ಉದ್ಯಮಿಯೊಬ್ಬರಿಗೆ ಸುಳ್ಳು ಅತ್ಯಾ*ಚಾರ ಪ್ರಕರಣದ ಬೆದರಿಕೆಯೊಡ್ಡಿ 20 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 7 ಲಕ್ಷ ರೂ.ಗೆ ಡೀಲ್ ಕುದುರಿಸಿ, ಮೊದಲ ಕಂತಾಗಿ 2.5 ಲಕ್ಷ ರೂ. ಪಡೆಯುತ್ತಿದ್ದಾಗ ಪೂಜಾ ಪ್ರಕಾಶ್ ಎಂಬಾಕೆ ಸಿಕ್ಕಿಬಿದ್ದಿದ್ದಾಳೆ. ಈಕೆಯ ಬಂಧನದ ವಿಡಿಯೋ ಈಗ ವೈರಲ್ ಆಗಿದೆ.

ಮಧ್ಯಪ್ರದೇಶದ ಜಬಲ್ಪುರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಸುಳ್ಳು ಅತ್ಯಾ*ಚಾರ ಪ್ರಕರಣದ ಆರೋಪ ಹೊರಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಯುವತಿಯೊಬ್ಬಳನ್ನು ಪೊಲೀಸರು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ. ಹೋಟೆಲ್‌ನಲ್ಲಿ ಉದ್ಯಮಿಯಿಂದ ಹಣ ಪಡೆಯುತ್ತಿದ್ದಾಗ ಖತರ್ನಾಕ್ ಮಹಿಳೆ ಪೊಲೀಸರ ಅತಿಥಿಯಾಗಿದ್ದಾರೆ.

ಜಬಲ್ಪುರದ ರಿಯಲ್ ಎಸ್ಟೇಟ್ ಉದ್ಯಮಿ ಸಾರ್ಥಕ್ ಸಿಂಗ್ (34) ಎಂಬುವವರೇ ಬ್ಲ್ಯಾಕ್‌ಮೇಲ್‌ಗೆ ಒಳಗಾದವರು. ಪೂಜಾ ಪ್ರಕಾಶ್ (28) ಅಲಿಯಾಸ್ ಪೂಜಾ ರೈದಾಸ್ ಬಂಧಿತ ಆರೋಪಿ. ಡ್ಯಾನ್ಸ್ ಪ್ರೋಗ್ರಾಂ ಹಾಗೂ ಡೇಟಿಂಗ್ ಆ್ಯಪ್ ಮೂಲಕ ಸಾರ್ಥಕ್ ಅವರಿಗೆ ಪರಿಚಯವಾಗಿದ್ದ ಪೂಜಾ, ಸ್ನೇಹ ಬೆಳೆಸಿದ ಬಳಿಕ ಅಸಲಿ ಆಟ ಶುರು ಮಾಡಿದ್ದಳು.

20 ಲಕ್ಷಕ್ಕೆ ಬೇಡಿಕೆ, 7 ಲಕ್ಷಕ್ಕೆ ಡೀಲ್:

ಪೂಜಾ ಸಾರ್ಥಕ್ ಬಳಿ ಮೊದಲು 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಹಣ ನೀಡದಿದ್ದರೆ ಸುಳ್ಳು ಅತ್ಯಾ*ಚಾರ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಳು. ಅಂತಿಮವಾಗಿ 7 ಲಕ್ಷ ರೂ.ಗೆ ಡೀಲ್ ಫಿಕ್ಸ್ ಆಗಿತ್ತು ಎಂದು 'ದೈನಿಕ್ ಭಾಸ್ಕರ್' ವರದಿ ಮಾಡಿದೆ. ಅಷ್ಟೇ ಅಲ್ಲದೆ, ಉದ್ಯಮಿ ಸಾರ್ಥಕ್ ತನ್ನ ಹೆಂಡತಿಗೆ ಡಿವೋರ್ಸ್ ನೀಡಿ ತಾನೇ ಮದುವೆಯಾಗಬೇಕು ಎಂದೂ ಆಕೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ.

Scroll to load tweet…

ಖೆಡ್ಡಾಗೆ ಬಿದ್ದ ಖತರ್ನಾಕ್ ಲೇಡಿ:

ಬೆದರಿಕೆಗೆ ಹೆದರದೆ ಸಾರ್ಥಕ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ತಂತ್ರದಂತೆ, ಮೊದಲ ಕಂತಿನ 2.5 ಲಕ್ಷ ರೂ. ಹಣವನ್ನು ನೀಡುವುದಾಗಿ ಗುರುವಾರ ಪೂಜಾಳನ್ನು ಹೋಟೆಲ್ ಒಂದಕ್ಕೆ ಕರೆಸಿಕೊಳ್ಳಲಾಗಿತ್ತು. ಹಣ ಪಡೆಯುತ್ತಿದ್ದ ವೇಳೆ ಮಫ್ತಿಯಲ್ಲಿದ್ದ ಜಬಲ್ಪುರ ಪೊಲೀಸರು ಏಕಾಏಕಿ ದಾಳಿ ನಡೆಸಿ ಪೂಜಾಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಈ ವೇಳೆ ಆಕೆಯ ಬಳಿಯಿದ್ದ 2.5 ಲಕ್ಷ ರೂ. ಹಣವನ್ನೂ ಜಪ್ತಿ ಮಾಡಲಾಗಿದೆ.

ಅರೆಸ್ಟ್ ವಿಡಿಯೋ ವೈರಲ್, ನೆಟ್ಟಿಗರ ಚರ್ಚೆ:

ಪೂಜಾಳನ್ನು ಬಂಧಿಸುವ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆಕೆಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದು ನೆಟ್ಟಿಗರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಕಾನೂನು ಕೈಗೆತ್ತಿಕೊಳ್ಳಬಾರದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.