ನಾವು ನೋಡೋ ಜಾಗ ಕಣ್ಣಲ್ಲಿ ಸೆರೆಯಾಗಲಿ, ಫೋಟೋ ಕಮ್ಮಿಯಾಗಲಿ, ಪ್ರವಾಸವೆಂದರೆ ಹೀಗಿರಬೇಕು
ಎಲ್ಲೋ ನಿಲ್ಲಿಸಿ ಒಂದು ಟೀ, ಅರ್ಧ ಇಡ್ಲಿ, ಗೆಳೆಯರ ಜೊತೆ ಮಾತು, ಚೆಂದದ ಒಂದು ಹಾಡು ಇದ್ದುಬಿಟ್ಟರೆ ಆಫೀಸಿನಿಂದ ಮನೆಗೆ ಹೋಗುವುದೂ ಈವ್‌ನಿಂಗ್ ಟ್ರಾವೆಲ್ ಆದೀತಲ್ಲ..
- ಜೋಗಿ
ನಾನು ಪ್ರವಾಸಿ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ. ಆಫೀಸಿನಿಂದ ಮನೆಗೆ ಹೋಗುವುದು, ಮನೆಯಿಂದ ಆಫೀಸಿಗೆ ಹೋಗುವುದು ಕೂಡ ನನ್ನ ಮಟ್ಟಿಗೆ ಒಂದು ಪ್ರವಾಸವೇ. ಅದನ್ನು ಬೇಕಿದ್ದರೆ ಕಿರುಪ್ರವಾಸ ಎಂದು ಕರೆಯಬಹುದು. ಹೋಗುವ ದಾರಿ ಬದಲಾಯಿಸಿದರೆ ಒಂದು ಹಳೇ ದೇವಸ್ಥಾನ, ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿದ ಪೊಲೀಸ್ ಸ್ಟೇಷನ್ನು, ಯಾವುದೋ ಹಳೆಯ ಮನೆಯ ಚೆಂದದ ಕಿಟಕಿ, ಮೂವತ್ತಾರು ವರ್ಷಗಳಿಂದ ಯಾರೂ ವಾಸವಿರದೇ ಭೂತಬಂಗಲೆಯಂತಾಗಿರುವ ಮನೆ, ದಾರಿಯಲ್ಲಿ ಬಣ್ಣಬಣ್ಣದ ಬಲೂನು ಮಾರುವ ಹುಡುಗ- ಎಲ್ಲರೂ ಪ್ರವಾಸದ ಸುಖವನ್ನು ಒದಗಿಸುವವರೇ. ಎಲ್ಲೋ ನಿಲ್ಲಿಸಿ ಒಂದು ಟೀ, ಅರ್ಧ ಇಡ್ಲಿ, ಗೆಳೆಯರ ಜೊತೆ ಮಾತು, ಚೆಂದದ ಒಂದು ಹಾಡು ಇದ್ದುಬಿಟ್ಟರೆ ಆಫೀಸಿನಿಂದ ಮನೆಗೆ ಹೋಗುವುದೂ ಈವ್‌ನಿಂಗ್ ಟ್ರಾವೆಲ್ ಆದೀತಲ್ಲ!
ಇವತ್ತು ಪ್ರವಾಸ ಎಂಬುದು ಉದ್ಯಮ ಆಗಿದೆ. ಡೆಸ್ಟಿನೇಷನ್ ಮೊದಲೇ ಗೊತ್ತಾಗಿರುತ್ತದೆ. ಅಲ್ಲಿ ಹೋಗಿ ಏನು ಮಾಡುತ್ತೇವೆ ಅನ್ನುವುದು ಮೊದಲೇ ನಿರ್ಧಾರ ಆಗಿರುತ್ತದೆ. ನಾನು ಕುಟುಂಬದ ಜೊತೆ ನೇಪಾಳ, ಕಾಶ್ಮೀರ, ಸಿಂಗಾಪೂರ, ಥೈಲ್ಯಾಂಡ್, ಫುಕೆಟ್, ಮಲೇಶಿಯಾಗಳಿಗೆ ಹೋದ ಪ್ರವಾಸಗಳ ಶೈಲಿಯೇ ಬೇರೆ. ಅವುಗಳಲ್ಲಿ ಎಲ್ಲವೂ ಮೊದಲೇ ಗೊತ್ತಾಗಿರುತ್ತಿತ್ತು. ಮನೆಯಿಂದ ವಿಮಾನ ನಿಲ್ದಾಣ, ವಿಮಾನ ನಿಲ್ದಾಣದಿಂದ ತಲುಪಬೇಕಾದ ದೇಶ- ಅಲ್ಲಿಂದ ಹೋಟೆಲ್- ಅಲ್ಲಿಂದ ಬೆಳಗ್ಗೆ ಇಂತಿಂಥಾ ದೇವಸ್ಥಾನ- ಮತ್ತೊಂದು ದೇವಸ್ಥಾನ- ಮಧ್ಯಾಹ್ನ ಇಂತಿಂಥಲ್ಲಿ ಊಟ- ಮತ್ತೆ ಮತ್ತೊಂದು ತಾಣ ಹೀಗೆ ಎಲ್ಲವೂ ಪೂರ್ವನಿರ್ಧಾರಿತ. ಕುಟುಂಬಕ್ಕೆ ಅದೇ ಸರಿ.
ಆದರೆ ನಾನು ಒಂಟಿಯಾಗಿ ಅಥವಾ ಗೆಳೆಯರ ಜೊತೆ ಮಾಡಿದ ಪ್ರವಾಸಗಳು ಹೀಗಿರಲಿಲ್ಲ. ಬೇಕು ಬೇಕಂದಲ್ಲಿ ಕಾರು, ಬಸ್ಸು, ಟ್ರಾಮ್, ಮೆಟ್ರೋ, ನಡಿಗೆ- ಹೀಗೆ ಸಾಗಿದ್ದು, ಲಾಸ್ ವೆಗಾಸ್‌ನಂಥ ಜಾಗಕ್ಕೆ ಹೋದಾಗ ಒಂದು ದಿನ ಇರಬೇಕಾದವರು ಮತ್ತೊಂದೆರಡು ದಿನ ಇದ್ದುಬಿಟ್ಟದ್ದು, ಶ್ರೀಲಂಕಾದ ಅನುರಾಧಾಪುರದಲ್ಲಿ ಮಾಲ್ವತು ನದಿ ಉಕ್ಕಿ ಹರಿದ ಮಳೆಗಾಲದಲ್ಲಿ ಮೂರು ದಿನ ಒಂಟಿ ಮನೆಯೊಳಗೆ ಸಿಕ್ಕಿಹಾಕಿಕೊಂಡದ್ದು, ಜೇಮ್ಸ್ ಬಾಂಡ್ ದ್ವೀಪದಲ್ಲಿ ದಾರಿ ತಪ್ಪಿ ಅಲೆದಾಡಿದ್ದು- ಹೀಗೆ ಆ ಅನುಭವವೇ ಬೇರೆ.
ಇವುಗಳಲ್ಲಿ ಯಾವುದು ಒಳ್ಳೆಯದು, ಯಾವುದು ಅಲ್ಲ ಎಂದು ಅವರವರೇ ತೀರ್ಮಾನಿಸಬೇಕು. ಆದರೆ ನನ್ನ ನನ್ನ ಪ್ರಕಾರ ನನ್ನ ಪ್ರವಾಸ ಹೀಗಿರಬೇಕು.
ಪದವಿಲ್ಲದ ಪದ್ಯಕ್ಕೆ ಕದವಿಲ್ಲದ ಕವಿತೆ! ಕವಿ, ಕಾವ್ಯಗಳ ಬಗ್ಗೆ ಜೋಗಿ ವಿಮರ್ಶೆ
1. ಪ್ರವಾಸ ಅನಿರೀಕ್ಷಿತವಾಗಿ ಶುರುವಾಗಿ ಆಕಸ್ಮಿಕವಾಗಿ ಕೊನೆಗೊಳ್ಳಬೇಕು.
2. ಪ್ರವಾಸದ ಕೊನೆಯಲ್ಲೊಂದು ಅಚ್ಚರಿ ಇರಬೇಕು.
3. ನಾವು ಪ್ರವಾಸ ಹೋಗುವುದು ಪಕ್ಕದ ಮನೆಯವರಿಗೆ ಹೇಳುವುದಕ್ಕಲ್ಲ. ಹೀಗಾಗಿ ಅವರು ನೋಡಿದ ಜಾಗಗಳನ್ನು ನಾವೂ ನೋಡದೇ ಹೋದರೆ ಚಿಂತೆಯಿಲ್ಲ.
4. ಆದಷ್ಟೂ ಗೊತ್ತಿರುವ ವ್ಯಕ್ತಿಗಳಿಂದ ದೂರವಿರಬೇಕು. ಆಗಲೇ ಪ್ರವಾಸ ಮಜವಾಗುವುದು.
5. ಯಾವತ್ತೂ ತಿಂಡಿ ಕಟ್ಟಿಕೊಂಡು ಹೋಗಬಾರದು. ಪ್ರವಾಸವೆಂಬುದು ಹಸಿವು, ಹುಡುಕಾಟ, ಆಯಾ ಪ್ರದೇಶದ ತಿಂಡಿ ತಿನಿಸುಗಳ ಪೊಟ್ಟಣ ಆಗಿರಬೇಕು.
6. ಬೇಗ ಸುಸ್ತಾಗುವವರ ಜೊತೆ ಪ್ರವಾಸ ಹೋಗಬಾರದು. ಸುಸ್ತಾದರೂ ತೋರಿಸಿಕೊಳ್ಳದಂತೆ ಇರುವವರು ಪ್ರವಾಸಕ್ಕೆ ಯೋಗ್ಯ ಸಂಗಾತಿಗಳು.
7. ಎಲ್ಲವೂ ಅಚ್ಚುಕಟ್ಟಾಗಿರಬೇಕು ಎಂದು ಬಯಸುವವರಾದರೆ, ಮನೆಯಲ್ಲಿಯೇ ಇರಿ. ಎಡವಟ್ಟುಗಳೇ ಪ್ರವಾಸದ ಖುಷಿ ಹೆಚ್ಚಿಸುತ್ತವೆ ಮರೆಯದಿರಿ.
8. ಪ್ರಯಾಣವೂ ಪ್ರವಾಸದ ಒಂದು ಭಾಗ. ಹೀಗಾಗಿ ಅಲ್ಲಿಗೆ ಹೋಗಿ ತಲುಪುವುದೇ ಉದ್ದೇಶ ಆಗದಿರಲಿ. ಹಾದಿಯಲ್ಲಿ ಸಿಕ್ಕ ಕಲ್ಲಂಗಡಿ ಹಣ್ಣು ಪ್ರವಾಸದ ರುಚಿ ಹೆಚ್ಚಿಸಬಹುದು.
9. ಪ್ರವಾಸ ಹೋದಾಗ ಅವಸರ ಮಾಡಬಾರದು. ಎಷ್ಟು ಗಂಟೆಗೆ ವಾಪಸ್ಸು ಹೋಗುತ್ತೇವೆ ಎಂಬ ಪ್ರಶ್ನೆ ಕೇಳುವವರನ್ನು ಜೊತೆಗೆ ಕರೆದೊಯ್ಯಬಾರದು.
10. ಪ್ರವಾಸ ಎಂದರೆ ಉಡಾಫೆ ಅಲ್ಲ. ಗಮ್ಮತ್ತು ಅಂದರೆ ಜೀವವನ್ನು ಒತ್ತೆಯಿಡುವುದು ಅಲ್ಲ. ಜವಾಬ್ದಾರಿಯುತ ಪ್ರವಾಸ, ಅಲ್ಲಿಗೆ ಬಂದವರ ಬಗ್ಗೆ ಗೌರವ, ನಾವು ಹೋದ ತಾಣದ ಬಗ್ಗೆ ಪ್ರೀತಿ- ಇವಿಲ್ಲದೇ ಹೋದರೆ ಪ್ರವಾಸ ನಿರರ್ಥಕ. ಅಹಂಕಾರ ಅಳಿಸಲೆಂದೇ ಇರುವ ಪ್ರವಾಸಗಳಿಗೆ ನಮ್ಮ ಖ್ಯಾತಿ, ಸ್ಥಾನಮಾನ, ಅಧಿಕಾರ, ಸಂಪತ್ತು- ಎಲ್ಲವನ್ನೂ ಬಿಟ್ಟು ಹೋಗಬೇಕು.
11. ನಾವು ಹೋಗುವ ಜಾಗಗಳನ್ನು ಕಣ್ಣಲ್ಲಿ ನೋಡಬೇಕೇ ಹೊರತು ಕ್ಯಾಮರಾ ಕಣ್ಣಲ್ಲಿ ಅಲ್ಲ. ಹೀಗಾಗಿ ಫೋಟೋ ಕಡಿಮೆ ತೆಗೆದಷ್ಟೂ ಒಳ್ಳೆಯದು. ಫೋನು, ಕ್ಯಾಮರಾ ಒಯ್ಯದೇ ಹೋದರೆ ಇನ್ನೂ ಚೆಂದ.
12. ನಾವು ಹೋದ ಊರಿನ ನಾಲ್ಕು ಮಂದಿಯ ಜತೆ ಹರಕು ಮುರುಕು ಭಾಷೆಯಲ್ಲಿ ಮಾತಾಡಿ ಅವರ ಬಗ್ಗೆ ತಿಳಿದುಕೊಂಡರೆ ಸಿಗುವ ಸಂತೋಷವನ್ನು ಕಳೆದುಕೊಳ್ಳಬಾರದು.
Remembering Puneeth Rajkumar: ಪತ್ರಕರ್ತರು ಕಂಡಂತೆ ಅಪ್ಪು