ಸಾಮಾನ್ಯವಾಗಿ ಕೆಲಸ ಎಂದರೆ ಕಚೇರಿ, ಕಂಪ್ಯೂಟರ್, ಟಾರ್ಗೆಟ್ ಮತ್ತು ಡೆಡ್‌ಲೈನ್ ನೆನಪಿಗೆ ಬರುತ್ತದೆ. ಆದರೆ ಚೀನಾದ 23 ವರ್ಷದ ಯುವಕನೊಬ್ಬನ ಕೆಲಸ ಮಾತ್ರ ಇದಕ್ಕೆ ಸಂಪೂರ್ಣ ವಿರುದ್ಧ. ಪರ್ವತದ ತುದಿಯಲ್ಲಿ ವಾಸಿಸುತ್ತಾ ಮೋಡಗಳನ್ನು ವೀಕ್ಷಿಸುವುದು.
ಸಾಮಾನ್ಯವಾಗಿ ಕೆಲಸ ಎಂದರೆ ಕಚೇರಿ, ಕಂಪ್ಯೂಟರ್, ಟಾರ್ಗೆಟ್ ಮತ್ತು ಡೆಡ್‌ಲೈನ್ ನೆನಪಿಗೆ ಬರುತ್ತದೆ. ಆದರೆ ಚೀನಾದ 23 ವರ್ಷದ ಯುವಕನೊಬ್ಬನ ಕೆಲಸ ಮಾತ್ರ ಇದಕ್ಕೆ ಸಂಪೂರ್ಣ ವಿರುದ್ಧ. ಪರ್ವತದ ತುದಿಯಲ್ಲಿ ವಾಸಿಸುತ್ತಾ ಮೋಡಗಳನ್ನು ವೀಕ್ಷಿಸುವುದು, ಅವುಗಳ ವಿಡಿಯೋ ಮಾಡುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು—ಇದಕ್ಕೆ ಬರೋಬ್ಬರಿ ₹8.5 ಲಕ್ಷ ಸಂಬಳ, ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಪ್ರಸಿದ್ಧ ಲಾಓಜುನ್ ಮೌಂಟನ್ (Laojun Mountain) ಪ್ರವಾಸಿ ತಾಣವು ‘Cloudscape Observer’ ಅಥವಾ ‘Cloud Sea Observer’ ಎಂಬ ವಿಶಿಷ್ಟ ಹುದ್ದೆಯನ್ನು ಸೃಷ್ಟಿಸಿತ್ತು. ಒಂದು ತಿಂಗಳ ಈ ವಿಶೇಷ ಕೆಲಸಕ್ಕೆ 3,500ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, ಕೊನೆಗೆ 23 ವರ್ಷದ ಯುವಕ ಆಯ್ಕೆಯಾಗಿದ್ದಾನೆ.
ಏನಿದು ‘ಕ್ಲೌಡ್ ಸೀ ಅಬ್ಸರ್ವರ್’ ಕೆಲಸ?
ಈ ಕೆಲಸ ಕೇಳಲು ಎಷ್ಟು ಸುಲಭವೋ, ವಾಸ್ತವದಲ್ಲಿ ಅಷ್ಟು ಸರಳವಾಗಿರಲಿಲ್ಲ. ಆಯ್ಕೆಯಾದ ವ್ಯಕ್ತಿ ಸುಮಾರು ಒಂದು ತಿಂಗಳ ಕಾಲ ಲಾಓಜುನ್ ಪರ್ವತದ ಮೇಲ್ಭಾಗದಲ್ಲೇ ವಾಸಿಸಬೇಕು. ಅಲ್ಲಿನ ಪ್ರಸಿದ್ಧ ‘Sea of Clouds’ ಅಂದರೆ ಮೋಡಗಳ ಸಮುದ್ರದಂತಹ ನೈಸರ್ಗಿಕ ದೃಶ್ಯಗಳನ್ನು ಪ್ರತಿದಿನ ಗಮನಿಸಬೇಕು. ಉತ್ತಮ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಕನಿಷ್ಠ ಒಂದು ಮೂಲ ವಿಡಿಯೋವನ್ನು ಪ್ರತಿದಿನ ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು ಎಂಬುದು ಪ್ರಮುಖ ಜವಾಬ್ದಾರಿ. ಅಂದರೆ, ಇದು ಕೇವಲ ಕುಳಿತು ಮೋಡ ನೋಡುವ ಕೆಲಸವಲ್ಲ. ಫೋಟೋಗ್ರಫಿ, ವಿಡಿಯೋಗ್ರಫಿ, ಕಂಟೆಂಟ್ ಕ್ರಿಯೇಷನ್ ಮತ್ತು ಪ್ರವಾಸೋದ್ಯಮ ಪ್ರಚಾರ—ಈ ನಾಲ್ಕನ್ನೂ ಒಳಗೊಂಡ ಕೆಲಸವಾಗಿತ್ತು.
3,587 ಮಂದಿ ಅರ್ಜಿ… ಒಬ್ಬನೇ ಆಯ್ಕೆ
ಈ ವಿಶೇಷ ಉದ್ಯೋಗಕ್ಕೆ ದೇಶದಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು. ಒಟ್ಟು 3,587 ಅರ್ಜಿಗಳು/ವಿಡಿಯೋ ಸಲ್ಲಿಕೆಗಳು ಬಂದಿದ್ದವು. ಜುಲೈ 15ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಜುಲೈ 16ರಂದು ವಿಜೇತರನ್ನು ಘೋಷಿಸಲಾಯಿತು. ‘Xiaozao’ ಎಂಬ ಹೆಸರಿನ ಡೌಯಿನ್ ಖಾತೆಯ ಯುವ ಕಂಟೆಂಟ್ ಕ್ರಿಯೇಟರ್ ಮೊದಲ Cloud Sea Observer ಆಗಿ ಆಯ್ಕೆಯಾದರು. ಅವರ ಆಯ್ಕೆಗೊಂಡ ವಿಡಿಯೋ ಸುಮಾರು 86,000 ಲೈಕ್ಸ್ ಪಡೆದಿತ್ತು.
23 ವರ್ಷದ ಯುವಕನ ಹಿನ್ನೆಲೆ ಏನು
ಆಯ್ಕೆಯಾದ ಯುವಕ ಲಿ ಸೀಚೆನ್ (Li Sichen). ಅವರು ಇ-ಕಾಮರ್ಸ್ ಅಧ್ಯಯನ ಮಾಡಿದ್ದು, ಭವಿಷ್ಯದಲ್ಲಿ ಸ್ವಂತ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗುವ ಆಸಕ್ತಿ ಹೊಂದಿದ್ದರು ಎಂದು ವರದಿಗಳು ತಿಳಿಸಿವೆ. ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆರಂಭದಲ್ಲಿ ದೊಡ್ಡ ಪ್ರಮಾಣದ ಫಾಲೋವರ್ಸ್ ಇರಲಿಲ್ಲ. ಆದರೆ ಈ ಸ್ಪರ್ಧೆಯಲ್ಲಿ ಅವರು ಸಲ್ಲಿಸಿದ ವಿಡಿಯೋ ಭಾರೀ ಜನಪ್ರಿಯತೆ ಪಡೆದಿದ್ದು, ಕೊನೆಗೆ 3,500ಕ್ಕೂ ಹೆಚ್ಚು ಸ್ಪರ್ಧಿಗಳ ನಡುವೆ ಅವರನ್ನು ವಿಜೇತರನ್ನಾಗಿ ಮಾಡಿತು.
ತಿಂಗಳಿಗೆ ₹8.5 ಲಕ್ಷ ಸಿಗುವುದೇಗೆ?
ಈ ಹುದ್ದೆಗೆ ನೀಡಲಾದ ಸಂಭಾವನೆ 60,000 ಚೀನೀ ಯುವಾನ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹8.5 ಲಕ್ಷ. ಇದು ಸಾಮಾನ್ಯ ಮಾಸಿಕ ಉದ್ಯೋಗವಲ್ಲ. ಸುಮಾರು 30 ದಿನಗಳ ವಿಶೇಷ ನಿಯೋಜನೆಗೆ ನೀಡಲಾಗುವ ಸಂಭಾವನೆ. ಆಯ್ಕೆಯಾದ ವ್ಯಕ್ತಿಗೆ ಪರ್ವತದ ಮೇಲೆಯೇ ವಾಸದ ವ್ಯವಸ್ಥೆ ಮತ್ತು ಆಹಾರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಪ್ರವಾಸಿ ತಾಣದ ಆಡಳಿತ ಒದಗಿಸಿತ್ತು.
‘ಬೆಳಗ್ಗೆ 5 ಗಂಟೆಗೆ ಎದ್ದು ಕೆಲಸ’—ಅಸಲಿ ಸತ್ಯ
ಸಾಮಾಜಿಕ ಜಾಲತಾಣಗಳಲ್ಲಿ ಈ ಕೆಲಸವನ್ನು ಹಲವರು ‘Dream Job’ ಎಂದು ಕರೆದರು. ಆದರೆ ಪರ್ವತದ ಮೇಲೆ ಕೆಲಸ ಆರಂಭಿಸಿದ ಬಳಿಕ ಯುವಕನಿಗೆ ಇದರ ಮತ್ತೊಂದು ಮುಖ ಗೊತ್ತಾಯಿತು. ವರದಿಗಳ ಪ್ರಕಾರ, ಅವರು ಬೆಳಗ್ಗೆ ಸುಮಾರು 5 ಗಂಟೆಗೆ ಎದ್ದು ಸೂರ್ಯೋದಯದಿಂದ ಹಿಡಿದು ರಾತ್ರಿ ನಡೆಯುವ ಲೈಟಿಂಗ್ ಶೋವರೆಗೂ ಚಿತ್ರೀಕರಣದಲ್ಲಿ ತೊಡಗುತ್ತಿದ್ದರು. ಒಂದು ಉತ್ತಮ ಮೋಡದ ದೃಶ್ಯಕ್ಕಾಗಿ ಕೆಲವೊಮ್ಮೆ ಒಂದರಿಂದ ಎರಡು ಗಂಟೆಗಳವರೆಗೆ ಕಾಯಬೇಕಾಗುತ್ತಿತ್ತು. ಮಳೆ, ದಟ್ಟ ಮಂಜು ಮತ್ತು ಹವಾಮಾನ ಬದಲಾವಣೆಗಳು ಚಿತ್ರೀಕರಣಕ್ಕೆ ಅಡ್ಡಿಯಾಗುತ್ತಿದ್ದವು. ಕೆಲಸದ ಮೊದಲ ದಿನವೇ ದಟ್ಟ ಮಂಜು ಮತ್ತು ತುಂತುರು ಮಳೆಯನ್ನು ಎದುರಿಸಬೇಕಾಯಿತು. ಹೀಗಾಗಿ ಹೊರಗಿನಿಂದ ನೋಡಲು ‘ಮೋಡ ನೋಡಿ ಹಣ ಗಳಿಸುವ ಕೆಲಸ’ ಎನಿಸಿದರೂ, ಒಳಗಿನಿಂದ ನೋಡಿದರೆ ನಿರಂತರ ಕಂಟೆಂಟ್ ಸೃಷ್ಟಿಸುವ ಒತ್ತಡದ ಕೆಲಸ ಎಂಬುದು ಸ್ಪಷ್ಟವಾಗಿದೆ.
ಪ್ರತಿದಿನ ವಿಡಿಯೋ ಮಾಡಲೇಬೇಕು
ಈ ಕೆಲಸದ ಮತ್ತೊಂದು ಪ್ರಮುಖ ಷರತ್ತು ಎಂದರೆ ಪ್ರತಿದಿನ ಕಂಟೆಂಟ್ ಸಿದ್ಧಪಡಿಸುವುದು. ಮೋಡ ಕಾಣಿಸಿಕೊಳ್ಳದ ದಿನವಾದರೂ ವಿಡಿಯೋ ತಯಾರಿಸಬೇಕಾಗಿತ್ತು. ಹೀಗಾಗಿ ಕೇವಲ ಪ್ರಕೃತಿಯನ್ನು ಆನಂದಿಸುವುದಲ್ಲ; ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕಥೆ, ದೃಶ್ಯ ಮತ್ತು ಕಂಟೆಂಟ್ ರೂಪಿಸುವ ಜವಾಬ್ದಾರಿಯೂ ಯುವಕನ ಮೇಲಿತ್ತು. ಇದರಿಂದ ಈ ಕೆಲಸದಲ್ಲಿ ಕ್ಯಾಮೆರಾ ಜ್ಞಾನ, ವಿಡಿಯೋ ಎಡಿಟಿಂಗ್, ಸೋಷಿಯಲ್ ಮೀಡಿಯಾ ಟ್ರೆಂಡ್‌ಗಳ ಅರಿವು ಮತ್ತು ಸೃಜನಶೀಲತೆ ಬಹಳ ಮುಖ್ಯವಾಗಿತ್ತು.
ಆಯ್ಕೆ ಬಗ್ಗೆ ಕೇಳಿಬಂದ ಅನುಮಾನ ಏನು?
23 ವರ್ಷದ ಯುವಕ ಆಯ್ಕೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಚರ್ಚೆ ಶುರುವಾಯಿತು. ಸುಮಾರು 3,500ಕ್ಕೂ ಹೆಚ್ಚು ಮಂದಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಬಹುತೇಕ ಹೊಸ ಖಾತೆಯೊಂದರ ಯುವಕ ಆಯ್ಕೆಯಾಗಿರುವುದನ್ನು ಕೆಲವರು ಪ್ರಶ್ನಿಸಿದರು. ‘ಈ ಹುದ್ದೆ ಮೊದಲೇ ಯಾರಿಗಾದರೂ ನಿಗದಿಯಾಗಿತ್ತೇ?’ ಎಂಬ ಅನುಮಾನಗಳೂ ವ್ಯಕ್ತವಾದವು. ಆದರೆ ಲಾಓಜುನ್ ಪ್ರವಾಸಿ ತಾಣದ ಅಧಿಕಾರಿಗಳು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆಯ್ಕೆ ಪ್ರಕ್ರಿಯೆ ನಿಗದಿತ ನಿಯಮಗಳಂತೆ ನಡೆದಿದ್ದು, ವಿಜೇತನನ್ನು ಮೊದಲೇ ಪರಿಚಯವಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ವಿಡಿಯೋ ಹೆಚ್ಚಿನ ಲೈಕ್ಸ್ ಪಡೆದಿರುವುದು ಆಯ್ಕೆಯಲ್ಲಿ ಪ್ರಮುಖ ಅಂಶವಾಗಿತ್ತು ಎಂದು ಹೇಳಿದ್ದಾರೆ.
