‘ಜೋಡಿ ಹಕ್ಕಿ’ ಧಾರಾವಾಹಿಯ ಪೈಲ್ವಾನ್ ರಾಮು ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ತಾಂಡವ್ ರಾಮ್ ಬಿಗ್‌ ಬಾಸ್ ಕನ್ನಡ ಸೀಸನ್ 13ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹಾಸನದಿಂದ ಬೆಂಗಳೂರಿಗೆ ಬಂದು ಕಿರುತೆರೆ, ಹಿರಿತೆರೆ..

‘ಬಿಗ್‌ ಬಾಸ್ ಕನ್ನಡ’ ಸೀಸನ್ 13ರ ಮನೆಯಲ್ಲಿ ಒಬ್ಬೊಬ್ಬರಾಗಿ ಸ್ಪರ್ಧಿಗಳು ಎಂಟ್ರಿ ಕೊಡುತ್ತಿದ್ದು, ಇದೀಗ ಕಿರುತೆರೆ-ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟ ತಾಂಡವ್ ರಾಮ್ ಸರದಿ ಬಂದಿದೆ. ‘ಜೋಡಿ ಹಕ್ಕಿ’ ಧಾರಾವಾಹಿಯ ಪೈಲ್ವಾನ್ ರಾಮು ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ತಾಂಡವ್, ತಮ್ಮ ವೈಯಕ್ತಿಕ ಬದುಕಿನ ಏಳು-ಬೀಳು, ವಿವಾದಗಳು ಹಾಗೂ ಸಿನಿಮಾ ಪಯಣದೊಂದಿಗೆ ‘ದೊಡ್ಮನೆ’ಗೆ ಕಾಲಿಟ್ಟಿದ್ದಾರೆ.

ಹಾಸನದಿಂದ ಬೆಂಗಳೂರಿಗೆ... ಬಣ್ಣದ ಲೋಕದ ಕನಸು!

ಹಾಸನ ಮೂಲದ ತಾಂಡವೇಶ್ವರ ಅಲಿಯಾಸ್ ತಾಂಡವ್ ರಾಮ್, ಬಣ್ಣದ ಲೋಕದಲ್ಲಿ ಏನಾದರೂ ಸಾಧಿಸಬೇಕು ಎಂಬ ಕನಸಿನೊಂದಿಗೆ ರಾಜಧಾನಿಗೆ ಬಂದವರು. ಕಿರುತೆರೆ, ಹಿರಿತೆರೆ ಮಾತ್ರವಲ್ಲದೆ ನಿರ್ಮಾಣ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿರುವ ಅವರು, ಹಲವು ಸವಾಲುಗಳನ್ನು ಎದುರಿಸಿ ಈ ಹಂತಕ್ಕೆ ಬಂದಿದ್ದಾರೆ. ಬಿಗ್‌ ಬಾಸ್ ವೇದಿಕೆ ಮೇಲೆ ತಮ್ಮ ಬದುಕಿನ ಹಾದಿಯನ್ನು ನೆನಪಿಸಿಕೊಂಡ ತಾಂಡವ್, ಪಿಯುಸಿ ಓದುತ್ತಿದ್ದಾಗಲೇ ತಂದೆಯನ್ನು ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದಾರೆ.

ರಂಗಭೂಮಿಗೆ ಕಾಲಿಟ್ಟ ವಿಚಾರವನ್ನೂ ಆರಂಭದಲ್ಲಿ ಮನೆಯವರಿಗೆ ಹೇಳಿರಲಿಲ್ಲವಂತೆ. ಟಿವಿಯಲ್ಲಿ ತಮ್ಮನ್ನು ನೋಡಿದಾಗಲೇ ಕುಟುಂಬದವರಿಗೆ ತಾವು ಕಲಾವಿದರಾಗುತ್ತಿರುವ ವಿಚಾರ ತಿಳಿದಿತ್ತು ಎಂದು ಹೇಳಿದ್ದಾರೆ. ‘ಬದುಕಿನಲ್ಲಿ ಏನಾದರೂ ಸಾಧಿಸಿದ ಬಳಿಕವೇ ಮದುವೆಯಾಗುತ್ತೇನೆ’ ಎಂಬ ತಮ್ಮ ನಿರ್ಧಾರವನ್ನೂ ತಾಂಡವ್ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.

‘ನೀವು ಆಕ್ಷನ್ ಮಾಡಿದ್ರೆ... ನನ್ನ ಕಡೆಯಿಂದ ರಿಯಾಕ್ಷನ್ ಪಕ್ಕಾ!’

ಬಿಗ್‌ ಬಾಸ್ ಮನೆಯಲ್ಲಿ ತಮ್ಮ ಆಟ ಹೇಗಿರಲಿದೆ ಎಂಬುದರ ಸುಳಿವನ್ನೂ ತಾಂಡವ್ ಮೊದಲೇ ನೀಡಿದ್ದಾರೆ. ಯಾರಾದರೂ ತಮ್ಮ ಮೇಲೆ ಆಕ್ಷನ್ ಮಾಡಿದರೆ, ಅದಕ್ಕೆ ತಮ್ಮ ಕಡೆಯಿಂದ ಪಕ್ಕಾ ರಿಯಾಕ್ಷನ್ ಇರಲಿದೆ ಎಂದು ನೇರವಾಗಿಯೇ ಹೇಳಿದ್ದಾರೆ. ಈ ಹೇಳಿಕೆ ಇದೀಗ ತಾಂಡವ್ ಅವರ ಬಿಗ್‌ ಬಾಸ್ ಆಟದ ಬಗ್ಗೆ ಕುತೂಹಲ ಮೂಡಿಸಿದೆ. ಪೈಲ್ವಾನ್ ಲುಕ್‌ನಲ್ಲಿರುವ ತಾಂಡವ್, ಮನೆಯೊಳಗೆ ತಾಳ್ಮೆಯಿಂದ ಆಡ್ತಾರಾ? ಇಲ್ಲವೇ ಸಣ್ಣ ವಿಚಾರಕ್ಕೂ ರಿಯಾಕ್ಟ್ ಮಾಡ್ತಾರಾ? ಅನ್ನೋ ಪ್ರಶ್ನೆ ಪ್ರೇಕ್ಷಕರಲ್ಲಿ ಶುರುವಾಗಿದೆ.

‘ಜೋಡಿ ಹಕ್ಕಿ’ಯ ರಾಮು ಕೊಟ್ಟ ದೊಡ್ಡ ಗುರುತು

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಜೋಡಿ ಹಕ್ಕಿ’ಯಲ್ಲಿ ಮುಗ್ಧ ಹಳ್ಳಿ ಪೈಲ್ವಾನ್ ರಾಮು ಪಾತ್ರ ತಾಂಡವ್‌ಗೆ ಕಿರುತೆರೆಯಲ್ಲಿ ದೊಡ್ಡ ಗುರುತು ತಂದುಕೊಟ್ಟಿತ್ತು. ಈ ಪಾತ್ರಕ್ಕಾಗಿ ಚಿತ್ರೀಕರಣದ ಸಮಯದಲ್ಲೇ ಕುಸ್ತಿ ಪಟ್ಟುಗಳನ್ನೂ ಕಲಿತಿದ್ದರು. ಬಾಡಿ ಬಿಲ್ಡಿಂಗ್‌ನಲ್ಲೂ ಆಸಕ್ತಿ ಹೊಂದಿರುವ ತಾಂಡವ್, ಹಲವು ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಹೀಗಾಗಿ ಬಿಗ್‌ ಬಾಸ್ ಮನೆಯಲ್ಲಿ ಅವರ ಫಿಟ್‌ನೆಸ್ ಕೂಡ ಒಂದು ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

ಹಿರಿತೆರೆಯಲ್ಲೂ ತಾಂಡವ್ ಗುರುತು

ಗಿರೀಶ್ ಜಿ ನಿರ್ದೇಶನದ ‘ಒಂದ್ ಕಥೆ ಹೇಳ್ಲಾ’ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಕಾಲಿಟ್ಟ ತಾಂಡವ್, ಬಳಿಕ ಕೆ.ಎಂ. ಚೈತನ್ಯ ನಿರ್ದೇಶನದ ‘ಅಬ್ಬಬ್ಬಾ’ ಚಿತ್ರದಲ್ಲೂ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯ ಮೂಲಕ ನಟನೆಯ ಜತೆಗೆ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟ ಅವರು, ಕಿರುಚಿತ್ರಗಳು ಮತ್ತು ಸಿನಿಮಾಗಳ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

ಜೈಲು ವಿವಾದದಿಂದ ಭಾರೀ ಸುದ್ದಿಯಾಗಿದ್ದ ನಟ

ತಾಂಡವ್ ರಾಮ್ ಅವರ ಬದುಕಿನಲ್ಲಿ ವಿವಾದವೂ ದೊಡ್ಡ ಅಧ್ಯಾಯವಾಗಿದೆ. 2024ರಲ್ಲಿ ಸಿನಿಮಾವೊಂದರ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಲು ಯತ್ನಿಸಿದ ಆರೋಪದಲ್ಲಿ ಪೊಲೀಸರು ಅವರನ್ನು ಕೊಲೆ ಯತ್ನ ಪ್ರಕರಣದಡಿ ಬಂಧಿಸಿದ್ದರು. ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ತಾಂಡವ್ ಮತ್ತೆ ತಮ್ಮ ವೃತ್ತಿಜೀವನದತ್ತ ಗಮನ ಹರಿಸಿದರು. ‘ಕ್ವಾಟ್ಲೆ ಕಿಚನ್’ ಶೋನಲ್ಲಿ ಭಾಗವಹಿಸಿ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದು, ಅವರ ಮತ್ತೊಂದು ಮುಖವನ್ನು ಪ್ರೇಕ್ಷಕರಿಗೆ ಪರಿಚಯಿಸಿತ್ತು.

ಈಗ ‘ದೊಡ್ಮನೆ’ಯಲ್ಲಿ ಹೊಸ ಅಧ್ಯಾಯ!

ವಿವಾದಗಳ ನೆರಳಿನಿಂದ ಹೊರಬಂದು ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಜನರಿಗೆ ಪರಿಚಯಿಸಿಕೊಳ್ಳಲು ತಾಂಡವ್ ರಾಮ್ ಇದೀಗ ಬಿಗ್‌ ಬಾಸ್ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪೈಲ್ವಾನ್ ಲುಕ್, ಬಾಡಿ ಬಿಲ್ಡಿಂಗ್ ಹಿನ್ನೆಲೆ, ನೇರ ಮಾತು ಹಾಗೂ ‘ಆಕ್ಷನ್‌ಗೆ ರಿಯಾಕ್ಷನ್ ಪಕ್ಕಾ’ ಎಂಬ ವಾರ್ನಿಂಗ್‌-ಇವೆಲ್ಲವೂ ಅವರ ಆಟದ ಬಗ್ಗೆ ಈಗಾಗಲೇ ನಿರೀಕ್ಷೆ ಹುಟ್ಟುಹಾಕಿವೆ.

ಇನ್ನು ಇಷ್ಟೆಲ್ಲ ಅನುಭವ ಹೊತ್ತು ಬಿಗ್‌ ಬಾಸ್ ಮನೆಗೆ ಕಾಲಿಟ್ಟಿರುವ ತಾಂಡವ್, ಈ ಬಾರಿ ವಿವಾದಗಳ ಮೂಲಕವಲ್ಲ, ತಮ್ಮ ಆಟದ ಮೂಲಕವೇ ಗುರುತಿಸಿಕೊಳ್ಳುತ್ತಾರಾ? ಅಥವಾ ‘ಆಕ್ಷನ್-ರಿಯಾಕ್ಷನ್’ ಆಟವೇ ಅವರನ್ನು ಹೆಚ್ಚು ಸುದ್ದಿಯಲ್ಲಿಡುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.