Suraj Biswas Success Story: ದಿನಕ್ಕೆ ₹1,500 ಗಳಿಸಲು Zomato ಡೆಲಿವರಿ ರೈಡರ್ ಆಗಿ ರಸ್ತೆಗಳಲ್ಲಿ ಅಲೆಯುತ್ತಿದ್ದ ಯುವಕನೊಬ್ಬ, ಇಂದು ಬೆಂಗಳೂರಿನಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್ ಮುನ್ನಡೆಸುತ್ತಿದ್ದಾರೆ ಎಂದರೆ ನಂಬಲೇಬೇಕು. ಬಡತನ, ಹೂಡಿಕೆದಾರರ ತಿರಸ್ಕಾರ ಮತ್ತು ತಂದೆಯ ಸಾವಿನ ನಡುವೆಯೂ ಸೂರಜ್ ಬಿಸ್ವಾಸ್ ಅವರು ಸಾಧಿಸಿದ ಈ ಯಶಸ್ಸಿನ ಪಯಣ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಸೆಲೆಯಾಗಿದೆ.
ಸೂರಜ್ ಬಿಸ್ವಾಸ್ (Suraj Biswas) ಅವರ ಲೈಫ್ ಜರ್ನಿ ಕೇಳಿದರೆ ಎಂಥವರಲ್ಲೂ ಅಚಲವಾದ ಛಲ ಮತ್ತು ಧೈರ್ಯ ಬರುತ್ತದೆ. ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಚಕ್ದಹಾ ಎಂಬ ಪುಟ್ಟ ಪಟ್ಟಣದಿಂದ ಬಂದ ಈ 28 ವರ್ಷದ ಯುವಕ, ಇಂದು ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿ ಬೆಳೆದು ನಿಂತಿದ್ದಾರೆ. ಈ ಹಿಂದೆ ದಿನಕ್ಕೆ 1,000 ದಿಂದ 1,500 ರೂಪಾಯಿ ಗಳಿಸಲು ಜೊಮ್ಯಾಟೊ ರೈಡರ್ ಆಗಿ ರಸ್ತೆಗಳಲ್ಲಿ ಅಲೆಯುತ್ತಿದ್ದ ಸೂರಜ್, ಈಗ ತಂತ್ರಜ್ಞಾನ ಲೋಕದ ಭರವಸೆಯ ಉದ್ಯಮಿಯಾಗಿದ್ದಾರೆ. ಇವರ ಕಥೆಯು ಸಾಧಾರಣ ಹಿನ್ನೆಲೆಯು ಅಸಾಧಾರಣ ಸಾಧನೆಗೆ ಎಂದಿಗೂ ಅಡ್ಡಿಯಾಗದು ಎಂಬ ಸತ್ಯವನ್ನು ಜಗತ್ತಿಗೆ ಸಾರಿ ಹೇಳುತ್ತಿದೆ.
ಹಗಲು ಬಿರುಬಿಸಿಲಿನಲ್ಲಿ ಕೆಲಸ, ರಾತ್ರಿ ಸಂಶೋಧನೆಯಲ್ಲಿ ಬ್ಯುಸಿ
ಸೂರಜ್ ಅವರು ವೈದ್ಯರಾಗಬೇಕೆಂದು ಮೊದಲಿನಿಂದಲೂ ಕನಸು ಕಂಡವರು. ಕೋಲ್ಕತ್ತಾದ ಗುರುನಾನಕ್ ಇನ್‌ಸ್ಟಿಟ್ಯೂಟ್‌ನಿಂದ ಜೆನೆಟಿಕ್ಸ್‌ನಲ್ಲಿ ಬಿ.ಎಸ್ಸಿ ಪದವಿ ಪಡೆದರು. ಆರ್ಥಿಕ ಅನಿವಾರ್ಯತೆಯಿಂದಾಗಿ ಅವರು ಜೊಮ್ಯಾಟೊ ಡೆಲಿವರಿ ರೈಡರ್ ಆಗಿ ಕೆಲಸಕ್ಕೆ ಸೇರಿದರು. ಈ ಕಾಯಕವನ್ನು ಅವರು ಎಂದಿಗೂ ಕೀಳಾಗಿ ಕಾಣದೆ ಅತ್ಯಂತ ಹೆಮ್ಮೆಯಿಂದಲೇ ಮಾಡಿದರು. ಹಗಲು ಬಿರುಬಿಸಿಲಿನಲ್ಲಿ ಕೆಲಸ ಮಾಡಿ, ರಾತ್ರಿಯಿಡೀ ಸಂಶೋಧನೆಯಲ್ಲಿ ತೊಡಗುತ್ತಿದ್ದರು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ "ಎಲ್ಲರಿಗೂ ಒಂದೇ ಅಳತೆ" (One-size-fits-all) ಎಂಬ ಧೋರಣೆಯು ಅವರಿಗೆ ತೀವ್ರ ಅಸಮಾಧಾನ ತಂದಿತ್ತು. ಪ್ರತಿಯೊಬ್ಬ ಮನುಷ್ಯನ ಜೈವಿಕ ಗುಣಲಕ್ಷಣಗಳು, ನಡವಳಿಕೆ ಮತ್ತು ಅಗತ್ಯಗಳಿಗೆ ತಕ್ಕಂತೆ ಕೆಲಸ ಮಾಡುವ ತಂತ್ರಜ್ಞಾನದ ಕೊರತೆಯನ್ನು ಅವರು ಗುರುತಿಸಿದರು. ಇದೇ ಆಲೋಚನೆಯಿಂದ 2021ರಲ್ಲಿ ಅವರು 'Dots-in' ಮತ್ತು 'Assessli' ಎಂಬ ಎರಡು ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಿದರು.
ಕಚೇರಿಯೂ ಇಲ್ಲ, ದೊಡ್ಡ ಬಂಡವಾಳವೂ ಇಲ್ಲ
ಸೂರಜ್ ಅವರ ಈ ಹಾದಿಯಲ್ಲಿ ಅಡೆತಡೆಗಳು ಬೆಟ್ಟದಷ್ಟಿದ್ದವು. ಒಬ್ಬ ಸಾಮಾನ್ಯ ಡೆಲಿವರಿ ಬಾಯ್ ಬಂದು ಎಐ ತಂತ್ರಜ್ಞಾನದ ಬಗ್ಗೆ ಮಾತನಾಡಿದರೆ ಹೂಡಿಕೆದಾರರು ಅವರನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. "ವಿಶ್ವಾಸಾರ್ಹತೆ"ಯ ಕೊರತೆಯೇ ಅವರಿಗೆ ದೊಡ್ಡ ಶತ್ರುವಾಗಿತ್ತು. ಕಚೇರಿ ಅಥವಾ ದೊಡ್ಡ ಬಂಡವಾಳವಿಲ್ಲದೆ 'ಎಲ್‌ಬಿಎಂ' (Large Behavioral Models) ಎಂಬ ಸುಧಾರಿತ ತಂತ್ರಜ್ಞಾನದ ಅಡಿಪಾಯ ಹಾಕಲು ಅವರು ವರ್ಷಗಟ್ಟಲೆ ಶ್ರಮಿಸಿದರು. ವೈಯಕ್ತಿಕವಾಗಿ ಅವರಿಗೆ ದೊಡ್ಡ ಆಘಾತ ಎದುರಾಗಿದ್ದು 2024ರ ಜನವರಿಯಲ್ಲಿ. ಮನೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿ ಮಗನನ್ನು ಕಷ್ಟಪಟ್ಟು ಓದಿಸಿದ್ದ ಅವರ ತಂದೆ, ಐಎಸ್‌ಐ (ISI) ಕೋಲ್ಕತ್ತಾದಿಂದ ಅನುದಾನದ ಪತ್ರ ಸಿಕ್ಕ ಎರಡೇ ದಿನಗಳಲ್ಲಿ ನಿಧನರಾದರು. ಮಗನ ಯಶಸ್ಸಿನ ಪೂರ್ಣ ಚಿತ್ರಣವನ್ನು ನೋಡುವ ಭಾಗ್ಯ ಆ ತಂದೆಗೆ ಸಿಗಲಿಲ್ಲ. ಆ ನೋವಿನ ಹೊರೆಯನ್ನು ಸೂರಜ್ ಈಗ 'ಇಂಡೋಟ್ಸ್' (Indots) ಎಂಬ ಸಮಾಜಮುಖಿ ಸಂಸ್ಥೆಯ ಮೂಲಕ ಸಾಗಿಸುತ್ತಿದ್ದಾರೆ.
ಆರ್ಥಿಕ ಹಿನ್ನೆಲೆಯಲ್ಲ, ಜ್ಞಾನ ಮುಖ್ಯ
ಇಂದು ಬೆಂಗಳೂರಿನಲ್ಲಿ ನೆಲೆಸಿರುವ ಸೂರಜ್, ಯುವಜನತೆಗೆ ಒಂದು ಮಹತ್ವದ ಸಂದೇಶ ನೀಡುತ್ತಾರೆ: "ಯಶಸ್ಸಿಗೆ ಪ್ರತಿಷ್ಠಿತ ಕಾಲೇಜಿನ ಪದವಿ ಅಥವಾ ದೊಡ್ಡ ಆರ್ಥಿಕ ಹಿನ್ನೆಲೆಗಿಂತ ನಿಮ್ಮ ಒಳಗಿನ ಛಲ ಮತ್ತು ಜ್ಞಾನ ಮುಖ್ಯ. ಪೂರ್ಣವಾಗಿ ಸಿದ್ಧರಾಗುವವರೆಗೆ ಕಾಯಬೇಡಿ; ಆ ಭ್ರಮೆಯು ನಿಮ್ಮನ್ನು ಕೇವಲ ಆರಾಮದಾಯಕವಾಗಿ (Comfort zone) ಇರಿಸುತ್ತದೆ ಮತ್ತು ನಿಮ್ಮನ್ನು ಕುಬ್ಜರನ್ನಾಗಿ ಮಾಡುತ್ತದೆ. ಸೋಲು ಮತ್ತು ಅಪಹಾಸ್ಯಕ್ಕೆ ಹೆದರದೆ ಮುನ್ನುಗ್ಗಿ. ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ನಿಮ್ಮ ಸಾಧನೆಯ ಮಿತಿಯನ್ನು (Ceiling) ಎಂದಿಗೂ ನಿರ್ಧರಿಸುವುದಿಲ್ಲ." ಡೆಲಿವರಿ ರೈಡರ್ ಆಗಿದ್ದ ಸೂರಜ್ ಇಂದು ಎಐ ಜಗತ್ತಿನಲ್ಲಿ ಹೊಸ ಮನ್ವಂತರ ಸೃಷ್ಟಿಸಲು ಹೊರಟಿರುವುದು ಪ್ರತಿಯೊಬ್ಬರಿಗೂ ಸ್ಫೂರ್ತಿಯ ಸೆಲೆಯಾಗಿದೆ.
