ಪದವಿಲ್ಲದ ಪದ್ಯಕ್ಕೆ ಕದವಿಲ್ಲದ ಕವಿತೆ! ಕವಿ, ಕಾವ್ಯಗಳ ಬಗ್ಗೆ ಜೋಗಿ ವಿಮರ್ಶೆ

ಕರ್ನಾಟಕದ ಹಳ್ಳಿಗಳನ್ನು ಸ್ವಲ್ಪ ಕೂಡ ತಟ್ಟದ ಜಾಗತೀಕರಣವನ್ನೇ ವಸ್ತುವಾಗಿಸಿಕೊಂಡು ಕವಿತೆ ಬರೆಯುವವರದ್ದೇ ಈಗ ದರ್ಬಾರು. ಈ ಕಾಲದ ತರುಣ-ತರುಣಿಯರೂ ಪ್ರೀತಿ ಮಾಡುತ್ತಾರೆ ಎನ್ನುವುದನ್ನು ಕವಿಗಳು ಮರೆತೇ ಬಿಟ್ಟಿದ್ದಾರೆ. ಹೀಗಾಗಿ ಪ್ರೇಮ ಕವನಗಳು ಬೇಕೆಂದರೆ ಮತ್ತೆ ಕೆಎಸ್‌ನ, ಬಿಟ್ಟರೆ ಕೆ.ಸಿ.ಶಿವಪ್ಪ. ಕವಿಗೂ, ಅವರ ಬರೆಯುವ ಗದ್ಯ, ಪದ್ಯಕ್ಕೂ ಏನಾದರೂ ಸಂಬಂಧ ಇದೆಯಾ?

Kannada writer Jogi criticizes text and poems of various Kannada writers

- ಜೋಗಿ

ಪದ್ಯ ಪದವಿಲ್ಲದಿರಬೇಕು
ಹೆಜ್ಜೆ ಗುರುತು ಇಲ್ಲದೆ ಪಕ್ಷಿ ಹಾರುವಂತೆ
ಕಾಲದಲ್ಲಿ ಸ್ತಬ್ಧ ಎನ್ನಿಸಬೇಕು
ಏರುವ ಚಂದ್ರನಂತೆ
ಹೇಳಕೂಡದು
ಇರಬೇಕು.


ನಮಗೂ ಹೀಗೆ ಎಷ್ಟೋ ಬಾರಿ ಅನ್ನಿಸುತ್ತದೆ; ಬರಗೂರರ ಕವಿತೆಗಳನ್ನು ಓದಿದಾಗ, ಮನಸ್ಸು ತಾನಾಗೇ ಒಂದು ಪುಟ್ಟ ಕರೆಕ್ಷನ್ ಹಾಕಿಕೊಳ್ಳುತ್ತದೆ: ಹೇಳಕೂಡದು, ಇರಕೂಡದು. ಆದರೆ ಎಷ್ಟೋ ಸಲ ಪದ್ಯ ಪದದ ಜೊತೆ ಪದವಿಯನ್ನೂ ಅಂಟಿಸಿಕೊಂಡೇ ಬರುತ್ತದೆ. ಕವಿಯ ಬಿರುದಾವಳಿಗಳೂ, ಖ್ಯಾತಿಯೂ ಕವಿತೆಗೆ ಬಲ ಕೊಡುತ್ತವೆ. ಕವಿತೆ ಹೆಜ್ಜೆ ಗುರುತು ಇಲ್ಲದ ಪಕ್ಷಿ ಹಾರುವಂತೆ ಇರಬೇಕು ಎನ್ನುವುದು ಸುಂದರ ಆಶಯವೇನೋ ಸರಿ. ಆದರೆ ಇದು ಕವಿತೆಗೆ ಕೆಟ್ಟ ಕಾಲ. ಕವನ ಸಂಕಲನದ ಹೆಜ್ಜೆ ಗುರುತುಗಳೇ ಮಾಯವಾಗುವ ಕಾಲ. ಈಗೀಗ ನಿರುಮ್ಮಳವಾಗಿ ಕವಿತೆಗೋಸ್ಕರ ಬರೆಯುವುದೂ ಬಹುಶಃ ಸಾಧ್ಯವೇ ಇಲ್ಲವೇನೋ? ಕಾವ್ಯ ಸಮಕಾಲೀನವಾಗಿರಬೇಕು ಎಂಬ ಕಾರಣಕ್ಕೆ ಅದು ಏನೇನನ್ನೋ ಅಂಟಿಸಿಕೊಳ್ಳುತ್ತದೆ. ಇನ್ನೂ ಕರ್ನಾಟಕದ ಹಳ್ಳಿಗಳನ್ನು ಸ್ವಲ್ಪ ಕೂಡ ತಟ್ಟದ ಜಾಗತೀಕರಣವನ್ನೇ ವಸ್ತುವಾಗಿಸಿಕೊಂಡು ಕವಿತೆ ಬರೆಯುವವರದೇ ದರ್ಬಾರು. ಈ ಕಾಲದ ತರುಣ-ತರುಣಿಯರೂ ಪ್ರೀತಿ ಮಾಡುತ್ತಾರೆ ಎನ್ನುವುದನ್ನು ಕವಿಗಳು ಮರೆತೇ ಬಿಟ್ಟಿದ್ದಾರೆ. ಹೀಗಾಗಿ ಪ್ರೇಮಕವನಗಳು ಬೇಕೆಂದರೆ ಮತ್ತೆ ಕೆಎಸ್‌ನ, ಬಿಟ್ಟರೆ ಕೆ.ಸಿ.ಶಿವಪ್ಪ.

ಇವನ್ನೆಲ್ಲ ಯೋಚಿಸುತ್ತಾ ನೋಡುತ್ತಾ ಹೋದರೆ ಯು.ಆರ್‌.ಅನಂತ ಮೂರ್ತಿ ಕವಿತೆಗಳು ಮೆಚ್ಚುಗೆಯಾಗುತ್ತವೆ. ಅವರ ಇದುವರೆಗಿನ ಕವಿತೆಗಳನ್ನು ಪ್ರಿಸಮ್ ಹೊರತಂದಿದೆ. ಅನಂತ ಮೂರ್ತಿ ಎಷ್ಟು ಕಾವ್ಯಮಯವಾಗಿ ಗದ್ಯ ಬರೆಯಬಲ್ಲರು ಅನ್ನುವುದು ಅವರ ಕವಿತೆಗಳನ್ನು ಓದಿದರೇ ಗೊತ್ತಾಗುತ್ತದೆ. ಎರಡನ್ನೂ ಸಮಾನ ತೀವ್ರತೆಯಿಂದ ಬರೆಯಬಲ್ಲವರು ಕಡಿಮೆ; ಅದು ಲಂಕೇಶರಿಗೆ ಸಾಧ್ಯವಾಗುತ್ತಿತ್ತು. 

ಆಳುವ ವರ್ಗವನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹಿ ರಚನೆ ಪುಣ್ಯಕೋಟಿ ಕಥೆ; ಜೋಗಿ ವಿಮರ್ಶೆ


ಲಂಕೇಶರ ಕವಿತೆಗಳನ್ನು, ಅನಂತಮೂರ್ತಿ ಕವಿತೆಗಳನ್ನೂ ನೋಡುತ್ತಿದ್ದರೆ ಒಂದು ವ್ಯತ್ಯಾಸ ಥಟ್ಟನೆ ಹೊಳೆಯುತ್ತದೆ. ಅನಂತಮೂರ್ತಿ ಕವನ ಭಾಷೆಯನ್ನು ಅತ್ಯಂತ ಕಟ್ಟೆಚ್ಚರದಿಂದ ಮತ್ತು ತದೇಕ ದುಡಿಸಿಕೊಂಡರೆ, ಲಂಕೇಶ್ ಕವಿತೆ ಅಷ್ಟೇ ಬಿಡುಬೀಸಾಗಿ, ವಿಶಿಷ್ಟ ಚಂಚಲತೆಯಿಂದ ಕವನವಾಗುತ್ತದೆ. ಹೀಗಾಗಿ ಅನಂತಮೂರ್ತಿ ಕವಿತೆಗಳು ಧ್ಯಾನಸ್ಥ ಸ್ಥಿತಿಯಲ್ಲಿದ್ದಂತೆ ಕಂಡರೆ, ಲಂಕೇಶ್ ಕವಿತೆಗಳು ಧ್ಯಾನಿಸುವ ಅಗತ್ಯವನ್ನು ಮೀರಿದವುಗಳಂತೆ ಭಾಸವಾಗುತ್ತವೆ. ಅನಂತಮೂರ್ತಿಯವರ ‘ಮಿಥುನ’ ಸಾಲುಗಳನ್ನೇ ನೋಡಿ;

ಅವಳು ಬಿಳಿಯಂತೆ ಇವನು ಕಪ್ಪಂತೆ, ಕೂಡಿರಲು
ಕಪ್ಪಾರು ಬಿಳಿಯಾರು ತಿಳಿಯದಂತೆ
ಹರಿಯಲೆಂದೇ ಕೂಡಿ ಕೂಡಲೆಂದೇ ಹರಿವ
ಸಂಗಮದ ಜಲದಂತೆ ನಿಜ ಮಿಥುನವಂತೆ
ನೀಡಿ ಇಡಿ ಹೊಕ್ಕವರು ಬಿಡಿ ಉಳಿಯರಂತೆ


ಎಷ್ಟೊಂದು ಪ್ರಜ್ಞಾಪೂರ್ವಕವಾಗಿ ತಮ್ಮ ಕವಿತೆಯ ವಸ್ತುವನ್ನು ಮತ್ತು ಸಾಲುಗಳನ್ನು ಅನಂತಮೂರ್ತಿ ಹೆಕ್ಕಿಕೊಳ್ಳುತ್ತಾರೆ ಅನ್ನುವುದು ಅಚ್ಚರಿ ಮೂಡಿಸುತ್ತದೆ. ಅಜ್ಜನ ಹೆಗಲ ಸುಕ್ಕುಗಳು ಕವಿತೆಯಲ್ಲಿ ಧುತ್ತೆಂದು ದರ್ಶನ ಕೊಡುವುದು ವೃದ್ಧಾಪ್ಯವಲ್ಲ; ಅತೀವ ಯೌವನ. ಒಲಿದ ನಿರಂತರದ ಸವೆದ ಹಾದಿಯನ್ನು ಇಷ್ಟಿಷ್ಟೇ ತೋರಿಸುತ್ತಾ ಮೂರ್ತಿ ಅಜ್ಜನ ಹೆಗಲ ಸುಕ್ಕುಗಳ ಮೂಲಕವೇ ಬಾಲ್ಯಕ್ಕೆ ಕರೆದೊಯ್ಯುತ್ತಾರೆ. ಹೀಗಾಗಿ ಇಡೀ ಕವಿತೆಯೊಂದು ರೂಪಕವಾಗಿ ಹೊಳೆದಿದೆ. ಕವಿತೆಗಳು ಹೊಳೆಯುವುದೇ ಹಾಗೆ, ಅವು ಯಾವತ್ತೂ ಸಮಗ್ರವಾಗಿರುವುದಿಲ್ಲ. ಒಂದು ಕವಿತೆಯನ್ನು ಇಡಿಯಾಗಿ ಓದಿ ಅದನ್ನು ಹಿಡಿಯುವುದಕ್ಕೆ ಯತ್ನಿಸಿದರೂ ಅದು ಉಳಿಯುವುದು ಕೆಲವು ಸಾಲುಗಳಲ್ಲಿ. ಹಾಗೇ ಒಂದು ಸಂಕಲನ ಮೈಪಡೆದಿರು ವುದು ಕೇವಲ ಕೆಲವೇ ಕವಿತೆಗಳಿಂದ. ಯಾವ್ಯಾವುದೋ ಸಂದರ್ಭಕ್ಕೆ ಬರೆದ ಕವಿತೆಗಳನ್ನೆಲ್ಲ ಸೇರಿಸಿ ಸಂಕಲನ ಮಾಡಿದಾಗಲೂ ವಿಮರ್ಶಕರು ಅದರ ಒಟ್ಟೂ ಅರ್ಥವನ್ನು, ಸಂಕಲನದ ಒಟ್ಟಾರೆ ಆಶಯವನ್ನು ಹೇಳುವುದಕ್ಕೆ ಯತ್ನಿಸುವುದನ್ನು ನೋಡಿದಾಗ ನಗೆ ಬರುತ್ತದೆ. ಒಂದು ಕವನ ಸಂಕಲನಕ್ಕೆ ಒಂದು ಸಮಗ್ರ ಆಶಯವಿರುವುದಿಲ್ಲ. ಯಾಕೆಂದರೆ ಕವಿತೆಗಳು ಒಂದೇ ಕೇಂದ್ರದ ಸುತ್ತ ಸುತ್ತುವ ಚಾಪ್ಟರುಗಳಲ್ಲ. ಹಾಗೆ ಒಂದೇ ಆಶಯವಿದ್ದ ಸಂಕಲನದ ಕವಿತೆಗಳ ಉದ್ದೇಶವೂ ತೀರ ಪರಿಮಿತವಾಗಿರುತ್ತವೆ. ಉದಾಹರಣೆಗೆ ಸಿದ್ದಲಿಂಗಯ್ಯನವರ ಹೋರಾಟದ ಹಾಡುಗಳು, ಕೆ.ಎಸ್‌.ನ. ಮೈಸೂರು ಮಲ್ಲಿಗೆ, ಆದರೆ ನವ್ಯ ಕವಿಗಳು ಹಾಗೆ ಬರೆಯಲಿಲ್ಲ. ಅವು ಆ ಕ್ಷಣದ ಸತ್ಯಗಳನ್ನು ಸೆರೆಹಿಡಿದವು; ಬಿಟ್ಟುಕೊಟ್ಟವು.

ತೋರೋದು ಮಾತ್ರ ವಿನಯ ಅಂದುಕೊಂಡರೆ
ಅತಿ ವಿನಯ ಧೂರ್ತ ಲಕ್ಷಣ, ಅದೇ ಅದು
ಒಂದು ಸ್ಥಿತಿ ಅಥವಾ ವರ ಅಂದುಕೊಂಡರೆ
ವಿನಯಕ್ಕೆ ಅತಿಯೆ ಮಿತಿಯೆ
ಹಾಲು ಕೆನೆಗಟ್ಟಿದಂತೆ ಮನುಷ್ಯ
ವಿನಯವಂತನಾಗೋದು                      -(ವಿನಯ)


ಹಾಗೆ ‘ಈ ನಿಮ್ಮ ವಿನಯ’ ಎಂಬ ಮತ್ತೊಂದು ಕವಿತೆಯ ಸಾಲುಗಳನ್ನು ನೋಡಿ. ಒಂದು ಮಾನವ ವಿನಯ ಇನ್ನೊಂದು ಭಗವಂತನ ವಿನಯ. ಒಂದು ಹೊರಗಿನದು, ಮತ್ತೊಂದು ಒಳಗಿನದು. ವಿನಯ ಹೊರಹೊಮ್ಮಬಹುದಾದ ರೀತಿ ಹಾಗೆ;
ಖುದ್ದಾಗಿ ನೀವೆ ಹೊರಗಿಣುಕಿದಂತೆ ಚೈತ್ರದ ತೇರು
ಮುಡಿದು ಧಾರಾಳ ಮರದ ತುದಿ ಚಿಗುರು
ಬೆರಗಾದೆ ಇಷ್ಟು ಸರಸದ ನಿಮ್ಮ ಸಂಸರ್ಗಕ್ಕೆ
ನೀವೆ ಪರವಶರಾಗಿ ತೊಡಗಿರುವ ಪರಿಗೆ
ಗೂಢಾತಿಗೂಢ ಪ್ರಭು ಈ ನಿಮ್ಮ ವಿನಯ.

ಅನಂತಮೂರ್ತಿಯವರ ಕವಿತೆಗಳತ್ತ ವಿಮರ್ಶಕರ ಗಮನ ಹರಿದಿಲ್ಲ ಎಂದಿದ್ದಾರೆ ಜಿ.ಎಸ್‌. ಆಮೂರ. ಅದು ಅನಂತಮೂರ್ತಿಯ ಕವಿತೆಗಳ ಪುಣ್ಯ. ಯಾವ ಪೂರ್ವ ಗ್ರಹವನ್ನೂ ಇಟ್ಟುಕೊಳ್ಳದೇ ಅವರ ಕವಿತೆಗಳನ್ನು ಓದಬಹುದು. ಅವರು ಕೇರಳದಲ್ಲಿದ್ದಾಗ ಬರೆದ ‘ಭಕ್ತಿ’;
ಬೆಳಗಿನ ಝಾವ ಅಯ್ಯಯ್ಯಪ್ಪ ಎನ್ನಿಸುವ
ಅಯ್ಯಪ್ಪ ಗದ್ದಲ.
ಇಷ್ಟು ಗದ್ದಲವಾಗಿದ್ದರೆ ದ್ರಾವಿಡಶಿವ ಆಯತಪ್ಪಿ
ಮೋಹೀನೀರೂಪದ ಆರ್ಯವಿಷ್ಣುವಿಗೆ
ಬೆತ್ತಲಾಗುತ್ತಲೇ ಇರಲಿಲ್ಲ.
ಹೆಜ್ಜೆ ತಪ್ಪದೆ ಅವ್ಯಕ್ತ ಲಭಿಸುವುದಿಲ್ಲ.

ಕವಿತೆಗಳೇ ವಿರಳವಾಗುತ್ತಿರುವ ಈ ದಿನಗಳಲ್ಲಿ ಮತ್ತೆ ಅನಂತಮೂರ್ತಿ ಕವಿತೆಗಳನ್ನು ಓದುವುದು ಬೇರೆ ಬೇರೆ ಕಾರಣಕ್ಕೆ ಇಷ್ಟವಾಗಬಹುದು. ಉಳಿದ ಕವಿಗಳಂತೆ ಅವರಿನ್ನೂ exhaust ಆಗಿಲ್ಲ. ಕವಿಯಾಗಿ ಬಹುವಾಗಿ ಓದಿಸಿಕೊಂಡು ಜೀರ್ಣವಾದವರೂ ಅಲ್ಲ. ಲಂಕೇಶ್ ಪ್ರತಿಭೆ ಕಾವ್ಯ, ಸಣ್ಣಕತೆ, ಕಾದಂಬರಿ, ನಾಟಕ ಮತ್ತು ವಿಮರ್ಶೆಯಲ್ಲಿ ಹಬ್ಬಿದರೆ, ಅನಂತಮೂರ್ತಿ ಪ್ರಧಾನವಾಗಿ ಸಣ್ಣ ಕತೆಗಾರರೂ, ಕಾದಂಬರಿಕಾರರೂ, ವಿಮರ್ಶಕರೂ ಆಗಿ ಉಳಿದರು. ಕಾವ್ಯವನ್ನು ಪ್ರೀತಿಸಿದರು. ನಾಟಕದತ್ತ ಮನಸ್ಸು ಮಾಡಲಿಲ್ಲ. ಆದರೆ ಅನಂತಮೂರ್ತಿ ಕವಿತೆಗಳೊಳಗೇ ನಿಮಗೆ ನಾಟಕ ಸಿಗುತ್ತದೆ ಅನ್ನುವುದನ್ನೂ ಗಮನಿಸಬೇಕು.

ಕವಿತೆಯ ಜತೆ ಜೋಗಿ ಮಾತುಕತೆ!

ಒಂದು ಪ್ರಶ್ನೆ: ಸ್ವಿಝರ್‌ಲಂಡಿನಲ್ಲಿ ಕಥೆಗಾರರಿದ್ದಾರಾ? ಒಳ್ಳೆಯ ಕವಿಗಳಿದ್ದಾರಾ? ಜಪಾನಿನ ಒಳ್ಳೆಯ ಕಾದಂಬರಿಕಾರ ಯಾರು? ಇಂಥದ್ದಕ್ಕೆಲ್ಲ ಈಗ ಉತ್ತರ ಕೊಡುವುದಕ್ಕೆ ಯಾರಿದ್ದಾರೆ? ಈಗಿನ ಹೊಸ ಓದುಗರಿಗೆ ಎಲಿಯಟ್ಟನನ್ನೋ, ಯೇಟ್ಸನ್ನೋ ಪರಿಚಯಿಸುವವರೇ ಇಲ್ಲ. ಹೊಸ ಲೇಖಕರು ಅನುವಾದ ಮಾಡುವುದಿಲ್ಲ. ದಶಕದ ಹಿಂದೆ ಓದಿದ ಒಂದು ಕವಿತೆ ಹೇಗೆ ಬೇರೆ ಬೇರೆಯವರಿಂದ ಅನುವಾದಿಸಿಕೊಂಡು ಓದಿಸಿಕೊಳ್ಳುತ್ತಿತ್ತು. ಎನ್ನುವುದಕ್ಕೆ ಇಲ್ನೋಡಿ;

He with body waged a fight.
But body won; It walks upright.
Then he struggled with the heart;
Innocence and peace depart.
Then he struggled with the mind;
His proud heart he left behind.
Now his wars on God begin;
At stroke of midnight God shall win.
             (Four Ages of Man, 1937)

ಡಬ್ಲ್ಯೂ.ಬಿ. ಯೇಟ್ಸ್‌ನ ಈ ಪದ್ಯವನ್ನು ಅನಂತಮೂರ್ತಿ, ಲಂಕೇಶರಿಬ್ಬರೂ ಅನುವಾದಿಸಿದ್ದಾರೆ. ಅವೆರಡೂ ಹೀಗಿವೆ;
ದೇಹದ ಜೊತೆ ಸೆಣಸಾಡಿದ;
ಗೆದ್ದು ದೇಹವೇ, ನೆಟ್ಟ ನಡೆದಿದೆ.
ನಂತರ ಹೃದಯದ ಜೊತೆ ಹೋರಾಡಿದ;
ಶಾಂತಿ ಮುಗ್ಧತೆಗಳ ಕಳೆದ.
ತದ ನಂತರ ಬುದ್ದಿಯ ಜೊತೆ ಗುದ್ದಾಡಿದ;
ಹಿಮ್ಮೆಟ್ಟಿತು ಹೆಮ್ಮೆಯ ಹೃದಯ
ಈಗವನ ಸಮರ ದೇವರ ಜೊತೆ;
ಸರಿ ರಾತ್ರಿ ಗೆಲ್ಲುವುದು ದೇವರೆ.
    -(ಮಾನವ ಜೀವದ ನಾಲ್ಕು ಹಂತಗಳು; ಅನಂತಮೂರ್ತಿ)
ದೇಹದ ಜೊತೆ ಹೂಡಿದ್ದ ಯುದ್ಧ
ಗೆದ್ದದ್ದು ದೇಹ; ನಿಗುರಿ ನಡೆದಿದ್ದ.
ಆಮೇಲೆ ಎದುರಿಸಿದ ವಿಷಣ್ಣ ಹೃದಯ
ಶಾಂತಿ ನೆಮ್ಮದಿ ಆಗ ಕೈ ಕೊಟ್ಟು ಮಾಯ
ಬುದ್ಧಿಯ ಜೊತೆ ಶುರುವಾಯ್ತು ಕದನ
ಹೃದಯ ತಕ್ಷಣ ತೊರೆದಿತ್ತು ಅವನ
ಈಗ ದೇವರ ಕೂಡ ಆರಂಭ ಸಮರ
ಮಧ್ಯರಾತ್ರಿಗೆ ಮುನ್ನ ಇವನಿನ್ನು ಅಮರ.
    -(ಮನುಷ್ಯನ ನಾಲ್ಕು ಅವಸ್ಥೆಗಳು, ಲಂಕೇಶ್)
ಈಗ ಇದನ್ನು ಹೊಸ ಕವಿಗಳು ಅನುವಾದಿಸಿದರೆ ಹೇಗಿದ್ದೀತು?

Latest Videos
Follow Us:
Download App:
  • android
  • ios