Viral video employee vs manager: ರಜೆಯ ದಿನದಂದು ಕೆಲಸಕ್ಕೆ ಬರುವಂತೆ ಒತ್ತಾಯಿಸಿದ ಮ್ಯಾನೇಜರ್‌ಗೆ ಮಹಿಳಾ ಉದ್ಯೋಗಿಯೊಬ್ಬರು ನೀಡಿದ ಖಡಕ್ ಉತ್ತರದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಅದರ ವಿವರ ಇಲ್ಲಿದೆ.
Working on week-off corporate culture: ಭಾರತದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪರಿಸ್ಥಿತಿ ಅನೇಕ ಬಾರಿ ಚರ್ಚೆಗೆ ಒಳಗಾಗುತ್ತದೆ. ನಿಗದಿತ ಕೆಲಸದ ಅವಧಿಗಿಂತ ಹೆಚ್ಚು ಕಾಲ ದುಡಿಸಿಕೊಳ್ಳುವುದು, ವಾರಾಂತ್ಯದಲ್ಲಿಯೂ ಕೆಲಸ ನೀಡುವುದು ಮತ್ತು ಓವರ್‌ಟೈಮ್‌ಗೆ ಹಣ ನೀಡದಿರುವುದು ಅನೇಕ ಉದ್ಯೋಗಿಗಳ ದೈನಂದಿನ ಜೀವನದಲ್ಲಿ ಕಷ್ಟ ಅನಿಸಿದೆ. ಸದ್ಯ ಅಫ್ರೀನ್ ಎಂಬ ಉದ್ಯೋಗಿ ಮತ್ತು ಅವರ ಮ್ಯಾನೇಜರ್ ನಡುವಿನ ಸಂಭಾಷಣೆಯ ವಿಡಿಯೋವೊಂದು ಎಲ್ಲರ ಗಮನ ಸೆಳೆಯುತ್ತಿದೆ.
ಏನಿದು ಘಟನೆ?
ವೈರಲ್ ವಿಡಿಯೋದಲ್ಲಿ, ಅಫ್ರೀನ್ ಎಂಬ ಉದ್ಯೋಗಿಗೆ ಮ್ಯಾನೇಜರ್ ಫೋನ್ ಮಾಡಿ, "ನೀನು ಯಾಕೆ ಕಚೇರಿಗೆ ಬಂದಿಲ್ಲ? ಟೀಂ ನಿನಗಾಗಿ ಕಾಯುತ್ತಿದೆ, ತಕ್ಷಣ ಆಫೀಸಿಗೆ ಬಾ" ಎಂದು ಆದೇಶಿಸುತ್ತಾರೆ. ಅದಕ್ಕೆ ಅಫ್ರೀನ್ ಅಷ್ಟೇ ಶಾಂತವಾಗಿ, "ಇಂದು ಶನಿವಾರ, ನನಗೆ ವಾರಾಂತ್ಯದ ರಜೆ (Week-off) ಇದೆ, ಹಾಗಾಗಿ ನಾನು ಬರಲು ಸಾಧ್ಯವಿಲ್ಲ" ಎಂದು ಉತ್ತರಿಸುತ್ತಾರೆ.
ಇದನ್ನೂ ಓದಿ: 1.9 ಕೋಟಿ ರೂ. ಪ್ಯಾಕೇಜ್ ಕೆಲಸ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆದ ಟೆಕ್ಕಿ; ಈಗೇನಾಯ್ತು ಅಂತ ನೋಡಿ..
ಇದರಿಂದ ಕೆರಳಿದ ಮ್ಯಾನೇಜರ್, "ಕಳೆದ ಎರಡು ತಿಂಗಳಿಂದ ಪ್ರತಿ ಶನಿವಾರ ಬರುತ್ತಿದ್ದೆಯಲ್ಲಾ, ಈಗೇನಾಯಿತು?" ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅಫ್ರೀನ್ ನೀಡಿದ ಉತ್ತರ ಪ್ರತಿ ಉದ್ಯೋಗಿಗೂ ಕನೆಕ್ಟ್ ಆಗುವಂತಿದೆ. "ಹಿಂದೆ ಟೀಂಗೆ ಸಹಾಯ ಬೇಕಿದ್ದಾಗ ಮಾನವೀಯತೆಯ ದೃಷ್ಟಿಯಿಂದ ಬಂದಿದ್ದೆ ಅಷ್ಟೇ. ಆದರೆ ನನ್ನ ರಜೆಯ ದಿನಗಳನ್ನು ನಾನು ಕಂಪನಿಗೆ ಬರೆದುಕೊಟ್ಟಿಲ್ಲ. ಉಚಿತವಾಗಿ ಕೆಲಸ ಮಾಡುವುದು ನನ್ನ ದಿನಚರಿಯ ಭಾಗವಲ್ಲ" ಎಂದು ನೇರವಾಗಿ ಹೇಳುತ್ತಾರೆ.
ನಾನು ಬದಲಾಗಿಲ್ಲ, ಫ್ರೀಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದೇನೆ ಅಷ್ಟೇ!
ಮ್ಯಾನೇಜರ್ ಎಮೋಷನಲ್ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿ, "ಟೀಂ ಒತ್ತಡದಲ್ಲಿದೆ" ಎಂದಾಗ, "ರಜೆಯ ದಿನ ಫ್ರೀಯಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿಯಲ್ಲ" ಎಂದು ಅಫ್ರೀನ್ ಸ್ಪಷ್ಟಪಡಿಸುತ್ತಾರೆ. ಮ್ಯಾನೇಜರ್ ಆಕೆಯನ್ನು ನಿಂದಿಸುತ್ತಾ, "ಕೆಲಸ ಖಾಯಂ ಆದ ಮೇಲೆ ನಿನ್ನ ವರ್ತನೆ ಬದಲಾಗಿದೆ" ಎಂದಾಗ, ಅಫ್ರೀನ್ ನೀಡಿದ ಪಂಚ್ ಡೈಲಾಗ್ ವೈರಲ್ ಆಗಿದೆ: "ನಾನು ಬದಲಾಗಿಲ್ಲ, ಬದಲಾಗಿ ಫ್ರೀಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದೇನೆ ಅಷ್ಟೇ!" ಕೊನೆಗೆ ಓವರ್‌ಟೈಮ್ (OT) ಹಣ ನೀಡುತ್ತೀರಾ ಎಂದು ಕೇಳಿದಾಗ ಮ್ಯಾನೇಜರ್ ಫೋನ್ ಕಟ್ ಮಾಡುತ್ತಾರೆ.
ವಿಡಿಯೋದ ಹಿಂದಿನ ಸತ್ಯ ಏನು?
ಅಂದಹಾಗೆ, ಇದು ನಿಜವಾಗಿ ನಡೆದ ಫೋನ್ ಕರೆಯಲ್ಲ. ಅಫ್ರೀನ್ ಒಬ್ಬ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಕಾರ್ಪೊರೇಟ್ ಜಗತ್ತಿನ ವಾಸ್ತವಗಳನ್ನು ಇಂತಹ ವಿಡಿಯೋಗಳ ಮೂಲಕ ತೋರಿಸುತ್ತಾರೆ. ಇದು ಸ್ಕ್ರಿಪ್ಟೆಡ್ ವಿಡಿಯೋ ಆಗಿದ್ದರೂ, ಸಾವಿರಾರು ಉದ್ಯೋಗಿಗಳ ನೋವನ್ನು ಬಿಂಬಿಸುತ್ತಿರುವುದರಿಂದ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
