ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ನಟ ಕಿಶೋರ್ ಅವರು ಹಾಲಿ ಸರ್ಕಾರವು ಈ ಗೀತೆಯನ್ನು ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ಮತ್ತು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು (ಡಿ.11): ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘೋಷವಾಗಿದ್ದ ವಂದೇ ಮಾತರಂ ಗೀತೆ 150ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಂಕಿಮಚಂದ್ರ ಚಟರ್ಜಿ ಅವರು ಬರೆದ ದೇಶಪ್ರೇಮದ ಗೀತೆಯನ್ನು ಚರ್ಚೆಯನ್ನು ಸಂಸತ್ತಿನಲ್ಲಿ ಇರಿಸಿಕೊಳ್ಳಲಾಗಿದೆ. ಸಂಸತ್‌ನ ಚಳಿಗಾಲದ ಅಧಿವೇಶನದ ಆರಂಭದ ದಿನಗಳನ್ನು ವಂದೇ ಮಾತರಂ ಚರ್ಚೆಗೆ ಮೀಸಲಿಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ವಿಪಕ್ಷದ ಅನೇಕ ನಾಯಕರು ಇದರ ಬಗ್ಗೆ ಚರ್ಚೆ ಮಾಡಿದ್ದರು.

ಈಗ ಕನ್ನಡದ ಪ್ರಖ್ಯಾತ ಪೋಷಕ ನಟ ಕಿಶೋರ್‌, ಹಾಲಿ ಸರ್ಕಾರ ಮುಸ್ಲಿಮರ ವಿರುದ್ಧದ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಅನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲೂ ಅವರು ಬರೆದುಕೊಂಡಿದ್ದಾರೆ.

ಕಿಶೋರ್‌ ಅವರ ಇನ್ಸ್‌ಟಾಗ್ರಾಮ್‌ ಪೋಸ್ಟ್‌

ಜೈ ಶ್ರೀ ರಾಮ್ ನಿಂದ ವಂದೇ ಮಾತರಂ ವರೆಗೆ ..

ಇತರರನ್ನು ಪ್ರೀತಿಯಿಂದ ಸ್ವಾಗತಿಸಲು ಬಳಸುತ್ತಿದ್ದ ಅಭಿವ್ಯಕ್ತಿಯನ್ನು ಹೇಗೆ ಸ್ವಾಧೀನಪಡಿಸಿಕೊಂಡು ಅದನ್ನು ಯುದ್ಧಘೋಷವಾಗಿ, ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ, ಅಧಿಕಾರ ಹಿಡಿಯುವ ಸುಲಭ ಸಾಧನವಾಗಿ ಪರಿವರ್ತಿಸಲಾಗಿದೆಯೋ ಹಾಗೆಯೇ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವಿಲ್ಲದ, ನಿಜವಾದ ದೇಶಭಕ್ತರು ನಿರ್ಮಿಸಿದ ಎಲ್ಲವನ್ನೂ ಮಾರುತ್ತಿರುವ ಅಧಿಕಾರದಲ್ಲಿರುವ ನಿಷ್ಪ್ರಯೋಜಕ ಜನರು ಈಗ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬಳಸಿದ ಹಾಡನ್ನು. ಕಾಲಾಂತರದಲ್ಲಿ ಕೋಮು ಪಕ್ಷಪಾತದ ಕಾದಂಬರಿ ಆನಂದ ಮಠಕ್ಕೆ ತಳಕು ಹಾಕಿಕೊಂಡರೂ ಸಹ, ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತುಂಬಿದ ಮತ್ತು ಭಾರತದಾದ್ಯಂತ ಜನರನ್ನು ಒಗ್ಗೂಡಿಸಿದ ಹಾಡನ್ನು ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು, ತಮ್ಮ ರಾಜಕೀಯ ಲಾಭಕ್ಕೆ ಬಳಸಲು ಪ್ರಯತ್ನಿಸುತ್ತಿದ್ದಾರೆ …

ಕುಸಿಯುತ್ತಿರುವ ರೂಪಾಯಿ, ಆರ್ಥಿಕತೆ ಮತ್ತು ಕುಸಿಯುತ್ತಿರುವ ಪ್ರಜಾಪ್ರಭುತ್ವ ಸಂಸ್ಥೆಗಳು, ನಕಲಿ ಜಿಡಿಪಿ ಮತ್ತು ರೈತರಿಗೆ ನೀಡಿದ ನಕಲಿ ಭರವಸೆಗಳು, ಆರೋಗ್ಯ ಮತ್ತು ನಿರುದ್ಯೋಗ, ಅಮೆರಿಕ ಮತ್ತು ಚೀನಾ, ಮಣಿಪುರ ಮತ್ತು ಲಡಾಖ್, ವಿಜ್ಞಾನಿಗಳು ಮತ್ತು ವಿದ್ವಾಂಸರ ಅಕ್ರಮ ಬಂಧನಗಳು ಮುಂತಾದ ಎಲ್ಲಾ ಅಗತ್ಯ ಮತ್ತು ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಿ.

ಈ ಹೊತ್ತಿಗೆ ನಾವು ಅರ್ಥಮಾಡಿಕೊಂಡಿರಬೇಕಿತ್ತು ಈ ಮೂರ್ಖರಿಂದ ಏನನ್ನೂ ನಿಭಾಯಿಸಲು ಸಾಧ್ಯವಿಲ್ಲವೆಂದು... ಅವರು ಮಾಡಬಹುದಾದದ್ದು ಇಷ್ಟೇ.

ವಿಭಜಿಸು ಇಲ್ಲ ದಿಕ್ಕು ತಪ್ಪಿಸು.

ಹಿಂದೂ ರಾಷ್ಟ್ರ ಆಗಲು ಬಿಡೋದಿಲ್ಲ ಎಂದಿದ್ದ ಕಿಶೋರ್‌

ಇದಕ್ಕೂ ಮುನ್ನ ಕಿಶೋರ್‌ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಆರ್‌ಎಸ್‌ಎಸ್‌ ಚೀಫ್‌ ಮೋಹನ್‌ ಭಾಗವತ್‌ ಅವರ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಿಸಲು ಬಿಡೋದಿಲ್ಲ ಎಂದಿದ್ದರು. 'ಶ್ರೀ ಭಾಗವತ್ ಅವರೇ, ಇಂದು ಆ ನಿಮ್ಮನಾಳೆಯ ಮರುದಿನ .. ನಾವು ಹಿಂದೂ ರಾಷ್ಟ್ರವಾಗಿಲ್ಲ. ಆಗಲೂ ಬಯಸುವುದಿಲ್ಲ. ನಿಜವಾದ ಸಮಸ್ಯೆಗಳ ಮೇಲೆ ಗಮನ ಹರಿಸುವುದರ ಬದಲು ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸುವ ಇಂತಹ ಜನಗಳ ಮಾತುಗಳನ್ನು ಕೇಳುತ್ತಾ ಹೋದರೆ, ನಾವು ಖಂಡಿತವಾಗಿಯೂ ಹಿಂದೂ ಅಲ್ಲ ಖಾಯಂ ಹಿಂದುಳಿದ ರಾಷ್ಟ್ರವಾಗುತ್ತೇವೆ' ಎಂದು ಬರೆದುಕೊಂಡಿದ್ದರು.

View post on Instagram