ಬಿಗ್​ಬಾಸ್​ 13ನೇ ಸೀಸನ್​ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಕಿಚ್ಚ ಸುದೀಪ್, ಶೋ ಗೆಲ್ಲಲು ಬೇಕಾದ ಪ್ರಮುಖ ಗುಣದ ಬಗ್ಗೆ ಮಾತನಾಡಿದ್ದಾರೆ. ಕೇವಲ ಗೇಮ್ ಪ್ಲಾನ್ ಮಾತ್ರವಲ್ಲ, ತಾಳ್ಮೆ ಮತ್ತು ಸವಾಲುಗಳನ್ನು ಎದುರಿಸುವ ಮನಸ್ಥಿತಿ ಇದ್ದರೆ ಮಾತ್ರ ಬಿಗ್​ಬಾಸ್​ನಲ್ಲಿ ಗೆಲುವು ಸಾಧ್ಯ ಎಂದು ಅವರು ಸಲಹೆ ನೀಡಿದ್ದಾರೆ. ಈ ತಾಳ್ಮೆ ಜೀವನದಲ್ಲೂ ಯಶಸ್ಸಿಗೆ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಗ್​ಬಾಸ್​​ 13ನೇ (Bigg Boss 13) ಸೀಸನ್​ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಸೆಪ್ಟೆಂಬರ್​ 6ರಿಂದ ಷೋ ಆರಂಭ ಆಗಲಿದ್ದು, ಈ ಬಾರಿ ಬಿಗ್​ಬಾಸ್​ ಮನೆಗೆ ಹೋಗುವವರು ಯಾರು ಎನ್ನುವ ಬಗ್ಗೆ ಇನ್ನೂ ಸೀಕ್ರೆಟ್​ ಕಾಪಾಡಲಾಗಿದೆ. ಇದರ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಇಂದು ಸುದೀಪ್​ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು. ಅದರಲ್ಲಿ ಅವರು ಕೆಲವು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಬಿಗ್​ಬಾಸ್​ ವಿನ್​ ಆಗುವುದು ಹೇಗೆ? ಅಲ್ಲಿ ನಿಜವಾಗಿಯೂ ಬೇಕಿರೋದು ಏನು ಎನ್ನುವ ಪ್ರಶ್ನೆಗೆ ಕಿಚ್ಚ, ಗೆಲುವಿಗೆ ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ ಮತ್ತು ಸವಾಲುಗಳನ್ನು ಎದುರಿಸುವ ಮನಸ್ಥಿತಿ ಬೇಕು ಎಂದಿದ್ದಾರೆ. ಕೇವಲ ಗೇಮ್ ಪ್ಲಾನ್ ಮುಖ್ಯ ಆಗುವುದಿಲ್ಲ. ಜನರ ಮನಸ್ಸನ್ನು ಗೆಲ್ಲುವ ವ್ಯಕ್ತಿತ್ವ ಬೇಕಾಗಿದ್ದರೂ, ಎಲ್ಲಕ್ಕಿಂತಲೂ ಮಿಗಿಲಾಗಿ ಬೇಕಿರುವುದು ತಾಳ್ಮೆ ಎಂದು ಉತ್ತರಿಸಿದ್ದಾರೆ.

ಬಿಗ್​ಬಾಸ್​ ಗೆಲ್ಲಲು ಬೇಕಿರೋದು ಏನು?

ಮೊದಲನೆಯದಾಗಿ ತಾಳ್ಮೆ ಇರಬೇಕು. ಪ್ರತಿಯೊಂದು ಸನ್ನಿವೇಶವನ್ನೂ ಕಾಯ್ದು ನೋಡಬೇಕು ಮತ್ತು ಅನುಭವಿಸಬೇಕು. ಎದುರಾಗುವ ಸವಾಲುಗಳನ್ನು ನಿಧಾನವಾಗಿ, ಸಂಯಮದಿಂದ ಎದುರಿಸುವುದು ಅತ್ಯಗತ್ಯ, ಹಾಗಿದ್ದರೆ ಬಿಗ್​ಬಾಸ್​ನಲ್ಲಿ ಗೆಲುವು ಸಾಧಿಸಬಹುದು. ನಾವು ಅಂದುಕೊಂಡ ಗುರಿ ತಲುಪುವವರೆಗೂ ತಾಳ್ಮೆ ಕಳೆದುಕೊಳ್ಳಬಾರದು. ಆ ಪಯಣದಲ್ಲಿ ಹತ್ತು ಹಲವು ಅಡೆತಡೆಗಳು ಎದುರಾಗಬಹುದು. ಆದರೂ ಧೈರ್ಯದಿಂದ ಮುನ್ನುಗ್ಗಬೇಕು ಎಂದು ಸುದೀಪ್​ ಹೇಳಿದ್ದಾರೆ.

ಜೀವನದಲ್ಲಿಯೂ ತಾಳ್ಮೆ ಮುಖ್ಯ

ಬಿಗ್​ಬಾಸ್​ನ ತಾಳ್ಮೆಯ ಬಗ್ಗೆ ಹೇಳುತ್ತಲೇ, ಜೀವನದ ಬಗ್ಗೆಯೂ ಮಾತನಾಡಿದ್ದಾರೆ ಕಿಚ್ಚ. ತಾಳ್ಮೆ ಎನ್ನುವುದು ಕೇವಲ, ಬಿಗ್​ಬಾಸ್​​ ಸ್ಪರ್ಧಿಗಳಿಗೆ ಸೀಮಿತ ಅಲ್ಲ. ಜೀವನದ ಪ್ರತಿಯೊಂದು ವೇದಿಕೆಗೂ ಅನ್ವಯಿಸುತ್ತದೆ. ಯಾವಾಗ ಒಬ್ಬ ವ್ಯಕ್ತಿ ಸಂಯಮದಿಂದ ಅಡೆತಡೆಗಳನ್ನು ಮೆಟ್ಟಿ ನಿಲ್ಲುತ್ತಾನೋ, ಆಗ ಆತ ಜೀವನದಲ್ಲಿಯೂ ಸಕ್ಸಸ್​ ಕಾಣುತ್ತಾನೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಬಿಗ್‌ ಬಾಸ್‌ ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬ ಪ್ರಶ್ನೆಗೆ, ಬಿಗ್ ಬಾಸ್ ವೇದಿಕೆಗೆ ಬರುವ ಮುನ್ನ ಜನ ನನ್ನ ಬಗ್ಗೆ ಹೊಂದಿದ್ದ ಅಭಿಪ್ರಾಯವೇ ಬೇರೆ, ಈ ಶೋ ಆರಂಭವಾದ ಮೇಲೆಯೇ ಜನರಿಗೆ ನನ್ನ ನಿಜವಾದ ವ್ಯಕ್ತಿತ್ವ ಪರಿಚಯವಾಯಿತು ಎಂದು ಹೇಳಿದರು.