ಎರ್ನಾಕುಲಂ-ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್‌ ಗೀತೆ ಹಾಡಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯು ಸರ್ಕಾರಿ ಕಾರ್ಯಕ್ರಮದ ದುರ್ಬಳಕೆ ಮತ್ತು ಕೋಮು ಸಿದ್ಧಾಂತದ ಪ್ರಚಾರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಕ್ರೋಶ.

ತಿರುವನಂತಪುರ (ನ.9): ಶನಿವಾರ ಉದ್ಘಾಟನೆಯಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳಿಂದ ಮಲಯಾಳಿ ಆರ್‌ಎಸ್‌ಎಸ್‌ ಗೀತೆಯೊಂದನ್ನು ಹಾಡಿಸಿದ್ದು ವಿವಾದಕ್ಕೀಡಾಗಿದೆ. ಇದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಕ್ಕಳಿಂದ ಆರೆಸ್ಸೆಸ್ ಗೀತೆ ಸಂವಿಧಾನಕ್ಕೆ ವಿರುದ್ಧ

ಈ ಬಗ್ಗೆ ಹೇಳಿಕೆ ಬರೆದಿರುವ ಸಿಎಂ ಪಿಣರಾಯಿ, ‘ರೈಲಿನಲ್ಲಿ ಮಕ್ಕಳಿಂದ ಸಂಘ ಗೀತೆ ಹಾಡಿಸಿದ್ದನ್ನು ಟೀವಿಯಲ್ಲಿ ನೋಡಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಕೋಮುದ್ವೇಷ ಹರಡುವ ಸಂಘಟನೆಯ ಗೀತೆ ಹಾಡಿದ್ದ ಸರ್ಕಾರ ಮತ್ತು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ. ಸಂಘ ಪರಿವಾರವು ದೇಶದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಕೋಮುದ್ವೇಷ ಹರಡಲು ಮತ್ತು ಸಿದ್ಧಾಂತ ಹರಡಲು ಬಳಸಿಕೊಂಡಿರುವುದು ಒಪ್ಪಲಾಗದು. ದೇಶದ ಜಾತ್ಯಾತೀತತೆಗೆ ಶ್ರಮಿಸಿದ್ದ ರೈಲ್ವೆಯಲ್ಲಿ ಆರ್‌ಎಸ್‌ಎಸ್‌ನ ಕೋಮುಸಿದ್ಧಾಂತ ಪ್ರಚಾರವು ಸ್ವಾತಂತ್ರ್ಯ ಹೋರಾಟಕ್ಕೆ ಮಾಡಿದ ಅವಮಾನವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಸರ್ಕಾರಿ ಕಾರ್ಯಕ್ರಮ: ವೇಣು ಆಕ್ರೋಶ:

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ದೂರು ನೀಡಿದ್ದಾರೆ. ‘ಪ್ರಧಾನಿಯವರು ತಮ್ಮ ನಕಲಿ ರಾಷ್ಟ್ರೀಯತೆಯನ್ನು ಪ್ರದರ್ಶಿಸಲು ನಮ್ಮ ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ಬಳಸಿದ್ದಾರೆ. ಈಗ ಅವರ ಸರ್ಕಾರದ ರೈಲ್ವೆ ಸಚಿವಾಲಯವು ಮಕ್ಕಳನ್ನು ಆರ್‌ಎಸ್‌ಎಸ್‌ ಗೀತೆಯನ್ನು ಹಾಡುವಂತೆ ಮಾಡುತ್ತದೆ. ಇದು ಅವರ ಆಡಳಿತದ ನಿಜವಾದ ಬಣ್ಣಗಳನ್ನು ಮತ್ತೊಮ್ಮೆ ತೋರಿಸುತ್ತದೆ’ ಎಂದಿದ್ದಾರೆ.

‘ಇದು ಸರ್ಕಾರಿ ಕಾರ್ಯಕ್ರಮ. ಆದರೆ ಅದನ್ನು ಆರ್‌ಎಸ್‌ಎಸ್ ಕಾರ್ಯಕ್ರಮವಾಗಿ ಪರಿವರ್ತಿಸಲಾಯಿತು ಮತ್ತು ದಕ್ಷಿಣ ರೈಲ್ವೆಯ ಅಧಿಕೃತ ಎಕ್ಸ್ ಹ್ಯಾಂಡಲ್ ಸಹ ಇದನ್ನು ಹೆಮ್ಮೆಯಿಂದ ಹಂಚಿಕೊಂಡಿದೆ. ಇದು ಸರ್ಕಾರಿ ಯಂತ್ರದ ದುರ್ಬಳಕೆ’ ಎಂದು ವೇಣು ಕಿಡಿಕಾರಿದ್ದಾರೆ.

‘ಭಾರತವನ್ನು ಸಾಂವಿಧಾನಿಕ ಗಣರಾಜ್ಯದಿಂದ ಆರ್‌ಎಸ್‌ಎಸ್ ನಿಯಂತ್ರಿತ ನಿರಂಕುಶಾಧಿಕಾರಕ್ಕೆ ನಿಧಾನವಾಗಿ ಪರಿವರ್ತಿಸುವ ಕುತಂತ್ರದ ಪ್ರಯತ್ನವಾಗಿದೆ. ಇಂತಹ ಪ್ರಚಾರದ ಕೃತ್ಯಗಳು ಸಂವಿಧಾನದ ಜಾತ್ಯತೀತ ಮೌಲ್ಯಗಳು ಮತ್ತು ನಮ್ಮ ಸಂಸ್ಥೆಗಳ ಘನತೆಯನ್ನು ಹಾಳುಮಾಡುತ್ತವೆ. ಏನೇ ಇರಲಿ, ಆರ್‌ಎಸ್‌ಎಸ್ ಕಾರ್ಯಸೂಚಿ ಯಶಸ್ವಿಯಾಗಲು ನಾವು ಎಂದಿಗೂ ಬಿಡುವುದಿಲ್ಲ’ ಎಂದೂ ವೇಣು ಹೇಳಿದ್ದಾರೆ.