೀತಿ ನೇರ ಸಂಪರ್ಕ ಬೆಳೆಸದೆ, ಅವರನ್ನು ದೂರದಿಂದಲೇ ರಕ್ಷಿಸುವ ಉದ್ದೇಶದಿಂದ ಈ ವಿಮಾನ ಹಾರಾಟವನ್ನು (Overflight) ನಡೆಸಲಾಗಿತ್ತು. ಆಧುನಿಕ ನಾಗರಿಕತೆಯಿಂದ ಸಂಪೂರ್ಣ ಪ್ರತ್ಯೇಕವಾಗಿ ಬದುಕುತ್ತಿರುವ ಮಾನವ ಸಮುದಾಯಗಳು ಇಂದಿಗೂ ಇವೆ ಎಂಬುದಕ್ಕೆ ಈ ವಿಡಿಯೋ ಬಲವಾದ ಸಾಕ್ಷಿಯಾಗಿದೆ.

ಈ ಅಸ್ಪೃಶ್ಯ ಬುಡಕಟ್ಟು ಜನರು ಅಕ್ರಮ ಮರ ಕಡಿಯುವವರು (Illegal loggers), ಚಿನ್ನದ ಗಣಿಗಾರರು ಮತ್ತು ಅರಣ್ಯನಾಶದಿಂದ ತೀವ್ರ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಹೊರಗಿನ ಪ್ರಪಂಚದ ಸಾಮಾನ್ಯ ಶೀತ, ಕೆಮ್ಮು ಅಥವಾ ಜ್ವರದಂತಹ ವೈರಸ್‌ಗಳನ್ನು ಎದುರಿಸುವ ನೈಸರ್ಗಿಕ ರೋಗನಿರೋಧಕ ಶಕ್ತಿ (Immunity) ಇವರ ದೇಹದಲ್ಲಿ ಇರುವುದಿಲ್ಲ. ಹೊರಗಿನವರ ಸಂಪರ್ಕದಿಂದ ಇಡೀ ಸಮುದಾಯವೇ ನಾಶವಾಗುವ ಅಪಾಯವಿರುತ್ತದೆ.

ಅಮೆಜಾನ್ ಕಾಡಿನ ರಕ್ಷಣೆ ಎಷ್ಟು ಮುಖ್ಯ ಎಂಬುದನ್ನು ಈ ದೃಶ್ಯ ಜಗತ್ತಿಗೆ ಸಾರಿದೆ. ‘ಫುನೈ’ ಸಂಸ್ಥೆಯು ಈ ದೃಶ್ಯಾವಳಿಗಳ ಆಧಾರದ ಮೇಲೆ, ಆ ಭಾಗವನ್ನು ‘ರಕ್ಷಿತ ಅರಣ್ಯ ವಲಯ’ವೆಂದು ಘೋಷಿಸಿ, ಹೊರಗಿನವರು ಯಾರೂ ಒಳನುಸುಳದಂತೆ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

"2026ರಲ್ಲೂ ಪ್ರಪಂಚದ ಉಳಿದ ಭಾಗದಿಂದ ಸಂಪೂರ್ಣ ಪ್ರತ್ಯೇಕವಾಗಿ ಬದುಕುತ್ತಿರುವ ಮನುಷ್ಯರ ಗುಂಪು ಇರಲು ಹೇಗೆ ಸಾಧ್ಯ? ಇದು ನಿಜಕ್ಕೂ ಎಷ್ಟೊಂದು ಆಶ್ಚರ್ಯಕರ ಸಂಗತಿ! ತಮ್ಮ ಹಿರಿಯರಿಂದ ಪೀಳಿಗೆಯ ಮೂಲಕ ಬಂದಿರುವ ಜ್ಞಾನದಿಂದ ಅವರಿಗೆ ಎಷ್ಟು ವಿಷಯಗಳು ಗೊತ್ತಿರಬಹುದು ಎಂದು ನನಗೆ ಅಚ್ಚರಿಯಾಗುತ್ತಿದೆ. ಅಂದರೆ, ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಿದ್ದನ್ನು ಅಥವಾ ಲೋಹದ ಕ್ಯಾಪ್ಸುಲ್‌ಗಳಲ್ಲಿ (ವಿಮಾನಗಳಲ್ಲಿ) ಹಾರಾಡುವುದನ್ನು ಅವರು ಊಹಿಸಿಕೊಳ್ಳಲು ಸಾಧ್ಯವೇ? ಬೇಟೆಯಾಡಲು ಹೋದಾಗ ಅವರು ಎಂದಾದರೂ ರೈಲು ಅಥವಾ ಕನಿಷ್ಠ ಕಾರುಗಳನ್ನಾದರೂ ನೋಡಿದ್ದಾರೆಯೇ? ತಂತ್ರಜ್ಞಾನದ ಬಗ್ಗೆ ಅವರಿಗಿರುವ ಜ್ಞಾನದ ಮಿತಿ ಎಲ್ಲಿಯವರೆಗೆ ಇರಬಹುದು? ಮೊಬೈಲ್ ಫೋನ್‌ಗಳು, ಟಿವಿ, ಈ ಡಿಜಿಟಲ್ ಯುಗ ಅಥವಾ ಬರೆದಿರುವ ಅಕ್ಷರಗಳ (ಲಿಪಿಯ) ಬಗ್ಗೆ ಅವರಿಗೇನಾದರೂ ಗೊತ್ತಿದೆಯೇ? ಅಸಲಿಗೆ ಅವರಿಗೆ ಏನು ತಾನೇ ಗೊತ್ತು ಗುರು. ನಿಜಕ್ಕೂ ಎಷ್ಟು ಗೊಂದಲ ಮೂಡಿಸುತ್ತಿದೆ! ಅಂದಹಾಗೆ, ಇದೇನು AI (ಕೃತಕ ಬುದ್ಧಿಮತ್ತೆ) ಸೃಷ್ಟಿಸಿದ್ದಲ್ಲ ತಾನೇ?"

"2026ರ ಈ ಆಧುನಿಕ ಕಾಲದಲ್ಲೂ ಇಂತಹ ಮನುಷ್ಯರು ಇನ್ನೂ ಇದ್ದಾರೆ ಎನ್ನುವುದೇ ತಲೆ ಕೆಡಿಸುವ (ಮೈಜುಮ್ಮೆನಿಸುವ) ವಿಷಯ. ಒಂದು ವೇಳೆ ನೀವು ಅಮೆಜಾನ್ ಕಾಡಿನೊಳಗೆ ಹೋದರೆ, ಅವರು ನಿಮ್ಮನ್ನು ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ ಕೊಂದು ಹಾಕುತ್ತಾರೆ. ಮತ್ತು ಅದಕ್ಕಾಗಿ ಅವರನ್ನು ಯಾರೂ ಬಂಧಿಸುವುದೂ ಇಲ್ಲ, ಯಾವುದೇ ಕೋರ್ಟ್‌ನಲ್ಲಿ ವಿಚಾರಣೆಗೂ ಒಳಪಡಿಸುವುದಿಲ್ಲ..." ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ನೀವಿಲ್ಲಿ ನೋಡಬಹುದು.

ಇಲ್ಲಿದೆ ವಿಡಿಯೋ 

View post on Instagram