ಕೊಚ್ಚಿಯ ರೆಸ್ಟೋರೆಂಟ್‌ನಲ್ಲಿ ಮೊಟ್ಟೆ ತಿನ್ನುವಾಗ ಯುವಕನೊಬ್ಬನ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿತು. ತಕ್ಷಣವೇ ಆತನ ಸ್ನೇಹಿತರು ಮತ್ತು ಸಿಬ್ಬಂದಿ ಸಮಯಪ್ರಜ್ಞೆ ಮೆರೆದು, ಪ್ರಾಣ ಉಳಿಸಿದ್ದಾರೆ. ಹೇಗೆ ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಊಹಿಸಿಕೊಳ್ಳಿ ನೀವು ನಿಮ್ಮ ನೆಚ್ಚಿನ ಆಹಾರವನ್ನು ಅತ್ಯಂತ ಆಸೆಯಿಂದ ಸವಿಯುತ್ತಿದ್ದೀರಿ, ಆದರೆ ಇದ್ದಕ್ಕಿದ್ದಂತೆ ಅದೇ ಆಹಾರದ ತುತ್ತು ನಿಮ್ಮ ಉಸಿರನ್ನೇ ಕಸಿದುಕೊಂಡರೆ? ಕೇಳುವುದಕ್ಕೇ ಭಯಾನಕವೆನಿಸುವ ಇಂತಹದ್ದೇ ಒಂದು ನೈಜ ದುರಂತ ಘಟನೆ ಕೇರಳದ ಕೊಚ್ಚಿಯ ಎಂಜಿ ರಸ್ತೆಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ನಡೆದಿದೆ. ಸ್ನೇಹಿತರೊಂದಿಗೆ ಸಂತೋಷದಿಂದ ಊಟ ಮಾಡುತ್ತಿದ್ದ ಯುವಕನೊಬ್ಬನ ಗಂಟಲಿನಲ್ಲಿ ಆಹಾರದ ತುತ್ತು ಸಿಲುಕಿ ಉಸಿರು ಗಟ್ಟುವಂತಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಸ್ನೇಹಿತರು ಹಾಗೂ ರೆಸ್ಟೋರೆಂಟ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಯುವಕನ ಜೀವ ಉಳಿಸಿದ್ದಾರೆ. ಈ ಇಡೀ ರೋಮಾಂಚಕಾರಿ ಘಟನೆ ರೆಸ್ಟೋರೆಂಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕ್ಷಣಾರ್ಧದಲ್ಲಿ ಎದುರಾಯಿತು ಕಂಟಕ!

ಕೊಲ್ಲಂ ಮೂಲದ ಅನೀಶ್ ಎಂಬ ಯುವಕ ತನ್ನ ಸ್ನೇಹಿತ ಮನೀಶ್ ಜೊತೆ ರೆಸ್ಟೋರೆಂಟ್‌ನಲ್ಲಿ ಕುಳಿತು 'ಎಗ್ ರೈಸ್' ತಿನ್ನುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅನೀಶ್ ಮೊಟ್ಟೆಯ ತುಂಡನ್ನು ಜಗಿದು ನುಂಗಲುತ್ನಿಸಿದಾಗ, ಅದು ಅವರ ಗಂಟಲಿನಲ್ಲಿ ಸಿಲುಕಿಕೊಂಡಿತು. ಆರಂಭದಲ್ಲಿ ಆಹಾರದ ತುತ್ತು ಕೆಳಗೆ ಹೋಗಬಹುದು ಎಂದು ಅನೀಶ್ ತಮ್ಮ ತಲೆಗೆ ತಾವೇ ಹೊಡೆದುಕೊಳ್ಳಲು ಪ್ರಾರಂಭಿಸಿದರು. ಆದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಅನೀಶ್‌ಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಪ್ರಾಣಾಪಾಯದ ಸ್ಥಿತಿ ನಿರ್ಮಾಣವಾಯಿತು. ಇದನ್ನು ತಕ್ಷಣವೇ ಗಮನಿಸಿದ ಸ್ನೇಹಿತ ಮನೀಶ್, ಒಂದು ಕ್ಷಣವೂ ತಡಮಾಡದೆ ರಕ್ಷಣೆಗೆ ಧಾವಿಸಿದನು. ಅನೀಶ್‌ನನ್ನು ಹಿಂದಿನಿಂದ ಎತ್ತಿ, ಮುಂಭಾಗಕ್ಕೆ ಬಗ್ಗಿಸಿ, ಅವರ ಹೊಟ್ಟೆಯ ಭಾಗಕ್ಕೆ ಬಲವಾಗಿ ಒತ್ತಡ ಹೇರಲು (ಹೋಡೆಯಲು) ಪ್ರಾರಂಭಿಸಿದನು.

ಸಮಯಪ್ರಜ್ಞೆ ಮೆರೆದ ಸಿಬ್ಬಂದಿ!

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೆಸ್ಟೋರೆಂಟ್‌ನ ಸಿಬ್ಬಂದಿ ಮತ್ತು ಮಾಲೀಕರು ಕೂಡಲೇ ಓಡಿಬಂದು ಸಹಾಯಕ್ಕೆ ನಿಂತರು. ಪ್ರಥಮ ಚಿಕಿತ್ಸಾ ತಂತ್ರದ ನಿರಂತರ ಪ್ರಯತ್ನದ ಫಲವಾಗಿ, ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಮೊಟ್ಟೆಯ ತುಂಡು ಅಂತಿಮವಾಗಿ ಹೊರಬಂದಿತು. ಇದರಿಂದಾಗಿ ಅನೀಶ್ ಅವರ ಉಸಿರಾಟ ಸುಗಮಗೊಂಡು, ಜೀವಾಪಾಯದಿಂದ ಪಾರಾದರು. ಸಮಯಕ್ಕೆ ಸರಿಯಾಗಿ ಪ್ರಥಮ ಚಿಕಿತ್ಸೆ ಸಿಕ್ಕಿದ್ದರಿಂದ ಅವರಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವೂ ಬರಲಿಲ್ಲ.

ಆಹಾರ ಗಂಟಲಲ್ಲಿ ಸಿಲುಕಿದರೆ ಏನು ಮಾಡಬೇಕು? (ಹೇಮ್ಲಿಚ್ ಮ್ಯಾನ್ಯೂವರ್ ತಂತ್ರ)

ನಾವು ಊಟ ಮಾಡುವಾಗ ಜಾಗರೂಕರಾಗಿರಬೇಕು ಎಂಬ ಜಾಗೃತಿ ಮೂಡಿಸಲು ಈ ದೃಶ್ಯಾವಳಿಗಳನ್ನು ಹಂಚಿಕೊಳ್ಳಲಾಗಿದೆ. ಯಾರಾದರೂ ಆಹಾರ ಸಿಲುಕಿ ಉಸಿರುಗಟ್ಟುತ್ತಿದ್ದರೆ ಈ ಕ್ರಮ ಅನುಸರಿಸಬೇಕು. ವಯಸ್ಕರಾಗಿದ್ದರೆ, ವ್ಯಕ್ತಿಯ ಹಿಂಭಾಗದಲ್ಲಿ ನಿಂತು, ನಿಮ್ಮ ಮುಷ್ಟಿಯನ್ನು ಅವರ ಹೊಕ್ಕುಳಿನ ಮೇಲ್ಭಾಗ ಹಾಗೂ ಪಕ್ಕೆಲುಬುಗಳ ಕೆಳಭಾಗದಲ್ಲಿ ಇರಿಸಿ. ಇನ್ನೊಂದು ಕೈಯಿಂದ ಆ ಮುಷ್ಟಿಯನ್ನು ಬಿಗಿಯಾಗಿ ಹಿಡಿದು, 'J' ಆಕಾರದಲ್ಲಿ ಒಳಗಿನಿಂದ ಮೇಲ್ಮುಖವಾಗಿ 5 ಬಾರಿ ಬಲವಾಗಿ ಒತ್ತಿ. ಸಿಲುಕಿದ ವಸ್ತು ಹೊರಬರುವವರೆಗೆ ಇದನ್ನು ಪುನರಾವರ್ತಿಸಿ. ವ್ಯಕ್ತಿ ಪ್ರಜ್ಞೆ ತಪ್ಪಿದರೆ ತಕ್ಷಣ CPR ನೀಡಿ, ವೈದ್ಯಕೀಯ ನೆರವು ಪಡೆಯಿರಿ. 2 ವರ್ಷದೊಳಗಿನ ಮಗುವಾದರೆ, ಮಗುವನ್ನು ಮುಖ ಕೆಳಗಾಗುವಂತೆ ಕೈಯ ಮೇಲೆ ಮಲಗಿಸಿ ಭುಜಗಳ ನಡುವೆ 5 ಬಾರಿ ಲಘುವಾಗಿ ತಟ್ಟಿ. 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ವಯಸ್ಕರಂತೆಯೇ ಹೊಟ್ಟೆಯ ಮೇಲ್ಭಾಗಕ್ಕೆ ಸೂಕ್ತ ಒತ್ತಡ ಹೇರಿ ವಸ್ತುವನ್ನು ಹೊರತೆಗೆಯಬೇಕು. ಸರಿಯಾದ ಸಮಯದಲ್ಲಿ ತೋರುವ ಸಣ್ಣ ಸಮಯಪ್ರಜ್ಞೆ ಹಾಗೂ ಮೂಲಭೂತ ಪ್ರಥಮ ಚಿಕಿತ್ಸೆಯ ಜ್ಞಾನವು ಒಬ್ಬರ ಅಮೂಲ್ಯವಾದ ಪ್ರಾಣವನ್ನೇ ಉಳಿಸಬಲ್ಲದು ಎಂಬುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ.