ದೊಡ್ಡ ನಗರಗಳ ಒತ್ತಡದ ಬದುಕಿನಿಂದ ಬೇಸತ್ತಿರುವ ಯುವ ವೃತ್ತಿಪರರು ಈಗ ಗೋವಾದತ್ತ ಮುಖ ಮಾಡುತ್ತಿದ್ದಾರೆ. ವರ್ಕ್ ಫ್ರಮ್ ಹೋಮ್ ಅವಕಾಶದಿಂದಾಗಿ, ಅವರು ಗೋವಾದ ಪ್ರಸಿದ್ಧ 'ಸುಸೆಗಾಡ್' ಅಂದರೆ ನಿಧಾನ, ನಿರಾಳ ಜೀವನಶೈಲಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ.

ಈಗಿನ ಯುವಕರಿಗೆ ಗೋವಾ ಅಂದ್ರೆ ಬರೀ ಹಾಲಿಡೇ ಡೆಸ್ಟಿನೇಶನ್ ಅಲ್ಲ, ಅದೊಂದು ಲೈಫ್‌ಸ್ಟೈಲ್ ಆಯ್ಕೆಯಾಗಿದೆ. ಸಾಫ್ಟ್‌ವೇರ್ ಎಂಜಿನಿಯರ್‌ಗಳಿಂದ ಹಿಡಿದು ಸ್ಟಾರ್ಟ್‌ಅಪ್ ಸಂಸ್ಥಾಪಕರು, ಕಲಾವಿದರು, ಕ್ರಿಯೇಟರ್ಸ್‌ವರೆಗೆ ಅನೇಕರು ಈಗ ದೊಡ್ಡ ನಗರಗಳ ಗದ್ದಲವನ್ನು ಬಿಟ್ಟು ಗೋವಾದ ಪ್ರಸಿದ್ಧ 'ಸುಸೆಗಾಡ್' ಜೀವನಶೈಲಿಯನ್ನು ಅರಸಿ ಹೊರಟಿದ್ದಾರೆ. ಅಂದರೆ, ನಿಧಾನ, ನಿರಾಳ ಮತ್ತು ಸಮತೋಲನದ ಬದುಕು.

Add Asianetnews Kannada as a Preferred SourcegooglePreferred

ಗೋವಾದಲ್ಲಿ 'ಸುಸೆಗಾಡ್' ಅನ್ನೋ ಪದ ತುಂಬಾನೇ ಫೇಮಸ್. ಇದರರ್ಥ ನಿರಾಳ, ಆರಾಮದಾಯಕ, ಒತ್ತಡವಿಲ್ಲದ ಜೀವನಶೈಲಿ. ಆದರೆ ಸ್ಥಳೀಯರ ಪ್ರಕಾರ, ಜನರು ಇದನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. "ಸುಸೆಗಾಡ್ ಅಂದ್ರೆ ಏನೂ ಕೆಲಸ ಮಾಡದೆ ಇರುವುದಲ್ಲ, ಬದಲಿಗೆ ಯಾವುದೇ ಅವಸರವಿಲ್ಲದೆ, ಒತ್ತಡವಿಲ್ಲದೆ ಆರಾಮವಾಗಿ ಬದುಕುವುದು," ಅಂತ ಗೋವಾದ ಕಲಾವಿದರೊಬ್ಬರು 'ಓ ಹೆರಾಲ್ಡೋ' ಪತ್ರಿಕೆಗೆ ತಿಳಿಸಿದ್ದಾರೆ.

ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳ ಟ್ರಾಫಿಕ್, ದುಬಾರಿ ಬಾಡಿಗೆ, ಒತ್ತಡದ ಕೆಲಸದಿಂದ ಬೇಸತ್ತ ಯುವಕರಿಗೆ ಈ 'ಸುಸೆಗಾಡ್' ಐಡಿಯಾ ಹೆಚ್ಚು ಇಷ್ಟವಾಗುತ್ತಿದೆ. ಇಂಟರ್‌ನೆಟ್ ಸಂಪರ್ಕ ಸುಧಾರಿಸಿರುವುದು ಮತ್ತು ರಿಮೋಟ್ ವರ್ಕ್ ಅವಕಾಶಗಳು ಹೆಚ್ಚಿರುವುದರಿಂದ, ಯುವ ವೃತ್ತಿಪರರು ಬೀಚ್ ಪಕ್ಕ ಕುಳಿತು ತಮ್ಮ ವೃತ್ತಿಜೀವನವನ್ನು ಆನ್‌ಲೈನ್‌ನಲ್ಲಿ ಮುಂದುವರಿಸಲು ಸಾಧ್ಯವಾಗಿದೆ.

ರೆಡ್ಡಿಟ್‌ನಲ್ಲಿ ಗೋವಾಗೆ ಶಿಫ್ಟ್ ಆದ ಅನುಭವ ಹಂಚಿಕೊಂಡ ಯುವಕರು ಇದನ್ನೊಂದು 'ಲೈಫ್‌ಸ್ಟೈಲ್ ರೀಸೆಟ್' ಅಂತ ಕರೆದಿದ್ದಾರೆ. "ದೊಡ್ಡ ನಗರಗಳಂತೆ ಇಲ್ಲಿ ಸದಾ ಅವಸರದ ಭಾವನೆ ಇರುವುದಿಲ್ಲ," ಎಂದು ಒಬ್ಬ ರಿಮೋಟ್ ವರ್ಕರ್ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, "ಓದುವುದು, ಕೆಫೆಗಳಿಗೆ ಹೋಗುವುದು, ಈಜುವುದು ಮತ್ತು ಶಾಂತ ಸಂಜೆಗಳನ್ನು ಕಳೆಯುತ್ತಾ, ಒಂದು ರೀತಿ ನಿವೃತ್ತಿ ಜೀವನದಂತಹ ನಿರಾಳ ಬದುಕು ಬೇಕು," ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ತುಂಬಿ ತುಳುಕುತ್ತಿರುವ ಬೀಚ್‌ಗಳು, ಟ್ರಾಫಿಕ್ ಜಾಮ್, ದುಬಾರಿ ಬೆಲೆ: ಗೋವಾ ಪ್ರವಾಸೋದ್ಯಮ ಸಂಕಷ್ಟದಲ್ಲಿದೆಯೇ?

ಅಸ್ಸಾಗಾಂವ್, ಸಿಯೋಲಿಮ್, ಅಲ್ಡೋನಾ ಮತ್ತು ದಕ್ಷಿಣ ಗೋವಾದ ಕೆಲವು ಭಾಗಗಳು ಈಗ ನೈಟ್‌ಲೈಫ್‌ಗಿಂತ ಹೆಚ್ಚಾಗಿ ಹಸಿರು, ಸೃಜನಶೀಲ ಸಮುದಾಯಗಳು ಮತ್ತು ನಿಧಾನಗತಿಯ ಜೀವನವನ್ನು ಬಯಸುವ ದೀರ್ಘಕಾಲಿಕ ನಿವಾಸಿಗಳನ್ನು ಆಕರ್ಷಿಸುತ್ತಿವೆ. ಹೊಸ ಕೆಫೆಗಳು, ಕೋ-ವರ್ಕಿಂಗ್ ಸ್ಪೇಸ್‌ಗಳು ಮತ್ತು ವೆಲ್‌ನೆಸ್ ಕೇಂದ್ರಗಳು ಕೂಡ ಯುವ ನಗರವಾಸಿಗಳನ್ನು ಸೆಳೆಯುತ್ತಿವೆ.

ಆದರೆ, ಗೋವಾದ ಈ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಜೀವನ ವೆಚ್ಚ ಏರಿಕೆ, ಅತಿಯಾದ ಕಟ್ಟಡ ನಿರ್ಮಾಣ ಮತ್ತು ಸಾಂಸ್ಕೃತಿಕ ಬದಲಾವಣೆಯ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಇತ್ತೀಚೆಗೆ, ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಗೋವಾದಲ್ಲಿ ಒಬ್ಬರೇ ವಾಸಿಸಲು ತಿಂಗಳಿಗೆ ಸುಮಾರು ₹82,000 ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದು, ಇದು ವೈರಲ್ ಆಗಿತ್ತು.

ಹೆಚ್ಚುತ್ತಿರುವ ವಲಸೆ ಮತ್ತು ರಿಯಲ್ ಎಸ್ಟೇಟ್ ಹಾವಳಿಯಿಂದ ಗೋವಾದ ಅಸ್ಮಿತೆಯನ್ನು ಕಾಪಾಡುವ ಬಗ್ಗೆ ಸ್ಥಳೀಯರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಬರುವವರು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಬೇಕು, ಕೊಂಕಣಿ ಕಲಿಯಬೇಕು ಮತ್ತು ಗೋವಾವನ್ನು ಕೇವಲ 'ಪಾರ್ಟಿ ರಾಜ್ಯ' ಎಂದು ಪರಿಗಣಿಸಬಾರದು ಎಂದು ಕೆಲವು ನಿವಾಸಿಗಳು ಆನ್‌ಲೈನ್‌ನಲ್ಲಿ ಸಲಹೆ ನೀಡಿದ್ದಾರೆ.

ಈ ಎಲ್ಲಾ ಸವಾಲುಗಳ ನಡುವೆಯೂ, ಗೋವಾದ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ನಿರಂತರ ಒತ್ತಡ ಮತ್ತು ಉತ್ಪಾದಕತೆಯೇ ಮುಖ್ಯವಾಗಿರುವ ಈ ಜಗತ್ತಿನಲ್ಲಿ, ಗೋವಾದ ನಿಧಾನಗತಿಯ ಜೀವನವು ಶಾಂತಿ, ನೆಮ್ಮದಿ ಮತ್ತು ಉತ್ತಮ ವರ್ಕ್-ಲೈಫ್ ಬ್ಯಾಲೆನ್ಸ್ ಹುಡುಕುತ್ತಿರುವ ಯುವ ಪೀಳಿಗೆಗೆ ಒಂದು ದೊಡ್ಡ ಆಕರ್ಷಣೆಯಾಗಿದೆ.

ಇದನ್ನೂ ಓದಿ: ನಿಮ್ಮ ಗೋವಾ ಪ್ರವಾಸವನ್ನು ಮತ್ತಷ್ಟು ದಿನ ವಿಸ್ತರಿಸುವಂತೆ ಮಾಡುವ 5 ಅನುಭವಗಳಿವು