ಆಸ್ಟ್ರೇಲಿಯಾದಲ್ಲಿ ವಾಸಿಸುವ ಭಾರತೀಯ ಮಹಿಳೆಯೊಬ್ಬರು, ಸ್ನಾನದ ಕೋಣೆಯ ಬಿಸಿನೀರಿನ ಹಬೆಯಿಂದ ಫೈರ್ ಅಲಾರಾಂ ಆನ್ ಆದ ಕಾರಣಕ್ಕೆ ಸುಮಾರು ₹1.30 ಲಕ್ಷ ದಂಡ ಪಾವತಿಸಿದ್ದಾರೆ. ಎಕ್ಸಾಸ್ಟ್ ಫ್ಯಾನ್ ಆನ್ ಮಾಡದೆ ಕೇವಲ ಐದು ನಿಮಿಷ ಸ್ನಾನ ಮಾಡಿದ್ದೇ ಈ ಘಟನೆಗೆ ಕಾರಣವಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕೇವಲ ಐದು ನಿಮಿಷಗಳ ಕಾಲ ಸ್ನಾನ ಮಾಡಿದ್ದಕ್ಕಾಗಿ ಬರೋಬ್ಬರಿ $1,800 ಆಸ್ಟ್ರೇಲಿಯನ್ ಡಾಲರ್ (ಸುಮಾರು ₹1.30 ಲಕ್ಷ) ದಂಡ ತೆರಬೇಕಾದ ವಿಚಿತ್ರ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸ್ನಾನದ ಕೋಣೆಯಿಂದ ಬಂದ ಬಿಸಿನೀರಿನ ಹಬೆಗೆ (Steam) ಫೈರ್ ಅಲಾರಾಂ ಪ್ರಚೋದನೆಗೊಂಡು ಸೌಂಡ್ ಮಾಡಿದ ಕಾರಣಕ್ಕೆ ಅವರಿಗೆ ಈ ದಂಡ ವಿಧಿಸಲಾಗಿದೆ.

ಘಟನೆಯ ಹಿನ್ನೆಲೆ ಹಾಗೂ ವೀಡಿಯೊದಲ್ಲೇನಿದೆ?

ಇನ್‌ಸ್ಟಾಗ್ರಾಮ್‌ನ @sorandomvamika ಎಂಬ ಖಾತೆಯಲ್ಲಿ ಈ ಮಹಿಳೆ ವೀಡಿಯೊ ಒಂದನ್ನು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ "ನೋಡಿ, ಯಾರಿಗೆ ಈಗಷ್ಟೇ ₹1.30 ಲಕ್ಷ ದಂಡ ವಿಧಿಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ತಮಗೆ ಎದುರಾದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

ಸ್ನಾನ ಮುಗಿಸಿ ಹೊರಬಂದ ತಕ್ಷಣವೇ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಫೈರ್ ಅಲಾರಾಂ (Fire Alarm) ಬಾರಿಸಲು ಪ್ರಾರಂಭಿಸಿತು. ಆರಂಭದಲ್ಲಿ ಅದು ಸಾಮಾನ್ಯ ಅಗ್ನಿಶಾಮಕ ತರಬೇತಿ (Fire Drill) ಇರಬಹುದು ಎಂದು ಅವರು ಭಾವಿಸಿದ್ದರು. ಆದರೆ, ಸ್ವಲ್ಪ ಸಮಯದಲ್ಲೇ ಅಪಾರ್ಟ್‌ಮೆಂಟ್ ಕಟ್ಟಡದ ಮ್ಯಾನೇಜರ್ ನೇರವಾಗಿ ಇವರ ಮನೆಗೆ ಆಗಮಿಸಿದರು. ಪ್ರಾಣಾಪಾಯದಿಂದ ರಕ್ಷಿಸಲು ಮ್ಯಾನೇಜರ್ ಬಂದಿದ್ದಾರೆ ಎಂದು ಮಹಿಳೆ ಅಂದುಕೊಂಡಿದ್ದರು. ಆದರೆ, ಆ ಮ್ಯಾನೇಜರ್ ಅಲಾರಾಂ ಸೌಂಡ್ ಎಲ್ಲಿಂದ ಬರುತ್ತಿದೆ ಎಂದು ತಪಾಸಣೆ ನಡೆಸಲು ಬಂದಿದ್ದರು ಎಂಬುದು ಆಮೇಲೆ ಗೊತ್ತಾಯಿತು.

ಎಕ್ಸಾಸ್ಟ್ ಫ್ಯಾನ್ ಆನ್ ಮಾಡದಿರುವುದೇ ಮುಳುವಾಯ್ತು!

ತಮ್ಮ ವಿವರಣೆಯನ್ನು ಮುಂದುವರಿಸಿದ ಮಹಿಳೆ, "ನಾನು ಕೇವಲ ಐದು ನಿಮಿಷಗಳ ಕಾಲ ಸ್ನಾನ ಮಾಡಿದ್ದೆ. ತನಗೆ ಬೇಗನೆ ಶೀತವಾಗುತ್ತದೆ ಎಂಬ ಕಾರಣಕ್ಕೆ ವಾಶ್‌ರೂಂನಲ್ಲಿರುವ ಎಕ್ಸಾಸ್ಟ್ ಫ್ಯಾನ್ (Exhaust Fan) ಆನ್ ಮಾಡಿರಲಿಲ್ಲ. ಇದರಿಂದಾಗಿ ಸ್ನಾನದ ಕೋಣೆಯಲ್ಲಿದ್ದ ಬಿಸಿನೀರಿನ ಹಬೆಯು ಹೊರಬಂದು, ವಾಶ್‌ರೂಂ ಹೊರಗಡೆ ಇದ್ದ ಫೈರ್ ಅಲಾರಾಂ ಅನ್ನು ಪ್ರಚೋದಿಸಿದೆ," ಎಂದು ಹೇಳಿದ್ದಾರೆ.

ಅಲ್ಲದೆ, "ಯಾರಾದರೂ ವಾಶ್‌ರೂಂ ತೀರಾ ಹತ್ತಿರದಲ್ಲೇ ಫೈರ್ ಅಲಾರಾಂ ಇಡುತ್ತಾರೆಯೇ?" ಎಂದು ಅವರು ಅಲಾರಾಂ ಜೋಡಣೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸುಳ್ಳು ಫೈರ್ ಅಲಾರಾಂ ಸಂದೇಶದಿಂದ ಅಗ್ನಿಶಾಮಕ ಸಿಬ್ಬಂದಿ (Fire Brigade) ಸ್ಥಳಕ್ಕೆ ಆಗಮಿಸಿದರೆ, ಅದಕ್ಕೆ ತಗುಲುವ ವೆಚ್ಚವನ್ನು ತಪ್ಪಿತಸ್ಥರೇ ಭರಿಸಬೇಕಾಗುತ್ತದೆ. ಈ ನಿಯಮದಡಿಯಲ್ಲಿಯೇ ಅವರಿಗೆ $1,800 ದಂಡ ಹಾಕಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ

ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣದ ಬಳಕೆದಾರರು ಕಟ್ಟಡದ ಅಗ್ನಿಶಾಮಕ ಎಚ್ಚರಿಕೆ ವ್ಯವಸ್ಥೆಯ ತೀವ್ರ ಸೂಕ್ಷ್ಮತೆಯನ್ನು (Sensitivity) ಪ್ರಶ್ನಿಸಿದ್ದಾರೆ ಮತ್ತು ದಂಡವನ್ನು ಕಟ್ಟಬೇಡಿ ಎಂದು ಮಹಿಳೆಗೆ ಸಲಹೆ ನೀಡಿದ್ದಾರೆ.

ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ, "ನನಗೂ ಹಿಂದೆ ಹೀಗೆಯೇ ಆಗಿತ್ತು. ಈ ದಂಡವನ್ನು ಪಾವತಿಸಲು ಒಪ್ಪಬೇಡಿ. ಶವರ್‌ನಿಂದ ಬರುವ ಸಾಮಾನ್ಯ ಹಬೆಯಿಂದ ಫೈರ್ ಅಲಾರಾಂ ಸೌಂಡ್ ಮಾಡಬಾರದು. ಇದರರ್ಥ ಅವರ ಅಲಾರಾಂ ವ್ಯವಸ್ಥೆ ತೀರಾ ಸೂಕ್ಷ್ಮವಾಗಿದೆ. ಆದ್ದರಿಂದ ಈ $1,800 ವೆಚ್ಚವನ್ನು ನೀವು ಭರಿಸಬೇಕಾಗಿಲ್ಲ," ಎಂದು ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರರು, "ಅಲಾರಾಂ ಪರಿಶೀಲಿಸಲು ಅವರಿಗೆ ತಿಳಿಸಿ. ಬಿಸಿನೀರಿನ ಹಬೆಗೆ ಅಲಾರಾಂ ಬಾರಿಸುವುದು ಸಿಸ್ಟಮ್ ತೊಂದರೆಯೇ ಹೊರತು ನಿಮ್ಮ ತಪ್ಪಲ್ಲ," ಎಂದು ಬೆಂಬಲಿಸಿದ್ದಾರೆ.

"ಇದು ನಿಮ್ಮ ನಿರಂತರ ಅಭ್ಯಾಸವಲ್ಲದಿದ್ದರೆ, ಮೊದಲ ಬಾರಿಗೆ ಹೀಗಾದಾಗ ದಂಡ ವಿಧಿಸಬಾರದಿತ್ತು" ಹಾಗೂ "ಬಿಸಿನೀರಿನ ಉಗಿಯಿಂದ ಫೈರ್ ಅಲಾರಾಂ ಹೇಗೆ ಆ್ಯಕ್ಟಿವ್ ಆಗುತ್ತದೆ?" ಎಂದು ಇನ್ನು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ವಿದೇಶಗಳಲ್ಲಿರುವ ಅಪಾರ್ಟ್‌ಮೆಂಟ್ ನಿಯಮಗಳು ಮತ್ತು ಫೈರ್ ಅಲಾರಾಂ ಸಂವೇದನಾಶೀಲತೆಯ ಬಗ್ಗೆ ಈ ಘಟನೆಯು ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.