ಫ್ಲೈಟ್‌ನಲ್ಲಿ ಎಸಿ ಇಲ್ದಿದ್ರೆ ಕಥೆ ಏನಾಗುತ್ತೆ ನೋಡಿ: ಪ್ರಯಾಣಿಕ ಹಂಚಿಕೊಂಡ ಭಯಾನಕ ವೀಡಿಯೋ
ವಿಮಾನದಲ್ಲಿ ಎಸಿ ಇಲ್ಲದೇ ಹೋದರೆ ಏನಾಗಬಹುದು. ಅದರ ಸ್ಥಿತಿ ಅಂತೂ ಭಯಾನಕ. ಇಂಡಿಗೋ ವಿಮಾನದಲ್ಲಿ ಈ ರೀತಿಯ ಘಟನೆಯೊಂದು ನಡೆದಿದ್ದು, ಪ್ರಯಾಣಿಕರೊಬ್ಬರು ಭಯಾನಕ ಸ್ಥಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ನವದೆಹಲಿ: ಸಾಮಾನ್ಯವಾಗಿ ಎಸಿ ಎಲ್ಲಿರುತ್ತದೋ ಅಲ್ಲಿ ಹೊರಗಿನಿಂದ ಪ್ರೆಶ್ ಏರ್ ಹೋಗುವುದಕ್ಕೆ ಅವಕಾಶ ಇರುವುದಿಲ್ಲ, ಹೊರಗಿನಿಂದ ಗಾಳಿ ಬಂದ ಕೂಡಲೇ ಎಸಿಗೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಎಸಿ ಇರುವ ಕಟ್ಟಡಗಳಲ್ಲೆಲ್ಲವೂ ಹೊರಗಿನಿಂದ ಗಾಳಿ ಬರದಂತೆ ಗ್ಲಾಸ್‌ನಿಂದ ಬಂದ್ ಆಗಿರುತ್ತದೆ. ಒಂದು ವೇಳೆ ಇಲ್ಲಿ ಎಸಿ ಹಾಳಾದರೆ ಸೆಖೆ ಹಾಗೂ ಉಸಿರುಕಟ್ಟಲು ಆರಂಭವಾಗಿ ಜನ ಕುಳಿತುಕೊಳ್ಳಲು ಸಾಧ್ಯವಿಲ್ಲ, ಇದರಿಂದ ಅಸ್ವಸ್ಥರಾಗುವ ಸಾಧ್ಯತೆ ಇರುತ್ತದೆ ಹೀಗಿರುವಾಗ ವಿಮಾನದಲ್ಲಿ ಎಸಿ ಇಲ್ಲದೇ ಹೋದರೆ ಏನಾಗಬಹುದು. ಅದರ ಸ್ಥಿತಿ ಅಂತೂ ಭಯಾನಕ. ಇಂಡಿಗೋ ವಿಮಾನದಲ್ಲಿ ಈ ರೀತಿಯ ಘಟನೆಯೊಂದು ನಡೆದಿದ್ದು, ಪ್ರಯಾಣಿಕರೊಬ್ಬರು ಭಯಾನಕ ಸ್ಥಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಚಂಢೀಗರ್‌ನಿಂದ ಜೈಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಅಮರೀಂದರ್ ಸಿಂಗ್ ರಾಜ ವಾರಿಂಗ್ ಎಂಬುವವರು ಈ ವಿಚಾರವನ್ನು ವೀಡಿಯೋ ಸಮೇತ ಹೇಳಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ. ಇಂಡಿಗೋ ವಿಮಾನ ಸಂಖ್ಯೆ 6E7261 ಯಲ್ಲಿ ಚಂಢೀಗರ್‌ನಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿದ್ದು, ತನಗೆ ಭಯಾನಕ ಅನುಭವವಾಯ್ತು ಎಂದು ಅವರು ಹೇಳಿಕೊಂಡಿದ್ದಾರೆ. ಸುಡುವ ಬಿಸಿಲಿನ ಮಧ್ಯೆ ವಿಮಾನವೇರಲು ನಮ್ಮನ್ನು 10 ರಿಂದ 15 ನಿಮಿಷ ವಿಮಾನವೇರುವುದಕ್ಕಾಗಿ ಕ್ಯೂನಲ್ಲಿ ನಿಲ್ಲಿಸಲಾಯ್ತು. ಆದರೆ ವಿಮಾನವೇರುತ್ತಿದ್ದಂತೆ ನಮಗೆ ಶಾಕ್ ಕಾದಿತ್ತು. ಏಕೆಂದರೆ ವಿಮಾನದಲ್ಲಿ ಎಸಿ ಕೆಲಸ ಮಾಡುತ್ತಿರಲಿಲ್ಲ, ಎಸಿ ಇಲ್ಲದೆಯೇ ವಿಮಾನ ಟೇಕಾಫ್ ಆಯ್ತು. ವಿಮಾನ ಟೇಕಾಫ್ ಆದಲ್ಲಿಂದ ಲ್ಯಾಂಡಿಂಗ್ ಆಗುವವರೆಗೂ ವಿಮಾನದಲ್ಲಿ ಎಸಿ ಕೆಲಸ ಮಾಡಲೇ ಇಲ್ಲ, ಇದರಿಂದ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಯಾಣದುದ್ದಕ್ಕೂ ತೀವ್ರ ಸಂಕಷ್ಟಕ್ಕೆ ಒಳಗಾದರು. ಈ ಬಗ್ಗೆ ಯಾರೊಬ್ಬರು ಗಂಭೀರವಾಗಿ ಗಮನ ಹರಿಸಲೇ ಇಲ್ಲ,
ಜಮ್ಮುಗೆ ಹೋಗೋ ಬದ್ಲು ಪಾಕ್ ವಾಯು ಪ್ರದೇಶ ಪ್ರವೇಶಿಸಿದ ಇಂಡಿಗೋ ವಿಮಾನ: ಕಾರಣ ಹೀಗಿದೆ..
ಈ ಮಧ್ಯೆ ಗಗನಸಖಿಯರು ಬೆವರೊರೆಸಿಕೊಳ್ಳಲು ಪ್ರಯಾಣಿಕರಿಗೆ ಉದಾರವಾಗಿ ಟಿಶ್ಯೂ ನೀಡುವ ಮೂಲಕ ಉದಾರತೆ ತೋರಿದರು. ಮಹಿಳೆಯರು ಪುಟ್ಟ ಕಂದಮ್ಮಗಳು ಇದ್ದ ಈ ವಿಮಾನದಲ್ಲಿ ಎಲ್ಲರೂ ಸೆಖೆ ತಡೆಯಲಾಗದೇ ಸಂಕಷ್ಟ ಅನುಭವಿಸಿದರು. ಸೆಖೆಯಿಂದ ಅಸಹಾಯಕರಾದ ಕೆಲ ಪ್ರಯಾಣಿಕರು ತಮ್ಮಲ್ಲಿದ್ದ ಪೇಪರ್‌ಗಳಿಂದ ಗಾಳಿ ಬೀಸಿಕೊಳ್ಳುತ್ತಿದ್ದರು. ಇದೊಂದು ದೊಡ್ಡ ತಾಂತ್ರಿಕ ದೋಷದ ವಿಚಾರವಾಗಿದೆ ಆದರೆ ವಿಮಾನಯಾನದ ಸಂಬಂಧಪಟ್ಟ ಅಧಿಕಾರಿಗಳು ಕೇವಲ ಹಣವನ್ನು ಕಡಿಮೆ ಮಾಡಲು ಬಯಸಿದ್ದರು,. ಅದಕ್ಕಾಗಿಯೇ ಪ್ರಯಾಣಿಕರ ಆರೋಗ್ಯ ಮತ್ತು ಸೌಕರ್ಯವನ್ನು ಪಣಕ್ಕಿಟ್ಟರು. ಹೀಗಾಗಿ ನಾನು ಇಂಡಿಗೋ ಏರ್‌ಲೈನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡಿಜಿಸಿಎ ಇಂಡಿಯಾ ಹಾಗೂ ವಿಮಾನಯಾನ ಇಲಾಖೆಗೆ ಆಗ್ರಹಿಸುತ್ತಿದ್ದೇನೆ ಎಂದು ಅವರು @DGCAIndia, AAI_Officialಗೆ ಟ್ವಿಟ್ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವಿಮಾನದಲ್ಲಿ ಕಾರ್ಗಿಲ್ ವಾರ್ ಹೀರೋ ಗುರುತಿಸಿ ಸನ್ಮಾನಿಸಿದ ಇಂಡಿಗೋ: ವೈರಲ್ ವೀಡಿಯೋ
ನಿನ್ನೆ ಈ ಘಟನೆ ನಡೆದಿದ್ದು, ಅವರು ಪೋಸ್ಟ್ ಮಾಡಿದಾಗಿನಿಂದ 5 ಲಕ್ಷಕ್ಕೂ ಹೆಚ್ಚು ಜನ ಈ ಪೋಸ್ಟ್ ವೀಕ್ಷಿಸಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಇದು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತಿತ್ತು. ಇದೊಂದು ಗಂಭೀರ ವಿಚಾರ ಎಂದು ವೀಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದಾರೆ. ಯಾಕೆ ಯಾರು ಕೂಡ ವಿಮಾನ ಟೇಕಾಫ್ ಆಗುವ ಮೊದಲು ಈ ವಿಚಾರದ ಬಗ್ಗೆ ದನಿ ಎತ್ತಿಲ್ಲ ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಪ್ರಯಾಣಿಕರು ಸೆಖೆ ತಡೆಯಲಾಗದೇ ಕೈಗೆ ಸಿಕ್ಕ ಪೇಪರ್ ತುಂಡುಗಳಿಂದ ಗಾಳಿ ಬೀಸಿಕೊಳ್ಳುವುದನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಪ್ರಯಾಣಿಕರ ಜೀವ ಪಣಕ್ಕಿಟ್ಟ ವಿಮಾನಯಾನ ಸಂಸ್ಥೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.