ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರದ ಎಲಿಮಿನೇಷನ್ ಬಗ್ಗೆ ಕುತೂಹಲ ಹೆಚ್ಚಾಗಿದೆ. ಯಾವ ಸ್ಪರ್ಧಿ ಮನೆಯಿಂದ ಹೊರಹೋಗಬಹುದು ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಟ್ವಿಸ್ಟ್ ಇರಲಿದೆ ಎನ್ನಲಾಗುತ್ತಿದೆ.
ವೀಕೆಂಡ್ ಬಂತು ಅಂದರೆ ಬಿಗ್ ಬಾಸ್ ಪ್ರೇಕ್ಷಕರ ಕಣ್ಣು ಕಿಚ್ಚ ಸುದೀಪ್ ಅವರ ಪಂಚಾಯ್ತಿಯ ಮೇಲಿರುತ್ತದೆ. ಸ್ಪರ್ಧಿಗಳ ಆಟ, ತಪ್ಪು-ಸರಿಗಳ ಚರ್ಚೆ, ಕಿಚ್ಚನ ಕ್ಲಾಸ್-ಎಲ್ಲವನ್ನೂ ನೋಡಲು ವೀಕ್ಷಕರು ಕಾತರರಾಗಿರುತ್ತಾರೆ. ಈ ವಾರದ ವೀಕೆಂಡ್ ಎಪಿಸೋಡ್ ಕೂಡ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ.
ಈ ವಾರ ಮನೆಯಲ್ಲಿ ನೋ ಎಲಿಮಿನೇಷನ್ ವೀಕ್ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ. ನಾಮಿನೇಷನ್ ಪ್ರಕ್ರಿಯೆ ನಡೆದಿದ್ದರೂ ವೋಟಿಂಗ್ ಲೈನ್ಸ್ ಇನ್ನೂ ಓಪನ್ ಆಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಈ ವಾರ ಯಾರೂ ಮನೆಯಿಂದ ಹೊರಹೋಗುವುದಿಲ್ಲ ಎಂಬ ಚರ್ಚೆ ಶುರುವಾಗಿದೆ. ಆದರೆ ಎಲಿಮಿನೇಷನ್ ಇಲ್ಲ ಎಂದ ಮಾತ್ರಕ್ಕೆ ಸ್ಪರ್ಧಿಗಳಿಗೆ ಟೆನ್ಷನ್ ಇಲ್ಲ ಎನ್ನುವಂತಿಲ್ಲ!
ಕಾಮನ್ ಮ್ಯಾನ್ ಸ್ಪರ್ಧಿಗಳಿಗೆ ಕಾದಿದೆಯಾ ಪ್ರ್ಯಾಂಕ್ ಎಲಿಮಿನೇಷನ್?
ಆರೋಗ್ಯ ಸಮಸ್ಯೆಯ ಕಾರಣ ಓಂ ಪ್ರಕಾಶ್ ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇದೇ ಸಂದರ್ಭದಲ್ಲಿ ಈ ವಾರ ಎಲಿಮಿನೇಷನ್ ಇರುವುದಿಲ್ಲ ಎನ್ನಲಾಗುತ್ತಿರುವುದರಿಂದ, ಸ್ಪರ್ಧಿಗಳಿಗೆ ಫೇಕ್ ಅಥವಾ ಪ್ರ್ಯಾಂಕ್ ಎಲಿಮಿನೇಷನ್ ಮೂಲಕ ಶಾಕ್ ನೀಡುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ವಿಶೇಷವಾಗಿ ‘ಅಗ್ನಿಪರೀಕ್ಷೆ’ಯ ಕಾಮನ್ ಮ್ಯಾನ್ ಸ್ಪರ್ಧಿಗಳಿಗೆ ಈ ಮೂಲಕ ಬಿಗ್ ಬಾಸ್ ದೊಡ್ಡ ಸರ್ಪ್ರೈಸ್ ನೀಡಬಹುದು ಎನ್ನಲಾಗುತ್ತಿದೆ. ಅದರ ಜೊತೆಗೆ ಈ ವಾರ ಕಿಚ್ಚನ ಕ್ಲಾಸ್ ಕೂಡ ಇರಲಿದ್ದು, ಮಂಜ ಅವರ ಆಟದ ಬಗ್ಗೆಯೂ ಸುದೀಪ್ ಪ್ರಶ್ನಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಅಂದಹಾಗೆ, ಮನೆಯೊಳಗೆ ನಡೆದ ಕ್ಯಾಪ್ಟನ್ಸಿ ಟಾಸ್ಕ್ ಸಂದರ್ಭದಲ್ಲಿ ಮಂಜ ಹಾಗೂ ಸೌಂದರ್ಯ ಶೆಟ್ಟಿ ನಡುವೆ ನಡೆದ ಘಟನೆ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ.
ಮಂಜನಿಗೆ ಕಪಾಳಮೋಕ್ಷ: ಬಿಗ್ ಬಾಸ್ ಮಧ್ಯಪ್ರವೇಶ!
ಮೊದಲ ಕ್ಯಾಪ್ಟನ್ಸಿ ಆಟದ ಭಾಗವಾಗಿ ಸ್ಪರ್ಧಿಗಳಿಗೆ ಹಲವು ಹಂತಗಳ ಟಾಸ್ಕ್‌ಗಳನ್ನು ನೀಡಲಾಗಿತ್ತು. ಅದರ ಮೊದಲ ಹಂತದಲ್ಲಿ ‘ಕಣ್ಗಾವಲು’ ಎಂಬ ಟಾಸ್ಕ್ ನಡೆದಿತ್ತು. ಆಟದ ಭರದಲ್ಲಿ ಸೌಂದರ್ಯ ಶೆಟ್ಟಿ ಅವರು ಮಂಜ ಅವರ ಕಪಾಳಕ್ಕೆ ಹೊಡೆದಿದ್ದರು.
ಈ ಘಟನೆ ಬಳಿಕ ಮಂಜ ತೀವ್ರವಾಗಿ ಅಸಮಾಧಾನಗೊಂಡಿದ್ದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಬಿಗ್ ಬಾಸ್ ಮಧ್ಯಪ್ರವೇಶಿಸಿ ಮಂಜ ಅವರನ್ನು ಸಮಾಧಾನಪಡಿಸಿದ್ದರು. ಬಳಿಕ ಸೌಂದರ್ಯ ಶೆಟ್ಟಿ ಕೂಡ ಆಟದ ವೇಳೆ ನಡೆದ ಅವಘಡಕ್ಕೆ ಕ್ಷಮೆ ಕೇಳಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಏನು ಹೇಳಲಿದ್ದಾರೆ ಎಂಬ ಕುತೂಹಲವೂ ವೀಕ್ಷಕರಲ್ಲಿದೆ.
ಸಂಗೀತಾ ಭಟ್ ಮೊದಲ ಕ್ಯಾಪ್ಟನ್
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಸಂಗೀತಾ ಭಟ್ ಈ ಸೀಸನ್‌ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ‘ಕಣ್ಗಾವಲು’ ಟಾಸ್ಕ್ ಗೆದ್ದ ಸಂಗೀತಾ ಭಟ್ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಫೈಲೆಟ್ ಆಗಿ ಆಯ್ಕೆಯಾಗಿದ್ದರು. ಬಳಿಕ ಅವರು ಆಸಿಯಾ ಫಿರ್ದೋಸ್ ಅವರನ್ನು ಕೋ-ಫೈಲೆಟ್ ಆಗಿ ಆಯ್ಕೆ ಮಾಡಿಕೊಂಡರು.
ಆಸಿಯಾ ಫಿರ್ದೋಸ್ ತಮ್ಮ ವಿರುದ್ಧ ಆಡಲು ಅವಿನಾಶ್, ಯಶಸ್ ಮತ್ತು ಧನುಷ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಅಂತಿಮ ಹಂತಗಳಲ್ಲಿ ಸಂಗೀತಾ ಭಟ್‌ಗೆ ತಂಡದ ಬೆಂಬಲ ದೊರೆತಿದ್ದು, ಅವರು ಸೀಸನ್‌ನ ಮೊದಲ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ನೋ ಎಲಿಮಿನೇಷನ್ ವೀಕ್, ಪ್ರ್ಯಾಂಕ್ ಎಲಿಮಿನೇಷನ್ ಸಾಧ್ಯತೆ, ಮಂಜ-ಸೌಂದರ್ಯ ಶೆಟ್ಟಿ ನಡುವಿನ ಘಟನೆ ಮತ್ತು ಕಿಚ್ಚನ ಪಂಚಾಯ್ತಿ. ಈ ಎಲ್ಲ ಕಾರಣಗಳಿಂದ ಈ ವಾರದ ‘ಬಿಗ್ ಬಾಸ್ ಕನ್ನಡ 13’ ವೀಕೆಂಡ್ ಎಪಿಸೋಡ್ ಕುತೂಹಲ ಮೂಡಿಸಿದೆ.


