- Home
- Entertainment
- S Janaki: ಹೆತ್ತಮ್ಮನ ಚಿನ್ನ ಅಡವಿಟ್ಟು ಜಾನಕಮ್ಮನ ಮನೆಗೆ ಹೋದ ಬಾಲಕ; ಕೊನೆಗಾಲದಲ್ಲಿ ಅಮ್ಮನೇ ಆದ ಎಸ್ ಜಾನಕಿ!
S Janaki: ಹೆತ್ತಮ್ಮನ ಚಿನ್ನ ಅಡವಿಟ್ಟು ಜಾನಕಮ್ಮನ ಮನೆಗೆ ಹೋದ ಬಾಲಕ; ಕೊನೆಗಾಲದಲ್ಲಿ ಅಮ್ಮನೇ ಆದ ಎಸ್ ಜಾನಕಿ!
ಇದೀಗ, ಎಸ್ ಜಾನಕಿ-ನವೀನ್ ಮೈಸೂರು ಸಂಬಂಧ ಹಲವರ ಕಣ್ಣನ್ನು ತೇವಗೊಳಿಸಿದೆ. ಆ ಪುಟ್ಟ ಬಾಲಕನ ಅಪರೊಮಿತ ಅಭಿಮಾನವೇ ಎಸ್ ಜಾನಕಿಯವರ ಕೊನೆಗಾಲದಲ್ಲಿ ತಾಯಿ-ಮಗ ಅನ್ನುವಂತಹ ಬಾಂಧವ್ಯಕ್ಕೆ ಕಾರಣವಾಯ್ತು. ಜೀವನದ ಕೊನೆಯ ಕ್ಷಣಗಳಲ್ಲಿ ಹೇಗಿದ್ದರು, ಏನೆಲ್ಲಾ ಆಯ್ತು? ಈ ಸ್ಟೋರಿ ನೋಡಿ..

S Janaki- Naveen Mother and Son Relationship: ಸಾಮಾನ್ಯವಾಗಿ ಸಮಾಜದಲ್ಲಿ ಹೇಳುತ್ತಲೇ ಕೇಳಿಬರುತ್ತಲೇ ಇರುವ ಮಾತೊಂದಿದೆ. 'ಕಲೆಗೆ ಭಾಷೆಯ ಹಂಗಿಲ್ಲ' ಅನ್ನೋದೇ ಆ ಮಾತು. ಈ ಮಾತು ಸಂಗೀತಕ್ಕೂ ಅನ್ವಯಿಸುತ್ತದೆ. ಏಕೆಂದರೆ, ಸಂಗೀತವೂ ಒಂದು ಕಲೆ. ಸಂಗೀತ ಕಿವಿಯ ಮೂಲಕ ಆಸ್ವಾದಿಸುವ ಕಲೆ. ಇನ್ನೂ ಕೆಲವು ಕಲೆಗಳನ್ನು ನಾವು ಕಣ್ಣಿನ ಮೂಲಕ ಆಸ್ವಾದಿಸುತ್ತೇವೆ.
ಸಂಗೀತಕ್ಕೆ ಭಾಷೆಯಿಲ್ಲ, ಗಡಿಗಳಿಲ್ಲ ಎಂದು ಹೇಳುತ್ತಾರೆ. ಅದು ನಿಜ ಕೂಡ.
ಕೆಲವೊಮ್ಮೆ ಅಭಿಮಾನವು ರಕ್ತ ಸಂಬಂಧವನ್ನೂ ಮೀರಿದ ಬಂಧವನ್ನ ಸೃಷ್ಟಿಸುತ್ತದೆ. ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಮತ್ತು ಮೈಸೂರಿನ ನವೀನ್ ಅವರ ನಡುವಿನ ಸಂಬಂಧವೇ ಅದಕ್ಕೆ ಜೀವಂತ ಸಾಕ್ಷಿಯಾಗಿದೆ. ಸುಮಾರು ಮೂರು ದಶಕಗಳ ಹಿಂದೆ ಕೇವಲ 13 ವರ್ಷದ ಬಾಲಕನಾಗಿದ್ದ ನವೀನ್, ತನ್ನ ಆರಾಧ್ಯ ಗಾಯಕಿಯನ್ನ ಒಮ್ಮೆ ಕಣ್ಣಾರೆ ನೋಡಬೇಕೆಂಬ ಹಂಬಲದಿಂದ ತಾಯಿಯ ಚಿನ್ನಾಭರಣವನ್ನೇ ಅಡವಿಟ್ಟು ಚೆನ್ನೈಗೆ ತೆರಳಿದ್ದ ಘಟನೆ ಇಂದು, ಎಸ್ ಜಾನಕಿ ಸಾವಿನ ಬಳಿಕ ವೈರಲ್ ಆಗುತ್ತಿದೆ…
ಇದೀಗ, ಎಸ್ ಜಾನಕಿ-ನವೀನ್ ಮೈಸೂರು ಸಂಬಂಧ ಹಲವರ ಕಣ್ಣನ್ನು ತೇವಗೊಳಿಸಿದೆ. ಆ ಪುಟ್ಟ ಬಾಲಕನ ಅಪರೊಮಿತ ಅಭಿಮಾನವೇ ಎಸ್ ಜಾನಕಿಯವರ ಕೊನೆಗಾಲದಲ್ಲಿ ತಾಯಿ-ಮಗ ಅನ್ನುವಂತಹ ಬಾಂಧವ್ಯಕ್ಕೆ ಕಾರಣವಾಯ್ತು. ಜೀವನದ ಕೊನೆಯ ಕ್ಷಣಗಳಲ್ಲಿ, ಸಾಯುವ ಕಡೆಯ ಘಳಿಗೆಯಲ್ಲೂ ಎಸ್ ಜಾನಕಿ ಅವರಿಗೆ ನೆರಳಾಗಿ ನಿಂತ ವ್ಯಕ್ತಿ ಇದೇ ನವೀನ್ ಎಂಬುದು ವಿಶೇಷ. ಭಾರತದ ಮೇರು ಗಾಯಕಿ ಎಸ್ ಜಾನಕಿಯವರ ನಿಧನದ ಬಳಿಕ ಈ ಅಪರೂಪದ ಸಂಬಂಧದ ಕಥೆ ಜನಮನ ಸೆಳೆಯುತ್ತಿದೆ.
ಬಾಲ್ಯದಿಂದಲೇ ಎಸ್. ಜಾನಕಿ ಅವರ ಹಾಡುಗಳಿಗೆ ಮಾರುಹೋಗಿದ್ದ ನವೀನ್, ಅವರನ್ನ ಒಮ್ಮೆ ಭೇಟಿಯಾಗಬೇಕು ಎಂಬ ಕನಸು ಕಂಡಿದ್ದ. ಜಾನಕಿ ಅವರು ಮೈಸೂರಿನ ಪ್ರೀಮಿಯರ್ ಸ್ಟುಡಿಯೋಗೆ ಆಗಾಗ ಬರುತ್ತಾರೆ ಎಂಬ ಮಾಹಿತಿ ತಿಳಿದ ಬಳಿಕ, ಪ್ರತಿದಿನ ಸ್ಟುಡಿಯೋ ಗೇಟ್ ಬಳಿ ಗಂಟೆಗಟ್ಟಲೆ ಕಾದು ನಿಲ್ಲುತ್ತಿದ್ದ. ಹಾಗೆ ದಿನವೂ ಕಾಯುತ್ತಿದ್ದ ಬಾಲಕನನ್ನು ಗಮನಿಸಿದ ಖ್ಯಾತ ನಿರ್ಮಾಪಕ ಎಂ.ಪಿ. ಶಂಕರ್, ಬಾಲಕನನ್ನ ಕರೆದು ಆ ಬಗ್ಗೆ ವಿಚಾರಿಸಿದರು. ವಿಷಯ ತಿಳಿದು ಆತನ ಅಭಿಮಾನಕ್ಕೆ ಮನಸೋತರು. ಬಳಿಕ ಜಾನಕಿ ಅವರ ಚೆನ್ನೈ ನಿವಾಸದ ದೂರವಾಣಿ ಸಂಖ್ಯೆಯನ್ನ ನೀಡಿದರು. ಇದೇ ನವೀನ್ ಬದುಕಿನ ಮಹತ್ವದ ತಿರುವಾಯಿತು.
ಅಮ್ಮನ ಚಿನ್ನ ಅಡವಿಟ್ಟು ಜಾನಕಮ್ಮನ ಭೇಟಿಗೆ ಚೆನ್ನೈಗೆ ಹೋದ ಬಾಲಕ ನವೀನ್!
ಜಾನಕಿ ಅವರನ್ನ ಭೇಟಿಯಾಗಲು ದೂರವಾಣಿಯಲ್ಲಿ ಅನುಮತಿ ಸಿಕ್ಕರೂ, ಮೈಸೂರಿನಿಂದ ಚೆನ್ನೈಗೆ ತೆರಳಲು ಹಣ ಇರಲಿಲ್ಲ. ಆಗ ಬಾಲ್ಯದ ಉತ್ಸಾಹದಲ್ಲಿ ನವೀನ್ ತಮ್ಮ ತಾಯಿಯ ಚಿನ್ನಾಭರಣವನ್ನ ಅಡವಿಟ್ಟು ಹಣ ಸಂಗ್ರಹಿಸಿದರು. ತಮ್ಮ ಸಹೋದರ ಪವನ್ ಜೊತೆ ರೈಲಿನಲ್ಲಿ ಚೆನ್ನೈಗೆ ತೆರಳಿ, ಅಪರಿಚಿತ ನಗರದಲ್ಲಿ ಸಾಕಷ್ಟು ಹುಡುಕಾಟ ನಡೆಸಿದ ನಂತರ ಕೊನೆಗೂ ಜಾನಕಿ ಅವರ ಮನೆ ತಲುಪಿದರು. ರೆಕಾರ್ಡಿಂಗ್ ಮುಗಿಸಿ ತಮ್ಮ ಮನೆಗೆ ಬಂದ ಎಸ್. ಜಾನಕಿಯವರು, ತಮ್ಮನ್ನ ನೋಡಲು ದೂರದ ಕರ್ನಾಟಕ-ಮೈಸೂರಿನಿಂದ ಬಂದಿರುವುದು ಕೇವಲ 13 ವರ್ಷದ ಬಾಲಕ ಎಂದು ತಿಳಿದ ಕ್ಷಣ ಭಾವುಕರಾದರು. ಆತನ ನಿಷ್ಕಪಟ ಪ್ರೀತಿ ಮತ್ತು ಅಭಿಮಾನವನ್ನ ಕಂಡು ಕಣ್ಣೀರಿಟ್ಟ ಜಾನಕಿಯವರು, ಅಂದಿನಿಂದಲೇ ನವೀನ್ ಅವರನ್ನ ತಮ್ಮ ಸ್ವಂತ ಮಗನಂತೆ ಕಾಣತೊಡಗಿದರು.
ಅಭಿಮಾನದಿಂದ ಅರಳಿದ ತಾಯಿ-ಮಗನ ಬಾಂಧವ್ಯ
ಆ ಒಂದು ಭೇಟಿಯ ನಂತರ ಅವರಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಯಿತು. ಜಾನಕಿ ಅವರು ಮೈಸೂರಿಗೆ ಬಂದಾಗಲೆಲ್ಲ ನವೀನ್ ಅವರನ್ನ ಭೇಟಿ ಮಾಡುತ್ತಿದ್ದರು. ಕಾಲಕ್ರಮೇಣ ಈ ಪರಿಚಯವು ಅಭಿಮಾನಿಯ ಸಂಬಂಧವನ್ನ ಮೀರಿ ತಾಯಿ-ಮಗನ ಮಮತೆಯಾಗಿ ಬೆಳೆಯಿತು. ನವೀನ್ ಕೂಡ ಜಾನಕಿ ಅವರನ್ನ ಕೇವಲ ಗಾಯಕಿಯಾಗಿ ಅಲ್ಲ, ಮನೆಯ ಹಿರಿಯ ಸದಸ್ಯೆಯಂತೆ ಗೌರವಿಸಿ, ಅವರ ಪ್ರತಿಯೊಂದು ಅಗತ್ಯದಲ್ಲೂ ಜೊತೆಯಾಗಿದ್ದರು.
ಕೊನೆಯ ದಿನಗಳಲ್ಲಿ ಸಂಪೂರ್ಣ ಆರೈಕೆ ಮಾಡಿದ ನವೀನ್ ಕುಟುಂಬ
ಇಳಿ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಬಳಿಕ, ಜಾನಕಮ್ಮನವರನ್ನು ಚೆನ್ನೈನಿಂದ ಮೈಸೂರಿಗೆ ಕರೆತರುವ ಜವಾಬ್ದಾರಿಯನ್ನ ನವೀನ್ ಹೊತ್ತುಕೊಂಡರು. ಮೊದಲಿಗೆ ಎನ್.ಆರ್. ಮೊಹಲ್ಲಾದ ತಮ್ಮದೇ ಮನೆಯಲ್ಲಿ ಇರಿಸಿ ಆರೈಕೆ ಮಾಡಿದರು. ನಂತರ ಸ್ನೇಹಿತನ ಮಹದೇವಪುರ ರಸ್ತೆಯ ತೋಟದ ಮನೆಯಲ್ಲಿ ಶಾಂತ ವಾತಾವರಣ ಕಲ್ಪಿಸಿ ಅಮ್ಮನಂತೆ ನೋಡಿಕೊಂಡರು.
ಬಳಿಕ ದಟ್ಟಗಳ್ಳಿ ಮತ್ತು ಕೊನೆಗೆ ಬೋಗಾದಿಯ ನಿವಾಸದಲ್ಲಿ ಜಾನಕಿಯವರು ನೆಮ್ಮದಿಯಿಂದ ವಾಸಿಸುವಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದರು. ನವೀನ್ ಅವರ ತಾಯಿ ಶಾಂತಾ ಕೂಡ ಜಾನಕಿ ಅವರನ್ನ ಸ್ವಂತ ಸಹೋದರಿಯಂತೆ ನೋಡಿಕೊಂಡು ಪ್ರೀತಿಯಿಂದ ಸೇವೆ ಮಾಡಿದರು. ಈ ಅವಧಿಯಲ್ಲಿ ನವೀನ್ ಕುಟುಂಬದ ಎಲ್ಲಾ ಸದಸ್ಯರು ಜಾನಕಮ್ಮನವರ ಆರೋಗ್ಯ, ಊಟ, ಔಷಧಿ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಕಾಳಜಿ ವಹಿಸುತ್ತಿದ್ದರು.
ಅಭಿಮಾನಿಯ ನೆಲದಲ್ಲೇ ಕೊನೆಯ ವಿದಾಯ
ಹೀಗಾಗುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ.. ಖ್ಯಾತ ಗಾಯಕಿ ಎಸ್ ಜಾನಕಿಯವರ ಜೀವನದ ಕೊನೆಯ ಅಧ್ಯಾಯ ಕೂಡ ಮೈಸೂರಿನಲ್ಲೇ ಕಳೆಯಿತು. ಅವರ ನಿಧನದ ನಂತರ ಅಂತ್ಯಸಂಸ್ಕಾರವೂ ನವೀನ್ ಅವರ ಕಣಿಯನಹುಂಡಿಯ ತೋಟದ ಮನೆಯಲ್ಲಿ ನೆರವೇರಿತು. ಈ ದೃಶ್ಯ ಸಾವಿರಾರು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿತು. ಒಮ್ಮೆ ಕೇವಲ ಒಬ್ಬ ಅಭಿಮಾನಿಯಾಗಿದ್ದ ಬಾಲಕನ ಬದುಕು, ಕೊನೆಗೆ ತನ್ನ ಆರಾಧ್ಯ ಗಾಯಕಿಗೆ ಮಗನಂತೆ ನೆರಳಾಗಿ ನಿಂತ ಮಹಾನ್ ಕಥೆಯಾಗಿ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಿತು.
ಸಹೋದರ ಪ್ರವೀಣ್ ಹೇಳಿದ್ದೇನು?
13ರ ಬಾಲಕನ ಅಪರಿಮಿತ ಅಭಿಮಾನ; ಕೊನೆಗಾಲದಲ್ಲಿ ತಾಯಿಯೇ ಆದ ಜಾನಕಮ್ಮ:
ನವೀನ್ ಅವರ ಸಹೋದರ ಹೇಳುವಂತೆ- ಚೆನ್ನೈನಲ್ಲಿ ಜಾನಕಮ್ಮ ಅವರನ್ನ ಭೇಟಿಯಾಗಲು ನಾನು, ನನ್ನ ತಮ್ಮ ಸಾಕಷ್ಟು ಕಷ್ಟಪಟ್ಟಿದ್ದೇವೆ. ನನ್ನ ತಮ್ಮ ನವೀನ್‌ಗೆ ಎಸ್ ಜಾನಕಿಯವರ ಮೇಲೆ ಅಪಾರ ಅಭಿಮಾನ.. ಆ ಅಭಿಮಾನದಿಂದಲೇ ನನ್ನ ತಮ್ಮ ಜಾನಕಿ ಅಮ್ಮನ ಹೆಸರಿನಲ್ಲೇ ಉದ್ಯಮ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಜಾನಕಮ್ಮನವರು ನಮ್ಮ ಕುಟುಂಬದ ಸದಸ್ಯೆಯೇ ಆಗಿದ್ದರು," ಎಂದು ಭಾವುಕರಾಗಿ ಸ್ಮರಿಸಿದ್ದಾರೆ.
ಜಾನಕಿ ಹೆಸರನ್ನ ಅಜರಾಮರಗೊಳಿಸುವ ಭರವಸೆ
ಎಸ್. ಜಾನಕಿ ಅವರ ನಿಧನದ ಬಳಿಕ ಕರ್ನಾಟಕ ಸರ್ಕಾರವೂ ಗೌರವ ಸೂಚಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, "ಭಾರತದ ಅಪ್ರತಿಮ ಗಾಯಕಿ ಎಸ್. ಜಾನಕಿ ಅವರ ಹೆಸರನ್ನ ಅಜರಾಮರಗೊಳಿಸುವ ಕುರಿತು ಚಿತ್ರರಂಗದ ಪ್ರಮುಖರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.
ಅಭಿಮಾನ ಎಂದರೆ ಇದು... ಸೋಷಿಯಲ್ ಮೀಡಿಯಾದಲ್ಲಿ ಮವೀನ್ ಬಗ್ಗೆ ಈ ಟಾಕ್!
ಇಂದಿನ ಕಾಲದಲ್ಲಿ ಅಭಿಮಾನವು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಾಗಿರುವಾಗ, ಒಬ್ಬ 13 ವರ್ಷದ ಬಾಲಕ ತನ್ನ ಕನಸನ್ನ ನನಸಾಗಿಸಿಕೊಳ್ಳಲು ಬೇರೆ ರಾಜ್ಯಕ್ಕೇ ಹೋದ ಸಾಹಸ, ಆ ನಂತರ ಅವರಿಬ್ಬರಲ್ಲಿ ಮೂಡಿದ ತಾಯಿ-ಮಗನ ಬಾಂಧವ್ಯ ಮತ್ತು ಕೊನೆಯವರೆಗೂ ತೋರಿದ ಸೇವಾಭಾವ, ನಿಜವಾದ ಅಭಿಮಾನ ಹೇಗಿರಬೇಕು ಎಂಬುದಕ್ಕೆ ಅಪರೂಪದ ಉದಾಹರಣೆ ಎನ್ನಬಹುದು. ಎಸ್. ಜಾನಕಿ ಅವರ ಗಾಯನ ಅವರ ಹಾಡುಗಳ ಮೂಲಕ ಶಾಶ್ವತವಾಗಿ ಭಾರತೀಯ ಸಂಗೀತ ಲೋಕದಲ್ಲಿ ಮೊಳಗುತ್ತಲೇ ಇರುತ್ತದೆ. ಹಾಗೇ, ಅಭಿಮಾನದಿಂದ ಆರಂಭವಾಗಿ ಅಮ್ಮ-ಮಗನ ಬಾಂಧವ್ಯದ ಬಂಧವಾಗಿ ಬೆಳೆದ ಜಾನಕಮ್ಮ–ನವೀನ್ ಕಥೆಯೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

