ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಯುವತಿಗೆ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ತನ್ನ ಸಂಬಳದ ಚೀಟಿಯನ್ನು ಕಳುಹಿಸಿ ಒಪ್ಪಿಸಲು ಪ್ರಯತ್ನಿಸಿದ ವಿಚಿತ್ರ ಘಟನೆ ಇಲ್ಲಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹಣ ಮತ್ತು ಸಂಬಂಧಗಳ ಕುರಿತಾದ ಚರ್ಚೆಯನ್ನು ಹುಟ್ಟುಹಾಕಿದೆ.

ಪ್ರೀತಿ, ಪ್ರೇಮ ಮತ್ತು ಮದುವೆಯ ವಿಚಾರಕ್ಕೆ ಬಂದಾಗ ಒಂದೊಂದು ಬಾರಿ ಅತ್ಯಂತ ವಿಚಿತ್ರ ಘಟನೆಗಳು ನಡೆಯುತ್ತವೆ. ಸಾಮಾನ್ಯವಾಗಿ ಮದುವೆ ಎಂದರೆ ಹುಡುಗ ಮತ್ತು ಹುಡುಗಿಯ ಮನಸ್ಸು ಮಿಡಿಯಬೇಕು, ಜೀವನದ ಗುರಿಗಳು ಒಂದಾಗಬೇಕು. ಆದರೆ ಇಲ್ಲೊಬ್ಬ ಭೂಪ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಗೆ ಒಪ್ಪಿಸಲು ತನ್ನ 'ಸ್ಯಾಲರಿ ಸ್ಲಿಪ್' (Salary Slip) ಹಾಗೂ ಬ್ಯಾಂಕ್ ದಾಖಲೆಗಳನ್ನೇ ಕಳುಹಿಸಿದ್ದಾನೆ! ಸದ್ಯ ಈ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರಿಚಯವಾದ ನಾಲ್ಕೇ ದಿನಕ್ಕೆ ಸ್ಯಾಲರಿ ಸ್ಲಿಪ್!

ತನ್ನ ಆಪ್ತ ಸ್ನೇಹಿತೆಯೊಬ್ಬಳು ಈ ಯುವಕನನ್ನು ಪರಿಚಯ ಮಾಡಿಸಿದ್ದಳು. ಇಬ್ಬರೂ ಬೇಗನೇ ಫ್ರೆಂಡ್ಸ್ ಆದರು. ಆದರೆ, ಪರಿಚಯವಾದ ನಾಲ್ಕನೇ ದಿನಕ್ಕೇ ಆತ ಮದುವೆ ಬಗ್ಗೆ ಮಾತಾಡೋಕೆ ಶುರು ಮಾಡಿದಾಗ ಈಕೆಗೆ ಆಶ್ಚರ್ಯವಾಯಿತು. ಮಾತುಕತೆ ಮುಂದುವರಿದಾಗ, ಇಬ್ಬರ ಜೀವನದ ಗುರಿಗಳೇ ಬೇರೆ ಬೇರೆ ಅನ್ನೋದು ಆಕೆಗೆ ಗೊತ್ತಾಗಿದೆ. ತನಗೆ ವಿದೇಶಕ್ಕೆ ಹೋಗಿ ಸಂಶೋಧನೆ ಮಾಡುವ ಆಸೆ ಇದ್ದರೆ, ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಆ ಹುಡುಗನಿಗೆ ಭಾರತದಲ್ಲೇ ಉಳಿದುಕೊಂಡು, ಮುಂದೆ ತನ್ನ ತಂದೆಯ ಫರ್ನಿಚರ್ ಬ್ಯುಸಿನೆಸ್ ನೋಡಿಕೊಳ್ಳುವ ಪ್ಲಾನ್ ಇತ್ತು. ಆತ ತನ್ನ ಕುಟುಂಬಕ್ಕೆ ಒಬ್ಬನೇ ಮಗ.

ಮಾತುಕತೆಯ ಮಧ್ಯೆ, ಆ ಯುವಕ ತನ್ನ ಆರ್ಥಿಕ ಸ್ಥಿತಿ ಎಷ್ಟು ಭದ್ರವಾಗಿದೆ ಅಂತ ತೋರಿಸೋಕೆ ತನ್ನ ಸ್ಯಾಲರಿ ಸ್ಲಿಪ್‌ಗಳನ್ನೇ ಈಕೆಗೆ ಕಳಿಸಿದ್ದ. ತನ್ನ ಕೈತುಂಬಾ ಸಂಬಳ ಬರುತ್ತೆ ಅಂತ ತೋರಿಸಿ ಮದುವೆಗೆ ಒಪ್ಪಿಸುವುದು ಆತನ ಉದ್ದೇಶವಾಗಿತ್ತು. ಆದರೆ, ಆತನ ಪ್ಲಾನ್ ಉಲ್ಟಾ ಹೊಡೆಯಿತು. ಯುವತಿ ಆತನ ಪ್ರಪೋಸಲ್ ಅನ್ನು ಕಾರಣ ಸಮೇತ ತಿರಸ್ಕರಿಸಿದ್ದಾಳೆ. 'ಅದು ಯಾವತ್ತಿಗೂ ಹಣದ ಬಗ್ಗೆ ಆಗಿರಲಿಲ್ಲ,' ಎಂದು ಆಕೆ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾಳೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಸಂಬಳಕ್ಕಿಂತ ಹೆಚ್ಚಾಗಿ ಪರಸ್ಪರ ಗೌರವ, ತಿಳುವಳಿಕೆ ಮತ್ತು ಮೌಲ್ಯಗಳು ಮುಖ್ಯವಾಗುತ್ತವೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕಿಂತ ಸಂಬಳವನ್ನು ಮುಂದಿಟ್ಟುಕೊಂಡು ಸಂಬಂಧ ಬೆಳೆಸಲು ಯತ್ನಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ.

ಯುವತಿ ಪೋಸ್ಟ್ ವೈರಲ್

ಯುವತಿಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಕೆಲವರು, ಮದುವೆಯಲ್ಲಿ ಆರ್ಥಿಕ ಸ್ಥಿರತೆ ಮುಖ್ಯ, ಹಾಗಾಗಿ ಸಂಬಳದ ಮಾಹಿತಿ ಹಂಚಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ವಾದಿಸಿದ್ದಾರೆ. ಆದರೆ, ಇನ್ನೂ ಕೆಲವರು ಯುವತಿಯ ನಿಲುವನ್ನು ಬೆಂಬಲಿಸಿದ್ದಾರೆ. ಸಂಬಳವನ್ನೇ ಮುಂದಿಟ್ಟುಕೊಂಡು ಮದುವೆಗೆ ಒತ್ತಾಯಿಸುವುದು, ಸಂಬಂಧವನ್ನು ಒಂದು ಬಿಸಿನೆಸ್ ಡೀಲ್ ರೀತಿ ನೋಡಿದ ಹಾಗೆ ಆಗುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಈ ಚರ್ಚೆ, ಮದುವೆಯ ಹೊಸ ಆಯಾಮಗಳ ಬಗ್ಗೆಯೂ ಬೆಳಕು ಚೆಲ್ಲಿದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಹಣಕಾಸಿನ ಸಾಮರ್ಥ್ಯ ಮುಖ್ಯವಾದರೂ, ದೀರ್ಘಕಾಲದ ಸಂಬಂಧಕ್ಕೆ ನಂಬಿಕೆ, ಗುಣ, ಸಂವಹನ ಮತ್ತು ಪರಸ್ಪರ ಗೌರವವೇ ನಿಜವಾದ ಅಡಿಪಾಯ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಮದುವೆ ಮಾತುಕತೆಯಲ್ಲಿ ಹಣಕಾಸಿನ ವಿಚಾರಗಳನ್ನು ಮುಕ್ತವಾಗಿ ಮಾತನಾಡುವುದು ತಪ್ಪಲ್ಲ, ಆದರೆ ಅದೊಂದೇ ಒಬ್ಬರ ಯೋಗ್ಯತೆಯನ್ನು ಅಳೆಯುವ ಮಾನದಂಡ ಆಗಬಾರದು ಎಂಬ ಮಾತುಗಳು ಕೇಳಿಬಂದಿವೆ.